ಒಟ್ಟು ನೋಟಗಳು

Friday, May 5, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2  

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 
  ನಿತ್ಯ ಸತ್ಸಂಗ  - 
57

 ಯಾಕೋ ಕಲ್ಕತ್ತಾ ಕಾಣುತ್ತಲ್ಲಯ್ಯ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಗುರುಬಂಧುಗಳೊಬ್ಬರು ತಮ್ಮ ಮಗನ ಬಿಇ ಸೀಟಿಗಾಗಿ ತವಕದಿಂದ ಕಾಯುತ್ತಿದ್ದರು. ತಮ್ಮ ಊರಿನಲ್ಲೇ ಅವರಿಗೆ ಬಿಇ ಸೀಟು ಬೇಕಾಗಿತ್ತು. 'ನೀನಲ್ಲದೆ ಮತ್ತಿನ್ಯಾರು ಗತಿ' ಎಂದು ಗುರುನಾಥರನ್ನು ಅನನ್ಯವಾಗಿ ಬೇಡಿದರಂತೆ. ಆದರೆ ಸೀಟ್ ಅಲಾಟ್ ಮೆಂಟ್ ನಲ್ಲಿ ಇನ್ನು ಎರಡು ಮಾತ್ರ ಉಳಿದಿದೆ. ಅದಕ್ಕೆಷ್ಟು ಜನರ ಪೈಪೋಟಿ ಇದೆಯೋ ಎಂಬ ಭಯದ ನಡುವೆಯೂ ಗುರುನಾಥರಿದ್ದಾರೆ ಎಂಬ ಅಚಲ ನಂಬಿಕೆ ಇತ್ತು. ಆ ಕೂಡಲೇ ಇವರ ಮಗನಿಗೆ ಬೇಕಾದ ಊರಿನಲ್ಲೇ, ಬೇಕಾದ ವಿಷಯದಲ್ಲೇ ಸೀಟು ಅಲಾಟ್ ಆಯಿತು. ಅಷ್ಟೇ ಅಲ್ಲ. ಇಂಜಿನಿಯರ್ ಕೊನೆಯ ಹಂತದಲ್ಲಿ ಇರುವಾಗಲೇ, ನಮಸ್ಕಾರ ಮಾಡಲು ಹೋದಾಗಲೆಲ್ಲಾ 'ಏನಯ್ಯಾ ನಿನ್ನದು ಕಲ್ಕತ್ತಾ ವೆಸ್ಟ್ ಬೆಂಗಾಲ್ ಗಳು ಕಾಣಿಸುತ್ತಿದೆಯಲ್ಲಯ್ಯಾ' ಎನ್ನುತ್ತಿದ್ದರು. ಈ ಹುಡುಗನಿಗೆ ಕಲ್ಕತ್ತಾದಲ್ಲಿಯೇ ಕೆಲಸವೆಂಬುದನ್ನು ಎಂದೋ ಗುರುನಾಥರು ನುಡಿದಿದ್ದರು. 

ಮುಂದೆ ಸೆಲೆಕ್ಷನ್ ಆಗಿ ಕಂಪೆನಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಹೋದಾಗ ಮೇಲಧಿಕಾರಿಗಳು ನಿಮ್ಮನ್ನು ಬೆಂಗಳೂರಿಗೇತೆಗೆದುಕೊಳ್ಳುತ್ತೇವೆ  ಎಂದು ಪದೇ ಪದೇ ಹೇಳುತ್ತಿದ್ದರು. ಕೊನೆಗೆ ಆ ಹುಡುಗ ರಿಪೋರ್ಟ್ ಮಾಡಿಕೊಂಡಿದ್ದು ಕಲ್ಕತ್ತಾದಲ್ಲಿ. ಮೇಲಧಿಕಾರಿಗಳ ಭರವಸೆಯೆಲ್ಲಾ ಗಾಳಿಗೆ ತೂರಿ ಹೋಗಿ ಎಲ್ಲರಿಗಿಂತ ಮಿಗಿಲಾದ ಉನ್ನತವಾದ ಗುರುನಾಥರ ಮಾತು ಸತ್ಯವಾಯಿತು ಎಂದು ಗುರುವಾಣಿಯ ಸತ್ಯತೆಯನ್ನು ಅವರು ಸ್ಮರಿಸುತ್ತಾರೆ. 

ಇನ್ನೊಮ್ಮೆ ಈ ಗುರುಬಂಧುಗಳು ತಮ್ಮ ತೋಟಕ್ಕೆ ಗುರುನಾಥರನ್ನು ಕರೆದೊಯ್ದಿದ್ದರು. ಗುರುನಾಥರ ಶ್ರೀಪಾದ ಧೂಳಿನಿಂದ ಪವಿತ್ರವಾಗಿತ್ತು ಆ ಭೂಮಿ. ಅಲ್ಲಿಗೆ ಬಂದ ಗುರುನಾಥರು ಉತ್ತರೋತ್ತರ ಶ್ರೇಯೋಭಿವೃದ್ಧಿಯಾಗಲೆಂದು ಹರಸಿದ್ದರೇನೋ, ಬಲ್ಲವರೇ ಬಲ್ಲರು. 

ಸಂಸಾರಿ ಅಂದ ಮೇಲೆ ಸುಖದುಃಖಗಳು ಸಹಜ. ಈ ಭಕ್ತರಿಗೂ ಸಂಕಟದ ದಿನಗಳು ಬಂದವು. ವ್ಯಾಪಾರ ವ್ಯವಹಾರಗಳು ಕೈಕೊಟ್ಟವು. ಐದೈದು ರೂಪಾಯಿಗೂ ಪರಿತಪಿಸುವಂತೆ ಆದಾಗ ಆ ಜಮೀನನ್ನು ಬೇರೆಯವರಿಗೆ ಮಾರಲು ನಿರ್ಧರಿಸಿ, ಒಂದು ಸಾವಿರ ರೂಪಾಯಿಗಳ ಅಡ್ವಾನ್ಸ್ ಸಹ ಪಡೆದುಬಿಟ್ಟರು. ಕೊನೆಗೆ ಗುರುನಾಥರ ಬಳಿಯೂ ಈ ವಿಚಾರವನ್ನು ಆ ಭಕ್ತರು ತಿಳಿಸಿದರು. ಗುರುನಾಥರಿಗೆ ಏನನಿಸಿತೋ ಏನೋ "ಏನಯ್ಯಾ ನನ್ನ ಪರ್ಮಿಷನ್ ಇಲ್ಲದೆ ಕೊಟ್ಟುಬಿಟ್ಟೆಯಲ್ಲಯ್ಯಾ. ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆಯಲ್ಲಯ್ಯಾ. ಆಯ್ತು ಮಾತಾಡಿಬಿಟ್ಟಿದ್ದೀಯಾ. ಏನು ಮಾಡೋಕ್ಕಾಗುತ್ತೆ. ಯಾರು ಅದನ್ನು ಹೆಂಗೆ ತೆಗೆದುಕೊಳ್ಳುತ್ತಾರೋ ನಾನೂ ನೋಡುತ್ತೀನಿ' ಎಂದುಬಿಟ್ಟರು. ಸೊಳ್ಳೆ ಹೊಡೆದಂತೆ ತೊಡೆ ತಟ್ಟಿಕೊಂಡರು ಗುರುನಾಥರು. 

ಒಂದು ವರ್ಷ ಕಳೆದುಹೋಯಿತು. ತನಗಿಂತ ನಮ್ಮ ಗುರುನಾಥರಿಗೇ ನನ್ನ ಬಗ್ಗೆ ನನ್ನ ಜಮೀನಿನ ಬಗ್ಗೆ ತವಕವಿದ್ದಂತೆ ಕಂಡುಬಂದಿತು. ಒಂದು ದಿನ ಗುರುನಾಥರು 'ಏನಯ್ಯಾ ನೀನು ಹೇಳಿದ ವಾಯಿದೆ? ಒಂದು ವರ್ಷ ಮುಗಿಯಿತಲ್ಲ. ಆತ ಬರಲಿಲ್ಲವಲ್ಲ. ಅವನನ್ನು ಹುಡುಕಿಸಿ, ಅವನ ಅಡ್ವಾನ್ಸ್ ವಾಪಸ್ಸು ಕೊಟ್ಟುಬಿಡಯ್ಯಾ' ಅಂದರು. 

ಅಂತೂ ಬಹಳ ಕಷ್ಟಪಟ್ಟು ಆ ವ್ಯಕ್ತಿಯನ್ನು ಹುಡುಕಿಸಿ, ವಾಯಿದೆ ಮುಗಿದಿದ್ದರೂ ಟೋಕನ್ ಅಡ್ವಾನ್ಸ್ ಒಂದು ಸಾವಿರದ ಜೊತೆ ಮತ್ತೊಂದಿಷ್ಟನ್ನು ಇವರು ಸೇರಿಸಿ ಕೊಟ್ಟು, ಕೈಮುಗಿದಾಗ, ಆತ 'ನಿಮ್ಮ ಜಮೀನು ನನಗೆ ಬೇಡ ಸಾರ್' ಎಂದು ಹಣ ಪಡೆದನಂತೆ. ಹಾಗೆಂದು ಒಂದು ಶರಾ ಸಹಾ ಬರೆದುಕೊಟ್ಟನಂತೆ. ಈಗ ಆ ಭೂಮಿ ಕಲ್ಪವೃಕ್ಷದ ಬೀಡಾಗಿದೆ. 

ಸದ್ಗುರುನಾಥರು ತಮ್ಮ ಭಕ್ತರ ಚಿಂತನೆಗೆ, ತಮ್ಮನ್ನು ನಂಬಿದವರ ಹಿತಕ್ಕಾಗಿ ಏನೇನೆಲ್ಲಾ ಲೀಲೆಗಳನ್ನಾಡಿದ್ದಾರೆ ನೋಡಿ. 

ಒಮ್ಮೆ ಗುರುನಾಥರು, ತಮ್ಮ ಶಿಷ್ಯರ ಸಂಗಡ ಒಂದು ಮಠಕ್ಕೆ ಹೋಗಿದ್ದರಂತೆ. ಗುರುನಾಥರ ಮಹಿಮೆಯನ್ನರಿಯದ ಅಲ್ಲಿನ ಗುರುಗಳೊಬ್ಬರ ಧೋರಣೆ - ಗುರುನಾಥರ ವಿನೀತ ನಡೆಯ ಪ್ರಸಂಗವನ್ನು ನೆನೆಸಿಕೊಂಡ ಪ್ರಸಂಗ ಹೀಗಿದೆ. 

'ಗುರುಮಠದವರು ಗತ್ತಿನಿಂದ ಇವರೆಲ್ಲಾ ಯಾರು?' ಎಂದು ಕೇಳಿದಾಗ ಗುರುನಾಥರಿತ್ತ ಉತ್ತರವೆಂದರೆ - 'ಇವರೆಲ್ಲಾ ನಮ್ಮ ಅಣ್ಣ ತಮ್ಮಂದಿರು'. 'ಎಷ್ಟು ಜನ?' ಮತ್ತೆ ಅದೇ ಗತ್ತಿನ ಪ್ರಶ್ನೆ. ಗುರುನಾಥರ ಉತ್ತರ 'ನೂರಿಪ್ಪತ್ತೇಳು ಜನ'. ಮುಂದೆ 'ನಿಮ್ಮದು ಯಾವ ಆಶ್ರಮ?' ಎಂಬ ಪ್ರಶ್ನೆ. ಗುರುನಾಥರು ಪ್ರಸನ್ನವದನರಾಗಿ 'ನಮಗೆ ಆ...ಶ್ರಮವಿಲ್ಲ' ಎಂದು ಮಾರ್ಮಿಕವಾಗಿ ನುಡಿದರಂತೆ ! ಹೀಗೆ ಗುರುನಾಥರೊಂದಿಗಿನ ಪ್ರತಿ ಕ್ಷಣವೂ ಅವಿಸ್ಮರಣೀಯವಾದವುಗಳೇ.... 

ಪ್ರಿಯ ಗುರುಬಾಂಧವರೇ.... ಗುರುನಾಥರೊಂದಿಗೆ ಓಡಾಡಿದ, ಸುತ್ತಿದ ಭಕ್ತರ ಒಂದೊಂದು ಅನುಭವವೂ... ಗುರುಚರಿತ್ರೆಯೇ. ಇದರ ಪಾನ ನಿರಂತರವಾಗಿರಲಿ.... ನಾಳೆಯೂ ನಮ್ಮೊಂದಿಗೆ ಇರುತ್ತೀರಲ್ಲಾ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment