ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 68
ನಭೋ ಮಂಡಲಕ್ಕೇರಿದ ಬಿಳಿಧೂಮ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಬ್ರಹ್ಮಾನಂದ ಗುರೂಜಿಯವರು ತಮ್ಮ ಅನುಭವಗಳನ್ನು ಮತ್ತೆ ಮುಂದುವರೆಸಿದರು.
"ಉತ್ಸವ ಮುಂದೆ ಸಾಗಿತು - ಗುರುನಾಥರು ಕೆಲವು ವರ್ಷಗಳ ಕೆಳಗೆ ತಮ್ಮ ತಾಯಿಯ ದಿವ್ಯ ದೇಹವನ್ನು ಮಲಗಿಸಿದ ಜಾಗಕ್ಕೆ. ಆ ಪ್ರಶಾಂತ ರಮಣೀಯ ಸಸ್ಯ ರಾಶಿಯಲ್ಲಿ, ಆ ಶರೀರ ಉಂಡು ಬೆಳೆದ ಅನ್ನಾದಿಗಳನ್ನು ನೀಡಿದ ಆ ಭೂಮಿಗೆ, ತಮ್ಮ ತಾಯಿಯ ವೇದಿಕೆಯ ಪಕ್ಕದಲ್ಲೇ ಗುರುನಾಥರ ಅಂತ್ಯ ಸಂಸ್ಕಾರದ ಪ್ರಕ್ರಿಯೆಗಳು ಪ್ರಾರಂಭವಾದವು. ಗಂಧದ ಕಟ್ಟಿಗೆಗಳನ್ನು, ಉತ್ತಮ ದ್ರವ್ಯಗಳನ್ನು ಭಕ್ತರು ಹೊತ್ತು ತಂದರು. ಅದೊಂದು ಹೋಮ, ಹವನ, ಯಜ್ಞವೆಂಬಂತೆ ಅಗ್ನಿಯಲ್ಲಿ ಪರಿಶುದ್ಧ ತುಪ್ಪದ ಧಾರೆ ಎರೆಯಲಾಯಿತು. ಅದರ ಮೇಲೆ ಗುರುನಾಥರ ಶರೀರವನ್ನಿಡಲಾಯಿತು.ಯಜ್ಞೇಶ್ವರನಿಗೆ ಆಹುತಿ ಕೊಟ್ಟಂತೆ ಬಿಳಿ ಧೂಮವು ಕೆಲ ಕ್ಷಣದಲ್ಲೇ ನಭೋಮಂಡಲಕ್ಕೆ ಸೇರಿತು. ಪಂಚಭೂತಗಳಿಂದಾದ ಶರೀರ ಪಂಚಭೂತಗಳಲ್ಲಿ ಲೀನವಾಯಿತು. ಯಾರದನ್ನೂ, ಏನನ್ನೂ ತೆಗೆದುಕೊಳ್ಳದ ಗುರುನಾಥರು ಇಲ್ಲಿಯೂ ತಮ್ಮತನವನ್ನು ತೋರಿದರೇನೋ ಎಂಬಂತೆ ಇಂದಲ್ಲಿ ಸುಂದರವಾದ ಗುರುನಾಥರ ವೇದಿಕೆ ನಿರ್ಮಾಣವಾಗಿದೆ. ಗುರುನಾಥರ ದಿವ್ಯ ಸಾನ್ನಿಧ್ಯದಲ್ಲಿದ್ದು, ಇಂದಿಗೂ ಗುರುನಾಥರನ್ನು ಭಜಿಸಿ, ಬರುವ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತ, ಭಕ್ತರ ಕಷ್ಟಗಳನ್ನು ಗುರುನಾಥರು ಪರಿಹರಿಸುತ್ತಿದ್ದಾರೆ.... ".
ಗುರುನಾಥರೊಂದಿಗಿನ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡ, ಬ್ರಹ್ಮಾನಂದ ಗುರೂಜಿಯವರು ಮುಂದುವರೆಸಿದರು.
"ಗುರುನಾಥರು ತಮ್ಮ ಭಕ್ತರಿಗೆ, ಜನರಿಗೆ ಉತ್ತಮ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ನಾನು ಗುರುನಾಥರ ಭಕ್ತರ ಬಳಿ ಹೋದಾಗಲೆಲ್ಲಾ ಗುರುನಾಥರ ದಿವ್ಯ ಸ್ಮರಣೆಯಲ್ಲಿ ಸಮಯ ಜಾರಿದ್ದೇ ತಿಳಿಯದು. ಪ್ರಾಪಂಚಿಕ ವಿಷಯಗಳ ಎಲ್ಲಾ ಧೂಳನ್ನು ಕೊಡವಿಕೊಂಡವನೇ ನಿಜವಾದ ಅವಧೂತ. ಇವರು ಹೇಗಿರುತ್ತಾರೆಂದು ಅವರ ಲಕ್ಷಣಗಳನ್ನು ಹೇಳುವುದೇ ಕಷ್ಟ. ಬಾಲೋನ್ಮತ್ತ ಪಿಶಾಚವೇಷವತ್ - ಎಂದರೆ ಏನೂ ಗೊತ್ತಿಲ್ಲದ ಮಗುವಿನಂತೆ, ಅತಿಯಾಗಿ ಹೆಂಡ ಕುಡಿದವನಂತೆ, ಇರುತ್ತಾರೆ. ದಿಗಂಬರನಂತೆ, ಅತ್ಯುತ್ತಮ ರೇಷ್ಮೆ ವಸ್ತ್ರ, ಮಹಾ ಆಭರಣಗಳನ್ನು ತೊಟ್ಟವನಂತೆಯೂ ಇರಬಹುದು".
"ಸ್ವಾತ್ಮಾರಾಮಂ ನಿಜಾನಂದಂ. ಉತ್ತಮ ಪಕ್ವಾನ್ನವನ್ನು ಊಟ ಮಾಡುತ್ತಿರಬಹುದು. ಎಲ್ಲರೂ ಊಟ ಮಾಡಿದ ಮೇಲೆ ಉಳಿದುದನ್ನೂ ತಿನ್ನುತ್ತಿರಬಹುದು. ಅವಧೂತರುಗಳು ಆಶ್ರಮ ಧರ್ಮಗಳನ್ನು ಮೀರಿದ ಆತ್ಮಾಶ್ರಮಿಗಳು. ಅವರು ತಮ್ಮ ಹತ್ತಿರ ಬಂದವರಿಗೆ ಮಾತನಾಡಿಸಿ ಆಶೀರ್ವದಿಸಬಹುದು, ಪೆಟ್ಟುಕೊಟ್ಟು, ಅಸಂಬದ್ಧ ಮಾತನಾಡುತ್ತಾ, ಕಲ್ಲು ಕೋಲಿನಿಂದ ಹೊಡೆದು ಓಡಿಸಲೂಬಹುದು. ಏನಾದರಾಗಲೀ ಅಂತಹ ನಿಜ ಅವಧೂತರ ದರ್ಶನದಿಂದ ಒಳಿತಾಗುತ್ತದೆ. ಒಟ್ಟಿನಲ್ಲಿ ಅವರು ಎಲ್ಲ ಲೌಕಿಕ ಆಶಾಪಾಶಗಳನ್ನು ತೊಡೆದು ಹಾಕಿ, ತಮ್ಮ ನಿಜಾನಂದದಲ್ಲಿ ನೆಲೆಯಾಗಿರುತ್ತಾರೆ. ಒಬ್ಬೊಬ್ಬ ಅವಧೂತರೂ ಒಂದೊಂದು ತರಹ ವಿಚಿತ್ರವಾಗಿ ಇರುತ್ತಾರೆ. ಇಂಥ ಅವಧೂತ ಪರಂಪರೆಯ ಮೂಲ ಗುರು ಶ್ರೀ ದತ್ತಾತ್ರೇಯ ಮಹಾರಾಜರಿಗೆ ನಮಿಸಿ ಮೌನವಾಗಿರಬೇಕಲ್ಲವೇ? ಅಂತಹ ಮಹನೀಯರುಗಳಾದ ಗುರುನಾಥರನ್ನು ದರ್ಶನ ಮಾಡಿದವರೇ ಧನ್ಯ ಧನ್ಯರು".
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಪ್ರಿಯ ಸತ್ಸಂಗ ಪ್ರೇಮಿ, ಗುರು ಬಂಧುಗಳೇ, ಗುರುನಾಥರನ್ನು ಸ್ಮರಿಸಿ ನಿತ್ಯ ಸತ್ಸಂಗಕ್ಕಾಗಿ, ಜೋಳಿಗೆ ಹಿಡಿದು ಹೊರಟಾಗ, ಗುರುನಾಥರು ಅದ್ಯಾರ್ಯಾರ ಮನದಲ್ಲಿ ಕುಳಿತು ನುಡಿಸಿದರೋ..... ನಿತ್ಯ ಸತ್ಸಂಗ ಎಪ್ಪತ್ತರ ಗಡಿ ದಾಟುತ್ತಿದೆ. ಅನಂತ, ಅಗಣಿತ, ಅಪರಿಮಿತ, ಗುರುನಾಥರ ವಿಚಾರ ಎಲ್ಲಾ ದಿಶೆಗಳಿಂದ ಬರುತ್ತಿದೆ. ನಾವು ಸಂಗ್ರಹಿಸಲಾಗುತ್ತಿರುವುದು ಬಿಂದು ಮಾತ್ರವಾಗಿದೆ. ಬ್ರಹ್ಮಾನಂದ ಗುರೂಜಿಯವರಿಂದ ಹಿಡಿದು ಅನೇಕ ಜನ ಸಾಮಾನ್ಯರು, ಗುರುಭಕ್ತರಾಗಿ ನಮಗೆ ನೀಡಿದ ಗುರುಭಿಕ್ಷೆಯಲ್ಲಿ ಕೆಲವಂಶ ನಿಮಗಾಗಿ ಇಲ್ಲಿ ತರಲಾಗಿದೆ....
ನಾಳೆಯೂ ನಮ್ಮ ಸತ್ಸಂಗಕ್ಕೆ ಬರುವಿರಲ್ಲಾ..... ಗುರುನಾಥರ ದಿವ್ಯ ಆಶೀರ್ವಾದಕ್ಕಾಗಿ... ಅವರ ನುಡಿಯಾಸ್ವಾದನಕ್ಕಾಗಿ..... ವಂದನೆಗಳು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment