ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 1
ಡಮರುಗಧಾರಿ ಶಿವನೋ ಶ್ರೀ ಗುರುವೋ ?
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಪ್ರಿಯ ನಿತ್ಯ ಸತ್ಸಂಗದ ಬಂಧುಗಳೇ ... ನಿತ್ಯ ಸತ್ಸಂಗದ ಒಂದು ಭಾಗ ಪುಸ್ತಕ ರೂಪವಾಗಿ 'ಸದ್ಗುರುನಾಥ ಲೀಲಾಮೃತ ಭಾಗ - 2, ನಿತ್ಯ ಸತ್ಸಂಗ" ವೆಂಬ ಹೆಸರಿನಲ್ಲಿ ಈಗಾಗಲೇ ಹೊರಬಂದಿದೆ. ಗುರುನಾಥರು ವಿರಾಟ್ ರೂಪವನ್ನು ತೋರಿಸಿದ ಘಟನೆಯೊಂದಿಗೆ ಆ ಪುಸ್ತಕ ಸಂಪನ್ನವಾದಾಗ, ಸರಕು ಮುಗಿಯಿತು, ನನಗವರು ಕೊಟ್ಟಿದ್ದು ಇಷ್ಟೇ ಏನೋ ಅಂತ ಚಿಂತಿಸುತ್ತಿರುವಾಗ - 'ತೊಗಳಯ್ಯಾ ಅದೆಷ್ಟು ಬರೀತಿಯೋ ನಾನೂ ನೋಡ್ತೀನಿ' , ಎನ್ನುವಂತೆ ಗುರುನಾಥರು ಡಮರುಗಧಾರಿ ಶಿವಸ್ವರೂಪಿಯಾಗಿ ತಮ್ಮ ಭಕ್ತರೊಬ್ಬರಿಗೆ ದರ್ಶನ ನೀಡಿದ ಸ್ವಾರಸ್ಯಕರ ಘಟನೆಯಿಂದ ಅವರ ಎರಡನೆಯ ಪುಸ್ತಕಕ್ಕೆ ನಿಂತು ಬಿಡುತ್ತಿದ್ದ ನಿತ್ಯ ಸತ್ಸಂಗಕ್ಕೆ ಮತ್ತೆ ಚಾಲನೆ ನೀಡಿದ್ದಾರೆ. ತಮ್ಮ ಅಂತರಂಗದ ಅನುಭವವನ್ನು ನಿತ್ಯ ಸತ್ಸಂಗಕ್ಕಾಗಿ ನಾನು ಬೇಡಿದಾಗ, ನಿಮಗಾಗಿ - ಆ ಬೆಂಗಳೂರಿನ ಭಕ್ತರು ಧಾರೆ ಎರೆದ ಆ ವಿಚಾರ ಅವರ ಮಾತುಗಳಲ್ಲಿ ಕೇಳಿದರೆ ಸ್ವಾರಸ್ಯವಲ್ಲವೇ ? ಬನ್ನಿ ತಯಾರಾಗಿ, ಅಲಭ್ಯವೂ, ದುರ್ಲಭವೂ, ಜನುಮ ಜನುಮಗಳ ಸತತ ಪ್ರಯತ್ನದಿಂದ ದೊರಕುವ ಆ ಗುರುಕಾರುಣ್ಯ, ಅನಂತಣ್ಣ ಅವರಿಗೆ ಲಭಿಸಿದ ರೀತಿಯನ್ನು ಅರಿಯೋಣ.
"ನಾನು ಗುರುನಾಥರ ವಿಚಾರವನ್ನು ಮೊಟ್ಟ ಮೊದಲು ನನ್ನ ಸ್ನೇಹಿತರಾದ ಗೋಪಣ್ಣನವರಿಂದ, ಬೆಂಗಳೂರಿನಲ್ಲಿದ್ದಾಗ ಕೇಳಿದ್ದೆ. ಗುರುನಾಥರ ಹೆಸರೇ, ಅವರ ವಿಚಾರವೇ ನನ್ನನ್ನು ಅವರ ದರ್ಶನ ಮಾಡಲೇಬೇಕೆಂಬ ತುಡಿತಕ್ಕೆ ಹಚ್ಚಿತ್ತು. ನನ್ನ ಸ್ನೇಹಿತರಿಗೆ ನನ್ನ ಹಂಬಲ ತಿಳಿಸಿದಾಗ, ಆ ಮಿತ್ರರು "ಆಯ್ತು ಪರಮಾತ್ಮನನ್ನು ಕೇಳಿ ನೋಡುತ್ತೇನೆ" ಎಂದು ಭರವಸೆ ನೀಡಿದ್ದರು. ಅದರ ಮಾರನೆಯ ದಿವಸವೇ ಎರಡು ಸಾವಿರದ ಇಸವಿ ಇರಬೇಕು. ಗುರುನಾಥರಿಗೆ ಅದೇನು ಕರುಣೆ ಬಂದಿತ್ತೋ ನನ್ನನ್ನು ಕರೆಸಿಕೊಂಡು ದರ್ಶನವಿತ್ತರು - ಹರಸಿದರು. ಬಹುಶಃ ನನಗಿದು ಜನುಮ ಜನುಮಗಳ ಪುಣ್ಯದ ಫಲವಿರಬೇಕು ಎಂದೆನಿಸಿತು. ಮುಂದೆ ಆ ಗುರುಕಾರುಣ್ಯ ನಿರಂತರ ನನಗೊದಗಿ ಬಂದು, ನನ್ನ ಜೀವನದ ಗತಿಯೇ ಬದಲಾಯಿತು. ಮುಂದೆ 2003 ರಲ್ಲಿ ಗುರುನಾಥರ ತಾಯಿಯವರು ಮುಕ್ತರಾದರು. ಮುಕ್ತರಾದಾಗ ಒಮ್ಮೆ ಹೋದೆ. ಆಗ ನಾನು ಕಂಡದ್ದೆಂದರೆ, ಅನೇಕ ಭಕ್ತರು ಅದೆಲ್ಲಿಂದಲೋ ನಿತ್ಯ ಬರುತ್ತಿದ್ದರು. ಮತ್ತಷ್ಟೇ ಬೇಗ ಎಲ್ಲರೂ ನಿರ್ಗಮಿಸಿಬಿಡುತ್ತಿದ್ದರು. ನನಗೆ ಮಾತ್ರ ಅಲ್ಲಿ ಉಳಿಯುವ ಸುಯೋಗ ಸಿಕ್ಕಿತ್ತು.
ಒಂಬತ್ತು ದಿವಸದಲ್ಲಿ ಮೂರು ನಾಲ್ಕು ದಿವಸ ನಾವು ಮೂರೇ ಜನಗಳು ಇರುತ್ತಿದ್ದೆವು. ಒಂದು ದಿವಸ ಗುರುನಾಥರು ಇದ್ದಕ್ಕಿದ್ದಂತೆ 'ನಡೀರಿ ಸಾರ್ ಒಂದಿಷ್ಟು ದೇವಾಲಯಕ್ಕೆ ಹೋಗಿ ಬರೋಣ" ಎಂದರು. ನನಗೆ ಪರಮಾಶ್ಚರ್ಯವಾಯಿತು. ಒಂದು ಕಾಲದಲ್ಲಿ ಊರಿನಲ್ಲಿರುವ ದೇವಸ್ಥಾನಗಳಿಗೆಲ್ಲಾ ಹೋಗಿಬರುತ್ತಿದ್ದ ನನಗೆ, ಗುರುನಾಥರು ಸಿಕ್ಕ ಮೇಲೆ "ಏನ್ ಸಾರ್ ಇನ್ಮೇಲೆ ನೀವು ದೇವಸ್ಥಾನಗಳಿಗೆ ಹೋಗಬೇಕಾದ ಪ್ರಮೇಯವಿಲ್ಲ" ಎಂದು ಬಿಟ್ಟಿದ್ದರು. ಅದೇನು ? ಆ ದೇವರುಗಳನ್ನೆಲ್ಲಾ ಸುತ್ತಿ ಬೇಡಿದ್ದಕ್ಕೆ ಈ ಪರಮಾತ್ಮ ನನಗೆ ಸಿಕ್ಕರೋ - ಅಥವಾ ಎಲ್ಲಾ ಇಲ್ಲೇ ಇದೆ ಇನ್ನೇಕೆ ನನ್ನ ಶಿಷ್ಯ ಸುತ್ತಾಡಬೇಕೆಂದು ನಾನೇ ಎಲ್ಲ" ಎಂಬುದನ್ನು ನನಗೆ ತಿಳಿಸಲು ಆ ರೀತಿ ಹೇಳಿದ್ದರೋ ನನಗೆ ಗೊತ್ತಾಗಲಿಲ್ಲ. ನಾನೆಂದೂ ಚಿಂತಿಸಲಿಲ್ಲ - ಗುರುವಾಕ್ಯ ಪ್ರಮಾಣವೆಂದು, ದೇವಸ್ಥಾನಗಳಿಗೆ ಹೋಗುವ ಅಭ್ಯಾಸವನ್ನು ಬಿಟ್ಟು ಬಿಟ್ಟಿದ್ದೆ. ಈಗ "ಈಶ್ವರನ ದೇವಾಲಯಕ್ಕೆ ಹೋಗೋಣ" ಎಂದಾಗ ಒಂದು ಚೂರು ಚಿಂತೆಯಾದರೂ, ಅದು ಕ್ಷಣದಲ್ಲಿ ಕಳಚಿತು. ನನ್ನ ಜೊತೆಗಿದ್ದ ಇನ್ನೊಬ್ಬ ಭಕ್ತರನ್ನು "ಹಾಲು ಹಾಕಿಸಿಕೊಳ್ರಪ್ಪಾ ಇಲ್ಲೇ ಇದ್ದು" ಎಂದು ಮನೆಯಲ್ಲೇ ಉಳಿಸಿದ್ದರು. ಅಂದು ನಡೆದ ದಿವ್ಯ ಘಟನೆಯನ್ನು ಸತ್ಸಂಗಕ್ಕೆ ಧಾರೆ ಎರೆಯುತ್ತಿದ್ದರೂ ಇಂದೂ ಸಹಾ ಅವರ ಮೈ ಕಂಪಿಸುತ್ತಿತ್ತು. ಅಂದಿನ ದಿವ್ಯ ದರ್ಶನ ನೆನೆದು ಮತ್ತೆ ಮುಂದುವರಿಯಿತು ಗುರುನಾಥರ ಸತ್ಕಥೆ.
"ಗುರುನಾಥರೊಂದಿಗೆ ನಾನು ಶಿವಾಲಯದೆಡೆಗೆ ಹೊರಟೆ. ಎದುರಿನ ಕಟ್ಟೆಯಲ್ಲಿ ಗುರುನಾಥರು ಕುಳಿತಿದ್ದರು. 'ಹೋಗಿ ಸಾರ್ ಶಿವಾಲಯಕ್ಕೆ ಮೂರು ಪ್ರದಕ್ಷಿಣೆ ಹಾಕಿ ಬನ್ನಿ' ಎಂದು ನುಡಿದರು. ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿತ್ತು. ಭಗವಂತ ಇರುವುದು ಭಾವನೆಯಲ್ಲಿ. ಬಾಗಿಲಿಗೆ ಬೀಗ ಮುದ್ರೆ ಇದ್ದರೇನು ಅಂತರಂಗದ ಮನದ ಕದ ತೆರೆದಿದ್ದರೆ ಸಾಕಲ್ಲ, ಎಂದು ಭಾವಿಸಿ ಹೊರಗಣ್ಣಿನಿಂದಲೇ ಒಂದು ಪ್ರದಕ್ಷಿಣೆ ಬಂದು ದೀರ್ಘ ದಂಡ ನಮಸ್ಕಾರ ಹಾಕುತ್ತಾ ಓರೆಗಣ್ಣಿನಲ್ಲಿ ಗುರುನಾಥರ ಕಡೆ ನೋಡಿದೆ. ಒಂದು ಕ್ಷಣ ತಬ್ಬಿಬ್ಬಾದೆ, ಸ್ಥಂಭೀಭೂತನಾದೆ. ಗುರುನಾಥರ ಜಾಗದಲ್ಲಿದ್ದುದು ಡಮರುಗಧಾರಿ ಶಿವ, ಓರೆಗಣ್ಣಿನಿಂದ ನೋಡುತ್ತ ಮೂರು ಪ್ರದಕ್ಷಿಣೆ ಮಾಡುವಾಗಲೂ ಅವರು ಕಾಣಿಸುವವರೆಗೆ ಕಣ್ಣಲ್ಲಿ ಆ ಭವ್ಯರೂಪವನ್ನು ತುಂಬಿಕೊಳ್ಳುತ್ತಾ ಸಾಗುತ್ತಿದ್ದೆ. ಮೂರನೆಯ ಪ್ರದಕ್ಷಿಣೆ ಮಾಡಿ ದೀರ್ಘದಂಡ ನಮಸ್ಕಾರ ಮುಗಿಸಿದವನೇ ನೋಡಿದರೆ ಹಸನ್ಮುಖಿಯಾದ ಗುರುನಾಥರು. ನಾಲ್ಕನೆಯ ಪ್ರದಕ್ಷಿಣೆ ನಮಸ್ಕಾರ ಗುರುನಾಥರಿಗೆ ಮಾಡಿದೆ. ಅವರು "ಏನ್ ಸಾರ್ ಇದೇನು ಮಾಡುತ್ತಿದ್ದೀರಿ' ಎಂದು ತಮಾಷೆ ಮಾಡಿದರು. ಗುರುವೇ ಒಳಗೂ ಹೊರಗೂ ನೀವೇ ಆಗಿರುವಾಗ - ಎನ್ನುತ್ತಲೇ ನನ್ನ ಗಂಟಲು ತುಂಬಿ ಬಂದಿತ್ತು.... ಮೌನಕ್ಕೆ ಶರಣಾಗಿದ್ದೆ".
ಪ್ರಿಯ ನಿತ್ಯ ಸತ್ಸಂಗಾಸಕ್ತ ಗುರುಬಾಂಧವರೇ... ಇದು ಕಥೆಯಲ್ಲ. ಬೆಂಗಳೂರಿನ ಅನಂತಣ್ಣನವರಿಗೆ ಆದ ಗುರುಕೃಪೆಯ ಒಂದು ಕಿರುಪರಿಚಯ. ವಿಶಾಲ ಹೃದಯಿಯಾದ ಅವರು ನಮಗಾಗಿ ಹಂಚಿಕೊಂಡಿದ್ದು ಅವರ ದೊಡ್ಡ ಗುಣ.
ಗುರುಸೇವೆಗೆ ಅವರಿವರೆಂಬ ಬೇಧವಿಲ್ಲ. ಆ ರೀತಿ ನಮ್ಮನ್ನು ಗುರುನಾಥರಿಗೆ ಅರ್ಪಿಸಿಕೊಳ್ಳುವ ಯಾರಿಗೂ ಇಂತಹಾ ಅನುಭವವಾದೀತು. ನಿತ್ಯ ಸತ್ಸಂಗ ನಮ್ಮನ್ನು ಅತ್ತ ಒಯ್ಯಲಿ. ನಮಗೂ ಅಂತಹ ಭಾಗ್ಯ ಸಿಗಲಿ. ನಾಳೆಯೂ ಬರುವಿರಲ್ಲವೇ.. ಸತ್ಸಂಗದ ಸವಿಯುಣಲು....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment