ಒಟ್ಟು ನೋಟಗಳು

Friday, May 12, 2017

ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)   
ನಿತ್ಯ ಸತ್ಸಂಗ - 64
ಗುರುಸೇವೆಯೇ ಗುರುತರ ಸಾಧನೆಯು 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।


।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಒಮ್ಮೆ ಒಬ್ಬ ಗುರುಭಕ್ತರು, ಅವರ ಬಳಿ ಕಾರು ಇತ್ತು. ಸಖರಾಯಪಟ್ಟಣಕ್ಕೆ ಬರುವಾಗಲೆಲ್ಲಾ ಕಾರಿನಲ್ಲಿಯೇ ಬರುತ್ತಿದ್ದರು. ಒಂದು ದಿನ ಕಾರಿನಲ್ಲಿಯೇ ಹೊರಡಬೇಕೆಂದವರು, ಮನದಲ್ಲಿ ಅದೇನು ಲೆಕ್ಕಾಚಾರ ಮಾಡಿದರೋ, ಬಸ್ಸಿನಲ್ಲಿ ಹೊರಟು ಬಂದರು. ಸಖರಾಯಪಟ್ಟಣಕ್ಕೆ ಬಂದು ಗುರುನಾಥರ ಮನೆಯ ಒಳಗೆ ಹೋಗಿ ನಮಸ್ಕರಿಸುತ್ತಿರುವಾಗ 'ಏನ್ಸಾರ್ ಕಾರಲ್ಲಿ ಬಂದ್ರೆ ಪೆಟ್ರೋಲ್ ಖರ್ಚಾಗುತ್ತೆ ಅಂತ ಬಸ್ ನಲ್ಲಿ ಬಂದ್ರಾ' ಎಂದುಬಿಟ್ಟರಂತೆ. ಇವರು ಹೇಗೆ ಬಂದರು, ಇವರ ಮನದಲ್ಲಿ ಏನಿತ್ತೆಂಬುದನ್ನೆಲ್ಲಾ ಗುರುನಾಥರು ಸುಲಭವಾಗಿ ಗುರುತಿಸುತ್ತಿದ್ದರು. 

ಎಲ್ಲಾ ನಮ್ಮ ಬಳಿ ಇದ್ದರೂ, ಕೆಲವೊಮ್ಮೆ ಅದನ್ನು ಬಳಸಲೂ, ಸುಖಪಡಲೂ ಗುರುಕೃಪೆಯು ಅನಿವಾರ್ಯವಿರುತ್ತದೆ. ಇದಕ್ಕೆ ಏನೋ 'ದುಡಿದದ್ದು ಉಣ್ಣುತ್ತೀಯೋ ಪಡೆದದ್ದನ್ನು ಉಣ್ಣುತ್ತೀಯೋ' ಎಂಬ ಗಾದೆಯನ್ನು ಹಿರಿಯರು ಮಾಡಿರುವುದು. ದುಡಿದದ್ದನ್ನು ಪಡೆಯಲು ಮತ್ತೆ ಗುರುಕೃಪೆ ಅನಿವಾರ್ಯ. 

ಅವರ ಅನೇಕ ಭಕ್ತರು ಗುರುನಾಥರನ್ನು ಕಾಣಲು ಹೇಗೆ ಹೇಗೋ ಸಖರಾಯಪಟ್ಟಣ ತಲುಪಿ, ಮುಂದೆ ವಾಪಸ್ಸು ಹೋಗಲು ಜೇಬಿನಲ್ಲಿ ಸಾಕಷ್ಟು ಹಣ ಇರದಿದ್ದಾಗ ಗುರುನಾಥರೇ ದುಡ್ಡು ಕೊಟ್ಟು ಕಲಿಸುತ್ತಿದ್ದುದೂ ಉಂಟು. ನಿನ್ನ ಜೇಬಿನಲ್ಲಿ ಇಷ್ಟೇ ಹಣ ಇದೆ ಕಣಯ್ಯಾ ಎಂದವರು ಹೇಳಿಬಿಡುತ್ತಿದ್ದರಂತೆ. 

"ಗುರುನಾಥರನ್ನು ತಮ್ಮ ಕಾರಿನಲ್ಲಿ ಕೂರಿಸಿ, ಓಡಾಡಿಸುವುದೇ ಮಹಾಭಾಗ್ಯವೆಂದು ಕಾಯುತ್ತಾ, ಅನೇಕ ಸಾರಿ ಕಾರನ್ನು ತಂದರೂ, ಗುರುನಾಥರು ಅದನ್ನು ಅಪೇಕ್ಷಿಸುತ್ತಲೇ ಇರಲಿಲ್ಲ. ಯಾವಾಗಲಾದರೂ ಕಾರು ಬಿಟ್ಟು ಹೋದಾಗ ಗುರುನಾಥರಿಗೆ ಅದರ ಅವಶ್ಯಕತೆ ಬೀಳುತ್ತಿತ್ತು. ಎಂತಹ ಅವಕಾಶ ಕಳೆದುಕೊಂಡೆವಲ್ಲ ಎಂದು ಪೇಚಾಡುವ ಸಂದರ್ಭ ಬರುತ್ತಿತ್ತು. ಕಾರು ಬೇಕೆಂದಾಗ ಕಲಿಸುತ್ತೀವಿ ಗುರುನಾಥರೇ, ಡ್ರೈವರ್ ಮಾಡಿ ಕಳಿಸಲಾ, ಎಂದರೆ "ಹೋಗಯ್ಯಾ ಡ್ರೈವರ್ ಮಾಡಿ ಕಲಿಸಲು ನಿನ್ನ ಕಾರೇ ಬೇಕಾ' ಎಂದುಬಿಡುತ್ತಿದ್ದರು. ತಮ್ಮ ಶಿಷ್ಯರನ್ನು ಆದಷ್ಟು ತಮ್ಮ ಸಾನ್ನಿಧ್ಯದ ಬಳಿ ಇಟ್ಟುಕೊಂಡು ರಕ್ಷಿಸಲು ಅನೇಕ ನಾಟಕಗಳನ್ನವರಾಡುತ್ತಿದ್ದರೋ" ಎಂದು ಒಬ್ಬ ಭಕ್ತರು ಗುರುನಾಥರ ಪ್ರೀತಿಯ ಸ್ಮರಣೆ ಮಾಡುತ್ತಾರೆ. 

ಮತ್ತೊಮ್ಮೆ ಭಕ್ತರು ಒಮ್ಮೆ ತಮ್ಮ ಬಳಿ ಇದೆ ಎಂದು ಗುರುನಾಥರಿಗೆ ಒಂದು ಕಾರು ಕಳಿಸಿದರು. ಡ್ರೈವರು ಬಂದರು. ನಾಲ್ಕು ದಿನ ಸುಮ್ಮನೆ ಅಲ್ಲಿದ್ದು, ಕುಳಿತು, ಉಂಡು ನಿದ್ದೆ ಮಾಡಿ, ಕೊನೆಗೆ ಕಾರು ವಾಪಸ್ಸು ಹೋಯಿತು. ಐದನೆಯ ದಿವಸ ಮತ್ತ್ಯಾರದೋ ಕಾರು ಬಂದಿತಂತೆ. ಗುರುನಾಥರು ಅದರಲ್ಲಿ, ಮತ್ಯಾವುದೋ ಊರಿಗೆ ಹೋದರಂತೆ. ನಾವು ಕಳಿಸಿದ್ದನ್ನೆಲ್ಲಾ ಸ್ವೀಕರಿಸಲು ಸಾಧ್ಯವೇ?  ಗುರುವಿನ ಮನಕ್ಕೆ ಅದು ಬರಬೇಕಲ್ಲ, ಗುರುಸೇವೆ ಸಿಗುವುದೂ ಅಷ್ಟು ಸುಲಭವಲ್ಲ, ಅದು ದುರ್ಲಭ. 'ಗುರುಸೇವೆಯೇ ಗುರುತರ ಸಾಧನೆಯು..... ಮನುಜನ ಪಾವನ ಮಾಡುವುದು' ಅಲ್ಲವೇ? 

ಲಾರಿ ಹತ್ತಿದ ಗುರುನಾಥರು 

ಒಮ್ಮೆ ಮೂರು ನಾಲ್ಕು ದಿನ ಗುರುನಾಥರೊಂದಿಗೆ ಇದ್ದ ಒಬ್ಬ ಭಕ್ತರಿಗೆ ಗುರುನಾಥರು, ಅಂದು ಬೆಳಗಿನ ಆರೂವರೆಗೆ ಏಳಿಸಿರಬಹುದು. 'ನಡಿಯಯ್ಯಾ ಹೋಗೋಣ' ಎಂದರಂತೆ. ಶಿಷ್ಯರು ಗುರುವಿನೊಂದಿಗೆ ಹೊರಟೇಬಿಟ್ಟರು. ಎಲ್ಲಿಗೆ? ಏನು? ಎಂದು ಕೇಳುವ ಪ್ರಶ್ನೆಯೇ ಇಲ್ಲ. ತಮ್ಮ ಜೇಬು ನೋಡಿಕೊಂಡರು. ಸ್ವಲ್ಪ ಹಣವಿತ್ತು. ಅಷ್ಟು ದುಡ್ಡು ಆ ದಿನಗಳಲ್ಲಿ ಅವರ ಬಳಿ ಇರುತ್ತಿರಲಿಲ್ಲ. ಅರಸೀಕೆರೆಯ ಬಿ.ಹೆಚ್. ರಸ್ತೆ ಇದ್ದಕ್ಕಿದ್ದಂತೆ ಬರುತ್ತಿದ್ದ ಲಾರಿ ನಿಂತಿತು. ಗುರುನಾಥರು 'ನೋಡಯ್ಯಾ ಯಾಕೋ ಏನೋ ಅವನೇ ನಿಲ್ಲಿಸಿದ್ದಾನೆ. ಹತ್ತಯ್ಯಾ ಲಾರೀನ' ಎಂದರಂತೆ. ಗುರುಶಿಷ್ಯರಿಬ್ಬರೂ ಲಾರಿ ಹತ್ತಿದರು. ಬಾಣಾವರದಲ್ಲಿ ಇಳಿದರು. ಎಂತಹ ಮೇರು ಪುರುಷರಾದ ಗುರುನಾಥರು ! ಕೇಳಿದ್ದರೆ  ಕಾರುಗಳ  ಸಾಲೇ ನಿಲ್ಲುತ್ತಿತ್ತು. ಆದರೆ ಗುರುನಾಥರ ಸರಳಾತಿಸರಳತೆ ಎಂದರೆ ಇದೇ ಇರಬೇಕು. ಎಲ್ಲ ಮೀರಿ ಅವಧೂತಾವಸ್ಥೆಯಲ್ಲಿರುವವರಿಗೆ ಕಾರೇನು? ಲಾರಿ ಏನು? ಸ್ಕೂಟರೇನು? ವಿಮಾನವೇನು? ಎಲ್ಲಾ ಒಂದೇ ಆಗಿರುತ್ತಿತ್ತು. 

ಬಾಣಾವರದಲ್ಲಿ ಇಳಿದು ಈ ಗುರುಶಿಷ್ಯರು ಪಾದಯಾತ್ರೆಗೈದರು. ಅದೆಲ್ಲಿಗೆ ಕರೆದೊಯ್ಯುತ್ತಿದ್ದರೆಂಬುದು ಶಿಷ್ಯರಿಗರಿಯದು. ಗುರುವಿನ ಹಿಂದೆ ನಡೆಯುವುದೊಂದೇ. ಯಾವುದೋ ಕೆರೆಯ ದಡವಿಳಿದು, ಕಲ್ಲು ಮುಳ್ಳುಗಳನ್ನು ತುಳಿಯುತ್ತ ನಡೆದರು. ಗುರುನಾಥರೂ ಬರಿಗಾಳು, ಇನ್ನು ಶಿಷ್ಯ ಚಪ್ಪಲಿ ಧರಿಸಬಹುದೇ?! ಅಂತೂ ಹುಡುಕಾಡುತ್ತಾ ಒಂದು ನೆಲೆಯನ್ನು ತಲುಪಿದಾಗ ಗುರುನಾಥರೆಂದರಂತೆ 'ಇದೇ  ಕಣಯ್ಯಾ ಕೃಷ್ಣಯೋಗಿಂದ್ರರೆಂಬ ಮಹಾ ಯತಿಗಳ ಸಮಾಧಿ. ನಾಲ್ಕು ನೂರು ವರ್ಷಗಳಾಗಿದೆಯಯ್ಯಾ - ಜೀವಂತ ಸಮಾಧಿ ಕಣಯ್ಯಾ ಮಹಾ ತಪಸ್ವಿಗಳಿವರು'. 

ಆ ಶಿಷ್ಯರ ಪುಣ್ಯ ಅದೆಷ್ಟಿರಬಹುದು? ಕಲ್ಲುಮುಳ್ಳುಗಳೆಂದು ಹೆದರದೇ, ಲಾರಿ ಹತ್ತಬೇಕಲ್ಲ ಎಂದು ಅಳುಕದೇ, ನಡೆದು ಹೋಗಬೇಕಲ್ಲಾ ಎಂದು ಅಂಜದೇ , ಗುರುವಿನ ಹಿಂದೆ ಭಕ್ತಿ, ಸಮರ್ಪಣೆಯಿಂದ, ವಿಚಾರ ಮಾಡದೇ ಹೊರಟು ನಿಂತಾಗ, ಸಿಕ್ಕಿದ್ದು ಇಂತಹ ಮಹಾತ್ಮರ ದರ್ಶನ. ಗುರುನಾಥರ ಶಿಷ್ಯ ಕೋಟಿಯನ್ನು ಗುರುನಾಥರು ಸಿದ್ಧಪಡಿಸಿರುವುದೇ ಹೀಗೆ. ಗುರುವಿಗೆ ಚಕಾರವೆತ್ತದೆ, ಶಿರಸಾವಹಿಸಿ, ಅವರಂದಂತೆ ನಡೆಯುವುದೊಂದೇ ಅಚಲ ನಿರ್ಧಾರ. 

ಪ್ರಿಯ ಗುರುಬಾಂಧವ ಓದುಗ ಮಿತ್ರರೇ, 'ನಂಬಿ ಕೆಟ್ಟವರಿಲ್ಲವೋ ಗುರುನಾಥರ' ಎಂಬ ನುಡಿಯನ್ನು ಸದಾ ಸ್ಮರಿಸೋಣ. ನಾಳೆಯೂ ಮತ್ತೇನೋ ಒಳ್ಳೆಯ ಸತ್ಕಥೆಯನ್ನು ನಮಗೆ ಕರುಣಿಸುತ್ತಾರೆಂದು ನಂಬಿ. ನಾಳೆಯೂ ನಿತ್ಯ ಸತ್ಸಂಗಕ್ಕೆ ಬನ್ನಿ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।

No comments:

Post a Comment