ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 59
'ರೆ.......' ಎಂಬುದು ನಮ್ಮ ಜೀವನದಲ್ಲಿ ಬರದಿರಲಿ ಗುರುವೆ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 59
'ರೆ.......' ಎಂಬುದು ನಮ್ಮ ಜೀವನದಲ್ಲಿ ಬರದಿರಲಿ ಗುರುವೆ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುವು ಬೇಡುವುದೇ ಇಲ್ಲ. ಕೇವಲ ಕೊಡುವುದೇ ಗುರುವಿನ ಲಕ್ಷಣ. ಆದರೆ ಕೆಲವೊಂದು ಸಾರಿ ನಮ್ಮ ಅದ್ಯಾವ ದೋಷಗಳನ್ನು, ಪಾಪವನ್ನು ತೊಳೆಯಲು ಅವನು ಬೇಡುತ್ತಾನೋ, ಆ ಒಂದು ಘಳಿಗೆ ಸರಿದುಹೋದರೆ, ಕೈಗೆ ಬಂದ ತುತ್ತು ಹೇಗೆ ಬಾಯಿಗೆ ಬರದಿದ್ದಾಗ ಒದ್ದಾಡುತ್ತೇವೆಯೋ ಆ ರೀತಿ ಒದ್ದಾಡಬೇಕಾಗುತ್ತದೆ. ಆದ್ದರಿಂದಲೇ ಇಂದಿನ ವಾರ ಶುಭವಾರ, ಇಂದಿನ ಘಳಿಗೆ ಶುಭ ಗಳಿಗೆ ಎಂದು ಕೊಟ್ಟುಬಿಡಬೇಕು. ಮಾನ್ಯ ಗುರುಬಾಂಧವರೇ, ಒಂದು ವಿಚಿತ್ರ ಆದರೂ ಸತ್ಯವಾದ ಪ್ರಸಂಗ ಒಂದನ್ನು ಗುರುನಾಥರ ಭಕ್ತರೊಬ್ಬರು ನಿತ್ಯ ಸತ್ಸಂಗಕ್ಕಾಗಿ ಹಂಚಿಕೊಂಡಿದ್ದು ಹೀಗೆ.
"ಅಂದು ಗುರುನಾಥರು ಲೋಕಾಭಿರಾಮವಾಗಿ ಸುತ್ತಾಡುತ್ತಾ ತಮ್ಮ ಊರಿನ, ತಮಗೆ ಬೇಕಾದವರೊಬ್ಬರ ಮನೆಗೆ ಬಂದರು. ಬೆಳಗಿನ ತಿಂಡಿಯ ಸಮಯವಾಗಿತ್ತು. 'ಪಕ್ಕದ ಮನೆಯ ದೋಸೆ ಚೆನ್ನ' ಎಂಬುವ ಗಾದೆಯಂತೆ ಆ ಮನೆಯೊಡತಿ ದೋಸೆಯನ್ನು ಎರೆಯುತ್ತಿದ್ದು ಅದರ ಘಮಲು ಸುತ್ತೆಲ್ಲಾ ಹರಡಿತ್ತು. ಸಹಜವಾಗಿ ಆ ಮನೆಗೆ ಬಂದ ಗುರುನಾಥರು 'ನನಗೂ ದೋಸೆ ಕೊಡುತ್ತೀರಾ..... ' ಎಂದು ಕೇಳಿದರಂತೆ. ಆ ಮನೆಯ ಹೆಂಗಸು ಅದೇನು ಭಾವಿಸಿದರೋ 'ಆಯ್ತು ಸ್ನಾನ ಮುಗಿಸಿಕೊಂಡು ಬನ್ನಿ, ದೋಸೆ ಕೊಡುತ್ತೇನೆ' ಎಂದುಬಿಟ್ಟರು. ಗುರುನಾಥರು ಸ್ನಾನಕ್ಕೆ ಮನೆಗೆ ಹೋಗಲಿಲ್ಲ. ಅಲ್ಲಿಯೇ ಎದುರಿಗಿದ್ದ ಬಾವಿಯ ಬಳಿ ಹೋಗಿ ಉಟ್ಟಿದ್ದ ಪಂಚೆಯ ಮೇಲೆಯೇ, ಬಾವಿಯಿಂದ ನೀರು ಸೇದಿ ನಾಲ್ಕಾರು ಬಿಂದಿಗೆ ನೀರನ್ನು ಹೊಯ್ದುಕೊಂಡರು. ಟವೆಲಿನಲ್ಲಿ ಮೈ ಒರೆಸಿಕೊಂಡರು. ಅದೇ ಪಂಚೆಯನ್ನು ಬಿಗಿಯಾಗಿ ಹಿಂಡಿಕೊಂಡು, ಕೊಡವಿ ಉಟ್ಟುಕೊಂಡು ಶುಚೀರ್ಭೂತರಾಗಿ ಸ್ನಾನ ಮುಗಿಸಿ, ಮಾತು ನೀಡಿದ ತಾಯಿಯ ಮುಂದೆ ಬಂದು ನಿಂತು 'ದೋಸೆ ಸಿಗುತ್ತದಾ.... ' ಎಂದರಂತೆ. ಕೊಡುವ ಪುಣ್ಯದ ಘಳಿಗೆ ಸರಿದು ಹೋದಾಗ ಅದೇನು ಕೊಡಲು ಸಾಧ್ಯ? ದೋಸೆ ಎರೆದು ಕೊಡುತ್ತಿದ್ದ ತಾಯಿಯ ಹಿಟ್ಟು ಖಾಲಿಯಾಗಿತ್ತು. ಯಾರಲ್ಲೂ ಏನನ್ನೂ ಕೇಳದ ಗುರುನಾಥರು ಕೇಳಿದಾಗಲೂ ಕೊಡಲೇನೂ ದೋಸೆ ಅಲ್ಲಿ ಉಳಿದಿರಲಿಲ್ಲವಂತೆ".
ಸ್ನಾನ ಮುಗಿಸಿಕೊಂಡು ಬನ್ನಿರಿ ಎಂದು ಹೇಳುವ ಬದಲು ನಿರಂತರ, ಯಾವತ್ತೂ ಪರಿಶುಭ್ರರಾಗಿರುವ ಗುರುದೇವರಿಗೆ, ಅವರು ಕೇಳಿದ ಕೂಡಲೇ ದೋಸೆಯನ್ನು ಕೊಟ್ಟು ಬಿಟ್ಟಿದ್ದರೆ.... ! ಪ್ರಿಯ ಓದುಗ ಬಂಧುಗಳೇ, ಈ 'ರೆ' ಗೆ ಅವಕಾಶ ಕೊಡದಂತೆ, ದಾನ ಧರ್ಮ-ಸತ್ಕರ್ಮಗಳನ್ನು ಮಾಡುವ ಸಂದರ್ಭದ ಸುಘಳಿಗೆ ಬಂದಾಗ ಅದನ್ನು ಮಾಡಿ ಮುಗಿಸುವುದು ಜಾಣತನವಲ್ಲವೇ? ಗುರುನಾಥರ ಕೃಪೆಯಿಂದ ನಾವೂ ನೀವೂ 'ರೆ....' ಎಂದು ಚಿಂತಿಸುವ ಅವಕಾಶ ಬರದಿರಲೆಂದು ಬೇಡೋಣ.
'ವಿಳ್ಯದೆಲೆಯನ್ನು ಮಡಿಸಿಕೊಡಯ್ಯ'
ಗುರುನಾಥರ ಭಕ್ತರೊಬ್ಬರು ತಮ್ಮ ಪತ್ನಿಯನ್ನು ಮೈಸೂರಿನ ಒಂದು ಪ್ರಖ್ಯಾತ ಪ್ರಸೂತಿ ಆಸ್ಪತ್ರೆಗೆ ಸೇರಿಸಿದ್ದರು. ಎಲ್ಲಾ ಸರಿಯಾಗಿತ್ತು. ಆದರೆ ಒಂದೇ ಸಮನೆ ಏರುತ್ತಿದ್ದ ಬಿಪಿ ಎಲ್ಲರನ್ನೂ ಆತಂಕದಲ್ಲಿ ಮುಳುಗಿಸಿಬಿಟ್ಟಿತ್ತು. ಆಗ ಮೈಸೂರಿನಲ್ಲಿ ಓದುತ್ತಿದ್ದ ಗುರುನಾಥರ ಹತ್ತಿರದ ಸಂಬಂಧಿಗಳು ಇವರೊಂದಿಗಿದ್ದರು. ಮತ್ತೊಬ್ಬ ಗುರುಭಕ್ತರೂ ಈ ಪರಿವಾರದವರೊಂದಿಗೆ ಇದ್ದರು.
ಏನು ಮಾಡುವುದು, ಪರಿಸ್ಥಿತಿ ಬಿಗಡಾಯಿಸುವ ಹಂತ ಬಂದಿದೆ. ಆ ತಾಯಿಯ ನರಳಾಟ, ಹುಟ್ಟು ಸಾವಿನ ಪ್ರಶ್ನೆ ಅಲ್ಲಿದ್ದ ಗುರುಭಕ್ತರನ್ನು, ಗುರುನಾಥರ ಸ್ಮರಣೆ ಮಾಡುತ್ತಿದ್ದರೂ ಕೆಂಗೆಡಿಸಿತ್ತು. ಹೇಗಾದರೂ ಆಗಲಿ, ಗುರುನಾಥರಿಗೇ ಈ ಸಮಸ್ಯೆಯನ್ನು ವರ್ಗಾಯಿಸಿಬಿಡೋಣವೆಂದು ಅವರು ದೂರವಾಣಿ ಮಾಡಿದರಂತೆ. ಎಲ್ಲವನ್ನೂ ವಿವರವಾಗಿ ಕೇಳಿದ ಗುರುನಾಥರು ಆ ಕಡೆಯಿಂದ 'ಏನಿಲ್ಲ ಕಣಯ್ಯಾ..... ಒಂದು ನಾಲ್ಕು ವೀಳ್ಯದೆಲೆ ತಂದು ತೊಟ್ಟಿನ ಸಮೇತ ಮಡಿಸಿ ಅವರಿಗೆ ನೀಡಯ್ಯಾ.... ಎಲ್ಲ ಸರಿಹೋಗುತ್ತೆ' ಎಂದರಂತೆ.
ಅದರಂತೆ ಆ ಗುರುಭಕ್ತರು ನಾಲ್ಕು ವೀಳ್ಯದೆಲೆ ತಂದು, ತೊಟ್ಟಿನ ಸಮೇತ ಮಡಿಸಿ 'ನೋಡಿ ಇದನ್ನು ನೀವು ತಿನ್ನಬೇಕಂತೆ. ಗುರುನಾಥರು ನಿಮ್ಮ ನೋವನ್ನು ತಿಳಿದು ಅದ್ಯಾರೋ ಕೈಲಿ ಕಳಿಸಿ ನಿಮಗೆ ಕೊಡಲು ಹೇಳಿದ್ದಾರೆ. ಧೈರ್ಯವಾಗಿರಿ. ಎಲ್ಲಾ ಸುಸೂತ್ರವಾಗಿ ಆಗುತ್ತದಂತೆ' ಎಂದು ಹೇಳಿದರು.
ಗುರುನಾಥರ ಹತ್ತಿರದ ಬಂಧುಗಳು ಕೂಡಲೇ ನೀವು ಹೀಗೆ ಅಣ್ಣನ ಹೆಸರನ್ನು ಬಳಸಿಕೊಳ್ಳಬಹುದಾ, ತಪ್ಪಲ್ಲವಾ? ಎಂದಾಗ ಆ ಗುರುಭಕ್ತರು 'ನಾನ್ಯಾವ ಸ್ವಾರ್ಥಕ್ಕೂ ಇದನ್ನು ಬಳಸಲಿಲ್ಲ. ಜೀವನ್ಮರಣದ ಮಧ್ಯದಲ್ಲಿ ಇರುವ ಜೀವಕ್ಕೆ ಗುರುನಾಥರು ಕೃಪೆ ಮಾಡಿದ್ದಾರೆ. ನಾನೆರಡು ಧೈರ್ಯದ, ನೈತಿಕ ಹೊಣೆಯ ಮಾತುಗಳನ್ನಾಡಿದೆ ಅಷ್ಟೇ' ಎಂದು ಸ್ಪಷ್ಟೀಕರಿಸಿದರಂತೆ. ಇದೆಲ್ಲಾ ಸಂಜೆ ಆರೂವರೆಯ ಸಮಯದಲ್ಲಿ ನಡೆದರೆ, ರಾತ್ರಿಯ ಎಂಟಕ್ಕೆ ಗುರುಕೃಪೆಯಿಂದ ಎಲ್ಲ ಸುಖಮುಖವಾಗಿತ್ತು.
ಎಲ್ಲ ವೈದ್ಯರ ಮಹಾವೈದ್ಯರಾದ ಗುರುನಾಥರಿಗೆ ಅಸಾಧ್ಯವಾದುದೇನಿದೆ? ಎಲ್ಲೋ ಕುಳಿತು ಭಕ್ತರ ನೋವಿನ ಉಪಶಮನ ಮಾಡುತ್ತಿದ್ದ ಗುರುನಾಥರ ಅಸೀಮ ಕರುಣೆ, ಗುರುನಾಥರಲ್ಲಿ ಅವರ ಭಕ್ತರಿಗಿರುವ ದೃಢ ಭಕ್ತಿಗೆ ಅದೆಷ್ಟು ಉದಾಹರಣೆಗಳು ಬೇಕು?!
ಅಂತಹ ಗುರುಕಾರುಣ್ಯ ನಿರಂತರ ಎಲ್ಲರಿಗೂ ಸಿಗಲೆಂದು ಆಶಿಸುತ್ತಾ ಇಂದಿನ ನಿತ್ಯ ಸತ್ಸಂಗಕ್ಕೆ ಅಲ್ಪ ವಿರಾಮ ಹಾಕೋಣ. ನಾಳೆ ಮತ್ತೆ ಸಿಗುವಿರಲ್ಲವಾ?
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment