ಒಟ್ಟು ನೋಟಗಳು

Friday, May 19, 2017

ಶ್ರೀ ಸದ್ಗುರುನಾಥ ಲೀಲಾಮೃತ - 2
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 71
ಇಪ್ಪತ್ನಾಲ್ಕು ಗಂಟೇಲಿ ಪರಿಹಾರ 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।

ಅಂತೂ ತಪ್ಪಿನ ಅರಿವಾದ ಆ ಅಣ್ಣತಮ್ಮಂದಿರು, ಗುರುಮನೆಯಿಂದ ಹೊರಟು ತಾಯಿಯನ್ನು ವೃದ್ಧಾಶ್ರಮದಿಂದ ಬಿಡಿಸಿಕೊಂಡು ಸಖರಾಯಪಟ್ಟಣದ ಗುರುನಾಥರ ಮನೆಗೆ ಬಂದರಂತೆ. ಆ ತಾಯಿ, ಮನೆಯ ಒಳಗೆ ಕಾಲಿಡುತ್ತಿದ್ದಂತೆ - ಗುರುನಾಥರು "ನಿನ್ನೆ ಸಾಯಂಕಾಲ ಏಳು ಗಂಟೆಗೆ ನನ್ನ ಫೋಟೋದ ಮುಂದೆ ಅಳುತ್ತಾ ಕೇಳ್ಕೊಂಡೆ. ಈಗೆಷ್ಟಮ್ಮ ಸಮಯ, ಸಂಜೆ ಏಳು ಗಂಟೆ. ಇಪ್ಪತ್ನಾಲ್ಕು ಗಂಟೇಲಿ ನಿನ್ನ ಮಕ್ಕಳ ಹತ್ತಿರ ನಿನ್ನನ್ನು ಸೇರಿಸಿದ್ದೀನಿ. ನನ್ನ ಕೆಲಸ ಆಯ್ತು. ಇನ್ನು ನೀನುಂಟು. ನಿನ್ನ ಮಕ್ಕಳುಂಟು. ನನಗೆ ನಮಸ್ಕಾರ ಮಾಡಬೇಡ್ರಯ್ಯಾ. ಇಷ್ಟು ದಿವಸ ಮಾಡಿದ ತಪ್ಪಿಗೆ ಅವರ ಕಾಲಿಗೆ ಬೀಳ್ರಿ, ಇನ್ನು ಮುಂದೆ ಇಂತಹ ತಪ್ಪು ಮಾಡಲ್ಲಾ ಅಂತ ಹೇಳ್ರಯ್ಯಾ. ಸೊಸೇರು... ನೀವು ಅಷ್ಟೇ ಕಣ್ರಮ್ಮಾ. ಆ ತಾಯಿ ಕಾಲಿಗೆ ಬೀಳಿ" ಎಂದದ್ದು ಎಲ್ಲರಿಂದ ನಮಸ್ಕರಿಸಿಸಿದರಂತೆ ಗುರುನಾಥರು. 

ಒಡೆದು ಚೂರಾಗಲಿದ್ದ, ನೆಮ್ಮದಿ ಕಳೆದುಕೊಂಡಿದ್ದ ಸಂಸಾರವನ್ನು ಮತ್ತೆ ಸರಿ ದಾರಿಗೆ ಹಚ್ಚಿದ್ದು, ಎಲ್ಲಾ ಇದ್ದು ಅನಾಥೆಯಂತಾಗಿದ್ದ ಅಸಹಾಯಕ ತಾಯಿಯ ಮೂಕ ವೇದನೆಯನ್ನರಿತು, ಗುರುನಾಥರು ಮತ್ತೆ ಸಂಸಾರವನ್ನು ಒಂದು ಮಾಡಿದ್ದು ಹೀಗೆ. ಇದನ್ನೆಲ್ಲಾ ಕಣ್ಣಾರೆ ಕಂಡ ಭಕ್ತರೊಬ್ಬರ ಅನಿಸಿಕೆ ಎಂದರೆ "ಗುರುನಾಥರ ಪ್ರತಿಯೊಂದು ಕೆಲಸಗಳು, ನುಡಿಗಳು, ಆಚರಣೆಗಳು ಅದು ಯಾರೋ ಒಬ್ಬರನ್ನು ಕುರಿತಾದಂತೆ ಕಂಡರೂ, ಅದು ಸರ್ವರಿಗೂ ಸಾರ್ವಕಾಲಿಕ ಸತ್ಯವಾದುದ್ದಾಗಿ, ಬಂಡ ಭಕ್ತರನ್ನು ತಿದ್ದುವಂಥದ್ದಾಗೇ ಇರುತ್ತಿತ್ತು. ಸಾನ್ನಿಧ್ಯದಲ್ಲಿದ್ದ ಪ್ರತಿ ಕ್ಷಣವೂ ಕಣ್ಣು, ಮನ, ಹೃದಯ ತೆರೆದುಕೊಂಡಿದ್ದವರಿಗೆ ಒಂದಲ್ಲ ಒಂದು ದಿವ್ಯ ಬೋಧೆಗಳನ್ನು ಒದಗಿಸುತ್ತಿದ್ದವು". 

"ತಮ್ಮ ಶಿಷ್ಯರನ್ನು ಎಳೆದು ತಂದು ತಮ್ಮ ಬಳಿ ಇಟ್ಟುಕೊಂಡು, ಊಟ ತಿಂಡಿಗಳನ್ನು ನೀಡಿ ಇಂತಹ ಸದುಪದೇಶವನ್ನು ನೀಡುತ್ತಿದ್ದಂತಹ, ಗುರುನಾಥರ ಇಂತಹ ಸಂಗತಿಗಳನ್ನು ಪಟ್ಟಿ ಮಾಡುತ್ತಾ ಹೋದಂತೆ ಅದೊಂದು ಗುರು ರಾಮಾಯಣವೇ ಆದೀತು" ಎನ್ನುತ್ತಾರೆ. 

ಗುರುನಾಥರು ಅತ್ಯಂತ ಸರಳವಾಗಿ ಎಂಬಂತೆ ಆ ಅಣ್ಣತಮ್ಮಂದಿರು ತಮ್ಮ ಬಳಿ ಬಂದಾಗ ಆಡಿದ ಸರಳ ಮಾತುಗಳು "ಹೌದೇ... ಒಂದು ಹತ್ತು ನಿಮಿಷ ಟೈಂ ಕೊಡ್ತೀನಿ... ನಿಮ್ಮಲ್ಲಿ ಒಂದು ಅಮೂಲ್ಯ ವಸ್ತು ಕಳೆದು ಹೋಗಿದೆ... ಜ್ಞಾಪಿಸಿಕೊಳ್ಳಿ" ಎಂದಾಗ, ಧನ, ಕನಕ, ವಸ್ತುಗಳ ಬಗ್ಗೆ ಚಿಂತಿಸುವ ನಮಗೆ, ನಮ್ಮನ್ನು ಹೆತ್ತ ಹಿರಿಯರು, ಒಂದು ಅಮೂಲ್ಯ ವಸ್ತುವೆಂಬುದು ಅರಿವಿಗೇ ಬರದಾಗ, ಗುರುನಾಥರು ಬೀಸಿದ ಮಾತಿನ ಚಾಟಿ ಏಟು..... ಅದು ಆ ಕುಟುಂಬಕ್ಕೆ ಮಾತ್ರವಲ್ಲ... ಅಂತಹ ತಪ್ಪು ಮಾಡುವ, ಮಾಡಲಿರುವ, ಮಾಡಿದ್ದರೆ- ಅವರಿಗೂ ತಿದ್ದಿಕೊಳ್ಳಲು ಒಂದು ಕಿವಿ ಮಾತಾದೀತು. ತಿದ್ದಿಕೊಂಡರೆ ನಾವು ನಿಜವಾಗಿಯೂ ಗುರುನಾಥರ ಭಕ್ತರಾದುದಕ್ಕೆ ಸಾರ್ಥಕ. ನಮ್ಮ ಮನಸ್ಸಿಗೆ ಉತ್ತರ ಕೊಟ್ಟುಕೊಂಡರೆ ಸಾಕು. ಜಗತ್ತಿಗೆ ಬೇಡ. ಏಕೆಂದರೆ ಗುರುನಾಥರ ಮಾತು "ಗುರುವನ್ನು ಬೇರೆಲ್ಲೂ ಹುಡುಕಬೇಡ ಕಣಯ್ಯಾ, ನಿನ್ನಲ್ಲೇ ಇರುವ ನನ್ನನ್ನು ಅರ್ಥ ಮಾಡಿಕೊಳ್ಳಯ್ಯಾ" ಎಂಬ ಮಾತು ಇಲ್ಲಿ ನೆನಪಾಗುತ್ತದೆ. 


ವಿಶ್ವ ನೀತಿಯ ವಿನಿಯ 


ಆ ಊರಿನ ಒಬ್ಬ ದೊಡ್ಡ ಶ್ರೀಮಂತ ಗೌಡರು ಆಗಾಗ್ಗೆ ಗುರುನಾಥರ ಬಳಿ ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದವರು, ಅಂದೂ ಸಹ ಬೆಳಿಗ್ಗೆ ಬಂದವರು ಗುರುನಾಥರನ್ನು ಕಂಡು, ಸ್ವಲ್ಪ ಸಮಯವಿದ್ದು, ಬೆಳಗಿನ ಉಪಾಹಾರ ಮುಗಿಸಿ ಹೊರಡಲಿದ್ದಾಗ, ಗುರುನಾಥರು ಇನ್ನೊಂದು ಸ್ವಲ್ಪ ಹೊತ್ತು ಇರಲು ತಿಳಿಸಿದರೂ ಕಾರ್ಯ ಭಾರದಿಂದಾಗಿ ಹೊರಟು ಹೋಗಿದ್ದರಂತೆ. 

ಮನೆ ತಲುಪಿದ ಮೇಲೆ ಅವರಿಗೆ, ತಾವು ತಮ್ಮ ಪಾದರಕ್ಷೆಯನ್ನು ಗುರುನಾಥರ ಮನೆಯಲ್ಲೇ ಬಿಟ್ಟು ಬಂದದ್ದು ನೆನಪಾಯಿತು. ಮತ್ತೆ ಹೋಗಿ ತರುವುದಕ್ಕಿಂತ, ತಮ್ಮ ಮನೆಯಲ್ಲಿ ಕೆಲಸ ಮಾಡುವ ಒಬ್ಬ ಬ್ರಾಹ್ಮಣರ ಹುಡುಗನಿಗೆ "ಹಂಗೆ ಹೋಗಿ ತಂದ್ಬಿಡಪ್ಪಾ... ಮತ್ತೆ ನಾನು ಹೋದರೆ.... " ಎಂದು ಕಳಿಸಿಬಿಟ್ಟರಂತೆ. 

ಆ ಹುಡುಗ ಗುರುನಾಥರ ಮನೆಗೆ ಬಂಡ. ಗುರುನಾಥರು ಆ ಚಪ್ಪಲಿಯ ಬಳಿಯೇ ಕುಳಿತಿದ್ದಾರೆ. "ಏನಯ್ಯಾ ಬಂದೆ ಏನ್ಸಮಾಚಾರ?" ಎಂದು ಆ ಹುಡುಗನನ್ನು ಗುರುನಾಥರು ವಿಚಾರಿಸಿದಾಗ "ಏನಿಲ್ಲ ಸುಮ್ಮನೆ ಹಂಗೆ ಬಂದೆ" ಎಂದುಬಿಟ್ಟನಂತೆ. 

"ನೀನು ಹಂಗೆಲ್ಲಾ ಸುಮ್ಮನೆ ಬರುವವನು ಅಲ್ಲವಯ್ಯಾ. ಹೇಗೂ ಬಂದಿದೀಯಾ. ಒಳಗಡೆ ಹೋಗು ಕಾಫಿ ಕುಡಿ. ಆಮೇಲೆ ಜಗದ್ಗುರುಗಳ ಪಾದುಕೆಗೆ ಹೂವು ಹಾಕಿ ಬಾರಯ್ಯಾ" ಎಂದು ಒಳ ಕಳಿಸಿದರಂತೆ. 

ನಂತರ ಆ ವ್ಯಕ್ತಿ ಹೊರ ಬರುವಷ್ಟರಲ್ಲಿ, ಗುರುನಾಥರು ಆ ಚಪ್ಪಲಿಗಳನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡು "ಏನಯ್ಯಾ ಅವನು ನಿನ್ನ ಕೈಲಿ ಚಪ್ಪಲಿ ತರಲು ಹೇಳಿ ಕಳಿಸಿದನಾ?ನಾನೇ ತರುತ್ತೀನಿ ನಡೆಯಯ್ಯಾ" ಎಂದು ಹಾಗೆಯೇ ಆ ಹುಡುಗನೊಂದಿಗೆ ಅವರ ಮೆನೆ ತನಕ ನಡೆದೇ ಬಿಟ್ಟರಂತೆ. ಮನೆಯ ಬಾಗಿಲಿನಲ್ಲಿ ಗುರುನಾಥರು ತಮ್ಮ ಚಪ್ಪಲಿಯನ್ನು ಈ ರೀತಿ ಹೊತ್ತು ತಂದಿರುವುದನ್ನು ನೋಡಿದಾಗ, ಅವರ ಸ್ಥಿತಿ ಏನಾಗಿರಬೇಡ... ಊಹೆಗೂ ನಿಲುಕದ್ದು. 

ತಮ್ಮ ತಪ್ಪಿನ ಅರಿವಾಗಿ ಅವರು ಗಳಗಳನೆ ಅತ್ತಿದ್ದಲ್ಲದೇ, ಸಾವಿರ ಸಾವಿರ ಸಲ ಗುರುನಾಥರಲ್ಲಿ ಕ್ಷಮೆ ಬೇಡುತ್ತಾ ಪ್ರಲಾಪಿಸಿದರಂತೆ. 

ಗುರುನಾಥರು ಬಹು ಸರಳವಾಗಿ "ಏನಯ್ಯಾ, ಎಲ್ಲ ಕೆಲಸಗಳ ಹಿಂದೆ ಒಂದು ಧರ್ಮ ಅಂತ ಇರುತ್ತಯ್ಯಾ. ಈ ಹುಡುಗ ನಿಮ್ಮ ಮನೇಲಿ ಹೊಟ್ಟೆಪಾಡಿಗೆ ಸಣ್ಣಪುಟ್ಟ ಕೆಲಸ ಮಾಡುತ್ತಾನೆ ಕಣಯ್ಯಾ. ಅವನಿಗೆ ನಿನ್ನ ಚಪ್ಪಲಿ ತರೋಕೆ ಹೇಳಬಹುದೆನಯ್ಯಾ. ಎಲ್ಲ ಕೆಲಸದ ಹಿಂದೆ ಒಂದು ಧರ್ಮ ಅಂತಿರುತ್ತಯ್ಯಾ. ಅದನ್ನು ತಿಳ್ಕೊಬೇಕು ಕಣಯ್ಯಾ. ಇನ್ನು ಮುಂದೆ ಇಂತಹ ತಪ್ಪು ಮಾಡಬೇಡ ಕಣಯ್ಯಾ. ಯಾವುದನ್ನೂ ದುರ್ಬಳಕೆ ಮಾಡಿಕೊಳ್ಳಬಾರದಯ್ಯಾ" ಎಂದು ಹೇಳಿ ಅಲ್ಲಿಂದ ಬಂದುಬಿಟ್ಟರಂತೆ. 

ಎಂತಹ ಮಹಾತ್ಮರು ! ನಮ್ಮ ದೃಷ್ಟಿಯಲ್ಲಿ ನಾವು ಮಾಡಲಾಗದ್ದನ್ನು ಮಾಡಿ, ತಮ್ಮ ಶಿಷ್ಯರ ಕಣ್ಣು ತೆರೆಸುವಲ್ಲಿ, ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಜೀವನದಲ್ಲಿ ಮಾಡದಂತೆ ಎಚ್ಚರಿಸುವಲ್ಲಿ, ಹೇಳಿದ್ದು ಮನಕ್ಕೆ ನಾಟಿಸುವಲ್ಲಿ ಗುರುನಾಥರ ಮಾತುಗಳು, ನುಡಿಗಳು ಪ್ರಭಾವಪೂರಿತವಾಗಿದ್ದವು. 

ಗುರುಬಾಂಧವರೇ, ಒಂದು ದೊಡ್ಡ ಪಾಠವನ್ನು ಗ್ರಹಿಸುತ್ತಾ ಇಂದಿನ ಸತ್ಸಂಗಕ್ಕೆ ಅಲ್ಪ ವಿರಾಮ ಹಾಕೋಣವೇ? ನಾಳೆಯೂ ನಿತ್ಯ ಸತ್ಸಂಗಕ್ಕೆ ತಪ್ಪದೇ ಬನ್ನಿ. ಗುರುನಾಥರು ಕರುಣಿಸುವ ಈ ಪಾಠಗಳು, ನಾಲ್ಕು ಗೋಡೆಯ ಮಧ್ಯದಲ್ಲಿ ಕೊಡುವ ಪಾಠವಾಗಲೀ, ಯಾವ ವಿಶ್ವವಿದ್ಯಾಲಯದಲ್ಲೂ ದೊರಕದು. ವಿಶ್ವವನ್ನೇ ಆತ್ಮವಾಗಿಸಿಕೊಂಡು, ವಿಶ್ವ ಬಂಧುತ್ವವನ್ನು ಸಾಧಿಸಿಕೊಂಡು, ವಿಶ್ವವ್ಯಾಪಿಯಾದ ಗುರುನಾಥರ ಸತ್ಸಂಗದಲ್ಲಿ ಮಾತ್ರಾ ಲಭ್ಯವಾದೀತು. 

ನಾಳೆ ನಮ್ಮೊಂದಿಗೆ ಇರುವಿರಲ್ಲಾ.....

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment