ಒಟ್ಟು ನೋಟಗಳು

Monday, May 15, 2017


ಶ್ರೀ ಸದ್ಗುರುನಾಥ ಲೀಲಾಮೃತ - 2
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 67
ಅವಧೂತರ ದರ್ಶನ ಮಾಡಿದವರೇ ಧನ್ಯರು 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಸಖರಾಯಪಟ್ಟಣದ ಅವಧೂತರಾದ ಶ್ರೀ ವೆಂಕಟಾಚಲ ಸದ್ಗುರುನಾಥರನ್ನು ದರ್ಶನ ಮಾಡಿದ ಲಕ್ಷಾಂತರ ಜನಗಳಲ್ಲಿ ಬ್ರಹ್ಮಾನಂದ ಗುರೂಜಿಯವರು ಗುರುನಾಥರನ್ನು ನೋಡಿ ಅನುಭವಿಸಿದ ಆತ್ಮಾನಂದವನ್ನು ನಾವೀಗಾಗಲೇ 'ನಿತ್ಯ ಸತ್ಸಂಗ' ದಲ್ಲಿ ಓದಿದ್ದೇವೆ. ಓದುಗ ಮಹಾಶಯರೇ, ಪ್ರಕೃತಿಯ ನಿಯಮವೆಂದರೆ 'ಯದೃಷ್ಟಮ್ ತನ್ನಷ್ಟಮ್' ಎಂಬುದು. ಅದಕ್ಕಾಗಿಯೇ ಗುರುನಾಥರು ನಿರಂತರ ಉಪದೇಶಿಸುತ್ತಿದ್ದುದು. 'ಗುರುವೆಂದರೆ ಈ ಶರೀರವಲ್ಲಯ್ಯಾ. ಅದೊಂದು ಭಾವ. ನೀನೇನು ನೋಡುತ್ತೀಯೋ ಅದಲ್ಲ. ಅದರಾಚೆ ಬೇರೊಂದು ಸತ್ಯವಿದೆ. ಅದನ್ನರಿಯುವ ಪ್ರಯತ್ನ ಮಾಡಿರಿ' ಎಂದು. ಬಹುಶಃ ಅದನ್ನರಿತವರಲ್ಲಿ, ಆ ಸತ್ಯ ಕಂಡುಕೊಂಡವರಲ್ಲಿ ನಮ್ಮ ಬ್ರಹ್ಮಾನಂದ ಗುರೂಜಿಯವರೂ ಒಬ್ಬರು. ಅವರ ಅನುಭವವೀ ದಿನ ಮತ್ತೆ ನಮ್ಮ ನಿಮಗೆಲ್ಲಾ ಈ ಸತ್ಸಂಗಕ್ಕಾಗಿ, ಅವರು ಹೀಗೆ ನೀಡುತ್ತಿದ್ದಾರೆ. 

"ಕಡೆಯಾದಾಗಿ ಗುರುನಾಥರು ಅಸ್ವಸ್ಥರಾಗಿದ್ದರು. ಅವರ ಕಾಲಿಗೆ ಏನೋ ತೊಂದರೆಯಾಗಿತ್ತು. ಗುರುನಾಥರನ್ನು ಕಾಣಬೇಕೆಂಬ, ಅವರ ದಿವ್ಯ ನುಡಿಗಳನ್ನು ಕೇಳಬೇಕೆಂಬ ಕಾತುರವಿತ್ತು. ಇತರ ಶಿಷ್ಯರೂ ತಮ್ಮನ್ನು ಕರೆದೊಯ್ಯಲು ದುಂಬಾಲು ಬೀಳುತ್ತಿದ್ದರು. ನಮ್ಮ ಶ್ರೀ ಸದ್ಗುರುಗಳಾದ ಶ್ರೀ ಸತ್ ಉಪಾಸಿಯವರು ಶಿಷ್ಯರಾದ ಬೆಂಗಳೂರಿನ ಕಿರಣ್ ಕುಮಾರ್ ಅವರೂ, 'ಗುರುನಾಥರ ದರ್ಶನ ಮಾಡಿಸಿ' ಎನ್ನುತ್ತಿದ್ದರು. ಸ್ವಲ್ಪ ತಡೆಯಿರಿ, ಗುರುನಾಥರಿಗೆ ಆರಾಮಿಲ್ಲ. ನಾವೂ ಹೋಗಿ ಸುಮ್ಮನೆ ಅವರಿಗೆ ತೊಂದರೆ ಕೊಡಬಾರದು ಎಂದಿದ್ದೆ. ಆಗ ನಾನೂ ಸಹಾ ಚಾತುರ್ಮಾಸಕ್ಕಾಗಿ ಅರಸೀಕೆರೆಯ ಶಂಕರಲಿಂಗ ಆಶ್ರಮದಲ್ಲೇ ಇದ್ದೆ. ಗುರುನಾಥರ ಆರೋಗ್ಯದ ವಿಚಾರ ಆಗಾಗ್ಗೆ ಅವರ ಶಿಷ್ಯರುಗಳಿಂದ, ಶ್ರೀ ವಿವೇಕರ ಮೂಲಕ ತಿಳಿಯುತ್ತಿತ್ತು. ಭೀಷ್ಮನಂತೆ ಇಚ್ಛಾ ಮರಣಿಗಳೂ, ಎಲ್ಲವನ್ನೂ ಬಲ್ಲವರೂ ಆದ ಗುರುನಾಥರು, ಭಕ್ತರು ನೀಡುವ ಎಲ್ಲ ಉಪಚಾರಗಳನ್ನೂ, ಔಷಧಗಳನ್ನೂ ಭಕ್ತರಿಗೆ ನೋವಾಗಬಾರದೆಂದು ಸ್ವೀಕರಿಸುತ್ತಿದ್ದರು. ಅವರ ನಿರ್ಧಾರ ಅಚಲವಾಗಿತ್ತು. ಶರಣರಿಗೆ ಮರಣ ಜೀವನಗಳೆರಡೂ ಒಂದೇ". 

"ಅಂದು ಒಂದು ನಂಬಲಾರದ ಸುದ್ದಿಯೊಂದು, ಲಕ್ಷಾಂತರ ಜನ ಅವರ ಭಕ್ತರ ಮನಕ್ಕೆ ದೊಡ್ಡ ಆಘಾತಕಾರಿ ಸುದ್ದಿಯನ್ನು ಕೆಲವೇ ಕ್ಷಣಗಳಲ್ಲಿ ಮುಟ್ಟಿಸಿತ್ತು. ಎಲ್ಲರೂ ಸುದ್ದಿ ತಿಳಿದ ಕೂಡಲೇ ಮನೋವೇಗದಲ್ಲಿ ಧಾವಿಸಿ ಬಂದದ್ದು ಸಖರಾಯಪಟ್ಟಣಕ್ಕೆ ಆಷಾಢ ಬಹುಳ ಪಂಚಮಿ ತಾ. 30-07-2010 ರ ಶುಕ್ರವಾರ ರಾತ್ರಿ ಗುರುನಾಥರು ತಮ್ಮ ಭೌತಿಕ ಶರೀರವನ್ನು ಕಳಚಿ ಮಹಾಬಯಲಿನಲ್ಲಿ ಒಂದಾಗಿ ವಿಶ್ವವ್ಯಾಪಿಯಾದರು ಎಂಬ ಸುದ್ಧಿ ಶನಿವಾರ ಬೆಳಿಗ್ಗೆ ನನಗೆ ತಿಳಿಯಿತು. ಅಂದಿನ ಸೂರ್ಯ ಎಂದಿಗಿಂತ ದಿವ್ಯವಾಗಿ ಮತ್ತಾವುದೋ ಶಕ್ತಿಯೊಂದಿಗೆ ಹೊಳೆಯುತ್ತಿರುವಂತೆ ಅನಿಸಿತು". ಕೆಲ ಕ್ಷಣ ಬ್ರಹ್ಮಾನಂದಜೀಯವರು ಕಣ್ಮುಚ್ಚಿ ಧ್ಯಾನಸ್ಥರಾದರು. 

ಮಂದಸ್ಮಿತ, ಪ್ರಸನ್ನ - ತೇಜೋವದನ 


'ನಿತ್ಯ ಸತ್ಸಂಗ' ಮತ್ತೆ ಮುಂದುವರೆಯಿತು. ಅಂದು ನಡೆದ ಘಟನೆಗಳ ತುಣುಕನ್ನು ಅದು ನೋವಿನದ್ದೋ, ಆನಂದದ್ದೋ, ಗುರುನಾಥರ ಇಹಲೀಲಾ ದರ್ಶನದ ಅಂತಿಮ ದಿನದ್ದನ್ನು, ಮತ್ತೆ ಕಡಿದು ಹೋದ ಕೊಂಡಿಯನ್ನು ಕೂಡಿಸಿಕೊಂಡು ಅವರು ಹೇಳತೊಡಗಿದರು.

"ಬೆಂಗಳೂರಿನ ಕಿರಣ್ ಕುಮಾರ್ ತಮ್ಮ ಇತರ ಸ್ನೇಹಿತರೊಂದಿಗೆ ಅರಸೀಕೆರೆಗೆ ಬಂದರು. ಅವರೊಂದಿಗೆ ನಾವೂ ಸಖರಾಯಪಟ್ಟಣಕ್ಕೆ ಧಾವಿಸಿದೆವು. ಜನಸ್ತೋಮ ಅದಾಗಲೇ ಸಾಗರದಂತೆ ನೆರೆದಿತ್ತು. ಎಲ್ಲೆಡೆಯಿಂದ ಹರಿದು ಬಂದು ಸಾಗರ ಸೇರಿ ಧನ್ಯತೆಯ ಭಾವ ಪಡೆವ ನದಿಗಳಂತೆ ಎಲ್ಲ ಊರುಗಳ ಭಕ್ತರೂ ಅದಾಗಲೇ ಬಂದಿದ್ದರು, ಬರುತ್ತಿದ್ದರು. ಹತ್ತಾರು ಸಾವಿರ ಜನಗಳು, ಹಿಂದೆಂದೂ, ಮುಂದೆಂದೂ ಸಖರಾಯಪಟ್ಟಣ ಇಷ್ಟೊಂದು ಬೃಹತ್ ಜನಸಾಗರವನ್ನು ಕಂಡಿರಲಾರದು. ಸಣ್ಣದಾಗಿ ಮಳೆ ಹನಿಯುತ್ತಿತ್ತು. ನೊಂದ ಹೃದಯಗಳಿಗೆ ತಂಪಿನ ಅರಿವಾಗಿಸುವ ಪ್ರಯತ್ನ ಮಾಡುತ್ತಿತ್ತೇನೋ ಎಂಬಂತೆ. ಇದ್ಯಾವುದರ ಪರಿವೆಯೂ ಇಲ್ಲದಂತೆ ಚಿರಧ್ಯಾನದಲ್ಲಿ, ಬ್ರಹ್ಮಾನಂದದಲ್ಲಿ ಮಂದಸ್ಮಿತ, ಪ್ರಸನ್ನ, ತೇಜೋವದನರಾಗಿ ಗುರುನಾಥರು ಮಲಗಿದ್ದರು. ಅದರ ದರ್ಶನ ಮಾಡಿ ನಮಿಸಿದೆವು. ಮಾತುಗಳು ಸೋತು, ಮನ ಮೌನವನ್ನಾಶ್ರಯಿಸಿತು. ಕಿವಿಗಳಿಗೆ ಲಲಿತಾ ಸಹಸ್ರನಾಮ, ಸೌಂದರ್ಯಲಹರಿ ಪಠಣ, ಭಜನೆ, ಗುರುಗೀತೆಗಳು ಕೇಳಿಬರುತ್ತ ಒಂದು ಕ್ಷಣ ಏನಿಲ್ಲಾಗುತ್ತಿದೆ ಎಂಬುದನ್ನು ಅರಿಯುವುದೇ ಕಷ್ಟವಾಗುತ್ತಿತ್ತು. ನೋಡುತ್ತಿರುವುದೇನು? ಕೇಳುತ್ತಿರುವುದೇನು? ನಡೆಯುತ್ತಿರುವುದೇನು? ಅದೆಷ್ಟು ಜನ ಎಲ್ಲಿಂದ ಬರುತ್ತಿದ್ದಾರೆ, ಎತ್ತ ಸಾಗುತ್ತಿದ್ದಾರೆ... ಎಲ್ಲ ಅಯೋಮಯವಾಗಿತ್ತು. ಬಂದವರಿಗೆಲ್ಲಾ ಒಂದೆಡೆ ಪ್ರಸಾದರೂಪಿ ಭೋಜನ ನಡೆಯುತ್ತಿತ್ತು. ಬಡಿಸುವವರೂ, ಭುಂಜಿಸುವವರೂ, ಗುರುನಾಥರ ಆದರ, ಆತಿಥ್ಯಗಳನ್ನು, ಅವರ ಗುರುವಾಣಿಯನ್ನು, ಆಜ್ಞೆಯನ್ನು ಸ್ಮರಿಸುತ್ತಾ ಪ್ರಸಾದ ಸ್ವೀಕರಿಸುತ್ತಿದ್ದರು. ಕೆಲವರಂತೂ ಗುರುನಾಥರ ಕೈಯಿಂದ ಬಾಯಿ ತುತ್ತು, ಕೈ ತುತ್ತು ತಿಂದವರು. ಗುರುನಾಥರಿಗೆ ಕೈ ತುತ್ತು ನೀಡಿದವರೂ ಅಲ್ಲಿದ್ದರು. ಅವರ ಭಾವಗಳನ್ನು ಬಗೆದು ನೋಡುವುದು ಅಸಾಧ್ಯವಾಗಿತ್ತು. ಇದು ದಿನವಿಡೀ ನಡೆದಿತ್ತು. ಗುರುನಾಥರ, ಅವರ ಭಕ್ತರ ನೋವನ್ನು ನೋಡಲಾಗುತ್ತಿಲ್ಲವೇನೋ ಎಂಬಂತೆ ಸೂರ್ಯದೇವನ ಮುಖವೂ ಕಂದತೊಡಗಿತ್ತು. ಮೋಡದ ಮರೆಯಲ್ಲಿ ಆತ ಈ ದೃಶ್ಯ ನೋಡಿ ಸಹಿಸಲಾಗದೇ  ಸರಿದನೇನೋ... ಅಂತೂ ಸಂಜೆಯತ್ತ ಕಾಲ ನಡೆಯತೊಡಗಿತು. ಇತ್ತ ಗುರುನಾಥರ ಭವ್ಯ, ದಿವ್ಯ ಉತ್ಸವ ಪ್ರಾರಂಭವಾಯಿತು. ಭಕ್ತಸ್ತೋಮ ರುದ್ರಘೋಷ ಮಾಡುತ್ತಾ, ಭಜನೆ ಮಾಡುತ್ತಾ ಸಾಗಿತು....." ಇವರೂ ಮೌನವಾದರು.

ಗುರುನಾಥರ ಆ ಯಾತ್ರೆಯ ಜೊತೆ ಹೆಜ್ಜೆ ಹಾಕುತ್ತಾ ಹೋದ ಭಕ್ತ ಸಮೂಹ ಅದೇನೇನನ್ನು ನೆನೆಸುತ್ತಿತ್ತೋ ಗುರುನಾಥರೇ ಬಲ್ಲರು!

ನಿತ್ಯ ಸತ್ಸಂಗದ ನಿತ್ಯ ಓದುಗ ಭಕ್ತ ಮಹಾಶಯರೇ, ನಾಳೆಯೂ ಸತ್ಸಂಗದಲ್ಲಿರುವಿರಲ್ಲಾ....

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment