ಒಟ್ಟು ನೋಟಗಳು

Wednesday, May 17, 2017

ಶ್ರೀ ಸದ್ಗುರುನಾಥ ಲೀಲಾಮೃತ - 2
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 69
ಗುರು ಶಕ್ತಿ ನಿರಂತರ 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಸಾನ್ನಿಧ್ಯವು ಯಾರಲ್ಲಿ ಯಾವಾಗ ಪ್ರಕಟವಾಗುತ್ತದೆಯೋ, ಅರಿಯುವುದಸಾಧ್ಯ. ಪ್ರಕಟವಾದರೂ, ಪ್ರಕಟವಾಗದೇ ಸುಷುಪ್ತವಾಗಿದ್ದರೂ, ನಾವರಿತರೂ, ನಾವರಿಯದಿದ್ದರೂ ಇರುವ ಆ ಶಕ್ತಿ, ಆ ಸಾನ್ನಿಧ್ಯ ಇದ್ದೇ ಇರುತ್ತದೆ ಎಂಬುದು ಒಬ್ಬ ಗುರುಭಕ್ತರ ಅನುಭವ. 

ಆ ಗುರುಭಕ್ತರು ನಿತ್ಯ "ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿನೇ ನಮಃ" ಎಂದು ಧ್ಯಾನಿಸುವುದು, ಅದನ್ನೇ ಬರೆಯುವುದನ್ನು ರೂಢಿ ಮಾಡಿಕೊಂಡಿದ್ದರು. ಗುರುನಾಥರ ಸಹವಾಸದಲ್ಲಿರುತ್ತ, ಗುರುನಾಥರು ಅನೇಕ ಬಾರಿ ಈ ವಿಚಾರವನ್ನು ಅನೇಕರಿಗೆ ಹೇಳುತ್ತಿದ್ದರಿಂದ ಇವರೂ ಅದನ್ನು ಬರೆಯಲು ತೊಡಗಿದ್ದರು. 

ಒಮ್ಮೆ ಗುರುನಾಥರ ಸನಿಹದ ಬಂಧುಗಳು "ನೀವು ಏನನ್ನು ಬರೆಯುತ್ತಿದ್ದೀರಿ?" ಎಂದು ಕೇಳಿದಾಗ ಆ ಭಕ್ತರು ತಾವು ಬರೆಯುತ್ತಿದ್ದುದನ್ನು ಹೇಳಿದರು. ಆ ಕೂಡಲೇ ಆ ಬಂಧುಗಳು "ಅಲ್ಲ ನೀವು ಐಯ್ಯಂಗಾರ್ ಅಲ್ಲವಾ.... ? ನಿಮಗೆ ರಾಮನೇ ಸರ್ವಸ್ವ ಅಲ್ಲವಾ... ? ಶ್ರೀರಾಮ ಜಯ ರಾಮ ಜಯ ಜಯ ರಾಮ ಎಂದು ಬರೆಯುವುದನ್ನು ಬಿಟ್ಟು ಇದೇನು ಬರೀತಿದ್ದೀರಿ?" ಎಂದು ಕೇಳಿಬಿಟ್ಟರಂತೆ. 

ಕೂಡಲೇ ಅವರಿಗೆ ಆ ದಿನಗಳ ನೆನಪಾಯಿತು. ಗುರುನಾಥರ ಮೊದಲ ಬಾರಿಯ ಪರಿಚಯವಾದ ಆ ದಿನ. ಸ್ವಾಮಿ ಎಂಬುವರು ಜೊತೆಗಿದ್ದರು. ಆ ಭಕ್ತರ ಪರಿಚಯ ಮಾಡಿಸುತ್ತಾ "ಇವರು ತುಂಬಾ ಸಾತ್ವಿಕರು. ಒಳ್ಳೆ ಮನೆತನದವರು... ನೀವು ಇವರಿಗೆ ಏನಾದರೂ ಉಪದೇಶ ಮಾಡಿ ಉದ್ಧರಿಸಬೇಕು" ಎಂದು ಗುರುನಾಥರನ್ನು ಕೇಳಿದ್ದರಂತೆ. 

ಕೂಡಲೇ ಎದುರಿಗಿದ್ದ ಗುರುನಾಥರು "ಏನು ಹೇಳುವುದಯ್ಯಾ. ಅದೇ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಅನ್ನು ಸಾಕು" ಎಂದಿದ್ದರಂತೆ. 

ಗುರುವಿನ ಮೂಲ ಉಪದೇಶ ಮತ್ತೆ ನೆನಪಿಗೆ ತರಿಸಿದ ಗುರುಸಂಬಂಧಿಗಳಿಗೆ ಇವರು ಕೋಟಿ ಕೋಟಿ ನಮನ ಸಲ್ಲಿಸುತ್ತಾ, ತಾವು ಮಾಡುವ, ಬರೆಯುವ ಕೆಲಸದಲ್ಲಿ ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿನೇ ನಮಃ ಹಾಗೂ ಶ್ರೀರಾಮ ಜಯ ರಾಮ ಜಯ ಜಯ ರಾಮ" ಎಂಬುದನ್ನೂ ಸೇರಿಸಿಕೊಂಡರಂತೆ. 

ಮತ್ತೊಮ್ಮೆ ಇದೆ ಗುರು ಬಂಧುಗಳು ತೋಟದಲ್ಲಿ ಸುತ್ತಾಡುತ್ತಾ "ಮರದಿಂದ ಬೀಜವೊ, ಬೀಜದಿಂದ ಮರವೋ, ಮರವೋ ಬೀಜವೊ, ಬೀಜವೊ ಮರವೋ.... " ಎಂದೊಂದು ಸಮಸ್ಯೆಯನ್ನು ಇವರ ಮುಂದಿಟ್ಟಾಗ, ಏನೂ ಅರಿಯದ ಇವರು "ಅಪ್ಪಾ ನೀನೇ ನನಗೆ ಗುರು, ಗುರುನಾಥ, ನೀನೇ ಎಲ್ಲ, ನೀನೇ ತಿಳಿಸಪ್ಪಾ" ಎಂದು ಸುಮ್ಮನಾದರಂತೆ. 

ಏನು ಮಾಮಾ ಮಾಮಾ ಅಂತಿ.... 

 ಗುರುನಾಥರ ರೀತಿಯನ್ನು ಅರಿಯುವುದೇ ಬಹು ಕಷ್ಟ. ಕೆಲವೊಮ್ಮೆ ನಗುನಗುತ್ತಾ, ಆಡಿಸಿದವರ ಕೈಗೂಸಿನಂತೆ ಇದ್ದರೆ ಕೆಲವೊಮ್ಮೆ ಜನ್ಮ ಜಾಲಾಡುವಂತೆ ಬೈದು ಅಂದಿರುವುದೂ ಇದೆ. ನಿಜವಾಗಿಯೂ ಪಾಪಗಳನ್ನು (ಭಕ್ತರ) ಜಾಲಾಡಿ, ಅವರಿಗೆ ಪುಣ್ಯ ವಿಶೇಷಗಳು ಉಳಿಸಿಕೊಡಲಾಗಿಯೇ, ತಮ್ಮ ಬಳಿ ಬಂದ ಭಕ್ತರೊಂದಿಗೆ ಇವರು ಆ ರೀತಿ ವರ್ತಿಸುತ್ತಿದ್ದುದು ಎಂಬ ನಂಬಿಕೆ. 

ಅನನ್ಯ ಸೇವಿಸುತ್ತಿದ್ದ, ಅವರ ಪ್ರಿಯ ಶಿಷ್ಯರೊಬ್ಬರ ಮನೆಯಲ್ಲೂ ಅಂದು ಗುರುನಾಥರು, ಯಾರನ್ನು ಕುರಿತಾಗಿ ಎಂಬುದನ್ನು ತಿಳಿಸದೇ ಜನ್ಮ ಜಾಲಾಡುತ್ತಿದ್ದರಂತೆ. ಅನೇಕರು ನಾವೇನೂ ಅಂತಹ ತಪ್ಪು ಮಾಡಿಲ್ಲ. ನಮ್ಮ ಕುರಿತಾಗಿ ಇದಲ್ಲ, ಯಾರು ಅಂತಹ ತಪ್ಪು ಮಾಡಿದರೋ ಅವರಿಗದು ಅನುಗುಣವಾಗುತ್ತದೆ ಎಂದು ಸುಮ್ಮನಿದ್ದುಬಿಟ್ಟರು. ಆದರೂ ಯಾರ ಮನೆಯಲ್ಲಿ ಗುರುನಾಥರು ಆ ಸಮಯದಲ್ಲಿ ಇದ್ದರೋ, ಆ ಮನೆಯವರು ಗುರುನಾಥರೊಂದಿಗೆ "ಮಾಮಾ" ಎಂದು ಮಾತನಾಡಿದಾಗ, ಕೋಪದ, ಗಂಭೀರವಾಗಿದ್ದ ವಾತಾವರಣ, ಒಂದು ಕ್ಷಣದಲ್ಲಿ ನಗೆಗಡಲಲ್ಲಿ ತೇಲಿ ಹೋಯಿತು. ಎಲ್ಲರೂ ನಕ್ಕರು, ಗುರುನಾಥರೂ ನಗತೊಡಗಿದರಂತೆ. 

ಆದದ್ದು ಇಷ್ಟೇ. ಬಯ್ಯುತ್ತಿರುವುದು ತಮಗಲ್ಲವೆಂಬುದನ್ನು ಅರಿತ ಆ ಮನೆಯಾಕೆ "ಮಾಮಾ" ಎಂದು ಮಾತನಾಡಿಸಲು ಹೋದಾಗ "ಏನು ಮಾಮಾ ಅಂತೀಯಲ್ಲ. ಮಾಮ ಅಲ್ಲ ಭೀಮ" ಎಂದುಬಿಟ್ಟರಂತೆ ಗುರುನಾಥರು. ಗುರುನಾಥರ ಆ ಮಾತೇ ಅಲ್ಲಿ ನಗೆಗಡಲನ್ನು ಸೃಷ್ಟಿಸಿದ್ದು. ಬೈಯುವ ನಾಟಕವಾಡುವಂತೆ, ಸಂತಸದ ಕಡಲನ್ನೂ ಸಹಜವಾಗಿ ಗುರುನಾಥರು ಸೃಷ್ಟಿಸುತ್ತಿದ್ದರು. ಹಾಗಾಗಿಯೇ ಯಾವಾಗಲೂ ಜನ ಇರುವೆ ಮುತ್ತಿದಂತೆ ಗುರುನಾಥರ ಬಳಿ ಇರುತ್ತಿದ್ದರು. 

ವಜ್ರಾದಪಿ ಕಠೋರಾಣಿ - ಮೃದೂನಿ ಕುಸುಮಾದಪಿ 

ಮತ್ತೊಮ್ಮೆ ತುಂಬಾ ತೊಂದರೆಯಲ್ಲಿದ್ದ ಒಂದು ಸಂಸಾರ ಯಾವ ಕೆಲಸ ಮಾಡಿದರೂ ಮುಗ್ಗಟ್ಟು. ಕೊನೆಗೆ ಆ ಮನೆಯ ಒಡತಿ, ಏನೋ ಒಂದು ನಿರ್ಧಾರ ಮಾಡಿ ಮನೆಯನ್ನು ಬಿಟ್ಟರು. ಅವರು ಬಂದಿದ್ದು ಗುರುನಾಥರಲ್ಲಿಗೆ. ಸಿಕ್ಕಿದ್ದು ಗುರುನಾಥರ ಬೈಗುಳ. ಒಂದು ದಿನವಿಡೀ ಗುರುನಾಥರ ತಿರಸ್ಕಾರಕ್ಕೆ ಒಳಗಾದರೂ ಜಾಗದಿಂದ ಕದಲಲಿಲ್ಲ. ಒಂದೂವರೆ ದಿನ ಕಳೆದವು. ವಜ್ರ ಕುಸುಮವಾಗುವ ಸಮಯ ಬಂತು. ಗುರುನಾಥರು ಕರೆದು ಮಾತನಾಡಿಸಿದರು. ಕಷ್ಟಗಳನ್ನೆಲ್ಲಾ ಸಾವಧಾನವಾಗಿ ಕೇಳಿದರು. ಒಂದೂವರೆ ದಿನದ ಕಾಯುವಿಕೆ, ಮನದ ದೃಢ ಭಕ್ತಿಗೆ ಗುರುನಾಥರು ಒಲಿದಿದ್ದರು. ಅದೇನನ್ನೋ ತರಿಸಿಕೊಟ್ಟು "ಇದನ್ನು ನಿಮ್ಮ ಬಸ್ಸಿನ ಸ್ಟೇರಿಂಗ್ ಬಳಿ ಕಟ್ಟಿರಿ. ಎಲ್ಲ ತಾಪತ್ರಯಗಳೂ ದೂರವಾಗುತ್ತೆ" ಎಂದರಂತೆ. ಅಂದಿನಿಂದಲೇ ಅವರ ಕಷ್ಟಗಳೆಲ್ಲಾ ಕರಿಗಿಹೋಗತೊಡಗಿತು. 

ಗುರುನಾಥರಿಂದ ಮಾತ್ರ ತಮ್ಮ ಕಷ್ಟಗಳಿಗೆ ಪರಿಹಾರ ದೊರಕುತ್ತೇನೆಂಬುದನ್ನು ಅರಿತು ಹೊರಟ ಆ ಮಹಿಳೆ, ಮನೆ ಬಿಡುವ ಮುನ್ನ ನಿರ್ಧರಿಸಿದ ತೀರ್ಮಾನವೆಂದರೆ ಗುರುನಾಥರು ಪರಿಹಾರ ತೋರಿಸುತ್ತಾರೆ, ತೋರಿಸಲೇಬೇಕು. ಒಂದು ವೇಳೆ ಅವರು ಪರಿಹಾರ ನೀಡದಿದ್ದರೆ ಮತ್ತೆ ತಾವು ತಮ್ಮ ಮನೆ ಮೆಟ್ಟಿಲು ತುಳಿಯುವುದಿಲ್ಲ, ಎತ್ತಲಾದರೂ ಹೋಗಿ ಬಿಡುವುದು ಎಂದೇ. ಸಂಸಾರವನ್ನು ನಿಲ್ಲಿಸುವ ಕರುಣಾಳು ಗುರುನಾಥರು ಎಂದಾದರೂ ಸಂಸಾರ ಒಡೆಯಲು ಬಿಡುತ್ತಾರೆಯೇ? ಜೀವನ ಎಂದರೆ ಪರೀಕ್ಷೆ. ಭಾವ ದೃಢವಿದ್ದರೆ ಜಯ ಶತಸಿದ್ಧ. 

ನಾಳಿನ ಸತ್ಸಂಗಕ್ಕೂ ನೀವೆಲ್ಲಾ ತಪ್ಪದೇ ಬನ್ನಿ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment