ಒಟ್ಟು ನೋಟಗಳು

Thursday, May 4, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2  

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 
  ನಿತ್ಯ ಸತ್ಸಂಗ  - 
56

 ತಂದೆ ತಾಯಿಯರನ್ನು ಗೌರವಿಸಿ, ಆದರಿಸಿ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


'ತಂದೆ ತಾಯಿಗಳ ಸೇವೆಯನ್ನು ಅವರಿದ್ದಾಗ ಪ್ರೀತಿಯಿಂದ ಮಾಡಿ.. ಎಂದೂ ಅವರನ್ನು ನೋಯಿಸಬೇಡಿ. ಅವರು ಹೋದ ಮೇಲೆ ಅವರ ಹೆಸರಿನಲ್ಲಿ ಶ್ರಾದ್ಧ ಮಾಡಿ, ನಮಗಿಷ್ಟ ಬಂದ ತಿಂಡಿಗಳನ್ನೆಲ್ಲಾ ಮಾಡಿಕೊಂಡು ತಿನ್ನೋದು, ವಡೆ ಮಾಡಿಕೊಂಡು ಸಾರಿನಲ್ಲಿ, ಚಟ್ನಿಯಲ್ಲಿ ತಿನ್ನುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ' ಎನ್ನುವ ಮಾತನ್ನು ಗುರುನಾಥರು ಪದೇ ಪದೇ ಹೇಳುತ್ತಿದ್ದರು - ಎಂದು ಹಾಸನದ ಅವರ ಭಕ್ತರೊಬ್ಬರು ಸ್ಮರಿಸುತ್ತಾರೆ. ಪಿತೃಕಾರ್ಯದ ನಿಜವಾದ ಅರ್ಥ ಎಂದರೆ ಅವರಿದ್ದಾಗ ಮಾಡುವ ಸೇವೆ. ದಿನನಿತ್ಯ ಭಕ್ತಿಭಾವದಿಂದ ಅವರಿಗೆ ನಮಿಸಿ, ಅವರಿಗೆ ದುಃಖವಾಗದಂತೆ ವರ್ತಿಸುವುದು. 

ಅಂದು ಅದೇಕೋ ತುಂಬಾ ಬೇಜಾರಾಗುತ್ತಿತ್ತು ಆ ಭಕ್ತರಿಗೆ. ಗುರುನಾಥರ ದರ್ಶನ ಒಂದೇ ಇದಕ್ಕೆ ಮದ್ದು ಎಂಬ ಭಾವನೆ ಹಾಸನದ ಆ ಭಕ್ತರ ಮನದಲ್ಲಿ ಮೂಡಿತ್ತಂತೆ. ಆದರೆ ಇತರ ಕಾರ್ಯಭಾರಗಳ ಒತ್ತಡ ಅವರನ್ನು ಊರು ಬಿಡದಂತೆ ಮಾಡಿತ್ತಂತೆ. ಹನ್ನೆರಡು ಗಂಟೆಯ ಹೊತ್ತಿಗಂತೂ ಇವರ ತಳಮಳ ಅಧಿಕವಾಗಿತ್ತು. ಗುರುನಾಥರೂ ಸಹಾ ಊರಿನಲ್ಲಿ ಇರಲಿಲ್ಲವಂತೆ. ಎಲ್ಲಿಗೋ ಹೋಗಿದ್ದಾರೆಂಬ ವಿಚಾರ ತಿಳಿದಿತ್ತು. 

ಮಧ್ಯಾನ್ಹದ ಎರಡು ಗಂಟೆಗೆ ಇವರ ಮನೆಯ ಫೋನು ರಿಂಗಣಿಸಿತು. ಕೂಡಲೇ ಬಿಟ್ಟ ಕೆಲಸವನ್ನೆಲ್ಲಾ ಬಿಟ್ಟು ಇವರು ಮನೆಯಿಂದ ಹೊರಟರು. ಫೋನಿನಲ್ಲಿ ತಿಳಿಸಿದ ಹಾಸನದ ಮತ್ತೊಬ್ಬ ಭಕ್ತರ ಮನೆಗೆ ಬಂದಾಗ ಅಲ್ಲಿ ಗುರುನಾಥರು ನಗುನಗುತ್ತಾ ದರ್ಶನವಿತ್ತರು. 'ನೋಡು ಇಲ್ಲಿ ನೀನು ಹನ್ನೆರಡು ಗಂಟೆಗೆ ತೀವ್ರ ಬೇಜಾರು ಅನುಭವಿಸುತ್ತಿದ್ದೆ. ನಾನಾಗ ಬೆಂಗಳೂರು ಬಿಟ್ಟೆ. ಇದೀಗ ಇಲ್ಲಿ ಬಂದಿದ್ದೇನೆ' ಎಂದು ನುಡಿದಾಗ ಗುರುನಾಥರ ಸಾನ್ನಿಧ್ಯ ಅವರ ಮನದ ದುಗುಡಗಳನ್ನೆಲ್ಲಾ ಓಡಿಸಿತ್ತು. ಭಕ್ತರ ಮನದ ಭಾವವನ್ನು, ಅವರ ನೋವನ್ನು ಅರಿತ ಗುರುನಾಥರು ದರ್ಶನ ನೀಡುತ್ತಿದ್ದ ಪರಿ ಇದು. 

ಒಮ್ಮೆ ಚಿಕ್ಕಮಗಳೂರಿನ ಭಕ್ತರೊಬ್ಬರು ಸನಿಹದ ಸಖರಾಯಪಟ್ಟಣಕ್ಕೂ ಹೋಗಲಾಗದಂತಹ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರು. ಆದರೆ ಗುರುನಾಥರನ್ನು ಕಾಣದೆ ಇರಲಾಗಲಿಲ್ಲ. ಯಾರೋ ಮಿತ್ರರ ಅಂಗಡಿಯಲ್ಲಿ ಚಾರ್ಜಿಗೆ ಆಗುವಷ್ಟು ಸಾಲ ದೊರೆಯುತ್ತಿತ್ತು. ಅಂದು ಅಲ್ಲಿಗೆ ಹೋದಾಗ, ಆ ಮಿತ್ರರೂ ಅಂಗಡಿಯಲ್ಲಿ ಇರಲಿಲ್ಲ. 'ಗುರುನಾಥ ಇದೇನು ನಿನ್ನಾಟ' ಎಂದು ಆರ್ತರಾಗಿ ಒಂದು ಕ್ಷಣ ಕಣ್ಣುಮುಚ್ಚಿ ಬೇಡಿಕೊಂಡು ಕಣ್ಣು ತೆರೆದರೆ, ರಸ್ತೆಯಲ್ಲಿ ಗುರುನಾಥರ ದರ್ಶನವಾಗಿತ್ತು. 'ನಿನ್ನ ಮನೆಗೇ ಬರ್ತೀನಿ ನಡಿಯಯ್ಯಾ' ಎಂದು ಬಂದುಬಿಟ್ಟರಂತೆ. ಇಂತಹ ಸಹೃದಯ ತಂದೆ - ಗುರುನಾಥರಾಗಿದ್ದರು, ಅವರ ಭಕ್ತರಿಗೆ. 

ಗುರುನಾಥರು ಪ್ರತಿಯೊಬ್ಬರನ್ನೂ ಅವರಿರುವ ಸ್ಥಾನಕ್ಕಿಂತ ಮೇಲಿನ ಸ್ಥಾನದಲ್ಲಿಟ್ಟೇ ಮಾತನಾಡಿಸುವುದು. ನೊಂದ ಆ ಹಾಸನದ ಭಕ್ತರನ್ನು ಕಂಡು 'ಬರಬೇಕು ವಿಪ್ರರು' ಎಂದು ಗೌರವದಿಂದ ನಗೆಯಾಡುತ್ತಾ ಶಿಷ್ಯರ ಮನದ ದುಗುಡವರಿತಂತೆ 'ನಾನು ಹನ್ನೆರಡು ಗಂಟೆಗೇ ಬೆಂಗಳೂರಿನಿಂದ ಹೊರಟೆ' ಎಂದಿದ್ದರಂತೆ. ಎಂದರೆ ತನ್ನ ಭಕ್ತರ ಮನದಳ್ಳಿ ಉಂಟಾದ ನೋವು 'ತಮಗರಿವಿದೆ' ಎಂಬುದು ಗುರುನಾಥರ ಮಾತಿನ ಗೂಢಾರ್ಥವಾಗಿತ್ತು. 'ನಾವೇನಂತಹ ವಿಶೇಷ ಪ್ರಾಜ್ಞರಲ್ಲ ಗುರುನಾಥರೇ.... ಅವೆಲ್ಲಾ ತಮಗೆ. ನಾವು ಸಾಮಾನ್ಯರು' ಎಂದು ಇವರು ವಿನೀತರಾಗಿ ನುಡಿದರಂತೆ. 

ಗುರುನಾಥರೊಂದಿಗೆ ಅನೇಕ ದಿನಗಳ ಒಡನಾಟವಿರುವ ಈ ಭಕ್ತರನ್ನು ಗುರುನಾಥರ ಬಗ್ಗೆ ನಿಮ್ಮ ಅನಿಸಿಕೆ ಏನು? ಎಂದು ಪ್ರಶ್ನಿಸಿದಾಗ ಅವರ ಅನಿಸಿಕೆ 'ಗುರುನಾಥರ ಬಗ್ಗೆ ಯಾರೇನು ಹೇಳಲು ಸಾಧ್ಯ? ಸಾಕ್ಷಾತ್ ಅವಧೂತರಾದ ಅವರು ಯಾರು ಏನು ಬಯಸಿ ಅವರ ಬಳಿ ಹೋಗುವರೋ ಅವರಿಗವರ ಮಾರ್ಗದಲ್ಲೇ ಸನ್ಮಾರ್ಗಕ್ಕೆ ಹಚ್ಚುತ್ತಿದ್ದರು. ಕರ್ಮಕಾಂಡದಲ್ಲಿ ಭಾವವಿರುವವರಿಗೆ ಅದರಲ್ಲೇ - ಕೇವಲ ನಿಶ್ಚಲ ಭಕ್ತಿ ಭಾವದಲ್ಲಿ 'ನೀನೆ ಎಲ್ಲಾ ತಂದೆ' ಎಂದು ಪರಿಪೂರ್ಣ ನಂಬಿದವರಿಗೆ ಅತ್ಯಂತ ಸರಳ ಮಾರ್ಗದ ಭಕ್ತಿ ಮಾರ್ಗವನ್ನೇ ಧಾರೆ ಎರೆದರು. ಯಾರು ಯಾವ ಭಾವದಲ್ಲಿ ಅವರ ಬಳಿ ಹೋಗುವರೋ ಅವರಿಗೆ, ಪರಿಶುಭ್ರ ಕನ್ನಡಿಯ ಮುಂದೆ ನಿಂತಂತೆ ಅನಿಸುತ್ತಿತ್ತು. ಗುರುನಾಥರನ್ನು ಅರಿಯುವುದು ಅಸಾಧ್ಯ ಎನ್ನುತ್ತಾರೆ ಅವರು. 

ಗುರುನಾಥರಿಂದ ಬೈಸಿಕೊಂಡವರಿದ್ದಾರೆ. ಆದರೆ ಅದು ನಮ್ಮ ಜನುಮ ಜನುಮಗಳ ಪಾಪ ತೊಳೆಯುವ ಗುರುಲೀಲೆಯಲ್ಲದೆ ಮತ್ತೇನಲ್ಲವೆನ್ನುವುದು ಭಕ್ತರ ಅನಿಸಿಕೆ. ಗುರುನಾಥರು ಕರ್ಮತತ್ವ ಪ್ರತಿಪಾದನೆ ಮಾಡುವವರು. ಹಾಗಾಗಿ, ನಿರಂತರ ಪರಿಶ್ರಮದೊಂದಿಗೆ ಮೈಮುರಿದು ದುಡಿಯುವುದನ್ನವರ ಶಿಷ್ಯರಿಗೆ ಒದಗಿಸಿಕೊಡುತ್ತಿದ್ದರು. ಕಾಲ ಒದಗಿ ಬಂದಾಗ ಅದರ ಸದುಪಯೋಗ ಮಾಡಿಕೊಳ್ಳಲು ಶಿಷ್ಯರಿಗೆ ಪರೋಕ್ಷವಾಗಿ ತಿಳಿಸುತ್ತಿದ್ದರು. 'ಯಾವುದಕ್ಕೂ ಸಿದ್ಧತೆ ಮಾಡಿಕೊಂಡಿರಬೇಡವಯ್ಯಾ... ಏನು ಬಂದರೂ ಎದುರಿಸಲು ಸಿದ್ಧನಾಗು' ಎನ್ನುವ ಗುರುನಾಥರ ಮತ್ತೊಂದು ನುಡಿಯನ್ನು ಸ್ಮರಿಸುತ್ತಾ, ಭಕ್ತರು ಯಾವುದಕ್ಕೂ ಹೆದರಬೇಕಿಲ್ಲ. ಭಕ್ತಿಯ ಶಕ್ತಿ ಅವರಲ್ಲಿ ಎಲ್ಲವನ್ನೂ ಎದುರಿಸುವ ಸಾಮರ್ಥ್ಯವನ್ನು ತುಂಬಿರುತ್ತದೆ ಎಂಬ ಅರಿವು ಮೂಡಿಸುತ್ತ 'ನಿನ್ನ ಬೆನ್ನ ಹಿಂದೆ ನಾನಿದ್ದೀನಿ' ಎಂಬ ಭಾವವನ್ನು ಭಕ್ತರಲ್ಲಿ ಅವರು ಬಿತ್ತುತ್ತಿದ್ದರೇನೋ - ಎಂದು ಭಾವಿಸುತ್ತಾರೆ ಆ ಭಕ್ತರು. 

ಪ್ರಿಯ ಗುರುಬಾಂಧವರೇ, ನಾಳಿನ ನಿತ್ಯ ಸತ್ಸಂಗದಲ್ಲಿ ತಮ್ಮ ಅನುಭವವನ್ನು ಮತ್ಯಾವ ಶಿಷ್ಯರು ಹಂಚಿಕೊಳ್ಳುತ್ತಾರೋ ! ಖಂಡಿತಾ ನಾಳೆಯೂ ನಮ್ಮೊಂದಿಗಿರಿ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment