ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 7
ಧಾರುಣಿಯೊಳಾ ಕ್ಷೇತ್ರ ಮಹಿಮೆಯ । ಧಾರಣಿಪಗರುಹಿದನು ಗೌತಮ ।
ಚಾರು ಗೋಕರ್ಣದ ಪವಿತ್ರತೆ ಏಳನೆಯ ಅಧ್ಯಾಯ ।। 7 ।।
ಗೋಕರ್ಣ ಕ್ಷೇತ್ರದ ಮಹಿಮೆ ಅಪಾರ, ಸ್ವಯಂ ಶ್ರೀಪಾದ ಶ್ರೀ ವಲ್ಲಭರು ಅನೇಕ ವರ್ಷ ಗೋಕರ್ಣ ಕ್ಷೇತ್ರದಲ್ಲಿದ್ದರೆಂಬ ವಿಚಾರಗಳು ಹಾಗೂ ಮಿತ್ರಸಹನೆಂಬ ರಾಜನ ಕಥೆಯು ಏಳನೆಯ ಅಧ್ಯಾಯದಲ್ಲಿ ಬರುತ್ತದೆ.
ಮಿತ್ರಸಹ ರಾಜನು ಅಡವಿಯಲ್ಲಿ ಬೇಟೆಯಾಡುತ್ತ ಒಬ್ಬ ರಾಕ್ಷಸನನ್ನು ಕೊಲ್ಲುತ್ತಾನೆ. ಆ ರಾಕ್ಷಸ ತನ್ನ ತಮ್ಮನನ್ನು ಕರೆದು "ನೀನು ನನ್ನ ಸಾವಿನ ಸೇಡನ್ನು ತೀರಿಸಿಕೋ" ಎನ್ನುತ್ತಾನೆ. ಅಣ್ಣನ ಮಾತಿಗಾಗಿ ಮಿತ್ರಸಹ ರಾಜನ ಮನೆಯಲ್ಲಿ ಅಡುಗೆಯವನ ರೂಪದಲ್ಲಿ ಸೇರಿಕೊಂಡ ರಾಕ್ಷಸನು, ರಾಜನ ತಂದೆಯ ಶ್ರಾದ್ಧದ ದಿನ ಮಾಂಸದ ಅಡುಗೆ ಮಾಡಿ ಬಡಿಸುತ್ತಾನೆ. ಶ್ರಾದ್ಧಕ್ಕೆ ಬಂದ ವಸಿಷ್ಠರು ಇದರಿಂದ ಕೋಪಗೊಂಡು ರಾಜನಿಗೆ "ಹನ್ನೆರಡು ವರ್ಷಗಳು ನೀನು ಕಾಡಿನಲ್ಲಿ ರಾಕ್ಷಸನಾಗಿರು" ಎಂದು ಶಾಪ ಕೊಡುತ್ತಾರೆ. ಮುಂದೆ ಶಾಪದ ಅವಧಿ ಮುಗಿದು, ನಂತರ ವಸಿಷ್ಠರ ಬಳಿ ಬಂದು ಬೇಡಿದ ರಾಜನಿಗೆ ಅವರು "ನೀನು ಗೋಕರ್ಣಕ್ಕೆ ಹೋಗು. ಅಲ್ಲಿ ನಿನ್ನ ಬೇಡಿಕೆಗಳೆಲ್ಲಾ ನೆರವೇರುತ್ತವೆ. ಗೋಕರ್ಣದಲ್ಲಿ ಸ್ನಾನ ಮಾಡಿ ಮಹಾಬಲೇಶ್ವರನ ದರ್ಶನ ಪಡೆದ ಸೌಮಿನಿ ಎಂಬ ಚಂಡಾಲಿ ಶಿವಸಾಯುಜ್ಯ ಪಡೆದಳು. ಅಂತಹ ಮಹಾಕ್ಷೇತ್ರಕ್ಕೆ ರಾಜನೇ, ನೀನೂ ಹೋಗು" ಎನ್ನುತ್ತಾರೆ. ಹೀಗೆ ಗೋಕರ್ಣದ ಅಪಾರ ಮಹಿಮೆಯನ್ನು ಇಲ್ಲಿ ವಿವರಿಸಲಾಗಿದೆ.
ಮುಂದುವರಿಯುವುದು.....
No comments:
Post a Comment