ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 74
ಅನ್ನಪೂರ್ಣೇಶ್ವರಿಯ ಪೂಜೆ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಸಾಮಾನ್ಯವಾಗಿ ಎಲ್ಲರೂ ಹೊರನಾಡಿಗೆ ಹೋಗುವ ಪದ್ಧತಿ ಇದೆ. ಎಲ್ಲರಿಗೂ ಅನ್ನ ನೀಡುವ ಆ ಮಹಾತಾಯಿಯನ್ನು ತಮ್ಮ ಮನೆಯಲ್ಲಿಯೇ, ಅಲ್ಲಿದ್ದ ಭಕ್ತರಿಗೆಲ್ಲಾ ತೋರಿಸಿದ ರೋಚಕ ಘಟನೆಯನ್ನು ಗುರುನಾಥರ ಪರಮ ಭಕ್ತರೊಬ್ಬರು ನಿತ್ಯ ಸತ್ಸಂಗಕ್ಕೆ ಹಂಚಿಕೊಂಡ ರೀತಿ ಹೀಗಿದೆ.
"ಅಂದು ಗುರುನಾಥರ ಮನೆಯ ತುಂಬಾ ಗುರುಬಾಂಧವರು ಸೇರಿದ್ದರು. ಗುರುನಾಥರ ಮನೆಯ ಮುಂದೆ ಒಬ್ಬ ತಾಯಿ ತನ್ನ ನಾಲ್ಕು ಜನ ಮಕ್ಕಳ ಜೊತೆ ಭಿಕ್ಷೆ ಬೇಡುತ್ತಾ ಬಂದಳಂತೆ. ಗುರುನಾಥರು ಭಕ್ತಾದಿಗಳ ಜೊತೆ ಮಾತನಾಡುತ್ತಿದ್ದವರು, ಆ ತಾಯಿಯನ್ನೂ, ಮಕ್ಕಳನ್ನೂ ನೋಡುತ್ತಲೇ ಒಳ ಕರೆದು ಒಂದು ರೂಮಿನಲ್ಲಿ ಕೂರಿಸಿದರು- ಗೌರವದಿಂದ. ಒಳಗಡೆ ಅಡುಗೆ ಸಿದ್ಧವಾಗಿತ್ತು. ಭಕ್ತರೆಲ್ಲರಿಗೆ ಊಟ ಬಡಿಸುವ ಸಮಯವದಾಗಿತ್ತು. ಗುರುನಾಥರು ಆ ತಾಯಿ ಮಕ್ಕಳಿಗೆ ಕೈಕಾಲು ತೊಳೆದು ಬರಲು ತಿಳಿಸಿದರು. ಅಷ್ಟರಲ್ಲೇ ಶಿಷ್ಯರೊಬ್ಬರಿಗೆ ಒಂದು ಹೊಲೆಸಿದ ಕುಪ್ಪಸ, ಸೀರೆ ಹಾಗೂ ಆ ಮಕ್ಕಳಿಗೆ ಬಟ್ಟೆ ತರಲು ಹೇಳಿದ್ದರು. ಅದು ಬಂದ ನಂತರ ಅವರಿಗೆ ಅದನ್ನು ಕೊಡಿಸಿ, ಉಟ್ಟುಕೊಂಡು ಬರಲು ತಿಳಿಸಿದರು. ಇತ್ತ ಬಾಳೆಯ ಎಲೆಯನ್ನು ಹಾಕಿಸಿ, ರಂಗವಲ್ಲಿ ಇಡಿಸಿ, ಮಾಡಿಸಿದ ಅಡುಗೆಯನ್ನು ಬಡಿಸಿಸಿದರು. ಅಲ್ಲಿದ್ದ ಗುರುನಾಥರ ಭಕ್ತರೆಲ್ಲಾ ಇದೇನು ನಡೆಯುತ್ತಿದೆ. ಏನೋ ಅಯೋಮಯವಾದುದು ಸಾಗುತ್ತಿದೆ ಎಂದು, ತುಟಿಪಿಟಕ್ಕೆನ್ನದೆ ನೋಡುತ್ತಿದ್ದರು. ಆದರೆ ಎಲ್ಲರ ಮನದಲ್ಲಿ ಗುರುನಾಥರು ಮಾಡುವ ಎಲ್ಲ ಕೆಲಸದ ಹಿಂದೆ ಅದೇನೋ ಮಹತ್ತರವಾದುದು ಇದ್ದೇ ಇರುತ್ತದೆಂಬ ಭಾವನೆಯಿಂದ, ಮುಂದೇನೋ ಒಳ್ಳೆಯ ವಿಚಾರ ತಿಳಿಯಲಿದೆ ಎಂದು ಕಾತುರರಾಗಿದ್ದರು. ಮಾಡಿದ ಅಡುಗೆಯನ್ನು ಭಕ್ತಿಯಿಂದ ತಂದು ಬಡಿಸಲಾಯಿತು. ಅಚ್ಚುಕಟ್ಟಾಗಿ, ಆ ಮಕ್ಕಳು ಹಾಗೂ ಆ ತಾಯಿ ಊಟವನ್ನು ಮಾಡಿದರು. ಗುರುನಾಥರು ಎಲ್ಲರಿಗೂ ನಮಸ್ಕರಿಸಲು ತಿಳಿಸಿ, ತಾವೂ ದೀರ್ಘದಂಡ ನಮಸ್ಕಾರ ಮಾಡಿದರು. ಎಲ್ಲರೂ ತಮ್ಮ ಕೈಯಲ್ಲಿದ್ದ ದಕ್ಷಿಣೆ ನೀಡಿದರು. ಗುರುನಾಥರೂ ತಮ್ಮ ಸೊಂಟಕ್ಕೆ ಕೈ ಹಾಕಿ, ತಮ್ಮ ಕುಬೇರ ನಿಧಿಯಿಂದ ಅದೆಷ್ಟು ಸಿಕ್ಕಿತೋ ಅದನ್ನೂ ಆ ತಾಯಿ ಮಕ್ಕಳಿಗೆ ನೀಡಿದರು. ಎಲ್ಲ ಮುಗಿದ ಸ್ವಲ್ಪ ಹೊತ್ತಿಗೆ, ಆ ತಾಯಿ ಮಕ್ಕಳು ಗುರುನಾಥರ ಮನೆಯಿಂದ ಮೆಟ್ಟಲಿಳಿದು ಹೋದರು. ಇವನ್ನೆಲ್ಲಾ ಸುಮ್ಮನೆ ಕುಳಿತು ನಾನೂ ನೋಡುತ್ತಿದ್ದೆ. ನಾನು ಕೂಡಲೇ ಇಳಿದು ಹೊರಬಂದು ಆ ತಾಯಿ ಮಕ್ಕಳು ಯಾರು? ಎತ್ತ ಹೋದರು? ಎಂದು ತಿಳಿಯಲು ಹೊರಬಂದೆ. ಗುರುನಾಥರ ಮನೆಯ ಮುಂದಿನ ರಸ್ತೆ, ಎದುರಿನ ಬಯಲು, ಎಲ್ಲ ಸುತ್ತಿ ಬಂದರೂ ಆ ತಾಯಿ ಮಕ್ಕಳ ಸುಳಿವು ನನಗಂತೂ ಸಿಗಲಿಲ್ಲ. ಹೀಗಾದರೆ ಈಗ ಬಂದವರಾರು?, ಇಷ್ಟು ಬೇಗ ಅದೆಲ್ಲಿ ಮಾಯವಾದರು? ಏನಿದರ ರಹಸ್ಯ ಎಂಬ ಭಾವನೆಗಳ ಭಾರದ ತಲೆ ಹೊತ್ತು ಮತ್ತೆ ಬಂದು ಗುರುನಾಥರ ಸನಿಹದಲ್ಲಿ, ಮೊದಲು ಕುಳಿತ ಜಾಗದಲ್ಲೇ ಕುಳಿತೆ' ಶಾಸ್ತ್ರಿಗಳು ತಾವು ನೋಡಿದ ವಿಚಾರವನ್ನೂ, ತಮ್ಮ ಮೆದುಳಿನಲ್ಲಿ ಎದ್ದ ಪ್ರಶ್ನೆಗಳನ್ನೂ ಓದುಗ ಮಿತ್ರರಿಗೆ, ಈಗ ವರ್ಗಾಯಿಸಿದ್ದಾರೆ. ಇದರ ಉತ್ತರ ನನ್ನ ಬಳಿಯಂತೂ ಇಲ್ಲ. ಹಾಗಾಗಿ ಮತ್ತು ನಿತ್ಯ ಸತ್ಸಂಗಕ್ಕೆ ಬರೋಣ, ಗೋಪ್ಯವನ್ನರಿಯಲು.
ಗುರುನಾಥರ ಕಡೆ ಶಾಸ್ತ್ರಿಗಳು ಬಿಟ್ಟ ಕಣ್ಣು ಬಿಟ್ಟು ನೋಡುತ್ತಿದ್ದರು. ಗುರುನಾಥರನ್ನೇನೂ ಕೇಳುವ ಧೈರ್ಯವನ್ನು ಅವರು ಮಾಡಲಿಲ್ಲ. ಆದರೆ ಅದು ಕೇವಲ ಶಾಸ್ತ್ರಿಗಳ ಮನದ ಪ್ರಶ್ನೆಯಲ್ಲ, ಅಲ್ಲಿ ಕುಳಿತ ಅನೇಕ ಜನರ ಮನದಲ್ಲಿ ಎಡ್ಡಾ ಪ್ರಶ್ನೆಯಾಗಿತ್ತು. ಅಷ್ಟೇ ಏಕೆ ಓದುಗ ಬಾಂಧವರೇ, ನಿಮ್ಮ ಮನದಲ್ಲಿಯೂ ಈ ಪ್ರಶ್ನೆ ಎದ್ದಿರಬಹುದು.
ಗುರುನಾಥರು ಶಾಸ್ತ್ರಿಗಳನ್ನು ನೋಡುತ್ತ ಹೀಗೆಂದರಂತೆ " ಏನಯ್ಯಾ ಸಿಗಲಿಲ್ಲವೇನಯ್ಯಾ ಅವರು... ? ಎಲ್ಲಿ ಸಿಕ್ತಾರಯ್ಯಾ ? ಬಂದವರು ಯಾರು ಅಂತ ತಿಳಿದುಕೊಂಡಿದ್ದೀರಯ್ಯಾ - ಸಾಕ್ಷಾತ್ ಅನ್ನಪೂರ್ಣೇಶ್ವರಿ ಕಣಯ್ಯಾ ಬಂದದ್ದು ನೋಡು ನಾವು ಹೊಲೆಸಿ ತರಿಸಿದ ಕುಪ್ಪಸ, ಸೀರೆ ಆ ತಾಯಿಗೆ ಎಷ್ಟು ಸುಂದರವಾಗಿ ಒಪ್ಪಿತ್ತು. ಸಾಕ್ಷಾತ್ ದೇವಿ ಕಣಯ್ಯಾ, ಅನ್ನಪೂರ್ಣೆಶ್ವರೀನೇ ಬಂದಿದ್ದು ಕಣಯ್ಯಾ...... ನಿನಗೂ ಅನುಮಾನವೇನಯ್ಯಾ... ಯಾಕಯ್ಯಾ.... ಯಾಕೆ ಅನುಮಾನ ಪಡ್ತೀಯಯ್ಯಾ" ಎಂದು ನಕ್ಕರಂತೆ.
ಅಂದು ಅಲ್ಲಿ ನೆರೆದ ಭಕ್ತರಿಗೆ ಹೀಗೆ ದೇವಿಯನ್ನು ಸರಳವಾಗಿ, ಸೂಕ್ಷ್ಮವಾಗಿ ನೋಡುವ ಅವಕಾಶವನ್ನು ಗುರುನಾಥರು ಒದಗಿಸಿ ಕೊಡುವುದರ ಜೊತೆಗೆ, ಯಾರನ್ನೂ, ಯಾವ ಕಾರಣಕ್ಕೂ ನಗಣ್ಯ ಮಾಡಬಾರದೆಂಬ ಮಾನವೀಯ ಗುಣವನ್ನು, ಭಕ್ತರಲ್ಲಿ ಬೆಳಸಿದರೇನೋ? ಭಗವಂತನೆಂಬುವನು ನಿರಾಕಾರನಲ್ಲವೇ ? ಅಣುರೇಣುತೃಣಕಾಷ್ಟಗಳಲ್ಲಿ ಅವನಿದ್ದಾನೆ. ಆದರೆ, ಅದನ್ನು ನೋಡುವ ದೃಷ್ಟಿಯನ್ನು ಗುರುನಾಥರಂತಹ ಸದ್ಗುರುಗಳು ಮಾತ್ರ ದಯಪಾಲಿಸಬಲ್ಲರು.
ಪ್ರಿಯ ನಿತ್ಯ ಸತ್ಸಂಗ ಅಭಿಮಾನಿಗಳೇ, ನಾಳೆಯ ನಿತ್ಯ ಸತ್ಸಂಗದಲ್ಲೂ ನಮ್ಮೊಂದಿಗೆ ಭಾಗಿಯಾಗಿ. ಗುರುನಾಥರು ಕರುಣಿಸಿದ ಲೀಲಾ ವಿನೋದಗಳನ್ನು ಆಸ್ವಾದಿಸಿ ಆನಂದಿಸೋಣ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment