ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 72
ಎಲ್ಲಾ ಸರಿ.... ಸ್ವಲ್ಪ ದುರಹಂಕಾರ ಬಿಡು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರ ಪರಮ ಶಿಷ್ಯರಾದ ಯೋಗಾನಂದರೆಂಬುವರು ತಮ್ಮ ಗುರುಗುಣಲೀಲಾ ಪಾರಾಯಣವನ್ನು ಎಲ್ಲರೆದುರೂ ಮಾಡುತ್ತಿದ್ದರು. ಅವರ ಮಾತಿನಲ್ಲಿ ಸದಾ ಗುರುನಾಥರ ವಿಚಾರವೇ ಬರುತ್ತಿದ್ದುದು. ಹೀಗಾಗಿ ಅದೆಷ್ಟೋ ಜನರು ಗುರುನಾಥರನ್ನರಸಿ ಬಂದು ಜೀವನ ಸಾರ್ಥಕ ಮಾಡಿಕೊಂಡರು. ಹೀಗೆ ಗುರುನಾಥರ ವಿಚಾರ ಪದೇ ಪದೇ ಕೇಳಿ ಆಕರ್ಷಿತರಾದ ಮೂರ್ನಾಲ್ಕು ಜನ ಮೈಸೂರಿನಿಂದ ಹೊರಟರು. ಚಿಕ್ಕಮಗಳೂರಿನಲ್ಲಿ ಒಂದು ರೂಮು ಮಾಡಿ ಉಳಿದು, ಮಾರನೆಯ ದಿನ ಗುರುನಾಥರ ಊರಿಗೆ ಪ್ರಯಾಣ ಮುಂದುವರೆಸಿದರು. ಅವರಲ್ಲಿ ಹಣ, ಅಧಿಕಾರ, ರೂಪ, ವಿದ್ಯೆಗಳಿಂದ ಬೀಗುವ, ಕೋಟು, ಬೂಟು, ಟೈ, ಉಂಗುರ, ಸರಗಳಿಂದ ಅಲಂಕೃತವಾಗಿ ತಾನೇನು ಯಾರಿಗೂ ಕಡಿಮೆ ಇಲ್ಲ ಎಂಬ ತಪ್ಪು ಕಲ್ಪನೆಯಲ್ಲಿ, ತಮಗರಿವಿಲ್ಲದೇ ವಿಹರಿಸುತ್ತಿದ್ದ ಒಬ್ಬ ವ್ಯಕ್ತಿಯೂ ಇದ್ದರು. ಉತ್ತಮವಾದ ಗೋಷ್ಟಿ, ಸಮೇಷ್ಟಿಯಲ್ಲಿದ್ದರೆ, ಗುಂಪಿನಲ್ಲಿದ್ದವರ ಪ್ರಭಾವ, ಪುಣ್ಯದಿಂದ ಇತರರೂ ಉದ್ಧಾರವಾಗುವಂತಹ ಸಂದರ್ಭ ಬಂದುಬಿಡುತ್ತದೆ. ಜೊತೆಗೆ ಅವರಿಗೂ ಗುರುಕರುಣೆ ಪ್ರಾಪ್ತವಾಗುವ ಸಂದರ್ಭ ಒದಗಿದಾಗ, ಅದೊಂದು ಜೀವನದ ಮಹತ್ತರ ತಿರುವಾಗಿ, ಹೇಗಿದ್ದವರು ಹೇಗೋ ಪರಿವರ್ತಿತರಾಗಿಬಿಡುವುದುಂಟು. ಶುದ್ಧನಾಸ್ತಿಕರೂ ಆಸ್ತಿಕ ಶಿರೋಮಣಿಗಳಾಗಿದ್ದಾರೆ, ಕಡುಬಡವರು ಸದ್ಗುಣ, ಸಂಪತ್ತುಗಳ ಒಡೆಯರಾಗಿದ್ದಾರೆ. ಹೀಗೆ ಏನೇನೋ ಆಗಿದ್ದಿದೆ.... ಅದೆಲ್ಲಾ ಗುರುಕರುಣೆಯಿಂದ.
ಈ ನಾಲ್ಕೈದು ಜನಗಳ ಗುಂಪೇನೋ ಗುರುನಾಥರ ಮನೆ ಬಾಗಿಲನ್ನು ತಲುಪಿತು. "ನಮ್ಮಲ್ಲೊಬ್ಬರು ಹೋಗಿ ಗುರುನಾಥರ ಮನೆಯ ಬಾಗಿಲನ್ನು ತಟ್ಟಿದೆವು. 'ಈಗ ಬಾಗಿಲು ತೆಗೆಯೊಲ್ಲ... ದರ್ಶನವಾಗುಲ್ಲ' ಎಂಬ ಮಾತು ಕೇಳಿಬಂದಿತು. ನಾವು ಗುರುನಾಥರ ಹೃದಯ ಮುಟ್ಟುವ ಮನ ಮಾಡಲಿಲ್ಲವೇನೋ. ಕಾರಿನಲ್ಲಿಯೇ ಕುಳಿತಿದ್ದ ನಾನೂ ಎದ್ದು ಬಾಗಿಲ ಬಳಿ ಹೋದೆ. ನಾನು ಗುರುದರ್ಶನಕ್ಕಾಗಿ ಹೊರಟಿದ್ದರೂ ದಪ್ಪ ಸರ, ಉಂಗುರಗಳು, ಒಳ್ಳೆಯ ಪ್ಯಾಂಟ್, ಕೋಟು, ಬೂಟುಗಳನ್ನು ಧರಿಸಿ ಟಾಕು ಟೀಕಾಗಿ ಹೋಗಿದ್ದೆ. ಹೋಗಿ ಬಾಗಿಲ ಬಳಿ ನಿಂತುಕೊಂಡೆ. ಬಾಗಿಲು ತೆರೆಯಿತು. 'ನಿನ್ನ ಚಿನ್ನ, ಉಂಗುರ, ಸರ, ಟಿಪ್ ಟಾಪ್ ಡ್ರೆಸ್ಸು ಹಣಗಳ ಮೇಲೆ ನಿಗಾ ಇಟ್ಟುಕೊಂಡು ಬಂದರೆ ಇಲ್ಲಿ ನಿನಗೇನೂ ಸಿಗಲ್ಲ ಹೋಗು' ಎಂದುಬಿಟ್ಟರು. ನನ್ನಲ್ಲಿ ಅವಾಗ ನನ್ನ ಪದವಿ, ನನ್ನಲ್ಲಿದ್ದ ಹಣ, ನನ್ನ ಅಂತಸ್ತಿನ ಒಂದಿಷ್ಟು ಗರ್ವ ಇತ್ತು. ಗುರುವನ್ನು ಪಡೆಯುವುದು ಅಷ್ಟು ಸುಲಭವಲ್ಲ ಎಂದು ತಿಳಿದೇ ಇರಲಿಲ್ಲ.
ಅದಾದ ಮೇಲೆ ಗುರುನಾಥರು ರಾಮಮಂದಿರದ ಕಡೆ ಅವರ ಶಿಷ್ಯ ಸಮೇತ ಹೋದರು. ನಾವೂ ಅವರ ಹಿಂದೆಯೇ ಹೊರಟೆವು. ನಮ್ಮ ಸ್ನೇಹಿತರಾದ ಚಿಕ್ಕಮಗಳೂರಿನ ಸತೀಶ್ ಎಂಬುವರು ಒಂದಿಷ್ಟು ಪೇಡ ತಂದಿದ್ದರು. ಅದನ್ನು ಅವರಿಗೆ ನೀಡುತ್ತಾ, ತೆಗೆದುಕೊಳ್ಳಿ ಎಂದಾಗ 'ಅದನ್ನು ಎಲ್ಲರಿಗೂ ಕೊಡು. ಆಮೇಲೆ ನಾನು ತೆಗೆದುಕೊಳ್ಳುತ್ತೇನೆ' ಎಂದರು. ಕೊನೆಗೆ ನಾವೆಲ್ಲಾ ಅವರ ಜೊತೆಗೆ ಹೋದಾಗಲೂ ಗುರುನಾಥರ ದೃಷ್ಟಿ ನನ್ನ ಮೇಲೆ ಬಿದ್ದರೂ, 'ಹಾಂ, ಹಾಂ, ಹಾಂ' ಎನ್ನುತ್ತಿದ್ದರು. ಅದೇನವರ ಮನದಲ್ಲಿತ್ತೋ, ನನಗರ್ಥವಾಗಲಿಲ್ಲ. ಮುಂದೆ ನಾವು ಅವರ ಮನೆಗೆ ಬಂದೆವು. ನಮ್ಮ ಸ್ನೇಹಿತರು ಒಂದು ಬುಟ್ಟಿಯಲ್ಲಿ ಎರಡು ಪೇಡ ಇಟ್ಟುಕೊಂಡು ಅವರ ಮನೆಯ ಒಳಗೆ ಹೋದರು. ನಾವೆಲ್ಲಾ ಹೋಗಿ ಕುಳಿತೆವು. ಹಾಲ್ ನಲ್ಲಿಯೇ ಒಂದು ಕಳಶ ಇಟ್ಟಿದ್ದರು. ಯಾವುದೋ ಪೂಜೆ ನಡೆಯುತ್ತಿತ್ತು. ಆ ಕಳಶವನ್ನು ಸುತ್ತುತ್ತಾ ಪ್ರದಕ್ಷಿಣೆ ಮಾಡುತ್ತಾ ಬಂದ ಗುರುನಾಥರು, ನನ್ನ ಬಳಿ ಬಂದು ಇದ್ದಕ್ಕಿದ್ದಂತೆ ನನಗೆ ನಮಸ್ಕರಿಸಿಬಿಟ್ಟು ನಂತರ ಆ ಮೂಲೆಯಲ್ಲಿದ್ದ ಕುರ್ಚಿಯ ಮೇಲೆ ಕುಳಿತರು. ನನಗೆ ಮೈ ಮೇಲೆ ಬಿಸಿನೀರು ಚೆಲ್ಲಿದಂತಾಯಿತು. ನಾನೆಂತಹ ಅಪರಾಧಿ, ಎಲ್ಲರಿಂದ ನಮಸ್ಕರಿಸಿಕೊಳ್ಳುವ ಗುರುನಾಥರು ನನಗೆ ನಮಸ್ಕರಿಸಿಬಿಟ್ಟರಲ್ಲ. ನನಗೆ ಗಳಗಳನೆ ಅಳುವೇ ಬಂದುಬಿಟ್ಟಿತು.ನನ್ನ ಅಹಂಕಾರ, ಅಹಂಭಾವಗಳೆಲ್ಲಾ ಆ ಮಹಾಮಹಿಮರ ಸರಳತೆಯಲ್ಲಿ ನುಚ್ಚುನೂರಾಗಿ ಹೋಗಿ, ನಾನೆಂತಹ ತಪ್ಪು ಕಲ್ಪನೆಯೊಳಗಿದ್ದೆ... ಇದೇನಾಗಿ ಹೋಯಿತು ಎಂದು ಚಿಂತಾಕ್ರಾಂತನಾದೆ. ನಿಧಾನವಾಗಿ ಹೋಗಿ ಗುರುನಾಥರ ಕಾಲಿಗೆ ಬಿದ್ದು, ನನ್ನ ಅಶ್ರುಧಾರೆಯಲ್ಲಿ ಅವರ ಪಾದ ತೊಳೆದೆ. ನಿಧಾನವಾಗಿ ಅವರ ಬೆನ್ನ ಹಿಂದೆ ನಿಂತು ಗುರುನಾಥರ ಹೆಗಲು, ಮೈಗಳನ್ನು ಒತ್ತುತ್ತಾ ನಿಂತೆ.
ಹೀಗೆ ಅದೆಷ್ಟು ಜನಗಳ ಭಾರವನ್ನು ದೂರಮಾಡಿ, ಹೊತ್ತು ಗುರುನಾಥರು ದಣಿದಿದ್ದರೋ.... ಮತ್ತವರ ಕೈಗಳು ನನ್ನ ತಲೆಯ ಮೇಲೆ ಹರಿದವು. ಆ ಸ್ಪರ್ಶವೇ ನನಗೆ ಮಹದಾನಂದ ನೀಡಿತ್ತು. 'ನೀನು ಎಲ್ಲಾ ಸರಿ... ಒಂದಷ್ಟು ಅಹಂಕಾರವಿದೆ, ಬಿಟ್ಟುಬಿಡು' ಎಂದರು. ಆ ಗುರುನಾಥರ ನುಡಿಗಳು, ಆ ಸ್ಪರ್ಶ ನನ್ನ ಜೀವನದ ಒಂದು ಮಹತ್ತರ ತಿರುವು ಆಯಿತು. ನಾನು ಎಂಬುದನ್ನಳಿಸಿ, ನನ್ನ ಪ್ರತಿಚಲನವಲನಗಳನ್ನೂ ತಿದ್ದುತ್ತಾ, ನಾನಿವತ್ತು ಅವರ ಚರಣ ಸೇವಕನೆಂಬ ಭಾವವನ್ನು ಬಿಗಿಮಾಡಿದೆ".
'ದುರಹಂಕಾರ ಬಿಡು' ಎಂಬ ಸಪ್ತಾಕ್ಷರಿಯೇ ಇವರ ಜೀವನ ಸೂತ್ರವಾಯಿತು. ಅವರಿಗಾಗ ತಿಳಿದಿದ್ದೇನೆಂದರೆ, ಯಾರೊಂದಿಗೂ ಅಹಂಕಾರದ ಮಾತನಾಡಬಾರದು. ನನ್ನ ಬಳಿ ಏನಿದೆಯೋ, ಅದಕ್ಕೆ ನೂರು ಪಟ್ಟು ಹೆಚ್ಚಿನದು ಲಕ್ಷಾಂತರ ಜನರ ಬಳಿ ಇದೆ. ಆದರೆ ಅವರು ಬಾಳುವ ರೀತಿಯನ್ನು ನೋಡುವಂತೆ ಮಾಡಿತ್ತು ಆ ಸಪ್ತಾಕ್ಷರಿ. ಬಂಗಾರದ ಉಂಗುರದ, ಬಂಗಾರದ ಚೈನಿನ ಮೋಹವಳಿಯುವಂತೆ ಅವರಿಗೆ. ಬರುವಾಗ ಗುರುನಾಥರ ಪಾದದಡಿ ಒಂದು ಸಾವಿರದೊಂದು ರೂಪಾಯಿ ಇಟ್ಟು ಬಂದ ಇವರಿಗೆ ಗುರುನಾಥರು ತಟ್ಟನೆ ವಾಪಸ್ಸು ಕಳಿಸಿದ್ದರು, ಅವರ ಶಿಷ್ಯರುಗಳ ಕೈಯಲ್ಲಿ.
ಮೈಸೂರಿನ ಶ್ರೀನಿವಾಸ್ ಅವರು, ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಆಗಿದ್ದಾಗ, ಎರಡು ಸಾವಿರದ ಹತ್ತರಲ್ಲಿ ನಡೆದ ಈ ಘಟನೆಯನ್ನು ನಿತ್ಯ ಸತ್ಸಂಗಕ್ಕಾಗಿ ಹಂಚಿಕೊಂಡಿದ್ದು ಹೀಗೆ.
ಗುರುನಾಥರ ಎದುರು ಯಾವ 'ಅಹಮು' ನಿಲ್ಲಲು ಸಾಧ್ಯ? ಮೊದಲ ನೋಟದಲ್ಲೇ ಅಪಮಾನವಾದರೂ, ಗುರುನಾಥರ ಜೊತೆ ನಾಲ್ಕು ಹೆಜ್ಜೆ ನಡೆದುದರಿಂದ, ಅವರ ಸಪ್ತಾಕ್ಷರಿ ಮಂತ್ರವನ್ನು ಅಳವಡಿಸಿಕೊಂಡಿದ್ದರಿಂದ ಶ್ರೀನಿವಾಸರ ಬಾಳಿಂದು ಬಂಗಾರವಾಗಿದೆ. ತಮಗಾದ ಅಪಮಾನವನ್ನು ಅಳುಕಿಲ್ಲದೇ ಹಂಚಿಕೊಂಡಿದ್ದು ಸಹಾ ಒಂದು ಗುರುನಾಥರ ಲೀಲೆ ಅಲ್ಲವಾ?
ಪ್ರಿಯ ಗುರುಬಾಂಧವರೇ, ಇಂದಿನ ಸತ್ಸಂಗಕ್ಕೆ ಅಲ್ಪ ವಿರಾಮ ನೀಡೋಣವೇ? ನಾಳೆ ಮತ್ತೆ ನಮ್ಮೊಂದಿಗಿರಿ..... ಗುರುನಾಥರ ನಿತ್ಯ ಸತ್ಸಂಗ, ಮತ್ತೇನೇನು ನೀಡುವುದೋ... ಬರುವಿರಲ್ಲಾ....

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment