ಒಟ್ಟು ನೋಟಗಳು

Thursday, May 25, 2017

ಶ್ರೀ ಸದ್ಗುರುನಾಥ ಲೀಲಾಮೃತ - 2
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 77
ದಾರಿ ತೋರಿದ ರೀತಿ 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಅಂದು ಪರ ಊರಿನಿಂದ ಬಂದವರೊಬ್ಬರು ಗುರುನಾಥರ ಭಕ್ತರು, ಬಾಣಾವರದಲ್ಲಿ ಇಳಿದರು. ಊರು ಹೊಸತು. ಆದರೆ ಊರಿನಲ್ಲಿದ್ದ ಕೃಷ್ಣಯೋಗಿಂದ್ರರ ಹಾಗೂ ಗುರುನಾಥರ ಭಾವಸಮಾಧಿಗಳ ದರ್ಶನ ಮಾಡುವ ಹಂಬಲದಿಂದ ಮೈಸೂರಿನಿಂದ ಇಲ್ಲಿಯವರೆಗೆ ಬಂದಿದ್ದರು.

ಬಸ್ ಸ್ಟಾಂಡಿನಿಂದ ಇಳಿದು ಯಾರನ್ನೋ ವಿಚಾರಿಸಿದಾಗ - 'ಹೀಗೆ ಕೆಳಗೆ ಹೋಗಿರಿ' ಎಂದವರು ಸೂಚಿಸಿದರಂತೆ. ದಾರಿಯು ಸ್ಪಷ್ಟವಾಗಲಿಲ್ಲ. ಏನು ಮಾಡುವುದೆಂದು ಚಿಂತಿಸುತ್ತಿರುವಾಗ, ಆ ದಾರಿಯಲ್ಲಿ ಒಂದು ನಾಯಿ ನಿಂತು ಇವರತ್ತಲೇ ನೋಡುತ್ತಿತ್ತು. ನಂತರ ನಾಲ್ಕು ಹೆಜ್ಜೆ ಮುಂದುವರೆದು, ಮತ್ತೆ ಇವರತ್ತ ತಿರುಗಿ ನಿಂತಿತಂತೆ. ಅದೇಕೋ, ಆ ನಾಯಿ ತಮ್ಮನ್ನೇ ಕರೆಯುತ್ತಿದೆ, ತಾವು ಹೋಗಬೇಕಾದ ಜಾಗವನ್ನದು ತೋರಿಸುತ್ತದೇನೋ ಎಂಬ ಭಾವ ಅವರ ಮನದಲ್ಲಿ ಮೂಡಿತಂತೆ.

ಸಖರಾಯಪಟ್ಟಣದಲ್ಲೂ ಗುರುನಾಥರ ಮನೆಯಲ್ಲಿದ್ದ ಮೂರು ನಾಲ್ಕು ನಾಯಿಗಳು, ಅವು ಸಾಮಾನ್ಯ ನಾಯಿಗಳಾಗಿರಲಿಲ್ಲವೆಂಬುದು, ಅವುಗಳ ವರ್ತನೆಯಿಂದ ಈ ಭಕ್ತರಿಗೆ ಅನುಭವವಾಗಿತ್ತಂತೆ. ಹಾಗಾಗಿ ಇಲ್ಲಿಯೂ ಗುರುನಾಥರ ಭಾವಸಮಾಧಿಯ ದರ್ಶನಕ್ಕೆ ಬಂದ ನಮಗೆ, ಗುರುನಾಥರೇ ಈ ರೀತಿ ಸಹಾಯ ಒದಗಿಸಿದ್ದಾರೆಂಬ ದೃಢ ಭಾವದಿಂದ - ಈ ಭಕ್ತರ ಪರಿವಾರದವರು ನಾಯಿಯ ಹಿಂದೆ ನಡೆಯತೊಡಗಿದರಂತೆ.

ಮತ್ತೆ ಮತ್ತೆ ತಿರುಗಿ ನೋಡುತ್ತ, ಆ ನಾಯಿ ಮುಂದೆ ಹೋಗುತ್ತಿತ್ತು. ಇವರು ಹಿಂದೆ ಹಿಂದೆ ನಡೆಯುತ್ತಿದ್ದರು. ಸುಮಾರು ಹೊತ್ತು ನಡೆದ ಇವರು ಆ ಊರಿನ ಹೊರ ವಲಯಕ್ಕೆ ಬಂದಿದ್ದರು. ಬಲಗಡೆಯಲ್ಲಿ ಕೆರೆಯಂತಹ ಜಾಗ, ಎಡಗಡೆ ಗಿಡಮರಗಳಿಂದ ಕೂಡಿದ ಒಂದು ತಗ್ಗು ಪ್ರದೇಶ, ದೃಢಭಾವದಿಂದ ಮತ್ತೆ ಮುಂದುವರೆದಾಗ ಗುಡಿಗೋಪುರಗಳು, ಪುಷ್ಕರಣಿಗಳು ಕಂಡುಬಂದವು. ಓಹೋ, ನಾವು ಸರಿದಾರಿಯಲ್ಲಿಯೇ ಬಂದಿದ್ದೇವೆ ಎಂದು ಅವರುಗಳು ಎಡಕ್ಕೆ ತಿರುಗಿ ಮುಂದುವರೆದಾಗ, ಸರಿ ಜಾಗವನ್ನೇ ತಲುಪಿದ್ದರು. ಗುರುನಾಥರ ಸಮಾಧಿಗೆ ನಮಿಸಿ, ಕೃಷ್ಣಯೋಗಿಂದ್ರ ಸರಸ್ವತಿಗಳ ಸಜೀವ ಸಮಾಧಿಗೆ ಪ್ರದಕ್ಷಿಣೆ ಬಂದು, ಬಂದ ತಮ್ಮ ಕೆಲಸ ಪೂರ್ಣವಾದ ಸಂತಸದಲ್ಲಿದ್ದ ಇವರಿಗೆ, ತಾವೆಂತಹ ಅಪರಾಧ ಮಾಡಿಬಿಟ್ಟೆವೆಂಬ ವಿಚಾರ ತಟ್ಟನೆ ಹೊಳೆಯಿತು. ದಾರಿ ತೋರಿದ ಗೈಡ್ ಗೆ ಏನೂ ಕೊಟ್ಟಿರಲೇ ಇಲ್ಲ. ಆ ಗೈಡ್ ಸಾಮಾನ್ಯದವನಾಗಿದ್ದಿದ್ದರೆ, ಇವರು ಮರೆತರೂ ಜಗಳವಾಡಿ, ಕಿತ್ತುಕೊಳ್ಳುತ್ತಿದ್ದನೇನೋ ! ಗುರುಸ್ಥಾನದ ದಾರಿ ತೋರಿದ ಗೈಡ್ ನಾರಾಯಣನಿಗೇನಾದರೂ ಕೊಡಬೇಕೆಂದು ಕೈಯಲ್ಲಿ ಬಿಸ್ಕತ್ ಪೊಟ್ಟಣ ಹಿಡಿದು ಈಗ ಇವರು ಅರಸತೊಡಗಿದರು. ಆಗ ಗುರುಸ್ಥಾನಕ್ಕೆ ಅರಸುತ್ತಿದ್ದರು - ಈಗ ನಾರಾಯಣನಿಗೆ ಉಪಕಾರ ತೀರಿಸಲು. ಅಂತೂ ಜೀವನವೇ ಒಂದು ಅಲೆದಾಟ. ಕೆರೆಯ ಅಂಗಳದಲ್ಲಿ ಆ ನಾರಾಯಣ ಕಂಡು ಬಂದು, ಬಿಸ್ಕತ್ ನೀಡಿದರೂ ಇವರ ಮನ ತಣಿಯಲಿಲ್ಲವಂತೆ. ಅದಕ್ಕೆ ನಮಸ್ಕರಿಸಿ, ಅದರ ಮೈದಡವಿ ಮುದ್ದಾಡಿ - ತಮ್ಮ ಕೃತಜ್ಞತೆ ತೋರಿದ ಮೇಲೆಯೇ ಇವರಿಗೆ ಸಮಾಧಾನವಾಯಿತಂತೆ.

ಪ್ರಿಯ ಓದುಗ ಮಿತ್ರರೇ, ಗುರುನಾಥರ ಕೆಲಸಕ್ಕೆ ಹೊರಟ ಭಕ್ತರಿಗೆ - ಗುರುನಾಥರು ಯಾವ ಯಾವ ರೂಪದಲ್ಲಿ ಮಾರ್ಗ ತೋರುವರೋ, ಭಾವ ದೃಢ ಒಂದಿರಲು ಅಸಾಧ್ಯವಾದುದು ಏನಿದೆ ಹೇಳಿ?

ಎಲ್ಲರಿಗೂ ಕ್ಯಾನ್ಸರ್ ಕಣಯ್ಯಾ 

ಗುರುನಾಥರ ಬಳಿ ಒಬ್ಬ ಭಕ್ತರು ಒಮ್ಮೆ ಬಂದು 'ತಮ್ಮವರೊಬ್ಬರಿಗೆ ಗುಣವಾಗದ, ಭರಿಸಲಾರದಂತಹ ಕ್ಯಾನ್ಸರ್ ಆಗಿದೆ. ಗುರುನಾಥರೇ, ಅವರಂತೂ ಉಳಿಯಲಾರದಂತಹ ಸ್ಥಿತಿ ತಲುಪಿದ್ದಾರೆ" ಎಂದು ತೋಡಿಕೊಂಡರಂತೆ.

ಎಲ್ಲವನ್ನೂ ಸಮಾಧಾನದಿಂದ ಕೇಳಿದ ಗುರುನಾಥರು 'ಪ್ರಪಂಚದಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಕ್ಯಾನ್ಸರೇ..... ಏನಾಗಿದೆ ಎಲ್ಲಿದ್ದಾರೆ, ಕರಕಂಬಾ ಅವರನ್ನು' ಎಂದರಂತೆ.

'ಗುರುನಾಥರೇ, ಅವರು ಕಿದ್ವಾಯ್ ಆಸ್ಪತ್ರೆಯಲ್ಲಿದ್ದಾರೆ... ತುಂಬಾ ಕಷ್ಟದಲ್ಲಿದ್ದಾರೆ' ಎಂದರು ಆ ಭಕ್ತರು.

'ಕರಕೊಂಡು ಬಾರಯ್ಯಾ ಅವರನ್ನು. ಏನೂ ಆಗಲ್ಲ ಕಣಯ್ಯಾ... ಮೊದಲು ಅವರನ್ನು ಶೃಂಗೇರಿಗೆ ಕರೆದುಕೊಂಡು ಹೋಗಿ, ತುಂಗೆಯಲ್ಲಿ ಸ್ನಾನ ಮಾಡಿಸಿ, ಚಂದ್ರಶೇಖರ ಭಾರತೀ ಸ್ವಾಮಿಗಳ ವೃಂದಾವನಕ್ಕೆ ಕರೆದುಕೊಂಡು ಹೋಗಿ ನಮಸ್ಕರಿಸಿಸಿ, ಗುರುಗಳನ್ನು ಕಂಡು, ತೀರ್ಥ ಪ್ರಸಾದ, ಫಲ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಬನ್ನಿ, ಎಲ್ಲಾ ಸರಿಯಾಗುತ್ತೆ' ಎಂದುಬಿಟ್ಟರಂತೆ.

ಎಲ್ಲ ವೈದ್ಯರು ಕೈ ಬಿಟ್ಟರೂ, ಭವರೋಗ ವೈದ್ಯನ ಕರುಣೆ ದೊರೆತಾಗ, ಮೃತ್ಯು ತಾನೇ ಏನು ಮಾಡಬಲ್ಲದು? ಕ್ಯಾನ್ಸರ್ ವ್ಯಕ್ತಿಗೆ ಶೃಂಗೇರಿ ಪ್ರವಾಸ ಮಾಡಿಸಿದಾಗ, ತೀರ್ಥ ಪ್ರಸಾದಗಳನ್ನು ಅವರು ಸೇವಿಸಿದರು. ಇದು ಕ್ಯಾನ್ಸರಿಗೆ ಮದ್ದಾಯ್ತೋ? ಫಲ ಮಂತ್ರಾಕ್ಷತೆ ಅವರು ಪಡೆದರು. ಇದು ಕೇವಲ ಅಕ್ಕಿ ಕಾಳು - ಕುಂಕುಮಗಳಾಗದೇ ಮೃತ್ಯುವನ್ನೆದುರಿಸುವ ಶ್ರೀರಕ್ಷೆಯಾಗಿತ್ತೇನೋ.

ಮತ್ತೆ ಕೆಲವು ದಿನಗಳ ನಂತರ ಆ ಕ್ಯಾನ್ಸರ್ ರೋಗಿಗಳು ಕಿದ್ವಾಯ್ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಂಡಾಗ - ಕ್ಯಾನ್ಸರ್ ರೋಗಾಣುಗಳು ಮಂಗಮಾಯವಾಗಿತ್ತು. ಎಲ್ಲಾ ತಾವೇ ಮಾಡಿದರೂ, ಯಾವುದನ್ನೂ ತಮಗೆ ಹಚ್ಚಿಕೊಳ್ಳದ ಗುರುನಾಥರು, ಶೃಂಗೇರಿಯ ಗುರುಮಠವನ್ನು ತೋರಿಸಿಬಿಟ್ಟಿದ್ದರು. ಭಾವುಕರಿಗೆ ಫಲ ನೀಡಿಯೂ ತಮಗದರ ಸಂಬಂಧವೇ ಇಲ್ಲದಂತೆ ನಿರ್ಲಿಪ್ತರಾಗಿದ್ದರು.

ಪ್ರಿಯ ನಿತ್ಯ ಸತ್ಸಂಗದ ಓದುಗ ಮಿತ್ರರೇ, ಗುರುಲೀಲೆಯನ್ನರಿಯುವುದು ಕಷ್ಟ. ಒಂದಂತೂ ನಿತ್ಯ ಸತ್ಯ. ತನ್ನನ್ನು ನಂಬಿ ಬಂದವರ ಭವ, ಭಯ ನಿವಾರಕನೆಂಬುದು.

ಇಂದಿನ ಸತ್ಸಂಗಕ್ಕೆ ಅಲ್ಪ ವಿರಾಮವಿರಲಿ. ನಾಳೆ ಮತ್ತೆ ನಮ್ಮೊಂದಿಗಿರುವಿರಲ್ಲ.... ವಂದನೆಗಳು. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment