ಒಟ್ಟು ನೋಟಗಳು

Saturday, May 13, 2017

ಶ್ರೀ ಸದ್ಗುರುನಾಥ ಲೀಲಾಮೃತ - 2
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 65
ನಮ್ಮ ಅಣ್ಣತಮ್ಮಂದಿರು 127 ಜನ 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಗುರುನಾಥರೊಂದಿಗೆ ನಿರಂತರ ಸುತ್ತಾಡುತ್ತ, ಅವರ ಸನಿಹದಲ್ಲಿದ್ದ ಒಬ್ಬ ಗುರುಬಂಧುಗಳ ಸ್ವಾರಸ್ಯಕರ ಅನುಭವವನ್ನು ನಮ್ಮ ನಿತ್ಯ ಸತ್ಸಂಗಕ್ಕೆ ಅವರು ನೀಡಿದ ರೀತಿ ಇದು.

'ಸಾರ್, ಅವರು ಒಬ್ಬ ದೊಡ್ಡ ಅಧಿಕಾರಿ ಇರಬಹುದು. ಸರ್ಕಾರದ ಯಾವುದೋ ಕೀ ಪೊಸಿಷನ್ ನಲ್ಲಿದ್ದವರು. ಅವರೇನು ಕರ್ಮ ಮಾಡಿದ್ದರೋ, ಎಲ್ಲೆಲ್ಲೂ ಅದು ಸವೆಯದಿದ್ದಾಗ, ಗುರುನಾಥರನ್ನರಸಿ, ಅವರ ಮನೆಗೆ ಬಂದಿದ್ದರು. ಅಲ್ಲಿ ಅನೇಕ ಜನಗಳಿದ್ದರು. ಗುರುನಾಥರು ಅವರ ಮುಖವನ್ನು ನೋಡುತ್ತಲೇ 'ನಡೆಯಿರಿ ನಡೆಯಿರಿ, ಈ ಮನೆ ಒಳಗೆ ಬರುವ ಅರ್ಹತೆಯೂ ನಿಮಗಿಲ್ಲ. ಏನ್ರಿ ಇಂತಿಂಥ ಕೋಡ್ ಗಳನ್ನೆಲ್ಲಾ ನೀವು ಬೇರೆಯವರಿಗೆ ಮಾರಿಕೊಂಡು ದೇಶದ್ರೋಹ ಮಾಡಿದ್ದೀರಲ್ಲ. ಇಲ್ಲಿ ನಿಮಗೆ ಸ್ಥಾನವಿಲ್ಲ. ನಡೆಯಿರಿ.... ನಡೆಯಿರಿ.... ಎಂದು ಹೊರಗೆ ಕಲಿಸಿಬಿಟ್ಟರು'. ಆ ಕೋಡ್ ಗಳನ್ನು ಹೇಳಿದರು.

ಆ ವ್ಯಕ್ತಿ ಮಾಡಿದ  ತಪ್ಪುಗಳು,ಅವರು ಲೀಕ್ ಮಾಡಿದ ಕೋಡ್ ಗಳು ಸಂದೇಶಗಳು, ಅದು ಹೇಗೆ ಗುರುನಾಥರಿಗೆ ತಿಳಿದವೋ, ದೇವರೇ ಬಲ್ಲ.

"ಇನ್ನೊಮ್ಮೆ, ಒಂದು ಮಠಕ್ಕೆ ಗುರುನಾಥರು ನಮ್ಮನ್ನೆಲ್ಲಾ ಕರೆದುಕೊಂಡು ಹೋಗಿದ್ದರು. ನಾವೆಲ್ಲಾ ತುಂಬಾ ಜನರಿದ್ದೆವು. ತ್ರಿಪುಂಡ್ರಧಾರಿಯಾಗಿ, ಕಾಷಾಯವನ್ನು ಧರಿಸಿದ ಆ ಗುರುಗಳು, ಬಂದ ನಮ್ಮನ್ನೆಲ್ಲಾ ಅದೇನೋ, ತಮ್ಮ ಗತ್ತಿನಲ್ಲಿಯೇ ಮಾತನಾಡಿಸುತ್ತಿದ್ದರು. ಸಾಮಾನ್ಯರಂತೆ ಕಾಣುತ್ತಿದ್ದ ಗುರುನಾಥರು, ಅವರ ಹಿಂಬಾಲಕರಾಗಿ ಬಂದ ನಾವೆಲ್ಲರನ್ನೂ ಅವರು ನೋಡುತ್ತಿದ್ದರು. ಆದರೆ ಗುರುನಾಥರು ಕಾಷಾಯವಸ್ತ್ರಕ್ಕೆ ಗೌರವ ತೋರಿಸುವ ಅನೂಚೇನ ಪದ್ಧತಿಯಿಂದ ಭಕ್ತಿಯಿಂದ ನಮಿಸಿದ್ದರು. ನಾವು ನಮಿಸುತ್ತಿದ್ದೆವು. ಆ ಗುರುಗಳು ಗತ್ತಿನಿಂದ 'ಯಾರಿವರೆಲ್ಲಾ?' ಎಂದಾಗ ಗುರುನಾಥರು 'ಇವರೆಲ್ಲಾ ನನ್ನ ಅಣ್ಣತಮ್ಮಂದಿರು' ಎಂದರು. 'ಎಷ್ಟು ಜನ?' ಮತ್ತೆ ಅದೇ ಗತ್ತಿನಿಂದ ಪ್ರಶ್ನೆ ಬಂದಿತು. ಉತ್ತರ 'ನೂರಿಪ್ಪತ್ತೇಳು ಜನ'. 'ಯಾವ ಆಶ್ರಮವೋ ತಮ್ಮದು?' ಮತ್ತೆ ಮರುಪ್ರಶ್ನೆ. ಗುರುನಾಥರು ಮಾರ್ಮಿಕವಾಗಿ ಹೇಳಿದರು: 'ನಮಗೆ ಆ-ಶ್ರಮವಿಲ್ಲ'. ಗುರುನಾಥರ ಮಾರ್ಮಿಕವಾದ ಮಾತುಗಳು ಎದುರಿಗಿದ್ದ ವ್ಯಕ್ತಿಗೆ ಬಹುದೊಡ್ಡ ಸಂದೇಶವನ್ನು ಕೊಡುವುದರ ಜೊತೆಗೆ ಅರಿವನ್ನೂ ನೀಡಿರಬೇಕು. ನಮಗಂತೂ ಗುರುನಾಥರು ನಾವೆಲ್ಲಾ ಅವರ ತಮ್ಮಂದಿರು ಎಂದ ಸಂಗತಿ ಬಹು ಸಂತಸವನ್ನೇ ನೀಡಿತ್ತು. ಸುಮ್ಮನೆ ಏತಕ್ಕಾಗಿ ಗುರುನಾಥರೊಂದಿಗೆ ಸುತ್ತುತ್ತಿದ್ದೆವೋ ! ಆದರೆ ಗುರುಕರುಣೆ, ಪ್ರೀತಿ ನಮ್ಮನ್ನು ಪ್ರೀತಿಯ ಬಾಂಧವ್ಯಕ್ಕೂ ಎಳೆ ತಂದಿತ್ತು.... " ಎನ್ನುತ್ತಾ ತಮ್ಮ ಅನುಭವ, ತಮಗಾದ ಅಪಾರ ಲಾಭವನ್ನು ಅವರು ನಮ್ಮೊಂದಿಗೆ ಈ ರೀತಿ ಹಂಚಿಕೊಂಡರು.

ದತ್ತರಾಜ ಯೋಗೀಂದ್ರರ ಮನೆಗೆ 

ಗುರುನಾಥರೊಂದಿಗಿನ ಒಂದೊಂದು ಪ್ರವಾಸವೂ ಬೋಧಪ್ರದ, ಮಹಾತ್ಮರುಗಳ ದರ್ಶನ ಲಾಭದ್ದಾಗೇ ಇರುತ್ತಿತ್ತು. ಆದರೆ ಅದು ಯಾರಿಗೆ ಯಾವಾಗ ಹೇಗೆ ಸಿಗುತ್ತಿತ್ತೆಂಬುದೇ ಚಿದಂಬರ ರಹಸ್ಯ. ಒಮ್ಮೆ ಗುರುನಾಥರೊಂದಿಗೆ ಬನವಾಸಿಗೆ ಹೋದ ಪ್ರಸಂಗವನ್ನು ಕೇಳೋಣ ಬನ್ನಿ.

"ಅಂದು ಗುರುನಾಥರು ಬನವಾಸಿಗೆ ಹೊರಟಿರುವುದು ಗೊತ್ತಾಯಿತು. ಅವರ ಜೊತೆಗೆ ನನಗೂ ಹೋಗುವ ಅವಕಾಶವನ್ನವರು ಒದಗಿಸಿದ್ದರು. ಬನವಾಸಿಗೆ ಹೋದಾಗ ಆಗಲೇ ಸಾಕಷ್ಟು ಹೊತ್ತಾಗಿತ್ತು. ಕ್ಷೇತ್ರದೇವತೆಯಾದ ಮಧುಕೇಶ್ವರನ ಭವ್ಯ ದರ್ಶನ ಮಾಡಿದೆವು. ಯಾವುದೇ ಉತ್ತಮ ಕೆಲಸ ಸುಲಲಿತವಾಗಬೇಕಾದರೆ, ಆ ಕ್ಷೇತ್ರದ ಅಧಿದೇವತೆಯ ಕೃಪೆಯೂ ಬೇಕೇನೋ? ಇದು ನಾವು ಗುರುನಾಥರೊಂದಿಗೆ ಇದ್ದಾಗ ಅವರು ಮೌನವಾಗಿ ತಿಳಿಸಿದ ಪಾಠವಾಗಿತ್ತು. ನಂತರ ಗುರುನಾಥರು ಇಲ್ಲಿಯೇ ಎಲ್ಲೋ ಶಂಕರಲಿಂಗ ಭಗವಾನರ ಗುರುಗಳಾದ ದತ್ತರಾಜ ಯೋಗೀಂದ್ರರ ತಪಸ್ಥಳ, ಮನೆ ಇದೆಯಯ್ಯಾ, ನೋಡಬೇಕಲ್ಲಯ್ಯಾ ಎಂದು ಯಾರನ್ನೋ ಕೇಳಿದರು. ಹಾಗೆ ಮುಂದೆ ಹೋಗಿ, ದತ್ತರಾಜ ಯೋಗೀಂದ್ರರ ಮನೆಯ ಮುಂದೆಯೇ ಕುಳಿತಿದ್ದ ಒಬ್ಬ ತಾಯಿಯ ಬಳಿ ನಡೆದ ಗುರುನಾಥರು 'ಅಮ್ಮಾ ಇಲ್ಲಿ ದತ್ತರಾಜ ಯೋಗೀಂದ್ರರು ಎಂಬ ತಪಸ್ವಿಗಳ ಮನೆ ಇದೆಯಲ್ಲಮ್ಮಾ.. ' ಎಂದಾಗ ಆ ತಾಯಿ ಧಡ್ಡನೆ ಎದ್ದು 'ಬನ್ನಿ ಬನ್ನಿ, ಇದೇ ಅಜ್ಜ ಬನ್ನಿ ಎಲ್ಲಾ ತೋರಿಸುತ್ತೀವಿ' ಎಂದು ಒಳ ಕರೆದೊಯ್ದು ಎಲ್ಲವನ್ನೂ ತೋರಿಸಿದರು.

ಅದು ರಾತ್ರಿ ಹತ್ತರ ಸಮಯವಿರಬಹುದು. ಮನೆಯ ಯಜಮಾನರಾದ ನಾಡಿಗ ತಿರುಕಪ್ಪನವರು ಆ ಸಮಯದಲ್ಲಿ 'ಏನು? ಊಟವಿಲ್ಲದೇ  ಹೋಗುವುದೇ? ಅದು ಸಾಧ್ಯವಿಲ್ಲ. ಯಾರೂ ಉಪವಾಸ ಹೋಗುವಂತಿಲ್ಲ. ಏನು ಹುಡುಗಾಟವೇ. ನಾನು ಕಾವಲುಗಾರ. ನಾವು ಎರವಲು ಪಡೆದ ಜಾಗ. ಊಟ ಮಾಡದೇ ತಮ್ಮಂತಹವರು ಹೋಗುವಂತಿಲ್ಲ. ಬಡಿಸಮ್ಮಾ ಎಲ್ಲರಿಗೆ' ಎಂದು ಎಲೆ ಹಾಕಿಸಿದರು.

ರಾತ್ರಿಯಲ್ಲಿ ಜಮೀನಿಗೆ ನೀರು ಕಟ್ಟಲು ಹೋಗಿ ಬಂದ ನಾಡಿಗರು ನಮಗೆ ಬಡಿಸಿಸಿ, ತಾವು ಯಾವಾಗ ಅಡಿಗೆ ಮಾಡಿಕೊಂಡು ಉಂಡರೋ ಭಗವಂತನೇ ಬಲ್ಲ. ಆ ಸಮಯದಲ್ಲಿ ಗುರುನಾಥರ ತಾಯಿಯೂ ನಮ್ಮ ಜೊತೆಗಿದ್ದರು. ಅವರೂ ಅಟ್ಟವನ್ನು ಏರಿ ಬಂದು ಗುರುಗಳ ಪಾದುಕೆಗೆ ಆರತಿ ಮಾಡಿದರು. ನನಗೆ ಆ 85ರ ಅಜ್ಜಿಗೆ ಇಷ್ಟೊಂದು ಸಾಮರ್ಥ್ಯ ಹೇಗೆ ಬಂದಿದೆ ಎಂದು ಚಿಂತಿಸಿದಾಗ, ಗುರುನಾಥರಂತಹ ಮಗನಿದ್ದಾಗ ಅಜ್ಜಿಗೇನು ಭಯ ! ಗುರುನಾಥರೇ ಆ ವಯಸ್ಸಿನ ತಾಯಿಗೂ ಶಕ್ತಿ ತುಂಬಿದರೇನೋ. ಜೊತೆಗೆ ಸರಿ ರಾತ್ರಿಯಲ್ಲಿ ಬಂದವರಿಗೂ ಅನ್ನದಾನ ಮಾಡಿ, ಸೇವೆ ಹೇಗೆ ಮಾಡಬೇಕೆಂಬುದನ್ನು, ಎಂತೆಂತಹ ಗುರುಭಕ್ತರು ಇದ್ದಾರೆಂಬುದನ್ನು ಗುರುನಾಥರು ನಮಗೆಲ್ಲಾ ತಿಳಿಸಲೇ ಕರೆದೊಯ್ಯುತ್ತಿದ್ದರೇನೋ.... ".

ಪ್ರಿಯ ಓದುಗ ಮಿತ್ರರೇ, ಗುರುನಾಥರ ನೇರ ಜೊತೆಗಾರರಾಗಿ, ಅವರೊಂದಿಗೆ ಓಡಾಡಿಕೊಂಡಿರುವ ಭಕ್ತರಿಗೆಲ್ಲಾ ಗುರುನಾಥರು ಅದೆಷ್ಟೊಂದು ಕರುಣಿಸಿದರು ! ಅವರ ಕೃಪೆ ನಮ್ಮ ಮೇಲೂ ಇದೆ ಎಂದರೆ ಅತಿಶಯವಲ್ಲ. ಏಕೆಂದರೆ ನಾವು ಕುಳಿತಲ್ಲಿಂದಲೇ ಆ ಎಲ್ಲಾ ಘಟನೆಗಳನ್ನೂ, ಉಪದೇಶಗಳನ್ನೂ ನಮ್ಮ ಮನೋ ಮಂದಿರದಲ್ಲಿ ಮೂಡಿಸಿಕೊಂಡು, ಸಂತಸಪಡುವ ಭಾಗ್ಯ ನೀಡಿದ್ದಾರಲ್ಲಾ.....

ನಾಳೆಯೂ ನಿತ್ಯ ಸತ್ಸಂಗಕ್ಕೆ ಬನ್ನಿ..... ಉಲ್ಲಾಸ, ಆನಂದ... ಪಡೆಯೋಣ, ಅಲ್ಲವೇ?

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment