ಒಟ್ಟು ನೋಟಗಳು

Wednesday, May 10, 2017


                        

ಶ್ರೀ ಸದ್ಗುರುನಾಥ ಲೀಲಾಮೃತ - 2


   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  


 ನಿತ್ಯ ಸತ್ಸಂಗ  - 62

ಅರುಣ ಕಲಿಸಿದ ಗುರುನಾಥರು 



।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಗುರುನಾಥರು ತಮ್ಮ ಭಕ್ತರ ಹಿತ ಚಿಂತನೆಯಿಂದ ಅದೇನೇನು ಮಾಡುತ್ತಾರೆ ಅರಿಯುವುದು ಸುಲಭವಲ್ಲ. ಲೋಕದ ರೀತಿ ನೀತಿಗೆ ವಿರುದ್ಧವಾದವೂ ಗುರುಮಾನಸದಲ್ಲಿ ಬಂದರೆ ಅದೇ ಸರಿ. ಯಾವ ನಿಯಮವೂ ಗುರುಪಥಕ್ಕಿಲ್ಲ. ಚಿಕ್ಕಮಗಳೂರಿನ ಆ ತಾಯಿ ಮತ್ತೆ ಮುಂದುವರೆಸಿದರು ಸತ್ಸಂಗವನ್ನು. 

"ಅದೆಷ್ಟು ಅರುಣಾ ಪಾರಾಯಣವನ್ನು ಅವರು ಈ ಮನೆಯಲ್ಲಿ ಮಾಡಿಸಿದ್ದಾರೋ ಲೆಕ್ಕವೇ ಇಲ್ಲ. ನಿರಂತರ ನಮ್ಮ ಮನೆಯವರೂ ಅರುಣ ಪಾರಾಯಣ ಮಾಡುತ್ತಿದ್ದರು. ಅದನ್ನು ಕಿವಿಯಿಂದ ಕೇಳಿ ಪೂರ್ಣ ನನಗೂ ಬಾಯಿ ಪಾಠವಾಗಿಬಿಟ್ಟಿತ್ತು. ಮನಸ್ಸಿಗೆ ಮನನವಾಗುವುದು ಗುರುಕರುಣೆಯಿಂದಲೇ. ಇದನ್ನು ಅರಿತ ಗುರುನಾಥರು ನನಗೂ ಅರುಣ ಹೇಳೆಂದಾಗ 'ಏನು ಗುರುನಾಥರೇ ಹೆಂಗಸರು ಅರುಣ ಪಾರಾಯಣ ಹೇಳಬಾರದು ಎನ್ನುತ್ತಾರಲ್ಲಾ' ಎಂದು ನಾನು ವಿನೀತಳಾಗಿ ಕೇಳಿದ್ದೆ. 'ನಿನಗೆ ಎಲ್ಲಾ ಬರುತ್ತದೆ, ಹೇಳುವುದರಲ್ಲಿ ತಪ್ಪೇನಿದೆ? ಖಂಡಿತಾ ಹೇಳಮ್ಮಾ' ಎಂದು ಅನೇಕ ಸಾರಿ ಹೇಳಿಸಿದ್ದಾರೆ. ಆ ಭಗವಂತನ ಶ್ರೀರಕ್ಷೆ ಹೇಗಿದೆ ಎಂದರೆ ಎಲ್ಲಾದರೂ ಅರುಣ ಪಾರಾಯಣ ನಡೆಯುತ್ತಿದ್ದರೆ ಅದನ್ನು ಪೂರ್ತಿ ಕೇಳದ ಹೊರತು ಅಲ್ಲಿಂದ ಕದಲಲಾಗದು. ಇದೂ ಆ ಗುರುನಾಥರು ಕೊಟ್ಟ ವರವೇ" ಎನ್ನುತ್ತಾರವರು. 

ಚಿಕ್ಕಮಗಳೂರಿನ ಇವರ ಮನೆ ಸರ್ವಧರ್ಮಗಳ, ಸರ್ವ ದೇವತೆಗಳ ಒಂದು ಸಂಗಮ ಸ್ಥಳ. ಅಲ್ಲಿ ಹರಿಹರರ ಭೇದವಿಲ್ಲ. ಗುರು ಒಂದೇ ಸರ್ವಸ್ವ. ಗುರುನಾಥರು ಅನೇಕ ದಿನಗಳು ಇವರ ಮನೆಯಲ್ಲಿ ವಾಸವಾಗಿ, ತಾವಾರೆಂದು ಮನದಟ್ಟು ಮಾಡಿಸಿ ತೋರಿಸಿದ ಘಟನೆಗಳನ್ನು ಆ ತಾಯಿ ಹೀಗೆ ಬಚ್ಚಿಡುತ್ತಾರೆ. 

"ಅಂತಿಮ ದಿನಗಳಲ್ಲಿ ಗುರುನಾಥರು ನಮ್ಮ ಮನೆಯಲ್ಲಿಯೇ ಮೂರು ತಿಂಗಳು ವಾಸವಿದ್ದು, ನಮಗೆ ಸೇವಾ ಭಾಗ್ಯ ನೀಡಿದ್ದರು. ಪ್ರತಿನಿತ್ಯ ಎರಡು ಹಂಡೆಯಲ್ಲಿ ಬಿಸಿ ಬಿಸಿ ನೀರನ್ನು ಕಾಯಿಸಲು ಹೇಳುತ್ತಿದ್ದರು. ನಂತರ ಚಾಪೆಯ ಮೇಲೆ ಕುಳಿತು, ಮೈ, ತಲೆ ಮೇಲೆಲ್ಲಾ ವಿಷ್ಣುಪಾದವನ್ನು ಇಡಿಸಿಕೊಂಡು ರುದ್ರಪಾರಾಯಣ ಪಠಣ ಮಾಡುತ್ತಾ, ಎಲ್ಲರ ಕೈನಿಂದ ಬಿಸಿ ಬಿಸಿ ನೀರಿನ ಅಭಿಷೇಕ ಮಾಡಿಸಿಕೊಳ್ಳುತ್ತಿದ್ದರು. ಎಲ್ಲರನ್ನೂ ಕರೆದು ರುದ್ರಾಭಿಷೇಕ ಮಾಡಿಸಿಕೊಳ್ಳುತ್ತಿದ್ದರು. ಇದು ಅನೇಕ ದಿನಗಳ ಕಾಲ ನಿತ್ಯ ನಡೆಯುವ ಗುರುಸೇವೆಯಾಗಿತ್ತು. ಅದನ್ನು ನೋಡಿದಾಗ ನಮಗೆಲ್ಲಾ ಆ ಸಾಕ್ಷಾತ್ ಶಿವನಿಗೆ ರುದ್ರಾಭಿಷೇಕ ಮಾಡಿದ ಅನುಭವವಾಗುತ್ತಿತ್ತು. ಕೇಶವನೂ, ಶಿವನೂ, ಗುರುವೂ ಆಗಿ ತ್ರಿಮೂರ್ತಿಗಳಾಗಿ ಸೇವೆ ನೀಡಿದ್ದು ನಮ್ಮ ಪುಣ್ಯ" ಎನ್ನುತ್ತಾರವರು. 

ಹೀಗೆ ಗುರುನಾಥರು ಆ ತಾಯಿಯ ಮನೆಯ ಎಲ್ಲರಿಂದ ಸೇವೆ ತೆಗೆದುಕೊಂಡು ಅವರಿಗೆ ಸೇವೆ ನೀಡಿ, ಅಪಾರ ಪುಣ್ಯ ಗಳಿಸುವಂತೆ ಮಾಡಿದ್ದನ್ನಿವರು ಸ್ಮರಿಸುತ್ತಾ, ಗುರುವಿನ ಮತ್ತೊಂದು ಘಟನೆಯನ್ನು ಸ್ಮರಿಸುತ್ತಾರೆ. 

"ಒಂದು ದಿನ ನಮ್ಮ ಮನೆಯ ಒಳಗಿನ ಬಚ್ಚಲಿಗೆ ಸ್ನಾನಕ್ಕೆ ಬಂದರು. 'ಸ್ನಾನ ಮಾಡಬಹುದೇ?' ಎಂದರು. ಆಗಬಹುದು ಗುರುನಾಥರೇ ಎಂದೆ. ಸ್ನಾನ ಮಾಡಿದ ನಂತರ ಪಕ್ಕದ ಕೋಣೆಗೆ ಹೋಗಿ ಎರಡು ನಿಮಿಷ ಮಲಗಿರಬಹುದು. ಕೂಡಲೇ ಹೊರಬಂದು 'ಯಾರ ರೂಮಿದು?' ಎಂದರು. ಅದು ನನ್ನ ಮಗಳದ್ದು ಎಂದೆ. ತತ್ ಕ್ಷಣ ಗುರುನಾಥರು 'ನೀನು ಎಲ್ಲಾ ದಾಟಿಬಿಟ್ಟೆ ಬಿಡು. ಚಿಂತೆ ಬೇಡ' ಅಂದರು. ನನ್ನ ಮಗಳಿಗೆ ಈಗ ಇಪ್ಪತ್ತೆಂಟು ವರ್ಷ. ಗುರುನಾಥರೀಗ ಸಶರೀರವಾಗಿಲ್ಲದಿದ್ದರೂ, ಗುರುವಾಕ್ಯ ಪ್ರಮಾಣ, ನನಗವರು ಈಗಲೂ ಇದ್ದಾರೆ. ಇದೀಗ ನನ್ನ ಮಗಳ ಮದುವೆ ಸಿದ್ಧವಾಗಿದೆ. ನಮ್ಮನ್ನು ಪಾರುಗಾಣಿಸುವ ಗುರುನಾಥರ ಆಶೀರ್ವಾದ ಇರುವಾಗ ನನಗವರಲ್ಲದೆ ಬೇರಾರೂ ಇಲ್ಲ. ನನ್ನ ನಂಬಿಕೆ ನನಗಿದೆ. ಅವನ ಪರೀಕ್ಷೆಗಳಿಗೆ ನಾನು ಸಿದ್ಧಳಿದ್ದೇನೆ. ಏಕೆಂದರೆ ಗೆಲ್ಲಿಸುವವನೂ ಅವನೇ ಆಗಿದ್ದಾನೆ". ಗುರುವಿನ ಅಸೀಮ ಭಕ್ತಿಯ ಪರಾಕಾಷ್ಟತೆಯಾಗಿ ಆ ತಾಯಿ ಮಾತನಾಡಿದರು. ಹಾಗೆಯೇ ಅವರು ಜೀವನ ಸಾಗಿಸುತ್ತಲೂ ಬಂದಿದ್ದಾರೆ. 

ಆ ತಾಯಿಯ ಮನೆಗೆ ಎರಡು ಬಾಗಿಲು. ಒಂದು ಮುಖ್ಯರಸ್ತೆಗೆ ತೆರೆದುಕೊಂಡರೆ ಇನ್ನೊಂದು ಮನೆಯ ಪಕ್ಕದಿಂದ ಬರುವ ದ್ವಾರ. ಅವರು ಅಂದೂ ಇಂದೂ ಬಳಸುವುದು ಆ ದ್ವಾರವನ್ನೇ. ಆ ದ್ವಾರದಿಂದಲೇ ಎಲ್ಲಾ ಬರುವುದು, ಹೋಗುವುದು. ಒಮ್ಮೆ ಈ ತಾಯಿ ತಪ್ಪಿ ಮುಂದಿನ ದ್ವಾರದಿಂದ ಬರಲು ಪ್ರಯತ್ನಿಸಿದಾಗ, ಅಲ್ಲಿದ್ದ ಗುರುನಾಥರು ಎಚ್ಚರಿಸಿ 'ನಿನ್ನ ಮನೆಗೆ ಇದೇ ಬಾಗಿಲು. ನೀನು ಇಲ್ಲಿಂದಲೇ ಬಂದು ಹೋಗಿ ಮಾಡಬೇಕು' ಎಂದು ಗದರಿಸಿದರಂತೆ. ಕಾಯುವ ಗುರುನಾಥರು ಭಕ್ತರನ್ನು ಹೀಗೆ ಕಾಯುವುದೂ ಉಂಟೆ? ಎಲ್ಲ ಜವಾಬ್ದಾರಿಯನ್ನೂ ಆತನಿಗೆ ಅರ್ಪಿಸಿದಾಗ, ನಮ್ಮ ಜವಾಬ್ದಾರಿಯನ್ನು ಆತ ಹೊತ್ತಾಗ, ಗುರುನಾಥರು ಭಕ್ತರನ್ನು ಅಡಿಗಡಿಗೆ ನಿಂತು ರಕ್ಷಿಸುವ ರೀತಿ ಅದು ಗುರುನಾಥರ ವಿಶೇಷವೇ. 

'ಸಾಕ್ಷಾತ್ ಶಿವ ತಾನು ಭಿಕ್ಷಕೆ ಬಂದ' ಎಂದು ಹಾಡುತ್ತಾ ಗುರುನಾಥರು ತಮ್ಮ ಭಕ್ತರೊಬ್ಬರ ಮನೆಗೆ ಬಂದ ವಿಚಾರ ಅರಿಯಬೇಕೇ? ಗುರುಬಾಂಧವರೇ, ನಾಳಿನ ಸಂಚಿಕೆಯಲ್ಲೂ ನಮ್ಮೊಂದಿಗಿರಿ, ಆ ರೋಚಕ ಪ್ರಸಂಗವನ್ನರಿಯಲು. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment