ಒಟ್ಟು ನೋಟಗಳು

Tuesday, May 2, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 54

 

ಹಲವು ಪಾತ್ರಗಳ ಸಾರ್ಥಕ ನಿರ್ವಹಣೆ - ಕರ್ಮ ತತ್ವ ಪ್ರತಿಪಾದನೆ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಗುರುನಾಥರ ಒಡನಾಟ ಗುರುಬಂಧುಗಳೊಂದಿಗಲ್ಲದೇ, ರಕ್ತಸಂಬಂಧಿಗಳೊಂದಿಗೂ ವಿಶಿಷ್ಟವಾಗಿಯೇ ಇರುತ್ತಿತ್ತು. ಅನೇಕ ಬಂಧುಗಳು ಇವರ ರೀತಿನೀತಿಗಳನ್ನು 'ಇದೇನು ವಿಚಿತ್ರ' ಎಂದು ಕಣ್ಣುಬಿಟ್ಟು ನೋಡಿದರೆ, ಕೆಲವರು ಇದರಲ್ಲೇನೋ ಅರ್ಥವಿದೆ, ಇದರಲ್ಲೇನೋ ನಮ್ಮ ಹಿತಚಿಂತನೆ ಇದ್ದೇ ಇದೆ ಎಂದು ಗುರುನಾಥರು ಹೇಳಿದಂತೆ ನಡೆದುಕೊಳ್ಳುತ್ತಿದ್ದರಂತೆ. ಆ ಕ್ಷಣಕ್ಕೆ ತಮ್ಮ ಸಂಬಂಧಿ, ಇವರ ಮಾತು - ಅದವರಿಗೆ ಅಸಹಜ - ಎಂದುಕೊಂಡವರೂ, ಸ್ವಲ್ಪವೇ ಸಮಯದಲ್ಲಿ ಗುರುನಾಥರ ಮಾತು, ರೀತಿನೀತಿಗಳ ಪ್ರಭಾವವೇನೆಂದು ಅರಿತಾಗ ಅವರ ಮನದಲ್ಲಿ ಗುರುನಾಥರ ಬಗ್ಗೆ ರಕ್ತ ಸಂಬಂಧಕ್ಕಿಂತ ಮೀರಿದ ಗುರು ಭಾವ-ಭಕ್ತಿ ಉಂಟಾಗಿದ್ದಿದೆ. 

ಗುರುನಾಥರು ಮಾತ್ರ ಹಲವು ಪಾತ್ರಗಳನ್ನು ಎಲ್ಲಿಯೂ ಚಾಚೂ ತಪ್ಪದೆ, ಆಯಾ ಪಾತ್ರಗಳಿಗೆ ಒಂದಿಷ್ಟೂ ಅಪಚಾರವಾಗದಂತೆ ಕರ್ಮ ನಿರ್ವಹಿಸುತ್ತಿದ್ದರೂ, ಯಾವುದಕ್ಕೂ ಅಂಟಿಯೂ ಅಂಟದಂತೆ ಜಲಕಮಲವತ್  ಜೀವನ ಸಾಗಿಸುತ್ತಿದ್ದ ಮಹನೀಯರಾಗಿದ್ದರು. 

ತಮ್ಮ ಮನೆಗೆ, ಬಂದ ಸಹೋದರಿಯರನ್ನು ಬೀಳ್ಕೊಡುವಾಗ, ತವರಿನ ಮರ್ಯಾದೆಗೆ ಧಕ್ಕೆ ಬಾರದಂತೆ, ಅಣ್ಣನ ಕರ್ತವ್ಯಕ್ಕೆ ಚ್ಯುತಿ ಬರದಂತೆ, ತಲೆಯ ಮೇಲೆ ಅಕ್ಕಿ ಮೂಟೆಯನ್ನು ಹೊತ್ತೋ, ತವರಿನ ಕೊಡುಗೆಗಳನ್ನು ತೆಗೆದುಕೊಂಡೋ ಅವರವರ ಮನೆಯವರೆಗೆ ಅವರನ್ನು ಸುರಕ್ಷಿತವಾಗಿ ಮುಟ್ಟಿಸುತ್ತಿದ್ದರು. ಸಹೋದರಿಯರಿಗೋ ಒಳಗೇ ಸಂತಸ - ಜೊತೆಗೆ ಇಂತಹ ಗುರುಭಾವದವರು ಇವರಾಗಿದ್ದರೂ ಇವರ ಕೈಲಿ ಇಂತಹ ಸೇವೆ, ನಾವಪೇಕ್ಷಿಸದಿದ್ದರೂ, ಇವರು ಮಾಡುತ್ತಿದ್ದಾರಲ್ಲಾ ಎಂಬ ಪುನೀತ ಭಾವ ಕಣ್ಣಲ್ಲಿ ನೀರೂರಿಸುತ್ತಿತ್ತು. 

ಗುರುನಾಥರು ಕರ್ತವ್ಯ ಮುಗಿದ ನಂತರ ಒಂದು ಧನ್ಯವಾದವನ್ನು ಅಪೇಕ್ಷಿಸದೇ, ಯಾರಿಗೂ ತಿಳಿಸದೆಯೇ ಅದೆಷ್ಟೋ ಸಾರಿ ಅಲ್ಲಿಂದ ಹೊರಟು ಬಂದಿದ್ದೂ ಇದೆ. ಮೊದ ಮೊದಲು ಬೀಗರುಗಳ ಮನೆಯವರಿಗೆ, ಸಹೋದರಿಯರಿಗೆ ಇದು ಮುಜುಗರ ತಂದರೂ 'ಇವರು ನಮ್ಮಂತಹವರಲ್ಲ, ಅವರ ರೀತಿಯೇ ಬೇರೆ' ಎಂಬುದರ ಅರಿವಾದಾಗ ಸುಮ್ಮನಾಗುತ್ತ ಬಂದರಂತೆ. 

'ಒಬ್ಬರ ಒಂದು ತೃಣ ಉಪಕಾರದ ಹೊರೆಯನ್ನೂ ತಮ್ಮ ಮೇಲೆ ಇಟ್ಟುಕೊಳ್ಳದ ಗುರುನಾಥರು, ಜೀವನವಿಡೀ ಇದೇ ರೀತಿ  ಬದುಕಿ ಬಾಳಿ, ಕರ್ಮತತ್ವದ ಪ್ರತಿಪಾದಕರಾಗಿದ್ದು, ಆಲಸ್ಯವೆಂಬುದು ಅವರ ಬಳಿ ಸುಳಿಯದಂತೆ, ಅನವರತ ಜೀವನ ಸಾಗಿಸಿದವರು' ಎಂದು ತಮ್ಮ ಅನುಭವವನ್ನು ಅವರ ಸನಿಹದ ರಕ್ತ ಸಂಬಂಧಿಗಳೊಬ್ಬರು ತಿಳಿಸುತ್ತಾರೆ. 

"ಸಖರಾಯಪಟ್ಟಣದ ಅವರ ಮನೆಯನ್ನು ಬಿಟ್ಟರೆ ಬೆಂಗಳೂರಿನ ನಮ್ಮ ಮನೆಯೆಂದರೆ ಅವರಿಗೆ ಬಹು ಪ್ರೀತಿ. ಬೆಂಗಳೂರಿಗೆ ಬಂದಾಗ ಅದೇ ಮನೆಯೇ ಆಗಬೇಕು. ಅದೇನು ಆ ಮನೆಯ ಮೇಲೆ ಅಭಿಮಾನವೋ ನನಗೆ ಗೊತ್ತಿಲ್ಲ. ಒಮ್ಮೆ ಅನಿವಾರ್ಯವಾಗಿ ನಾವು ಬಾಗಿಲು ಹಾಕಿಕೊಂಡು ಬೇರೆಲ್ಲೋ ಹೋಗಿದ್ದೆವು. ಆಗ ಬಂದ ನಮ್ಮಣ್ಣನವರಿಗೆ ಮನಸ್ಸಿಗೆ ತುಂಬಾ ಬೇಜಾರಾದ ವಿಚಾರ ನಂತರ ತಿಳಿಯಿತು. ಅಂದಿನಿಂದ ಎಂದೂ ನಾವು ಆ ಮನೆಗೆ ಬೀಗ ಹಾಕಿಲ್ಲ, ಯಾರಾದರೂ ಇದ್ದೆ ಇರುತ್ತಿದ್ದೆವು."

"ಈಗ ನಾವು ಆ ಮನೆಯನ್ನು ಬಿಟ್ಟು ಬೇರೆ ಕಡೆ ವಾಸವಾಗಿದ್ದರೂ, ಆ ಮನೆಯನ್ನು ಹಾಗೇ ಇಟ್ಟುಕೊಂಡಿದ್ದೇವೆ. ಯಾರಿಗೂ ಕೊಟ್ಟಿಲ್ಲ. ಇವತ್ತೂ ಅಲ್ಲಿಗೆ ಹೋದಾಗ, ಅಲ್ಲಿ ಅವರ ಇರುವಿನ, ಅವರಾಡಿದ ಮಾತಿನ ನೆನಪು ನಮಗೆ ಬರುತ್ತದೆ. ನಾವು ಅವಾಗ ಆತನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲವೇನೋ ! ಈಗ ಅವರ ಒಂದೊಂದು ನಡೆನುಡಿಯ ಹಿಂದಿನ ಭಾವಗಳು ನಿಚ್ಚಳವಾಗಿ ಅರ್ಥವಾಗುತ್ತಿದೆ. ಕಾಲ ಕಳೆದು ಹೋಗಿದೆ" ಎಂದು ಗುರುನಾಥರೊಂದಿಗೆ ತಮಗಿದ್ದ ಸಂಬಂಧವನ್ನು ಅವರ ಸಹೋದರಿಯೊಬ್ಬರು ತೋಡಿಕೊಂಡರು. 

ಎಂತಹ ಕೆಲಸವಾಗಿ ಹೋಯಿತು ! 

ಒಮ್ಮೆ ಗುರುನಾಥರು ತಮ್ಮ ಸಹೋದರಿಯ ಮನೆ ಸನಿಹದಲ್ಲಿರುವ ಒಬ್ಬ ಭಕ್ತೆಯ ಮನೆಗೆ, ಅವರ ಅಪಾರ ಭಕ್ತಿ ಭಾವವನ್ನು ಕಂಡು ಪಾದಪೂಜೆಗೆಂದು ಹೋದರು. ಅಲ್ಲಿ ನಡೆದ ಸರಳವಾದ ಪಾದಪೂಜೆಯನ್ನು ಸ್ವೀಕರಿಸಿದರು. ಈ ಪಾದಪೂಜೆಯ ಸಂದರ್ಭದಲ್ಲಿ ನಿಂತು ಸಹಕರಿಸಿದ - ಗುರುನಾಥರ ಸಹೋದರಿಯವರು - ಗುರುನಾಥರ ಪಾದಪೂಜೆ ಮಾಡಿದ ಪಾದೋದಕವನ್ನು ಎಲ್ಲರೂ ಸ್ವೀಕರಿಸಿದ ನಂತರ, ಅರಿವಿಲ್ಲದೆ ಹೊರಗೆ ಚೆಲ್ಲಿಬಿಟ್ಟರಂತೆ. ಆ ಕೂಡಲೇ ಗುರುನಾಥರು 'ಪಾದಪೂಜೆ ಮಾಡಿದ ತೀರ್ಥವನ್ನು ಹೊರಗಡೆ ಚೆಲ್ಲಿಬಿಟ್ಟೆಯಾ... ನೀನೆಲ್ಲಾ ಇಂತಹದೇ ಕೆಲಸ ಮಾಡುವುದು' ಎಂದುಬಿಟ್ಟರಂತೆ. ಅರಿವಿಲ್ಲದೇ ಆದ ಕೆಲಸ. ಇತ್ತ ಗುರುತೀರ್ಥ, ಅನಾಯಾಸವಾಗಿ ದೊರೆತಿದ್ದು, ಹೀಗೆ ವ್ಯರ್ಥವಾಗಿಬಿಟ್ಟಿತಲ್ಲ ಎಂಬ ಚಿಂತೆ ಪೂಜೆ ಮಾಡಿದವರಿಗೆ - ನಾನವರ ಮನೆಯಲ್ಲಿ ಗುರುಪಾದತೀರ್ಥವನ್ನು ವ್ಯರ್ಥಮಾಡಿಬಿಟ್ಟೆನಲ್ಲ - ಎಂಬ ಚಿಂತೆ ಚೆಲ್ಲಿದವರಿಗೆ, ಮನದಲ್ಲಿ ಶುರುವಾಯಿತು. ಜೊತೆಗೆ 'ಗುರುನಾಥ, ಮತ್ತೆ ನಿನ್ನ ಪಾದತೀರ್ಥ ಸಿಗುವಂತಾಗಲಿ' ಎಂದು ಅನನ್ಯವಾಗಿ ಇಬ್ಬರೂ ಬೇಡುತ್ತಿದ್ದರು."

"ಕರುಣಾಮಯಿಯಾದ ಗುರುನಾಥರಿಗೆ ಭಕ್ತರ ಆರ್ತದನಿ ಮುಟ್ಟಿತೇನೋ, ಜೊತೆಗೆ ಭಕ್ತರು ನೊಂದುಕೊಂಡ ವಿಚಾರವೂ ಅರ್ಥವಾಗಿ, ಒಂದು ದಿನ ಮತ್ತೆ ದಿಲೀಪ, ಎಂಬುವ ಭಕ್ತರೊಬ್ಬರನ್ನು ಕರೆದುಕೊಂಡು ಬೆಳಗಿನ ಏಳಕ್ಕೆಲ್ಲಾ ಮನೆಗೆ ಬಂದುಬಿಟ್ಟರಂತೆ. ಅವರು ಕೂರುತ್ತಿದ್ದ ತೂಗು ಮಂಚದ ಮೇಲೆ ಕುಳಿತು, 'ಅದೇನೋ ತೀರ್ಥ ಇಟ್ಟುಕೊಳ್ಳಲಾಗಲಿಲ್ಲ ಅಂತ ಚಿಂತೆ ಮಾಡುತ್ತಿದ್ದಿರಲ್ಲಾ, ಹಾಂ, ಇವತ್ತು ತೀರ್ಥ ತೆಗೆದುಕೊಳ್ಳಿ' ಎಂದರು ಗುರುನಾಥರು. ಇದ್ದಕ್ಕಿದ್ದಂತೆ ಬಂದ ಗುರುನಾಥರನ್ನು ಕಂಡು ಸಡಗರ, ತಮ್ಮ ಮನದ ದುಗುಡ ಹರಿಯಿತೆಂಬ ಸಂತಸದಲ್ಲಿ ಆ ಭಕ್ತೆ ಮತ್ತೆ ಸರಳವಾದ ರೀತಿಯಲ್ಲಿ ಗುರುನಾಥರ ಪಾದ ತೊಳೆದು ಭಕ್ತಿಯಿಂದ ಸೇವಿಸಿ, ತೀರ್ಥವನ್ನು ಎಲ್ಲರಿಗೂ ನೀಡಿ ಒಂದು ಬಾಟಲಿಯಲ್ಲಿ ತುಂಬಿ ಜತನವಾಗಿ ಇಟ್ಟುಕೊಂಡರಂತೆ. ಹೀಗೆ ಬೆಂಗಳೂರಿನ ಗುರುಭಕ್ತೆ ಪಾರ್ವತಮ್ಮನವರು ಗುರುವಿನ ಕರುಣಾಸಾಗರತೆಯನ್ನು ನಿತ್ಯ ಸತ್ಸಂಗಕ್ಕಾಗಿ ಧಾರೆ ಎರೆದರು."

ಪ್ರಿಯ ಓದುಗ ಗುರುಬಾಂಧವರೇ, ನಾವೇನು ಬಾಯಿಬಿಟ್ಟು ನಿವೇದಿಸದಿದ್ದರೂ 'ಕಣ್ಣರಿಯದಿದ್ದರೂ ಕರುಳರಿಯದೇ' ಎಂಬಂತೆ ಗುರುನಾಥರಿಗೆ ತಮ್ಮ ಶಿಷ್ಯರ ಅಳಲು ಅರಿವಾಗುತ್ತಿತ್ತು. 

ಪ್ರಿಯ ಗುರುಬಾಂಧವರೇ, ನಾಳಿನ ನಿತ್ಯ ಸತ್ಸಂಗಕ್ಕೂ ತಪ್ಪದೆ ಬನ್ನಿ.... ಭಕ್ತರಿಗಾಗಿ ಮತ್ಯಾವ ಗುರುಚರಿತ್ರೆಯ ಪುಟ ತೆರೆಯುವುದೋ ಓದೋಣ... ಓದಿ ಧನ್ಯರಾಗೋಣ...... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment