ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 55
ಎಲ್ಲಿ ಕೂತರೂ ನೀ ನನ್ನ ಸ್ಮರಣೆ ಮಾಡು
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 55
ಎಲ್ಲಿ ಕೂತರೂ ನೀ ನನ್ನ ಸ್ಮರಣೆ ಮಾಡು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಹಾಸನದ ದಂಪತಿಗಳಿಬ್ಬರು ಸಖರಾಯಪಟ್ಟಣಕ್ಕೆ ಪದೇ ಪದೇ ಹೋಗುತ್ತಿದ್ದರು. ಅಲ್ಲಾವ ಬಂಧುಗಳು ಅವರಿಗಿರಲಿಲ್ಲ. ಅಲ್ಲೇನವರ ಕೆಲಸ ಕಾರ್ಯಗಳೂ ಇರಲಿಲ್ಲ. ಆದರೂ ಮೇಲಿಂದ ಮೇಲೆ 'ನೀವು ಕೂಡಲೇ ಹೊರಟು ಬನ್ನಿ. ಮನೆಯವರೆಲ್ಲಾ ಬನ್ನಿ' ಎಂಬ ಆತ್ಮೀಯ ದೂರವಾಣಿ ಕರೆ ಇವರಿಗೆ ಬರುತ್ತಿತ್ತು. ಆ ದೂರವಾಣಿಯ ಮಾತು ಕೇಳಿದಾಗ ಪುಂಗಿಯ ನಾದಕ್ಕೆ ತಲೆದೂಗುವ ಹಾವಿನಂತೆ, ಅದ್ಯಾವುದೋ ಮೋಡಿ ಗೊಳಗಾಗಿ ಇವರು ಸಖರಾಯಪಟ್ಟಣಕ್ಕೆ, ತಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಬದಿಗೊತ್ತಿ ಬರುತ್ತಿದ್ದರು. ಅದೆಷ್ಟು ಹೊತ್ತು ಅಲ್ಲಿರಬೇಕೆಂಬ ವಿಚಾರವನ್ನೇ ಇವರು ಚಿಂತಿಸುತ್ತಿರಲಿಲ್ಲ. ಅಲ್ಲಿಂದ 'ಇನ್ನು ನೀವು ಹೊರಡಬಹುದು' ಎಂಬ ಅನುಜ್ಞೆ ದೊರೆತಾಗಲೇ ಇವರಿಗೆ ತಮ್ಮ ಮನೆ, ಕೆಲಸದ ಭಾರಗಳ ಭಾವ ಅರಿವಿಗೆ ಬರುತ್ತಿದ್ದುದು.
ಪ್ರಿಯ ಗುರುಬಾಂಧವರೇ ಈ ದೂರವಾಣಿ ಕರೆ ಮಾಡುತ್ತಿದ್ದವರು, ತಮಗೆ ಸಾಕೆನಿಸಿದಾಗ ಇವರನ್ನು ನೀವಿನ್ನು ಹೊರಡಬಹುದೆಂದು ಆಜ್ಞೆ ಮಾಡುತ್ತಿದ್ದವರು. ಯಾವ ರಾಜ ಮಹಾರಾಜರಲ್ಲ, ಅಧಿಕಾರಿಗಳಲ್ಲ, ಸಾರ್ವಭೌಮರಲ್ಲ, ಸಾಹುಕಾರರಲ್ಲ. ಇವೆಲ್ಲಕ್ಕಿಂತ ಮಿಗಿಲಾದ, ಮೇಲಿದ್ದ, ಪ್ರೀತಿಯ ಕಡಲಾಗಿದ್ದ, ಸಖರಾಯಪಟ್ಟಣದ ಗುರುನಾಥರೇ ಅವರಾಗಿದ್ದರು.
ಒಮ್ಮೊಮ್ಮೆ ಗುರುನಾಥರ ಬಳಿ ಇವರು ಹೋದಾಗಲೂ ಗುರುನಾಥರ ನುಡಿಮುತ್ತುಗಳ ಅನರ್ಘ್ಯ ಲಾಭ ಇವರಿಗಾಗುತ್ತಿತ್ತು. 'ಎಲ್ಲಿ ಕೂತರೂ ಅವನ ಸ್ಮರಣೆ ಮಾಡಿ. ನಿಮ್ಮದೆಲ್ಲಾ, ಅವನು ಹೊರುತ್ತಾನೆ' ಎನ್ನುವ ಗುರುವಾಕ್ಯದಂತೆ 'ಅವನು' - ಎಂದರೆ ಇವರಿಗೆ 'ಗುರುನಾಥ' ರೇ ಆಗಿದ್ದರಿಂದ ಗುರುನಾಥರ ನಾಮಸ್ಮರಣೆಗಿವರ ಉಸಿರು ಹೊಂದಿಕೊಂಡಿತ್ತು. ಪ್ರಾಪಂಚಿಕರಾದ ಅವರಿಗೆ ಆ ಸ್ಮರಣೆಯ ಮರೆವನ್ನು ನೀಡಿ - ಸಂಕಟಕ್ಕೆ ಸಿಲುಕಿಸಿ ಮತ್ತೆ ಸರಿದಾರಿಗೆ ತರುವ ಲೀಲಾನಾಟಕವನ್ನು ಗುರುನಾಥರು ಅನೇಕ ಸಾರಿ ಇವರ ಜೀವನದಲ್ಲಿ ಆಡುತ್ತಿದ್ದರು. ಅದರ ವರ್ಣನೆಯನ್ನು ಕೇಳೋಣ ಬನ್ನಿ.
"ನಮ್ಮ ಮಗಳಿಗೆ ಇಂಜಿನೀಯರಿಂಗ್ ಸೀಟು ಬಯಸಿ, ಸೆಲೆಕ್ಷನ್ ಗೆ ಹೋಗಿದ್ದೆವು. ಸೀಟುಗಳ ಅಲಾಟ್ ಮೆಂಟ್ ಬೋರ್ಡು ನೋಡುತ್ತಿದ್ದ ನನಗೆ ಹಾಸನದ ಕಾಲೇಜಿನ ಸೀಟುಗಳು ಪಟಪಟನೆ ಬೇರೆಯವರಿಗೆ ಅಲಾಟ್ ಆಗುತ್ತಾ ಖಾಲಿಯಾಗುವುದನ್ನು ಕಂಡು ಬಹು ಗಾಭರಿಯಾಗತೊಡಗಿತು. ಇನ್ನೇನು ಕೇವಲ ಏಳೆಂಟು ಸೀಟುಗಳು ಮಾತ್ರಾ ಉಳಿದಿತ್ತು. ಸಾಮಾನ್ಯ ಮನುಜರಾದ ನಮಗೆ ಉದ್ವೇಗವೂ ಸಹಜವೇ. ಮನದಲ್ಲಿ ಮತ್ತೆ ಗುರುನಾಥರ ನೆನಪು ಬಂದಿತು. ಸಂಕಟಹರ ವೆಂಕಟರಮಣ - ವೆಂಕಟಾಚಲ ಗುರುನಾಥರೇ - ಇದೇನು ಆಗುತ್ತಿದೆ... ಹಾಸನ ಬಿಟ್ಟು ಬೇರೆಡೆ ಓದಿಸುವುದು ಅಸಾಧ್ಯ ರಕ್ಷಿಸಪ್ಪಾ ಗುರುದೇವಾ ಎಂದು ಸ್ಮರಿಸಿದೆ. ತಟ್ಟನೆ ನನ್ನ ಕಿವಿಯೊಳಗೆ ಗುರುನಾಥವಾಣಿ ಮಾರ್ದನಿಸಿತು. 'ಸದಾ ನನ್ನ ಧ್ಯಾನ ಸ್ಮರಣೆ ಮಾಡದೆ ಸೀಟು ಎಣಿಸುತ್ತಾ ಕೂತಿದ್ದೀಯಲ್ಲಾ.. ನಾ ನಿನ್ನನ್ನ ಸೀಟು ಎಣಿಸಲು ಕೂರಿಸಿದೀನಾ ಜಪ ಮಾಡು' ಎಂದು ಹೇಳಿದಂತೆ ಆಯಿತು. ಆ ಕೂಡಲೇ ಎಲ್ಲ ಮರೆತು ಗುರುನಾಥರ ಜಪ ಮಾಡುತ್ತಾ ಕುಳಿತೆ. ಸ್ವಲ್ಪ ಹೊತ್ತಿಗೆ ನನ್ನ ಮಗಳಿಗೆ ಹಾಸನದಲ್ಲಿಯೇ ಸೀಟು ಸಿಕ್ಕ ವಿಚಾರ ನಮಗೆ ತಿಳಿಯಿತು".
ಗುರುನಾಥರೆಂದರೆ ಕಲ್ಪವೃಕ್ಷ, ಕಾಮಧೇನು, ಅವರ ಭಕ್ತರಿಗೆ ಎಂಬುದನ್ನು ಗುರುನಾಥರು ಹೀಗೆ ಮಾಡಿ ತೋರಿಸಿದ್ದಾರೆ' ಎಂದು ಭಾವ ಪರವಶರಾಗಿ ಆ ಭಕ್ತೆ ಗುರುನಾಥರ ಲೀಲಾಮೃತವನ್ನು ನಿತ್ಯಸತ್ಸಂಗಕ್ಕೆ ಹಂಚಿಕೊಂಡರು.
'ಎಲ್ಲಿ ಕುಳಿತರೂ ನೀ ನನ್ನ ಸ್ಮರಣೆ ಮಾಡು ನಾನಿದ್ದೀನಿ' ಎಂದು ಗುರುನಾಥರು ಭರವಸೆ ನೀಡಿದ್ದರೂ ಈ ಚಂಚಲ ಮನ ಅದು ಹೇಗೆ ನಾನಿದೀನಿ, ಎಂದು ನಮ್ಮ ಜಾಡು ತಪ್ಪಿಸುತ್ತದೆ ನೋಡಿ. ಉಳಿದ ಹಾಸನದ ಕಾಲೇಜಿನ ಎಂಟು ಸೀಟುಗಳು ಅದೆಷ್ಟೋ ಹೊತ್ತು ಹಾಗೇ ಇತ್ತು. ಇವರ ಮಗಳ ಹೆಸರು ಹಾಸನದ ಕಾಲೇಜಿಗೆ ಅಲಾಟ್ ಆದ ಮರುಕ್ಷಣದಲ್ಲಿ ಮತ್ತೆ ಪಟಪಟ ಸೀಟುಗಳೆಲ್ಲಾ ಖಾಲಿಯಾಗಿ ಹೋಗಿದ್ದವು. ಎಷ್ಟು ಸುಲಭದ ದಾರಿಯನ್ನು ಗುರುನಾಥರು ತೋರಿದ್ದರೂ ನಾವು ಹೇಗೆ ಎಡವುತ್ತೇವೆ. ಆದರೂ ಗುರುಕೃಪೆಗೆ ಮತ್ತೆ ಪಾತ್ರರಾಗುವ ರೀತಿಯೇ ಅದು ಗುರುನಾಥರ ಲೀಲೆ. ಆ ಹಾಸನದ ದಂಪತಿಗಳಿಗೆ ಇಂತಹ ಅನೇಕ ಅನುಭವಗಳನ್ನು ಗುರುನಾಥರು ನೀಡಿದ್ದಾರೆ. ಮತ್ತೆ ಇನ್ಯಾರಿಗೆ ಇಂತಹ ಅನುಭವಗಳಾಗಿದೆಯೋ... ಅವೆಲ್ಲಾ ಯಾವಾಗ 'ನಿತ್ಯ ಸತ್ಸಂಗಕ್ಕೆ ದೊರೆತು ನಮಗೆಲ್ಲಾ ದಾರಿದೀಪವಾಗುವುದೋ ಕಾಯೋಣ....
ಪ್ರಿಯ ಗುರುಬಾಂಧವರೇ, ನಿತ್ಯ ಸತ್ಸಂಗ ನಿರಂತರವಾಗಿರಲಿ, ನಿಮ್ಮ ಓದುವಿಕೆ, ಮನನವಾಗುವಿಕೆ ನಿತ್ಯವಾಗಲಿ. ನಮ್ಮ ಮನವೂ ಆತನೆಡೆಗೆ ಹರಿಯಲಿ. ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ.... ಬನ್ನಿ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment