ಒಟ್ಟು ನೋಟಗಳು

Tuesday, May 9, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2  

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 
  ನಿತ್ಯ ಸತ್ಸಂಗ  - 
61

ಒಂದು ಎಳೆನೀರು ಕೊಟ್ಟಿದ್ದಕ್ಕೆ ಇಷ್ಟು ಇನ್ವಾಲ್ ಆಗೋದೇ? 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಪ್ರಪಂಚ ದುಂಡಗಿದೆ. ನೋಡಿದವರನ್ನೇ ಅದೆಷ್ಟೋ ಸಲ ನೋಡಿದರೂ ಕೆಲವರು ಮಾತ್ರಾ, ಕೆಲವೊಂದು ಸಲ ನಮ್ಮವರೆನಿಸುತ್ತಾರೆ. ಕೆಲವೊಮ್ಮೆ ಕೆಲವರಿಗೆ 'ಇವರಿಗೂ ನಮಗೂ ಅದ್ಯಾವುದೋ ಜನುಮ ಜನುಮಗಳ ನಂಟಿದೆ ಎಂದೋ - ಇವರೇ ನನ್ನ ಜೀವನದ ಸರ್ವಸ್ವ' ವೆಂಬ ಭಾವನೆ ಬರುವುದಿದೆ. ಆ ಬಂಧನ ಬಿಡಿಸಲಾರದ್ದು. ಮಾತುಗಳಲ್ಲಿ ವರ್ಣಿಸಲಾರದ್ದು. ಇಂತಹ ಬಂಧನವನ್ನು ಪಡೆದುಕೊಂಡ ಭಾಗ್ಯವಂತ ತಾಯಿಯೊಬ್ಬರು, ನಮ್ಮ ನಿತ್ಯ ಸತ್ಸಂಗಕ್ಕೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿರುವುದೂ ಆ ಗುರುನಾಥರ ಲೀಲಾನಾಟಕವೇ... ಬನ್ನಿ ಅವರೆನೆನ್ನುತ್ತಾರೆ- ಕೇಳೋಣ. ಗುರುನಾಥರ ಹೆಸರು ಕೇಳಿಯೇ ಗದ್ಗದಿತರಾದ ಅವರು ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದಾರೆ. ಆನಂದ, ಉದ್ವೇಗ, ಅಳುಗಳೆಲ್ಲಾ ಒಮ್ಮೆಗೆ ಧುಮ್ಮಿಕ್ಕಿ ಆ ತಾಯಿಯನ್ನು ಅಧೀರಗೊಳಿಸಿತ್ತು - ಒಂದು ಕ್ಷಣ..... 

"ನಮ್ಮ ಮನೆಯವರ ಮಿತ್ರರೊಬ್ಬರು ಸೌದಿಯಲ್ಲಿದ್ದಾರೆ. ಅವರು ಓದುತ್ತಿದ್ದಾಗ, ಒಮ್ಮೆ ಗುರುನಾಥರು ಎದುರಾದರಂತೆ. ನಮ್ಮ ಮನೆಯವರ ಮಿತ್ರ ರಮೇಶನನ್ನು ಗುರುನಾಥರು "ಬಾ ಇಲ್ಲಿ" ಎಂದು ಕರೆದರು. ಹಾಗೆಯೇ ಜೊತೆಗಿದ್ದ ಇವರನ್ನೂ ಕರೆದುಕೊಂಡು ಬಾ' ಎಂದರಂತೆ. ಹೀಗೆ ನಾವು ಅರಸದೇ ಗುರುನಾಥರ ದರ್ಶನ, ಆಶೀರ್ವಾದ ದೊರೆಯುವ ಕಾಲ ಬಂದಿತ್ತು ಅಂದು. ನಂತರ ಗುರುನಾಥರು ಇವರಿಗೆ ಒಂದು ಎಳೆನೀರು ನೀಡಿದರು. ಮತ್ತೊಂದು ಎಳೆನೀರು ಕೊಟ್ಟರು..... ಆಮೇಲೆ ಸುಧಾರಿಸಿಕೊಳ್ಳಲು ಹೇಳಿ 'ಮಹಡಿಯ ಮೇಲೆ ಮಲಗಿ ವಿಶ್ರಾಂತಿ ತೊಗೊಳ್ಳಿ ಸಾರ್' ಎಂದರಂತೆ. ಎಲ್ಲರೂ ಒಟ್ಟಿಗೆ ವಿಶ್ರಾಂತಿ ಪಡೆದರು. ಮುಂದೆ ಅದೇನು ಮೋಡಿ ಮಾಡಿದರೋ, ಅದೇನು ನಮ್ಮ ಪುಣ್ಯವೋ, ನಿತ್ಯವೂ ಗುರುನಾಥರ ದರ್ಶನ ಮಾಡದಿದ್ದರೆ ನೆಮ್ಮದಿ ಇರುತ್ತಿರಲಿಲ್ಲ. ಪ್ರತಿದಿನ ಸಂಜೆ ಆಯಿತೆಂದರೆ, ಇವರೂ ಮತ್ತು ಇವರ ಸ್ನೇಹಿತರೂ ಸಖರಾಯಪಟ್ಟಣಕ್ಕೆ ಹೋಗುತ್ತಿದ್ದರು... ಸಂಜೆ ಐದೂವರೆಗೆ ಇಲ್ಲಿ ಬಿಟ್ಟರೆ ರಾತ್ರಿ ಹನ್ನೊಂದಕ್ಕೆ ಇವರು ಬರುತ್ತಿದ್ದರು. 

(ಅಲ್ಲಿದೆಯಲ್ಲಾ ಆ ಗಾಡಿ, ಗುರುನಾಥರು ಕುಳಿತಿದ್ದು, ಅದು ಸುಮ್ಮನೆ ಇಲ್ಲಿ ನಿಂತಿದ್ದರೂ ಪರವಾಗಿಲ್ಲ.. ) ಗುರುನಾಥರನ್ನು ತಮ್ಮ ಉಸಿರೆಂಬಂತೆ ನಮ್ಮವರು ಭಾವಿಸಿದ್ದರು. ಇಂತಹ ಸದ್ಗುರುಗಳ ಮಾತನ್ನು ಶಿರಸಾವಹಿಸುತ್ತಿದ್ದ ಇವರಿಗೆ ಗುರುನಾಥರೇ ಪ್ರೀತಿಯಿಂದ 'ಲಚ್ಚಣ್ಣ' ಎಂದು ನಾಮಕರಣ ಮಾಡಿದ್ದು, ಲಕ್ಷ್ಮೀನರಸಿಂಹ ಎಂಬ ಹೆಸರು ಗುರುನಾಥರ ಪ್ರೀತಿಯಿಂದ ಲಚ್ಚಣ್ಣರಾಗಿ - ಗುರುನಾಥರ ಆನಂದ ಸಾಗರದಲ್ಲಿ ನಾವೆಲ್ಲಾ ಮುಳುಗಿ ಎದ್ದೆವು. ಆಮೇಲೆ ಗುರುನಾಥರು ಅದೆಷ್ಟು ಸಾರಿ ಇಲ್ಲಿಗೆ ಬಂದು ದರ್ಶನವಿತ್ತು ಹರಸುತ್ತಿದ್ದರೋ - ಅವರು ಆಗಾಗ್ಗೆ ಆಡುತ್ತಿದ್ದ ಮಾತೆಂದರೆ 'ಒಂದು ಎಳೆನೀರು ಕೊಟ್ಟಿದ್ದಕ್ಕೆ ಇಷ್ಟೊಂದು ಇನ್ವಾಲ್ ಆಗಿಬಿಟ್ಟ' ಎಂದು. ಆ ಭಗವಂತನ ಆಟವನ್ನು ಬಲ್ಲವರಾರು. ಯಾವಾಗ, ಯಾರನ್ನು, ಎಲ್ಲಿ ಸೇರಿಸಿ, ಅದೇನು ಒಳಿತುಗೈಯುತ್ತಾರೋ - ನಮಗಿವರೇ ಸಾಕ್ಷಾತ್ ಭಗವಂತರಾಗಿದ್ದರು'. 

ಗುರುನಾಥರ ಪ್ರೀತಿಯಿಂದ ಅವರ ಮನ ಮತ್ತೆ ಮೌನವಾಗಿ ರೋದಿಸಿತು

ಪ್ರಿಯ ಓದುಗ ಬಾಂಧವರೇ, ಭಗವಂತನ, ಗುರುನಾಥರ ಪ್ರೀತಿ, ಕರುಣೆ, ಅವರ ದಿವ್ಯದೃಷ್ಟಿ ನಮ್ಮ ಮೇಲಾದರೆ, ಈ ಪ್ರಪಂಚದ ಗಳಿಕೆಗಳೆಲ್ಲಾ ತುಚ್ಛವೆನಿಸಿಬಿಡಬಹುದು. ಆತನ ಸತ್ಸಂಗದಲ್ಲಿದ್ದಾಗ - ನಾವೇನೂ ರತ್ನ, ಮುತ್ತು, ಭಂಡಾರವನ್ನು ಹೊತ್ತು ತರದಿದ್ದರೂ ಕಣ್ಣಿಗೆ ಕಾಣದ, ವಿನಾಶವಾಗದ, ಮನಕ್ಕೆ ಅತ್ಯಂತ ಮುದ ಕೊಡುವ, ಅನರ್ಘ್ಯವಾದುದು, ನಮಗೆ ಸಿಕ್ಕಾಗ, ಭಕ್ತರಿಗಿನ್ನೇನು ಬೇಕು? ಬನ್ನಿ ನಾಳಿನ ನಿತ್ಯ ಸತ್ಸಂಗಕ್ಕೆ ಗುರುನಾಥರ ಕೃಪೆಗೆ..... 

ಇಂತಹ ಪುಣ್ಯಾತ್ಮರ ಸಂಪರ್ಕದಲ್ಲಿರುವಾಗ ಯಾವುದೂ ಚ್ಯುತಿ ಬರದಂತೆ ಮತ್ತು ಮನಸ್ತಾಪ ಬರದಂತೆ ನಮಗೆ ಬುದ್ಧಿ ಕೊಡಪ್ಪಾ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳಬೇಕಷ್ಟೆ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment