ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 78
ತೀರ್ಥ ಪ್ರೋಕ್ಷಿಸಿಕೊಳ್ಳಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಅಂದು ಗುರುನಾಥರ ಮನೆಗೆ ಬಂದ ಭಕ್ತರೊಬ್ಬರು, ತಮ್ಮ ಮಗಳಿಗೆ ಮದುವೆಯಾಗಿಲ್ಲವೆಂಬ ಕೊರಗನ್ನು ಗುರುನಾಥರ ಎದುರು ಬಿನ್ನವಿಸಿಕೊಳ್ಳಲು ತಯಾರಾಗಿದ್ದರು. ಸಾಮಾನ್ಯವಾಗಿ ಬರುವಂತೆ ಇನ್ನೂ ಅನೇಕ ಭಕ್ತ ಜನ, ಗುರುನಾಥರ ಶಿಷ್ಯ ವೃಂದವೂ ಮನೆಯೊಳಗೆ ಬಂದು ಕುಳಿತಿದ್ದರು. ಎಂದಿನಂತೆ ಬಂದವರೆಲ್ಲರಿಗೂ ಉಪಚಾರಗಳಾಗುತ್ತಿದ್ದವು. ಇಷ್ಟೆಲ್ಲಾ ಮಂದಿ ಮನೆಯ ಒಳಗೆ ಕುಳಿತಿದ್ದರೂ, ಗುರುನಾಥರಿಗೆ ಕಾಣುತ್ತಿದ್ದರೂ - ಗುರುನಾಥರ ದೃಷ್ಟಿ ಮನೆಯ ಹೊರಗೆಲ್ಲೋ ಹರಿದಾಡುತ್ತಿದ್ದಂತೆ, ಅದ್ಯಾರದೋ ಬರುವಿಗೆ ಕಾಯುತ್ತಿರುವಂತೆ ಇತ್ತು.
ಇದೇ ಸಮಯದಲ್ಲಿ ಗುರುನಾಥರ ಮನೆಯ ಮುಂದೆ ಶುಭ್ರವಾದ ಬಿಳಿ ಪಂಚೆಯುಟ್ಟು, ಭಸ್ಮ ತ್ರಿಪುಂಡ್ರವನ್ನು ಧರಿಸಿದ ವ್ಯಕ್ತಿಯೊಬ್ಬರು ಒಳಗೆ ಹೋಗುವುದೋ, ಬೇಡವೋ? ತಾನು ಒಳಗೆ ಹೋಗುವುದು ಉಚಿತವೋ? ಅನುಚಿತವೋ? ಹೊರಗಿದ್ದರೆ ನನ್ನ ಕೆಲಸವಾಗುವುದೋ? ಹೇಗೆ? ಗುರುನಾಥರೇ ಹೊರಬಂದರೆ ತಮ್ಮ ಕೆಲಸವೂ ಸುಲಭವಾದೀತೇನೋ ಎಂಬ ಭಕ್ತಿ ಭಾವಭರಿತ ಹೃದಯದಿಂದ, ತೊಳಲಾಡುತ್ತ ನಿಂತಿದ್ದರು.
ಅವರ ಭಕ್ತಿ ಭಾವವು ಒಳಗಿದ್ದ ಗುರುನಾಥರ ಹೃದಯವನ್ನು ತಟ್ಟಿರಬೇಕು. ಗುರುನಾಥರು ಎದ್ದು ಹೊರಬಂದರಂತೆ. ಆ ತ್ರಿಪುಂಡ್ರಧಾರಿಯನ್ನು, ಬಲವಂತವಾಗಿ, ಪ್ರೀತಿಯಿಂದ ಅಭಯಹಸ್ತ ನೀಡಿ, ಒಳಗೆ ಬನ್ನಿ ಎಂದು ಕರೆತಂದರಂತೆ.
ಗುರುಬಾಂಧವರೇ..... ಗುರುನಾಥರು, ಅವರ ಗುರುತನ, ಗುರುತ್ವ ಮೆರೆದಿರುವುದು, ಮಾನವೀಯತೆಯನ್ನೂ ಸಾರಿ ನಮಗೆಲ್ಲಾ ಬಹು ಮಹತ್ವದ ವಿಚಾರಗಳನ್ನು ಮಾತನಾಡದೆಯೇ, ತಿಳಿಸುವಂತಹ ಇಂತಹ ಘಟನೆಗಳಿಗೆ ಕೊನೆ ಮೊದಲೇ ಇಲ್ಲ.
ಗುರುಬಾಂಧವರೇ... ಈ ರೀತಿ ಭಾವನೆಗಳ ತಾಕಲಾಟದಲ್ಲಿ ಹೊರಗೆ ನಿಂತ ಆ ವ್ಯಕ್ತಿ ಯಾರು? ಅವರೇಕೆ ಒಳ ಬರದೇ ನಿಂತಿದ್ದರು? ಎಲ್ಲರಿಗೂ ತೆರೆದ ಬಾಗಿಲಾದ ಗುರುನಾಥರ ಮನೆಗೆ, ಅವರು ಬರಲೇಕೆ ಹಿಂಜರಿಯುತ್ತಿದ್ದರು.? ಅವರೇನು ಗುರುನಾಥರ ಜೊತೆಗೆ ಜಗಳವಾಡಿದ್ದರೇ? ಈ ಎಲ್ಲ ಪ್ರಶ್ನೆಗಳಿಗೆ ಮುಂದೆ ಇಲ್ಲಿ ಇದ್ದ ಪ್ರತ್ಯಕ್ಷದರ್ಶಿಯೊಬ್ಬರು ನಮ್ಮ ನಿತ್ಯ ಸತ್ಸಂಗಕ್ಕೆ ಈ ವಿಚಾರವನ್ನು ಧಾರೆ ಎರೆದ ಆ ಗುರುಭಕ್ತರ ಮಾತಿನಲ್ಲೇ ಮುಂದೆ ಅದನ್ನು ಕೇಳೋಣ.
ಗುರುಗಳ ಜೊತೆಗಿದ್ದ, ಅವರ ಬಳಿ ಇಂತಹ ಅನೇಕ ವಿಚಾರ ಬೋಧಕ ಅನುಭವಗಳ ಸರಮಾಲೆಯೇ ಇದೆ. ಅದನ್ನೂ ಗುರುನಾಥರಿಗೆ ಅರ್ಪಿಸೋಣ.
"ಬಾರಯ್ಯಾ ಒಳಗೆ, ಬಾ ಇಲ್ಲಿ ಕೂತ್ಕೊಳ್ಳಪ್ಪ... ಯಾರಪ್ಪ ಅಲ್ಲಿ, ಒಂದು ಮಣೆ ತಂದು ಹಾಕಿ....." ಎಂದರಂತೆ ಗುರುನಾಥರು. ಮಣೆಯ ಮೇಲೆ ಕುಳಿತು ಮುದುಡಿ ಕುಳಿತಿದ್ದ ಆ ವ್ಯಕ್ತಿ ಸಂಕೋಚದ ಮುದ್ದೆಯಾಗಿದ್ದರು. ಮತ್ತೊಬ್ಬ ಶಿಷ್ಯರನ್ನು ಕರೆದು ಪಾದ ತೊಳೆಸಿ, ಪೂಜೆ ಮಾಡಿಸಿದ ಗುರುನಾಥರು, ಕುಳಿತ ವ್ಯಕ್ತಿಗೆ ವಂದಿಸಿದರು. ಪುಷ್ಪ ವಸ್ತ್ರಗಳನ್ನು ನೀಡಿದರು. ಹಣ್ಣು - ಹಂಪಲುಗಳನ್ನು ಕೊಟ್ಟರು. ಬಂದವರ ಮಧ್ಯದಲ್ಲಿ ತಮ್ಮ ಮಗಳ ಮದುವೆಯ ಕುರಿತಾಗಿ ಕೇಳಲು ಬಂದ ಭಕ್ತೆಯ ಕಡೆಗೆ ತಿರುಗಿ, ಅವರು ತಮ್ಮ ಅಹವಾಲನ್ನು ಗುರುನಾಥರ ಎದುರು, ಹೇಳಿಕೊಳ್ಳುವ ಮೊದಲೇ 'ಆ ಪಾದ ತೊಳೆದ ತೀರ್ಥವನ್ನು ಬಂದು ಪ್ರೋಕ್ಷಿಸಿಕೊಳ್ಳಿ. ನಿಮ್ಮ ಮಗಳ ಮದುವೆ ತಡ ಏಕಾಗುತ್ತಿದೆ ಎಂದು ಚಿಂತಿಸುತ್ತಿದ್ದೀರಲ್ಲಾ? ಇನ್ನು ಆ ಯೋಚನೆ ಬಿಟ್ಟುಬಿಡಿ. ನಿಮ್ಮ ಮಗಳ ಮದುವೆ ಸಧ್ಯವೇ ಆಗುತ್ತದೆ ಚಿಂತೆ ಬೇಡ" ಎಂದು ಆಶೀರ್ವದಿಸಿದರಂತೆ.
'ಪ್ರಿಯ ಗುರುಬಾಂಧವರೇ... ಬಿಳಿ ಪಂಚೆಯುಟ್ಟು ತ್ರಿಪುಂಡ್ರ ಧರಿಸಿದ ಆ ವ್ಯಕ್ತಿ ಯಾರು ಎಂದು ನಿಮ್ಮ ಮನದಲ್ಲಿ ಪ್ರಶ್ನೆ ಇನ್ನು ಹಾಗೆಯೇ ಇದೆಯಲ್ಲಾ..." 'ಬಂದವರು ಒಬ್ಬ ಪಾದರಕ್ಷೆಗಳ ರಿಪೇರಿ ಮಾಡುವ ಶ್ರೀಸಾಮಾನ್ಯರು..' ಗುರುನಾಥರ ಬಗ್ಗೆ ಅಪಾರ ಭಕ್ತಿ ಇದ್ದವರು. ಮದುವೆಯಾಗಿ ಅನೇಕ ವರ್ಷಗಳಾದರೂ ಮಕ್ಕಳ ಭಾಗ್ಯವಿಲ್ಲದೆ ಬಳಲಿದ್ದವರು. ಬೇರೆ ಬೇರೆ ಊರುಗಳಿಂದ ಬಂದ ಅನೇಕ ಜನಗಳು ಗುರುನಾಥರಿಂದ ಅನೇಕ ರೀತಿಯ ಲಾಭ, ಆಶೀರ್ವಾದ ಪಡೆದು, ತಮ್ಮ ದುಃಖದಿಂದ ಮುಕ್ತರಾದ ವಿಚಾರ ತಿಳಿದ ಈ ವ್ಯಕ್ತಿಯೂ ಅಂದು ಬೆಳಿಗ್ಗೆ ಮುಂಚೆಯೇ ಎದ್ದು, ಗುರುನಾಥರನ್ನು ಕಾಣಲಿರುವುದರಿಂದ ಸ್ನಾನಾದಿಗಳನ್ನು ಮುಗಿಸಿ, ಗುರುನಾಥರನ್ನು ಭಕ್ತಿಯಿಂದ ನೆನೆಸುತ್ತಾ ವಿಭೂತಿ ಹಚ್ಚಿಕೊಂಡು, ಶುಭ್ರ ಶ್ವೇತ ವಸ್ತ್ರವನ್ನು ಉಟ್ಟುಕೊಂಡು, ಗುರುನಾಥರ ಮನೆಯ ಮುಂದೆ ಆರ್ತರಾಗಿ ಬಂದು ನಿಂತಿದ್ದರಂತೆ.
ಅನಾಥ ರಕ್ಷಕರಾದ ಗುರುನಾಥರಿಗೆ ಯಾವ ಮೇಲೂ ಕೀಳುಗಳ ಭಾವಿವಿದೆ. ಹೀಗೆ ಅವರನ್ನು ಒಳಕರೆಸಿ, ಸತ್ಕರಿಸಿ, 'ಯೋಚನೆ ಮಾಡಬೇಡಯ್ಯಾ, ನಿಮಗೆ ಸಧ್ಯದಲ್ಲೇ ಮಕ್ಕಳಾಗುತ್ತಾರೆ' ಎಂದು ಆಶೀರ್ವದಿಸಿ ಕಳುಹಿಸಿದರಂತೆ. ಎಂತಹ ಕರುಣಾಮಯಿಗಳು ನಮ್ಮ ಸದ್ಗುರುನಾಥರು. ಅವರು ಆರ್ತರಾಗಿ ಬರುವವರಿಗೆಲ್ಲಾ ಸಖರಾಯಪಟ್ಟಣದ ಸಕ್ಕರೆಯೇ ಆಗಿ ಸಿಹಿ ಜೀವನದ ರೂವಾರಿಗಳಾಗುತ್ತಿದ್ದ ರೀತಿ ಇದಂತೆ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment