ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 75
ಅನಂತ ಬ್ರಹ್ಮಾಂಡದಲ್ಲಿ ಹರಿಬಿಟ್ಟ ಗುರುನಾಥರ ನುಡಿಗಳು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವೇ? ಎಂಬುದಕ್ಕೆ 'ನಾನು ಗುರುವನ್ನು ಅರ್ಥ ಮಾಡಿಕೊಂಡಿದ್ದೇನೆ' ಎಂದು ಎದೆ ತಟ್ಟಿ ಹೇಳುವ ಧೈರ್ಯಶಾಲಿಗಳು ಅಪರೂಪ. ಹಾಗಾದರೆ, ಗುರುವನ್ನು ತಿಳಿಯುವುದೆಂತು? ಎಂಬ ಪ್ರಶ್ನೆಗೆ - ನಿರಂತರ ಗುರುವಿನ ಸೇವೆ, ಸಹವಾಸ, ಗುರು ನುಡಿದಂತೆ ನಡೆಯುತ್ತಾ, ತನ್ನದೆಲ್ಲವನ್ನೂ ಗುರುವಿಗೆ ಅರ್ಪಿಸಿ ವಿನೀತರಾದಾಗ, ಅದಕ್ಕೆ ಗುರುಕೃಪೆ, ಕರುಣೆಯೂ ಸೇರಿದಾಗ, ನಿಜವಾದ ಗುರುವಿನ ಅರ್ಥ ನಮಗಾದೀತು ಎಂದು ಗುರುನಾಥರ ಅನನ್ಯ ಸೇವೆ, ಸಾನ್ನಿಧ್ಯ, ಕೃಪೆ ಪಡೆದ ಅನುಭವಿಗಳೊಬ್ಬರು ಅಭಿಪ್ರಾಯ ಪಡುತ್ತಾರೆ.
ಹಾಗೆ ನೋಡಿದರೆ ಧರ್ಮಾರ್ಥಕಾಮ ಮೋಕ್ಷಗಳನ್ನರಸಿ ಗುರುನಾಥರ ಬಳಿ ಬರುತ್ತಿದ್ದ ಲಕ್ಷಾಂತರ ಭಕ್ತಗಣಕ್ಕೆ ಗುರುನಾಥರು 'ಆ ಅವಿನಾಶೀ ಆನಂದವನ್ನು ಪಡೆಯುವುದು ನಿಮ್ಮ ಗುರಿಯಾಗಲಿ ಕಣಯ್ಯಾ. ಮೂಲತಃ ನಿಮಗೇನು ಬೇಕು ಎನ್ನುವುದೇ ನಿಮಗೆ ಗೊತ್ತಿಲ್ಲವಯ್ಯ. ನಿಮಗೆ ನಾನು ಸುಲಭವಾಗಿ ಸಿಕ್ಕಿಬಿಟ್ಟಿದ್ದೀನಿ. ಹಾಗಾಗಿ ನನ್ನ ಬೆಲೆಯನ್ನು ಅರಿಯುವುದಕ್ಕೆ ಅನೇಕರಿಗೆ ಆಗಿಲ್ಲ' ಎನ್ನುತ್ತ, ಅನೇಕ ಸಾರಿ ತಮ್ಮ ಶಿಷ್ಯರ ಗುರಿ ಏನಾಗಬೇಕು, ಬೇಡಿಕೆ ಯಾವುದಾಗಬೇಕು? ಅವರ ಜೀವನ ಹೇಗೆ ಸಾಗಬೇಕು ಎಂಬುದನ್ನು ನಿರ್ದೇಶಿಸುತ್ತಿದ್ದರಂತೆ, ವಾತ್ಸಲ್ಯದಿಂದ.
ಅತ್ಯಂತ ಸರಳ ಶುದ್ಧ ಪದಗಳಲ್ಲಿ ತತ್ವಾರ್ಥ ಚಿಂತನೆಯನ್ನು ಗುರುನಾಥರು ಅನೇಕ ಸಾರಿ ತಮ್ಮ ಶಿಷ್ಯರಿಗೋಸ್ಕರ ನಡೆಸಿದ್ದಿದೆಯಂತೆ.
'ದೇವರು ಎನ್ನುವುದು ನಾವೇ ಮಾಡಿಕೊಂಡ ಒಂದು ಭಾವನೆ ಕಣಯ್ಯಾ. ಆನಂದವೇ ದೇವರು. ಆನಂದವನ್ನು ಅನುಭವಿಸಿ, ಅದರಲ್ಲಿ ಲೀನವಾಗಿಬಿಡುವುದೇ ದೇವರ ಸಾನ್ನಿಧ್ಯದಲ್ಲಿ ಇರುವುದು. ನಮಗಾಗಿ ಮಾತ್ರವಲ್ಲದೇ ಇತರರನ್ನೂ ಆನಂದಪಡಿಸುವಂತಹುದೇ ದೇವರ ಪೂಜೆ. ದೇವರ ಪೂಜೆ ಎಂದರೆ ಇದ್ದಬದ್ದ ಹೂವನ್ನೆಲ್ಲಾ ತರಿದು ತಂದು, ಪ್ರಕೃತಿಯನ್ನು ವಿರೂಪಗೊಳಿಸುವುದಲ್ಲ. ಬಿದ್ದ ಹೂವುಗಳನ್ನಾಯ್ದು, ಹಿತಮಿತ ಮಂತ್ರಗಳೊಂದಿಗೆ, ಹೃದಯ ತುಂಬಿದ ನಮನ - ಇವಿಷ್ಟೇ ಬೇಕಾದುದು' - ಎಂದು ಗುರುನಾಥರು ಪರಮಾತ್ಮನ ಪೂಜೆಯ ಆಡಂಬರವನ್ನು ಸರಳೀಕರಿಸಿ, ಸುಲಭಗೊಳಿಸಿದ್ದರು. ಅದೆಷ್ಟೋ ಸಾರಿ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸುವಲ್ಲಿ ಇದ್ದಬದ್ದ ಭಕ್ತಿಯೆಲ್ಲಾ ಖಾಲಿಯಾಗಿ 'ಪೂಜೆ ತೋರಿಕೆಯ ಆಚರಣೆಯಾಗುವುದು ಗುರುನಾಥರ ಸರಳ ಮಾರ್ಗವನ್ನು ಅನುಸರಿಸಿದಾಗ - ಹೊರೆಯಾಗದೇನೋ?, ದೂರವಾಗುತ್ತದೇನೋ ಕರ್ಮಾಡಂಬರಕ್ಕಿಂತ ಮನಶುದ್ಧಿಯ ಭಕ್ತಿಯೇ ಪರಮಾತ್ಮನಿಗೆ ಪ್ರಿಯವಾದುದಲ್ಲವೇ?'
'ಸ್ನಾನ ಮಾಡಲಾಗಲಿಲ್ಲ. ಮಡಿ ಬಟ್ಟೆಯುಡಲಾಗಲಿಲ್ಲವೆಂದು ತಲೆಕೆಡಿಸಿಕೊಳ್ಳಬೇಡಯ್ಯಾ. ಅದೆಲ್ಲಾ ಬಾಹ್ಯ ದೇಹಕ್ಕೆ ಸಂಬಂಧಿಸಿದ್ದು. ನಿನ್ನ ಮನಸ್ಸನ್ನು ಶುದ್ಧಗೊಳಿಸಿಕೋ, ಮನಸ್ಸನ್ನು ಉಲ್ಲಾಸಗೊಳಿಸಿಕೋ. ನಿನ್ನ ಮನಸ್ಸಿನಲ್ಲಿ ಎಲ್ಲರೂ ನಮ್ಮವರು, ಒಳ್ಳೆಯವರು ಎಂಬ ಭಾವ ಬೆಳೆದರೆ ಪೂಜೆ ಮಾಡುವ ಅರ್ಹತೆ ಬಂದಂತೆ. ಆ ನಿರಾಕಾರಿ ಪರಬ್ರಹ್ಮನನ್ನು ಕಾಣುತ್ತ, ನಿನ್ನ ಮನವನ್ನು ತೆರೆದಿಟ್ಟ ಪುಸಕ್ತವಾಗಿಸಿಕೊಂಡು ಒಮ್ಮೆ ಓದಿ ಪರಾಮರ್ಶಿಸಿ, ಸಲ್ಲದ್ದು ಕಂಡುಬಂದಲ್ಲಿ ಮತ್ತೆ ಅದು ನಿನ್ನ ಜೀವಮಾನದಲ್ಲಿ ಮರುಕಳಿಸದಂತೆ ಇರುವುದೇ ನಿಜವಾದ ಮಡಿ - ಸುಮ್ಮನೆ ನೀರಿನಲ್ಲಿ ಜಾಲಾಡಿದ, ಒಣಗಿದ ಬಟ್ಟೆಯನ್ನು ಧರಿಸುವುದು ಮಡಿಯಲ್ಲ' ಎಂದೆನ್ನುತ್ತಿದ್ದರಂತೆ. ಇದನ್ನೇ ತಮಾಷೆಯಾಗಿ 'ಸ್ನಾನ ಎಂದರೆ ಬಚ್ಚಲಿಗೆ ನೀರು ಹೊಯ್ಯುವುದು' ಎಂದು ಅನೇಕ ಸಾರಿ ಗುರುನಾಥರು ಟೀಕೆ ಮಾಡಿ ಹೇಳಿದ್ದಿದೆಯಂತೆ.
ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವುದು ಕಷ್ಟ. ಅಲ್ಲದೆ ನಿರ್ಧಾರ ಮಾಡುವವರೂ ನಾವಲ್ಲ - ಎಂಬ ತಿಳಿವಳಿಕೆ ಪ್ರತಿಯೊಬ್ಬನಿಗೂ ಇರಬೇಕು ಎನ್ನುತ್ತಿದ್ದರಂತೆ. ಪ್ರತಿಯೊಬ್ಬ ಜೀವಿಯೂ ಆ ಸೃಷ್ಟಿಕರ್ತನ ಒಂದು ರಚನೆ - ಎಲ್ಲವೂ ಪೂರ್ಣತೆಯನ್ನು ಪಡೆಯುವತ್ತ, ಒಂದು ರೂಪದಿಂದ ತಾನು ಬಂದ ಕೇಂದ್ರದತ್ತ ಸಾಗುವ ಪ್ರಯತ್ನವನ್ನೇ ಮಾಡುತ್ತಿರುತ್ತವೆ. ಕೆಲವರು ಬೇಗ, ಕೆಲವರು ನಂತರ, ಮತ್ತೆ ಕೆಲವರು ಬಹಳ ತಡವಾಗಿ ಈ ಪ್ರಯತ್ನದಲ್ಲಿ ತೊಡಗಬಹುದಷ್ಟೆ. ಎಲ್ಲರ ಉದ್ದೇಶ ಒಂದೇ ಆಗಿರುತ್ತದೆ. ಆದ್ದರಿಂದ ಯಾರೂ ಒಳ್ಳೆಯವರಲ್ಲ, ಯಾರೂ ಕೆಟ್ಟವರಲ್ಲ. ಒಂದು ವಸ್ತು, ವ್ಯಕ್ತಿಯನ್ನು ನಾವು ನೋಡುವ ದೃಷ್ಟಿಯು ಉತ್ತಮವಾದುದೇ ಆಗಿದ್ದರೆ ಒಳ್ಳೆಯದೇ ಅಲ್ಲಿ ಕಾಣುತ್ತದೆ. ಆ ಒಳ್ಳೆಯದನ್ನು ಎಲ್ಲದರಲ್ಲಿ ಕಾಣುವ ಪ್ರಯತ್ನ ಮಾತ್ರವೇ ನಾವು ಮಾಡಬೇಕು ಎನ್ನುತ್ತಿದ್ದರಂತೆ.
ಗುರುನಾಥರ ಈ ವಿಚಾರಗಳನ್ನು ನೋಡಿದಾಗ, ನಮಗೆ ರಾಮಕೃಷ್ಣ ಪರಮಹಂಸರ ಮಡದಿ ಶಾರದಾದೇವಿಯವರ ಮಾತುಗಳು ನೆನಪಾಗದಿರದು. ಆ ತಾಯಿಯು ಪರಮಾತ್ಮನಲ್ಲಿ ಬೇಡುತ್ತಿದ್ದ ರೀತಿ ಎಂದರೆ 'ಹೇ ಭಗವಂತಾ, ನನಗೆ ಯಾರ ದೋಷವೂ ಕಾಣದಿರಲಿ. ಎಲ್ಲರಲ್ಲಿರುವ ಒಳ್ಳೆಯ ಗುಣಗಳು ಮಾತ್ರ ಕಂಡುಬರಲಿ. ಅದನ್ನು ನನ್ನಲ್ಲಿ ಅಳವಡಿಸಿಕೊಳ್ಳುವ ಚೈತನ್ಯವನ್ನು ದಯಪಾಲಿಸು ಹೇ ಕರುಣಾಮಯ ತಂದೆ' ಎಂದು.
ಪ್ರಿಯ ಗುರುಬಾಂಧವರೇ, ಗುರುನಾಥರ ಈ ನುಡಿ ಮುತ್ತುಗಳು, ಅವರು ತಮ್ಮ ಭಕ್ತರಿಗಾಗಿ ಈ ಅನಂತ ಬ್ರಹ್ಮಾಂಡದಲ್ಲಿ ತೇಲಿಬಿಟ್ಟಂತಹವು ಇಂದೂ, ಹೀಗೆ ಗುರುಭಕ್ತರಿಗೆಲ್ಲಾ ದೊರೆಯುತ್ತಿರುವುದೂ ಒಂದು ಗುರುನಾಥರ ಲೀಲಾ ವಿನೋದವೇ. ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹರಿದು ಬರುವಲ್ಲಿ ಏನಾದರೂ ರೂಪಾಂತರವಾಗಿದ್ದರೂ ಸತ್ಯ-ಸತ್ಯವೇ. ಅದನ್ನು ಮಾತ್ರ ಗ್ರಹಿಸೋಣ.
ನಿತ್ಯ ಸತ್ಸಂಗವನ್ನು ಸಫಲವಾಗಿ ಉಪಯೋಗಿಸಿಕೊಳ್ಳೋಣ. ನಾಳೆಯೂ ನಮ್ಮೊಂದಿಗೆ ಇದ್ದು ಮತ್ತೇನು ದೊರೆಯುವುದೋ ಹಂಚಿಕೊಂಡು ಸುಖಿಸೋಣ. ಬರುವಿರಲ್ಲಾ ಮಿತ್ರರೇ.... ?
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment