ಒಟ್ಟು ನೋಟಗಳು

Sunday, May 21, 2017

ಶ್ರೀ ಸದ್ಗುರುನಾಥ ಲೀಲಾಮೃತ - 2
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 73
ಯಾವ ರೂಪದಲ್ಲಿ ಬರುವೆ ಸದ್ಗುರುವೇ ? 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಮೈಸೂರಿನ ಗುರುನಾಥರ ಭಕ್ತರಾದ ಶ್ರೀನಿವಾಸ್ ಅವರಿಗೆ, ಗುರುದರ್ಶನದ ಒಂದೇ ಭೇಟಿಯಲ್ಲಿ ಹಣ, ಹೊನ್ನು, ಅಧಿಕಾರ, ದರ್ಪದಿಂದ ಏನನ್ನೂ ಗುರುಸ್ಥಾನದಲ್ಲಿ ಇದ್ದುಕೊಂಡು ಕೊಳ್ಳಲಾಗುವುದಿಲ್ಲ ಹಾಗೂ ಹಣವೆಂಬುದು ಗುರುನಾಥರಿಗೆ ಅತ್ಯಂತ ತುಚ್ಛ ವಸ್ತು ಹಾಗೂ ಭಕ್ತನ ಹೃದಯದಲ್ಲಿ ಉದ್ಭವಿಸುವ ಪವಿತ್ರವಾದ ಪ್ರೀತಿ ಮಾತ್ರ ಅತ್ಯುಚ್ಛ, ಆಪ್ಯಾಯವಾದ ವಸ್ತುವಾಗುತ್ತದೆಂಬುದು ತಿಳಿದುಹೋಯಿತಂತೆ. 

ಇವರು ಗುರುನಾಥರ ಪಾದದಡಿಯಲ್ಲಿಟ್ಟ ಒಂದು ಸಾವಿರದೊಂದು ರೂಗಳು ಶಿಷ್ಯರ ಮುಖೇನ ಜೇಬಿಗೆ ಬಂದಿತ್ತು. ಅದನ್ನವರು ಮುಂದೆ ಕೋದಂಡರಾಮನಿಗೆ ಅರ್ಪಿಸಿಬಿಟ್ಟರಂತೆ. ಸರ್ವಾಂತರ್ಯಾಮಿಯಾದ ಗುರುನಾಥರಿಗೆ ಅದು ಅರ್ಪಣವಾಗಲೆಂದು. '

ಒಂದೇ ಒಂದು ಭೇಟಿಗೆ ಮೊದಲು - ಭೇಟಿಯಾದ ನಂತರ ಆದ ಪರಿವರ್ತನೆಯಲ್ಲಿ ಅದೆಷ್ಟು ಅಜಗಜಾಂತರ? ಗುರುಕೃಪಾದೃಷ್ಟಿಯ ವಿಶೇಷವೇ ಹೀಗೆ. ಮುಂದೆ ಗುರುನಾಥರ ಬಗ್ಗೆ ತುಂಬಾ ಭಕ್ತಿಭಾವ ಬೆಳೆದು, ಒಮ್ಮೆ ತಮ್ಮಲ್ಲಿ ನಡೆಸಲಿರುವ "ಬೃಹತೀಸಹಸ್ರ ಹೋಮ" ಕ್ಕೆ ಗುರುನಾಥರನ್ನವರು ಆಹ್ವಾನಿಸಿದರಂತೆ. 

ಭಕ್ತನ ಮನದಲ್ಲಾದ ಮಹತ್ಪರಿವರ್ತನೆಯನ್ನು ಮನಗಂಡ ಗುರುನಾಥರು "ಆಯ್ತಯ್ಯಾ ಬರ್ತೀನಿ ಹೋಗು, ಮೈಸೂರಿನಲ್ಲಿ ನಿಮ್ಮ ಮನೆ ಎಲ್ಲಿದೆ? ವಿಳಾಸವೇನು?" ಎಂದೆಲ್ಲಾ ಪ್ರೀತಿಯಿಂದ ವಿಚಾರಿಸಿಕೊಂಡರಂತೆ. ಸದ್ಯ ಗುರುನಾಥರ ಈ ಪ್ರೀತಿಯ ನುಡಿಗಳು ಉರಿ ಬೇಸಿಗೆಯಲ್ಲಿ ಬಳಲುತ್ತಿರುವವರಿಗೆ ತಂಪೆರೆವ ಮಳೆಧಾರೆಯಾಯಿತು. 

ಶ್ರೀನಿವಾಸ್ ಅವರು ತಮ್ಮ ಮಿತ್ರ ಯೋಗಾನಂದ ಅವರ ಬಳಿ ಗುರುನಾಥರು ತಮ್ಮ ಮನೆಯ ಹೋಮಕ್ಕೆ ಬರುತ್ತಾರೆ ಎಂಬ ವಿಚಾರವನ್ನು ಸಂತಸದಿಂದ ಹೇಳಿಕೊಂಡಾಗ ಯೋಗಾನಂದರೆಂದರಂತೆ: "ಗುರುನಾಥರು ಮಾತು ಕೊಟ್ಟ ಮೇಲೆ ಮುಗಿದು ಹೋಯಿತು. ನಿಮ್ಮ ಮೇಲಿನ ಕೃಪೆಯಿಂದ ಅವರು ಹೇಳಿದ್ದಾರೆ. ಬಂದೇ ಬರುತ್ತಾರೆ. ಆದರೆ ಅವರು ಯಾವ ರೀತಿ, ಯಾವಾಗ, ಹೇಗೆ ಬರುತ್ತಾರೆ ಎಂಬುದನ್ನು ಅರಿಯುವುದು ಮಾತ್ರ ಕಠಿಣ. ವೃದ್ಧ, ಭಿಕ್ಷುಕನಾಗಿಯೋ, ನಾಯಿ ರೂಪದಲ್ಲೋ, ದನದ ರೂಪದಲ್ಲೋ, ಮತ್ಯಾವ ರೂಪದಲ್ಲಾದರೂ ಬರಬಹುದು. ಹಾಗಾಗಿ ನಾವು ಮಾಡಬೇಕಾದುದು ಇಷ್ಟೇ. ಅಂದು ಬರುವ ಎಲ್ಲರಿಗೂ ಪ್ರಾಣಿ, ಪಶು, ಪಕ್ಷಿಯಾದಿಯಾಗಿ ಬಂದವರೆಲ್ಲ ಇನ್ನೂ ಗುರುಸ್ವರೂಪರೆಂದು ಭಾವಿಸಿ ನಮ್ಮ ಬಳಿ ಇದ್ದುದನ್ನು ನಿರ್ವಂಚನೆಯಿಂದ ನೀಡುವುದೊಂದೇ ಮಾರ್ಗ. ಆದವರಿಗೆ ಖಂಡಿತಾ ತಲುಪುತ್ತದೆ" ಎಂದು ಸೂಕ್ಷ್ಮವಾಗಿ ತಿಳಿಸಿದರು. 

"ಮುಂದೆ ಬೃಹತೀಸಹಸ್ರ ಹೋಮ ಅದ್ಧೂರಿಯಾಗಿ ನಡೆಯಿತು. ಅಂದು ಸಂಜೆ ಸಖರಾಯಪಟ್ಟಣದಿಂದ ನಮ್ಮ ಮನೆಗೆ ಗುರುನಾಥರು ಕಳುಹಿಸಿದ 'ಸಕ್ಕರೆ' ಯ ಪ್ರಸಾದ ಬಂದು ತಲುಪಿತು. ವಿಚಿತ್ರವೆಂದರೆ ಯೋಗಾನಂದರೇ ಅದನ್ನು ತಂದು ನಮಗೆ ನೀಡುತ್ತಾ, ಬಹಳ ಬಳಲಿದ ನಮಗೆ 'ಇದನ್ನು ನೀವು ದಂಪತಿಗಳಿಬ್ಬರೂ ಸೇವಿಸಿ. ಗುರುನಾಥರು ನೀಡಿದ ಪ್ರಸಾದ' ಎಂದರು. ಹೀಗೆ ಗುರುನಾಥರ ಕರುಣೆ ಆಶೀರ್ವಾದಗಳು ಯೋಗಾನಂದರ ಮುಖಾಂತರ ನಮಗೊದಗಿತು. ಇಂದು ಯೋಗಾನಂದರು ಇಲ್ಲ. ಆದರೆ ಅವರು ಬೆಳಗಿಸಿದ ಗುರುನಾಥರ ಪ್ರೀತಿ ಎಂಬ ಹಣತೆ ನಮ್ಮ ಜೀವನದ ಅಂಧಕಾರವನ್ನು ಓಡಿಸಿ - ಸನ್ಮಾರ್ಗದಲ್ಲಿ ನಡೆಸಿದೆ" ಎಂದು ಶ್ರೀನಿವಾಸ ಧನ್ಯತಾಭಾವದಲ್ಲಿ ಸ್ಮರಿಸುತ್ತಾರೆ. 

ಮುಂದೆ ಗುರುನಾಥರ ಮಹಾ ನಿರ್ವಾಣದ 'ಬರಸಿಡಿಲಿನಂತಹ' ಸುದ್ಧಿ ಶ್ರೀನಿವಾಸ್ ಗೆ ತಲುಪಿದಾಗ - ಗುರುನಾಥರನ್ನು ಕಳೆದುಕೊಂಡ ದುಃಖದಲ್ಲಿ ಪರಿತಪಿಸುತ್ತ ಸಖರಾಯಪಟ್ಟಣ ತಲುಪುವಲ್ಲಿ ಮಧ್ಯಾನ್ಹವಾಗಿತ್ತಂತೆ. ಹತ್ತಾರು ಸಾವಿರಗಳ ಜನಸಮೂಹ. ಗುರುನಾಥರ ಮಹಾವೈಭವ ದರ್ಶನವಲ್ಲಾಗಿತ್ತು. ಮಲಗಿ ನಿದ್ರೆಯಲ್ಲಿ ಗುರುನಾಥರು ವಿಶ್ರಮಿಸಿದ್ದರೂ ಎಲ್ಲಾ ವ್ಯವಸ್ಥೆಗಳನ್ನವರು ಸುವ್ಯವಸ್ಥಿತವಾಗಿ ಮಾಡಿದಂತಿತ್ತು. 

"ಬರುವ ಭಕ್ತಾದಿಗಳಿಗೆ ಒಂದಿನಿತೂ ತೊಂದರೆಯಾಗದಂತೆ, ತಮ್ಮ ಕಾರ್ಯಭಾರ, ದೂರಗಳಿಂದ ಬರುವವರಿಗೆ - 'ಮುಖದರ್ಶನ ಸಿಗಲಿಲ್ಲ' ಎಂಬ ನೋವುಂಟಾಗದಂತೆ, ಇಲ್ಲಿಯೂ ಗುರುನಾಥರು ಸ್ವರ್ಗಾರೋಹಣವನ್ನು ತಡೆದು ಭಕ್ತರಿಗಾಗಿ ಕಾದಿದ್ದರೇನೋ? ಎಂಬಂತೆ ಎಲ್ಲ ನಡೆಯುತ್ತಿತ್ತು. ಚಿತೆಯ ಮೇಲೆ ಅಷ್ಟೆತ್ತರದಲ್ಲಿ ಜ್ಞಾನ ಸಮಾಧಿಯಲ್ಲಿ ನಿಶ್ಚಲವಾಗಿ ಮಲಗಿದ್ದ ಗುರುನಾಥರು ಒಂದೆಡೆಯಾದರೆ, ಇನ್ನೊಂದೆಡೆ ಭಾವಸಮಾಧಿಯೊಳಗಾಗಿ, ಇದು ನಿಜವೋ ಕನಸೋ ಎಂದು ಅಂತಿಮ ದರ್ಶನವನ್ನು ಮತ್ತೂ ಮತ್ತೂ ಬಯಸುತ್ತಿದ್ದ ಶಿಷ್ಯಸಾಗರ. ನನಗಂತೂ ಅಲ್ಲಿ ಮಲಗಿದ್ದ ಗುರುನಾಥರ ಮುಖ, ಎಂದಿನಂತೆ ಇರದೇ ಅಖಿಲಾಂಡ ಕೋಟಿ ಬ್ರಹ್ಮಾಂಡದ ನಾಯಕನಾದ ಶಿವನ ಮುಖದಂತೆ ಕಂಡು ಬರುತ್ತಿತ್ತು. ಅದೇಕೋ ಎಷ್ಟು ನೋಡಿದರೂ ನೋಡುತ್ತಲೇ ಇರಬೇಕು ಎನಿಸುತ್ತಿತ್ತು. ಏನನ್ನೂ ಅರ್ಥೈಸಲಾರದ ಸ್ಥಿತಿ ನನ್ನದಾಗಿತ್ತು. ಮಿದುಳು ಯೋಚಿಸಲಾರದ ಸ್ಥಿತಿ ತಲುಪಿ, ಮನ ಮೌನಕ್ಕೆ ಶರಣಾಗಿತ್ತು" ಹೀಗೆ ತಮ್ಮ ದುಃಖವನ್ನು ತೋಡಿಕೊಂಡವರು ಮೈಸೂರಿನ ಭಕ್ತರಾದ ಶ್ರೀನಿವಾಸ್. 

ನಾನು ಎಂಬ ಭಾವವಿಲ್ಲದ ಮಹಾತ್ಮರು 

ಅರಕಲಗೂಡಿನ ಹಿರಿಯರಾದ ಗುಂಡಣ್ಣ ಅವರು ಅದೊಂದು ದಿನ ಗುರುನಾಥರ ಮನೆಗೆ ಬಂದರಂತೆ. ನಮಸ್ಕರಿಸಲು ಹೋದ ಇವರನ್ನು 'ನಾವು ಕಾಯುತ್ತಿದ್ದೀವಿ, ಪಾರ್ವತಿ ಪರಮೇಶ್ವರರು ಬರುತ್ತಿದ್ದಾರೆ ಎಂದು" ಪ್ರೀತಿಯಿಂದ ಕರೆದು ಕೂರಿಸಿ ಪಾದ ಪೂಜೆ ಮಾಡಿದ ಗುರುನಾಥರ ವಿನಯಸಂಪನ್ನತೆಯನ್ನು ಇಂದೂ ವೇದಬ್ರಹ್ಮಶ್ರೀ ಗುಂಡಪ್ಪನವರು ಸ್ಮರಿಸುತ್ತಾರೆ. 'ನಿಜವಾದ ಅವಧೂತರಾಗಿ 'ನಾನು' ಎಂಬ ಯತ್ಕಿಂಚಿತ್ ಭಾವವಿಲ್ಲದೇ, ಹಣವನ್ನು ತೃಣವಾಗಿಸಿ, ಯಾರಿಂದ ಏನನ್ನೂ ಸ್ವೀಕರಿಸದೆ, ಕೊಡುವುದೊಂದೇ ಅವರಾದ ಗುರುನಾಥರನ್ನು ಮೂರು ಬಾರಿ ಹೋಗಿ ನೋಡಿದೆ' ಅದೆಷ್ಟು ಪ್ರಯತ್ನಿಸಿದರೂ ನಮಗೆ ನಮಸ್ಕರಿಸುವ ಅವಕಾಶವನ್ನೇ ನೀಡಲಿಲ್ಲ. ಬಾಲ್ಯದಿಂದಲೂ ನಾನವರನ್ನು ಬಲ್ಲವನು. ಅವರು ಅವಧೂತ ಸ್ಥಿತಿ ತಲುಪಿದಾಗಲೂ ನನ್ನನ್ನು ಏಕವಚನದಿಂದಲೇ ಪ್ರೀತಿಯಿಂದ ಮಾತನಾಡಿಸುತ್ತಿದ್ದ, ಗುರುನಾಥರ ಕರುಣೆ, ಪ್ರೀತಿಗಳನ್ನು ಆಶೀರ್ವಾದವನ್ನು ಪಡೆದ ಲಕ್ಷಾಂತರ ಭಕ್ತರೇ ಧನ್ಯರು. ಅಂತಹ ಮಹಾನುಭಾವರ ಸಾನ್ನಿಧ್ಯ ಪಡೆದ ನಮ್ಮ ಜನ್ಮ ಸಾರ್ಥಕವೆಂದೇ ನನ್ನ ಭಾವನೆ' ಎನ್ನುವ ಗುಂಡಪ್ಪನವರು ಗುರುನಾಥರನ್ನು ಸ್ಮರಿಸುತ್ತ ಮೂಕವಿಸ್ಮಿತರಾಗುತ್ತಾರೆ. 

ಪ್ರಿಯ ಗುರುಬಾಂಧವರೇ, ಯಾರು ಯಾರಿಗೆ ಏನೇನು ನೀಡಿ ಹರಸಿದ್ದಾರೆ ಗುರುನಾಥರು ಎಂಬುದನ್ನು ಅರಿಯುವುದೇ ಕಷ್ಟ. ಅನಂತವಾದ ಗುರುಚರಿತ್ರೆ, ಮತ್ತೇನೇನನ್ನು ಬಿಚ್ಚಿಡುತ್ತದೆಯೋ.... 

ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ?.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment