ಒಟ್ಟು ನೋಟಗಳು

Sunday, May 28, 2017

ಶ್ರೀ ಗುರು ಚರಿತ್ರೆ 

(ಸಾರಾಧ್ಯಾಯ ಸಂಗ್ರಹಿತ ರೂಪ)

ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 

ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್) 
ಅಧ್ಯಾಯ -18


ಕಿತ್ತಿ ಘೇವಡೆ ಬಳ್ಳಿಯನು ತಾ ನಿತ್ಯನೈ ಕುಂಭವನು ಬಡವಗೆ ।
ವಿಸ್ತರಿಸುತಾ ಮಹಿಮೆ ಹದಿನೆಂಟರಲಿ ಗುರುವಾರನಾ  ।। 18  ।।

ಮುಂದೆ ಗುರುಗಳು ಔದುಂಬರದಿಂದ ನರಸೋಬವಾಡಿಗೆ ಬರುತ್ತಾರೆ. ಅಲ್ಲಿ ಅವರು ಹನ್ನೆರಡು ವರ್ಷಗಳು ಇರುತ್ತಾರೆ. ಕೃಷ್ಣಾ ನದಿ ದಂಡೆಯ ಆಚೆಗಿರುವ 'ಅವರವಾಡ'ದ ಒಬ್ಬ ಬಡ ಬ್ರಾಹ್ಮಣನ ಮನೆಗೆ ನಿತ್ಯ ಭಿಕ್ಷೆಗೆ ಹೋಗುತ್ತಿರುತ್ತಾರೆ. ಒಂದು ದಿನ ಗುರುಗಳು ಅಲ್ಲಿಗೆ ಹೋದಾಗ, ಮನೆಯ ಯಜಮಾನ ಭಿಕ್ಷೆಗೆ ಹೋದವನು ಇನ್ನೂ ಬಂದಿರುವುದಿಲ್ಲ. ಮನೆಯೊಡತಿಯು ಗುರುಗಳನ್ನು ಆದರದಿಂದ ಕರೆದು ಕೂರಿಸಿ ನಮಿಸುತ್ತಾಳೆ. ಮನೆಯವರಿಗೆ ಏನೂ ದೊರೆಯದ ದಿನಗಳಲ್ಲಿ, ಅವರ ಮನೆಯ ಮುಂದಿದ್ದ ಅವರೇ ಬಳ್ಳಿಯ ಕಾಳುಗಳೇ ಆಹಾರವಾಗುತ್ತಿತ್ತು. ಮನೆಯೊಡತಿ ಅವರೇ ಕಾಯಿಗಳನ್ನೇ ಕಿತ್ತು ತಂದು ಭಕ್ತಿಯಿಂದ ಗುರುವಿಗೆ ಅರ್ಪಿಸುತ್ತಾಳೆ. ಗುರುಗಳು ಹೊರ ಹೋಗುವಾಗ ಆ ಅವರೇ ಬಳ್ಳಿಯನ್ನು ಕಿತ್ತೆಸೆದು ಹೋಗುತ್ತಾರೆ. ಇದರಿಂದ ದುಃಖಿತಳಾದ ಹೆಂಡತಿ ಗಂಡ ಬಂದ ಮೇಲೆ ಇದನ್ನು ತಿಳಿಸಿ, 'ನಾವು ಆ ಯತಿಗಳಿಗೇನು ಅಪರಾಧ ಮಾಡಿದಿವಿ' ಎಂದು ನೊಂದುಕೊಳ್ಳುತ್ತಾಳೆ. ಆದರೆ ಸಾತ್ವಿಕನಾದ ಪತಿಯು 'ಯತಿಗಳನ್ನು ನಿಂದಿಸಬೇಡ, ಎಲ್ಲದಕ್ಕೂ ಒಂದು ಕಾರಣವಿರುತ್ತದೆ.' ಎನ್ನುತ್ತಾ, ಅವರೇ ಬಳ್ಳಿಯನ್ನು ಪೂರ್ತಿಯಾಗಿ ಕೀಳುವಾಗ ಹೊನ್ನಿನ ಕುಡಿಕೆ ಸಿಗುತ್ತದೆ. 'ತಮ್ಮ ಬಡತನ ತೊಲಗಿಸಲು ಗುರುವು ಮಾಡಿದ ಲೀಲೆಯನ್ನು ನೋಡು' ಎಂದು ಹೇಳಿದ ಪತಿ, ಮಡದಿಯೊಡನೆ ಗುರುಗಳ ಬಳಿ ಹೋಗಿ ಆಶೀರ್ವಾದ ಪಡೆವ, ಗುರುಕರುಣೆಯ ಲೀಲೆ ಹದಿನೆಂಟನೆಯ ಅಧ್ಯಾಯ. 

ಮುಂದುವರಿಯುವುದು...

No comments:

Post a Comment