ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 63
'ಸಾಕ್ಷಾತ್ ಶಿವ ತಾನು ಭಿಕ್ಷಕೆ ಬಂದ'
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರಿಗೆ ತಮ್ಮ ಶಿಷ್ಯರೆಂದರೆ ಬಹು ಪ್ರೀತಿ. ಅದರಲ್ಲೂ ತಮ್ಮನ್ನು ಸರ್ವಸ್ವವಾಗಿ ಅರ್ಪಿಸಿಕೊಂಡರೆಂದರೆ ಭಕ್ತರ ಮನೆ ಅವರದೇ ಆಗಿರುತ್ತಿತ್ತು. ಯಾವಾಗ ಬರಬೇಕು ಎಂದು ಅನಿಸಿದರೂ ಧಿಡೀರನೇ ಬಂದು ಪ್ರತ್ಯಕ್ಷರಾಗಿಬಿಡುತ್ತಿದ್ದರು ಬಯಸದೇ ಬಂದ ಭಾಗ್ಯವಾಗಿ. ಹೀಗೆ ಗುರುನಾಥರು ಬಂದರೆಂದರೆ ತಮ್ಮ ಅದೆಷ್ಟು ಜನ್ಮದ ಪುಣ್ಯವೋ ಎಂದು ಸಡಗರಿಸಿ, ಅವರ ಸೇವೆ ಮಾಡಲು ಸಿದ್ಧವಾಗುತ್ತಿತ್ತು ಅವರ ಭಕ್ತಗಣ. ಇದ್ದಕ್ಕಿದ್ದಂತೆ ಹತ್ತಾರು ಜನಗಳನ್ನು ಕರೆತಂದರೂ, ಗುರುನಾಥರ ಜೊತೆ ಬಂದವರ ಸೇವೆಯನ್ನು ಒಂದಿನಿತೂ ಬೇಸರವಿಲ್ಲದೇ ಮಾಡುವ ಮಹಾ ಭಕ್ತಿವಂತರ ಈ ಗುರುಶಿಷ್ಯ ಸಂಬಂಧ ಎಂತಹದೆಂಬುದು ಅವರವರಿಗೇ ಗೊತ್ತಿದ್ದಂಥದು.
ಹೀಗೆ ಒಬ್ಬ ಭಕ್ತರು ತಮ್ಮ ಮನೆ ಕೆಲಸ ಕಾರ್ಯಗಳನ್ನು ಮುಗಿಸಿ, ರಾತ್ರಿ ಒಂಭತ್ತು ಗಂಟೆಗೆ ಹಾಯಾಗಿ ಕುಳಿತು ಟಿವಿ ನೋಡುತ್ತಾ ಊಟ ಮಾಡುತ್ತಿದ್ದರು. ಮನದೊಳಗೆ ಗುರುನಾಥ ನೀಡಿದ ಪ್ರಸಾದವಿದೆಯೆಂದು ಭಕ್ತಿಯಿಂದ ಸ್ವೀಕರಿಸಿ ಉಣ್ಣುತ್ತಿದ್ದರೇನೋ. ಏಕೆಂದರೆ ಗುರುನಾಥರು ಆ ಭಕ್ತೆಗೆ ಉಸಿರಿನ ಉಸಿರಾಗಿದ್ದರು. 'ನೀನಲ್ಲದೆ ಅನ್ಯತ್ರ ದೈವವನು ನಾಕಾಣೆ' ಎಂಬುವ ಅಸೀಮ ಭಕ್ತಿ ಅವರದು.
ಒಂದು ಮಧುರವಾದ ದನಿ ಆ ಒಂಭತ್ತರ ರಾತ್ರಿಯಲ್ಲಿ ಕೇಳಿಬಂತು. 'ಸಾಕ್ಷಾತ್ ಶಿವ ತಾನು ಭಿಕ್ಷಕೆ ಬಂದ' ಸುರಪರಿಚಿತವಾದ ಆ ದನಿ ಯಾರದೆಂದು ಬಲ್ಲ ಆ ಮನೆಯ ತಾಯಿ ಗಡಬಡಿಸಿ ಎದ್ದರು. ತಟ್ಟೆಯನ್ನು ಅಲ್ಲೇ ಬಿಟ್ಟರು. ಊಟದ ಅರಿವನ್ನು ಮರೆತರು. ತಮಗಾಗಿ ಬರುತ್ತಿರುವ ಗುರುನಾಥರನ್ನುಬಾಗಿಲಿಗೇ ಹೋಗಿ ಸ್ವಾಗತಿಸಿದರು, ಆದರಿಸಿದರು, ಸತ್ಕರಿಸಿದರು. ಮತ್ತೆಲ್ಲಾ ದಿನದ ಮುಗಿಯುವ ರಾತ್ರಿ, ಅವರಿಗೊಂದು ಹೊಸದಿನದ ಪ್ರಾರಂಭವಾಯಿತು. ಬೆಳಗ್ಗೆ ಎದ್ದಾಗ ಇರುವ ಚೈತನ್ಯ ಆ ತಾಯಿಯಲ್ಲಿ ತಿಂಬಿತು. 'ಸಾಕ್ಷಾತ್ ಶಿವ ತಾನು - ನಿಮ್ಮ ಮನೆಗೆ ಭಿಕ್ಷಕ್ಕೆ ಬಂದಿದೀನಿ' ಎಂದು ಮಹಾನ್ ಸಾಧಕರಾದ ಗುರುನಾಥರು ದತ್ತಪ್ರಭುವಿನಂತೆ, ಶ್ರೀಪಾದರಂತೆ, ಶಿವರೂಪಿಯಂತೆ ಬಂದು ಸೇವೆ ತೆಗೆದುಕೊಂಡದ್ದು ನಮ್ಮ ಭಾಗ್ಯ - ಎಂದವರು ಇಂದೂ ಗುರುನಾಥರ ಸರಳತೆ, ಪ್ರೇಮ, ನಿಷ್ಕಲ್ಮಷ ಹೃದಯದ ವರ್ಣನೆಯನ್ನು ಮಾಡುತ್ತಾರೆ.
ಗುರುವಿನಾಟವ ನೋಡು
ಗುರುನಾಥರ ಬಳಿ ನಿಕಟ ಸಂಬಂಧವನ್ನು ಸಾಧಿಸಿಕೊಂಡಿದ್ದ ಭಕ್ತರೊಬ್ಬರಿಗೆ, ಅದೇನು ಲಾಭವಾಗುತ್ತಿತ್ತೋ ಗೊತ್ತಿಲ್ಲ, ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಮನಸ್ಸಿಗೊಂದು ಮುದ. ಮನೆ, ಮಠ, ಕೆಲಸ ಕಾರ್ಯಗಳಾವುದರ ಪರಿವೆ ಆವರಿಗೆ ಆಗುತ್ತಿರಲಿಲ್ಲ. ಗುರುನಾಥರ ಬಳಿ ಇದ್ದಾಗ ಪುಷ್ಕಳವಾದ ಭೋಜನ, ಊಟ, ತಿಂಡಿಗಂತೂ ಕೊರತೆ ಇರುತ್ತಿರಲಿಲ್ಲ. ಒಟ್ಟಿನಲ್ಲಿ ಗುರುನಾಥರ ಸಾನ್ನಿಧ್ಯದಲ್ಲಿ ಇರುವುದೇ ಅವರಿಗೊಂದು ಸಂಭ್ರಮ.
ಒಂದು ದಿನ 'ದೇವನೂರಿಗೆ ಹೋಗೋಣಯ್ಯ. ಒಂದು ಸ್ಕೂಟರ್ ಗೆ ವ್ಯವಸ್ಥೆ ಮಾಡು' ಎಂದು ಅವರ ಶಿಷ್ಯರಿಗೆ ಹೇಳಿದರಂತೆ. ಗುರುನಾಥರು ತಮ್ಮೂರಿಗೆ ಬರುತ್ತಾರೆಂದಾಗ, ಯಾರಿಗೂ ತಮ್ಮ ವಾಹನ ನೀಡದ ಒಬ್ಬರು ಪುಣ್ಯಾತ್ಮರು ಸ್ಕೂಟರ್ ನೀಡಿದರು. ಸ್ಕೂಟರ್ ತಂದ ಮೇಲೆ ಗುರುನಾಥರು ಮೂರು ದಿನ ಎಲ್ಲಿ ಹೋಗುವ ಬಗ್ಗೆಯೂ ಚಕಾರವೆತ್ತಲಿಲ್ಲ. ನಾಲ್ಕನೆಯ ದಿನ ಬೆಳಿಗ್ಗೆ ನಾಲಕ್ಕಕ್ಕೆ ಎದ್ದು 'ನದೀ ಹೋಗೋಣ' ಎಂದರಂತೆ. ಈಶ್ವರನ ದೇವಾಲಯದ ಬಳಿ ಬಂದಾಗ 'ನಡಿಯಯ್ಯಾ, ಈಶ್ವರನಿಗೆ ನಾಲ್ಕು ಬಿಂದಿಗೆ ನೀರು ಹಾಕೋಣ' ಎಂದಾಗ, ಅದೂ ಆಯಿತು.
ಗುರುನಾಥರು ಒಂದು ಸಣ್ಣ ಪಂಚೆಯುಟ್ಟಿದ್ದವರು, ಮೇಲುದೆ ಏನೂ ಇಲ್ಲದೆ ಹಿಂದೆ ಕುಳಿತರು. ಸ್ಕೂಟರ್ ದೇವನೂರು ಕಡೆಗೆ ಓಡಿತು. ಇನ್ನೇನು ಊರು ಸನಿಹ ಇದೆ ಎಂದಾಗ 'ನಿಲ್ಲಿಸಯ್ಯಾ.. ನಾನು ಹೀಗೆ ಬಂದುಬಿಟ್ಟರೆ ನಿನಗೆ ಮುಜುಗರವಾಗುತ್ತೇನೋ' ಎಂದು ಕೈ ಚೀಲದಲ್ಲಿದ್ದ ವಸ್ತ್ರಗಳನ್ನು ಧರಿಸಿದರಂತೆ.
ಪಾಪ ಆ ಶಿಷ್ಯರ ಮನದಲ್ಲೇನು ಅಂತಹ ಭಾವನೆ ಬರದಿದ್ದರೂ ಲೋಕಾರೂಢಿಯ ಬಗ್ಗೆ ಗುರುನಾಥರು ತುಂಬಾ ಸೂಕ್ಷ್ಮವಾಗಿ ಇರುತ್ತಿದ್ದರು.
ಮೊನ್ನೆ ಅರಸೀಕೆರೆಗೆ ಬಂದಾಗ, ಅಲ್ಲೊಂದು ಜಾಗದಲ್ಲಿ ಈ ಶಿಷರ ಮಿತ್ರನೊಬ್ಬ ಇವರನ್ನು ನಿಲ್ಲಿಸಿ ಮಾತನಾಡಲು ಮೂರು ನಾಲ್ಕು ಬಾರಿ ಪ್ರಯತ್ನಿಸಿದರೂ ಇವರು ಕಂಡೂ ಕಾಣದಂತೆ ಗಾಡಿ ಓದಿಸಿದ್ದರು. ಏಕೆಂದರೆ ಆ ಚಡ್ಡಿ ಸ್ನೇಹಿತನ ಮಾತು ಎಗ್ಗಿಲ್ಲದ್ದು. ಏನಾದರೂ ಗುರುನಾಥರ ಎದುರಿಗೆ ಸಲ್ಲದ ಮಾತನ್ನು ದೋಸ್ತಿಯಲ್ಲಿ ಆಡಿಬಿಟ್ಟರೆ ಎಂಬ ಚಿಂತೆ.
ಗುರುನಾಥರು ಅದ್ಯಾವಾಗ ಇವನ್ನೆಲ್ಲಾ ನೋಡಿಬಿಟ್ಟರೋ, 'ನಿಲ್ಸಿ ಸಾರ್ ಗಾಡಿನಾ. ನಿಮ್ಮ ಸ್ನೇಹಿತರು ಅಷ್ಟೊತ್ತಿನಿಂದ ನಿಮ್ಮ ಜೊತೆ ಕಾಫಿ ಕುಡಿಯಲು ಕರೀತಿದ್ದಾರೆ. ನೀವು ಹಾಗೇ ತಪ್ಪಿಸಿಕೊಳ್ಳುತ್ತಿದ್ದೀರಲ್ಲಾ' ಎಂದುಬಿಟ್ಟರಂತೆ. ಮುಂದೆ ಸನಿಹದ ಹೋಟೆಲಿಗೆ ಕರೆದೊಯ್ದು ಪೂರಿ ತಿನ್ನಿಸಿ, ಕಾಫಿ ಕುಡಿಸಿದರು. ಸ್ನೇಹಿತನಿಗೆ ಗುರುನಾಥರ ಬಗ್ಗೆ ಎಚ್ಚರ ಹೇಳಬೇಕು ಎಂದಿವರು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ಗುರುನಾಥರು 'ಏನ್ಸಾರ್, ನಿಮ್ಮ ಲಾರಿ ತುಂಬಾ ತೊಂದರೆ ಕೊಡುತ್ತಿದೆ ಆಲ್ವಾ. ಹಿಂದಿನ ಬೋಲ್ಟ್ ಗಳನ್ನು ಬಿಗಿ ಮಾಡಿ. ಮುಂದೆ ನೀವು ಇನ್ನೂ ದೊಡ್ಡ ದೊಡ್ಡ ಕೆಲಸಗಳನ್ನು ಮಾಡುತ್ತೀರಿ ಸಾರ್' ಎಂದರಂತೆ. ಈಗವರು ದೊಡ್ಡ ಕಾಂಟ್ರಾಕ್ಟರ್ ಆಗಿ, ಅನೇಕ ಲಾರಿಗಳ ಮಾಲೀಕರಾಗಿ, ಅದಿರು ಸಾಗಣೆಯಲ್ಲಿ ಒಳ್ಳೇ ಅವಕಾಶ ಪಡೆದಿದ್ದಾರೆ.
ಗುರುವು ಕೆಲವು ಸಾರಿ ಹೀಗೆ ಕರೆದು ಕೈತುಂಬಾ ನೀಡಿ ಹರಸುವುದೂ ಇದೆ. ಒಂದೇ ನೋಟದಲ್ಲಿ ಇಡೀ ಜಾತಕವನ್ನೇ ಹೇಳಿದ್ದಿದೆ. ಇಂತಹ ಗುರುನಾಥರ ವೈವಿಧ್ಯಮಯ ಕರುಣಾಲೀಲೆಗಳನ್ನು ನಮಗೆ ನೀಡುತ್ತಿರುವ ಅವರ ಭಕ್ತಕೋಟಿಗೆ, ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ಮಿತ್ರರೇ, ನಾಳೆಯೂ ಗುರುನಾಥರ ನಿತ್ಯ ಸತ್ಸಂಗಕ್ಕೆ ನಮ್ಮೊಂದಿಗಿರಿ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment