ಗುರುನಾಥ ಗಾನಾಮೃತ
ನನ್ನತರಂಗದ ಹುಳುಕ ಹೆಕ್ಕಿ 
ರಚನೆ: ಅಂಬಾಸುತ 
ನನ್ನತರಂಗದ ಹುಳುಕ ಹೆಕ್ಕಿ 
ಹೊರಹಾಕದೆ ಪರರ ಅಂತರಂಗವ 
ಅರಿಯಲು ಹೊರಟ ನಾನೆಂತಾ ಮೂರ್ಖ ||
ಪರರ ತಪ್ಪುಗಳ ಜಾಲಾಡಿ 
ಹುಡುಕುವ, ನನ್ನ ತಪ್ಪಿನ ಮೇಲೆ 
ವಸ್ತ್ರ ಹೊದ್ದಿರುವ ನಾನೆಂಥ ಮೂರ್ಖ ||
ನನ್ನೊಳಗೆ ತಪ್ಪಿರದೆ ಪರರ 
ತಪ್ಪನು ನಾ ಹುಡುಕಲಾರೆ 
ಎಂಬುದನರಿಯದ  ನಾನೆಂಥ ಮೂರ್ಖ ||
ಕಣ್ಣೆದಿರಿಗಿರುವ ಕಡುಸತ್ಯವನು ದೂಡಿ 
ಸತ್ಯದಾ ಮುಖವಾಡದ ಮಿಥ್ಯೇಯಾ 
ಹಿಂದೆ ಬಿದ್ದಿರುವ ನಾನೆಂಥಾ ಮೂರ್ಖ ||
ಅರಿವು ನೀಡೋ ಗುರುವು ತಾನಾಗೆ 
ಬಂದಿರಲು ತೋರುಗಾಣಿಕೆಗೆ 
ಅವನ ಹಿಂದೆ ಬಿದ್ದಿರುವ ನಾನೆಂಥ ಮೂರ್ಖ ||
ಸತಿಸುತರ ನೋಯಿಸುತ ಹೆತ್ತವರ
ಪೀಡಿಸುತ ಗುರುವಿನಿಚ್ಚೆ ಎನುತ 
ಕುಳಿತಿರುವ ನಾನೆಂಥ ಮೂರ್ಖ ||
ಪತಿತ ತಾನಾಗಿಯೇ ಪರಮ 
ಪುಣ್ಯತಮನೆನುವ ಪೋಶಾಕು
ಧರಿಸಿರುವ ನಾನೆಂಥ ಮೂರ್ಖ ||
ಮನದೊಳಗೆ ಮನದನ್ನೆಯ ನೆನೆದು 
ಬಾಯೊಳಗೆ ಮಂತ್ರವ ಜಪಿಪ 
ನಾನೆಂಥ ಮೂರ್ಖ ||
ಜಗದಂಬೆ ಜಗದ್ಗುರುವಿನಾ 
ನಡುವೆ ಬೇಧವೆಣಿಸಿದ ಈ 
ಅಂಬಾಸುತ ಬಹುದೊಡ್ಡ ಮೂರ್ಖ ||

No comments:
Post a Comment