ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 76
ವಿಶ್ವರೂಪ ದರ್ಶನ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರ ಬಳಿ ಬರುವ ಭಕ್ತಾದಿಗಳಿಗೆ - ಅವರ ಸನ್ನಿಧಾನದಲ್ಲಿರುವುದೇ ಒಂದು ಸಂತಸದ ಸಂಗತಿಯಾಗಿರುತ್ತಿತ್ತು. ಮತ್ತೆ ಕೆಲ ಭಕ್ತರಿಗೆ ತಮ್ಮ ತತ್ ಕ್ಷಣದ ಇಷ್ಟಕಾಮ್ಯಗಳು ಸಂದರೆ ಅದೇ ದೊಡ್ಡದು. ಇನ್ನು ಕೆಲವರು ಗುರುನಾಥರ ದರ್ಶನ ಮಾತ್ರದಿಂದಲೇ ಸಿಗುವ ನೆಮ್ಮದಿ, ಸಂತಸ, ಈತಿಬಾಧೆಗಳಿಲ್ಲದ ವಾತಾವರಣಗಳಿಂದ ತೃಪ್ತರಾಗಿ ಮತ್ತೇನೂ ಯೋಚಿಸದಂತಹ ಪರಿಸ್ಥಿತಿಯನ್ನು ತಲುಪಿದ್ದರಂತೆ. ನಿಜವಾಗಿ ನಮಗೇನು ಬೇಕು? ನಾವು ಯಾರು? ನಮ್ಮ ಗುರಿಯೇನು? ಗುರುವಿನಿಂದ ನಾವು ಪಡೆಯಬೇಕಾದ ಅಸಲಿ ಕೃಪೆ ಅದಾವ ಗಹನವಾದುದೆಂದು ತಿಳಿದವರು ವಿರಳವೋ, ಬೆರಳೆಣಿಕೆಯಷ್ಟೋ। ತಿಳಿದವರಾರೂ ಅದು ಹೇಗೆ ತಾವು ತಿಳಿದೆವೆಂದು ಎಲ್ಲರ ಮುಂದೆ ಹೇಳುತ್ತಾರೆ? ಗುರುಗೋಪ್ಯವು. ಸಾಮಾನ್ಯರ ಅರಿವಿಗೆ ಬರುವುದೂ ಅಸಾಧ್ಯ. ಇದರ ಜೊತೆಗೆ ಗುರುನಾಥರ ಮಾಯಾಲೀಲಾ ವಿನೋದಗಳೇನು ಸಾಮಾನ್ಯವಾದವುಗಳೇ? ಕರ್ಮ ಹರಿಯದವರಿಗೆ, ಗುರುಮಾಯೆಯನ್ನು ಭೇದಿಸುವ ಬಲವಾದರೂ ಎಲ್ಲಿಂದ ಬರಬೇಕು? ಆದರೂ ಗುರುನಾಥರ ವಿಶೇಷ ದರ್ಶನ, ಕೃಪೆ ಪಡೆದ ಭಕ್ತರೊಬ್ಬರಿಗೆ ಆದ ಅನುಭವ ಅನನ್ಯವಾದುದು. ಅದು ನಮ್ಮ ನಿತ್ಯ ಸತ್ಸಂಗಕ್ಕೆ ದೊರಕಿದುದೂ ಗುರುಲೀಲೆಯಲ್ಲದೇ ಮತ್ತೇನಲ್ಲ.
"ಗುರುನಾಥರೆಂದರೆ ಸಾಕ್ಷಾತ್ ಶಿವ ಸ್ವರೂಪಿಗಳು, ದತ್ತರ ಅಪರಾವತಾರಿಗಳು, ಅವರಿಗೆ ಅಸಾಧ್ಯವಾದುದೇನೂ ಇರಲಿಲ್ಲ. ಆದರೆ ಇದನ್ನು ಅರಿತವರು ಬಹಳ ವಿರಳ. ಹಾಗಾದರೆ ನಿಮ್ಮ ಮನಸ್ಸಿನಲ್ಲಿ 'ಇವನಿಗೆ ಅದು ಹೇಗೆ ಅರ್ಥವಾಯಿತು? ಎಂಬ ಪ್ರಶ್ನೆ ಏಳುವುದು ಸಹಜ. ಅದೂ ಒಂದು ಗುರುನಾಥರ ಕರುಣೆಯಲ್ಲದೇ ಮತ್ತೇನೂ ಅಲ್ಲ. ನನ್ನಲ್ಲಿ ಅಂತಹ ಮಹತ್ತಾದುದೇನೂ ಇಲ್ಲ. ಎಲ್ಲರಂತೆ ನಾನು ಸಾಮಾನ್ಯ. ಎಡವಿ, ತಪ್ಪುಗಳನ್ನು ಮಾಡಿ, ಕೊನೆಗೆ ಗಟ್ಟಿ ಮನಸ್ಸಿನಿಂದ 'ಗುರುನಾಥರು ಸಾಮಾನ್ಯ ನರರಲ್ಲ, ನರರೂಪದಲ್ಲಿ ನಮ್ಮನ್ನು ಉದ್ಧರಿಸಲು ಬಂದ ಸಾಕ್ಷಾತ್ ಶಿವಸ್ವರೂಪಿಗಳು' ಎಂಬ ಭಾವಶುದ್ಧತೆಯನ್ನು ಬೆಳೆಸಿಕೊಂಡು ನಿರಂತರ ನಿರಂತರ ಅವರ ನುಡಿಯಂತೆ ನಡೆಯುವ ಪ್ರಯತ್ನ ಮಾಡಿದಾಗ, ಈ ಪಾಮರನ ಮೇಲೆ ಅವರ ಕೃಪಾಕಟಾಕ್ಷ ಬಿದ್ದಿತೇನೋ. ನನ್ನ ಸಾಧನೆಗಿಂತ ಗುರುನಾಥರ ಪ್ರೀತಿ, ಕರುಣೆ - ವಾತ್ಸಲ್ಯದ ಸಿಹಿ ಫಲ ನನಗೊದಗಿ ಬಂತೇನೋ."
"ಅಂದು ಒಂದು ದಿನ ಗುರುನಾಥರನ್ನು ನೋಡಲು ಸಖರಾಯಪಟ್ಟಣಕ್ಕೆ ಹೋದೆ. ಗುರುನಾಥರು ಮನೆಯಲ್ಲಿ ಇರಲಿಲ್ಲ. ಅವರು ಸಹಜವಾಗಿ ಇರುವ, ಆ ಅರಳಿ ಮರದ ಕಡೆ ಹೊರಟೆ. ನನ್ನ ಅದೃಷ್ಟವೋ ಏನೋ, ಗುರುನಾಥರು ಒಬ್ಬರೇ ಕುಳಿತಿದ್ದರು. ನಮಸ್ಕರಿಸಿ ನಿಂತುಕೊಂಡೆ. 'ಬಾರಯ್ಯಾ ಕುಳಿತುಕೊಳ್ಳಯ್ಯಾ' ಎಂದರು - ಅತ್ಯಂತ ಪ್ರೀತಿಯ ಜೇನಿನ ದನಿಯಲ್ಲಿ, ಆದರೆ ನಾನು ನಿಂತೇ ಇದ್ದೆ. 'ಕುಳಿತುಕೊಳ್ಳಯ್ಯಾ ... ಯಾರಿಗೆ ಯಾರೂ ದೊಡ್ಡೋರಲ್ಲ ಕಣಯ್ಯಾ, ನಾನೇನು, ನೀನೇನು ಎಲ್ಲಾ ಒಂದೇ ಕಣಯ್ಯಾ ಕುಳಿತುಕೊಳ್ಳಯ್ಯಾ'. ಸರಿ ಎಂದುಕೊಂಡು ಸ್ವಲ್ಪ ದೂರದಲ್ಲಿ ಕುಳಿತುಕೊಂಡೆ. 'ಬಾರಯ್ಯಾ ಹತ್ತಿರ ನಿನಗೆ ಕಿವೀನೂ ಸರಿಯಾಗಿ ಕೇಳಿಸಲ್ಲ' ಎಂದು ಮತ್ತೂ ಹತ್ತಿರ ಕರೆದರು. ಗುರುನಾಥರ ಆ ವಾಣಿಯ ಪ್ರೀತಿ ನನ್ನನ್ನು ಮತ್ತೂ ಅವರ ಹತ್ತಿರ ಕುಳಿತುಕೊಳ್ಳಲು ಪ್ರೇರೇಪಿಸಿತು. ಇದು ದೇಹದ ಹತ್ತಿರ ಮಾತ್ರವಲ್ಲ ಗುರುನಾಥರ ಹೃದಯದ ಹತ್ತಿರಕ್ಕೆ ನನ್ನನ್ನೆಳೆದು ತಂದಂತೆ ಅನಿಸಿತು".
"ನೋಡು ಪ್ರಪಂಚದಲ್ಲಿ ಎಲ್ಲರಲ್ಲೂ ಎಲ್ಲ ಶಕ್ತಿಗಳೂ ಅಡಗಿರುತ್ತವೆ. ಆದರೆ ಅದನ್ನು ಅರಿಯುವುದು ಕಷ್ಟ. ಅದು ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ. ಎಲ್ಲಿಯೋ ಒಬ್ಬರಿಗೆ ಉಪಯೋಗಕ್ಕೆ ಬರುತ್ತದೆ. ನಾನು ಹೇಗೆ ಹೇಳ್ತೀನಿ ಅಂತ ತಿಳಿಬೇಡ ಕಣಯ್ಯಾ. ಒಂದೊಂದು ದಿವಸ ಒಂದೊಂದು ಕ್ಷಣ ಎಷ್ಟೋ ಸಾರಿ ಭಂಗಪಡಿಸುತ್ತೆ. ಮತ್ತೆಷ್ಟೋ ಸಾರಿ ಸಂತೋಷವಾಗಿ ಕಾಲ ಕಳೀತೀವಿ. ಇದರ ಜೊತೆಗೆ ಸಾಧನೆ ಮಾಡು. ಜೀವನದಲ್ಲಿ ಸಾಧನೆ ಮುಖ್ಯ. ನಾವೆಲ್ಲಾ ಈ ಭೂಮಿ ಮೇಲೆ ಹುಟ್ಟಿದ್ದೀವಿ. ಮತ್ತೆ ಮಣ್ಣಿಗೆ ಸೇರುತ್ತೇವೆ. ಪ್ರತಿಯೊಬ್ಬರಲ್ಲೂ ಇರುವ ಆ ವಿಶ್ವರೂಪವನ್ನು ಕಾಣಬೇಕು. ನನ್ನಲ್ಲಿ ನಿನ್ನಲ್ಲಿ ಮಾತ್ರಾ ಅಲ್ಲ. ಎಲ್ಲರಲ್ಲೂ ಅದು ಇದೆ. ನೀನೊಂದು ಹುಲ್ಲುಕಡ್ಡಿಯಾಗು - ಆಲದ ಮರ, ಹೆಮ್ಮರ ಆಗಬೇಡ. ಆ ಒಂದು ಹುಲ್ಲುಗರಿಕೆ ಎಂತಹ ಬೆಟ್ಟದ ಮೇಲೂ, ಕಾಂಪೌಂಡ್ ಮೇಲೂ ಹುಟ್ಟುತ್ತದೆ..' ಎಂದು ಇನ್ನೂ ಏನ್ನನ್ನೋ ಹೇಳುತ್ತಾ ಇದ್ದ ಗುರುನಾಥರನ್ನು ಒಮ್ಮೆ ನೋಡಿದಾಗ ಅಲ್ಲಿ ಕಂಡು ಬಂದ ರೂಪವೇ ಬೇರೆಯಾಗಿತ್ತು. ನರರೂಪಿ ಗುರುನಾಥರು ಮಹಾನ್ ವಿರಾಟ್ ಸ್ವರೂಪಧಾರಿಗಳಾಗಿ ಕಂಡುಬಂದರು. ಶಿವ, ವಿಷ್ಣು, ದತ್ತ, ಕೃಷ್ಣ ಎಲ್ಲ ಅವತಾರಗಳ ವಿರಾಟ್ ಸ್ವರೂಪವಲ್ಲಿತ್ತು. ನನಗೆ ಇದು ಭ್ರಮೆಯೋ, ವಿಷ್ಣು ಮಾಯೆಯೋ ಏನೂ ಅರಿಯಲಾಗದಂತಹ ಮನಸ್ಥಿತಿ. ಆದರೆ ಆ ವಿರಾಟ್ ಸ್ವರೂಪದಲ್ಲೂ ಅದೆಂತಹ ಆನಂದವಿತ್ತು। ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆಂಬ ಮನ. ನನಗಾಗಿ ಗುರುನಾಥರು ಕರುಣಿಸಿದ ಈ ಆನಂದ ನನ್ನ ಹೃದಯ ತುಂಬಿ ಕಣ್ಣಿನಲ್ಲಿ ಆನಂದಾಶ್ರುವನ್ನು ಹರಿಸಿತ್ತು. ಇದು ಸುಳ್ಳಂತೂ ಆಗಲು ಸಾಧ್ಯವಿಲ್ಲ. ನೂರಕ್ಕೆ ನೂರು ಸತ್ಯ. ಗುರುನಾಥರ ಮಾತುಗಳು ಕಿವಿಗೆ ಬೀಳುತ್ತಿದೆ. 'ಮನೆಗೆ ಬಂದವರನ್ನು ಏನೂ ಕೊಡದೆ ಕಳಿಸಬೇಡ. ಒಂದು ಚೂರು ಬೆಲ್ಲ ನೀರಾದರೂ ಕೊಡು. ನಿನ್ನ ಇತಿಮಿತಿ ಮೀರಬೇಡ.......' ಹಂತ ಹಂತವಾಗಿ ಮತ್ತೆ ಗುರುನಾಥರು ಸ್ವಸ್ಥಿತಿಯಲ್ಲಿ ಕಂಡು ಬಂದರು" ವಿರಾಟ್ ರೂಪದರ್ಶನವನ್ನು ಮತ್ತೆ ತಾವು ಕಂಡಂತೆ ಆ ಭಕ್ತರು ಮತ್ತೆ ಭಾವಸಮಾಧಿಯಲ್ಲಿ ಮುಳುಗಿದರು.
ಪ್ರಿಯ ಗುರುಬಾಂಧವರೇ, ಗುರುನಾಥರ ಕೃಪೆ ಅದೆಷ್ಟು ಅಗಾಧವಾಗಿದೆ. ಇಂದೂ ಆ ಭಕ್ತರ ಮನದಲ್ಲಿ, ಗುರುನಾಥರ ಆ ದಿವ್ಯ ವಿಶ್ವರೂಪ ಅಚ್ಚಳಿಯದೇ ಇದೆ. ಗುರುನಾಥರ ನಾಮವೇ ಅವರಿಗೆ ಉಸಿರಾಗಿದೆ. ಗುರುನಾಥರ ಕರುಣೆಯೇ ಅವರ ಜೀವನವಾಗಿದೆ. ಸುಖಮಯ ಜೀವನದಲ್ಲಿ ಅವರು ಗುರುನಾಥರ ನಿತ್ಯ ಸ್ಮರಣೆಯಲ್ಲಿ ಇದ್ದಾರೆ.
ಇಂತಹ ನಾಮಜಪ, ಸ್ಮರಣೆಗಳು ನಮಗೂ ಗುರುನಾಥರು ಕರುಣಿಸಲಿ. ಮತ್ತೆ ನಾಳೆಯೂ ನಿತ್ಯ ಸತ್ಸಂಗಕ್ಕೆ ನಮ್ಮೊಂದಿಗೆ ಇರಿ ಬಂಧುಗಳೇ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment