ಶ್ರೀ ಗುರು ಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 13
ಮರಳಿ ತಾಯ್ತಂದೆಗಳನೀಕ್ಷಿಸಿ । ಬರಲು ಗೋದಾತೀರದಲಿ ಭೂ ।
ಸುರನ ಕುಕ್ಷಿವ್ಯಥೆಯ ಹರಿಸಿದನೈ ತ್ರಯೋದಶದಿ ।। 13 ।।
ಶ್ರೀ ನರಸಿಂಹ ಸರಸ್ವತಿಗಳು ತೀರ್ಥಯಾತ್ರೆಯನ್ನು ಮಾಡುತ್ತಾ, ತಮ್ಮ ಶಿಷ್ಯರೊಂದಿಗೆ ಮತ್ತೆ ಕರಂಜ ನಗರಕ್ಕೆ ಬಂದು ತಮ್ಮ ತಂದೆ ತಾಯಿಗಳಿಗೆ ದರ್ಶನ ಕೊಡುತ್ತಾರೆ. ಗುರುಗಳು ತಮ್ಮ ಶಿಷ್ಯರೊಡನೆ ಗೋದಾವರಿ ತೀರದಲ್ಲಿ ಸ್ನಾನ ಮಾಡುವಾಗ ಉದರಶೂಲೆಯ ಬ್ರಾಹ್ಮಣನೊಬ್ಬನು ಪ್ರಾಣ ತ್ಯಜಿಸಲು ಅಲ್ಲಿಗೆ ಬರುತ್ತಾನೆ. ಗುರುಗಳು ಕೇಳಿದಾಗ "ಯಾವ ಅನ್ನವು ಜೀವಕ್ಕೆ ಆಧಾರವೋ ಅದೇ ನನ್ನ ನೋವಿಗೆ ಮೂಲವಾಗಿದೆ. ಊಟವಿಲ್ಲದೇ ಬದುಕಲಾಗದು. ಉಂಡರೆ ಉದರಶೂಲೆ. ಹಾಗಾಗಿ ಸಾವೇ ಸರಿಯೆಂದು" ಗುರುಗಳಿಗೆ ನಮಿಸುತ್ತಾನೆ. ಅದೇ ಸಂದರ್ಭದಲ್ಲಿ ಸಾಯಂದೇವನು ಬಂದು ಗುರುವಿಗೆ ನಮಸ್ಕರಿಸುತ್ತಾನೆ. ಗುರುಗಳು ಸಾಯಂದೇವನಿಗೆ "ಈತನನ್ನು ನಿನ್ನ ಮನೆಗೆ ಕರೆದೊಯ್ದು ಮೃಷ್ಟಾನ್ನ ಭೋಜನ ಹಾಕಿಸು. ಅದೇ ಅವನ ಉದರಶೂಲೆಗೆ ಮದ್ದು" ಎಂದು ಆಜ್ಞಾಪಿಸುತ್ತಾರೆ. "ತಮ್ಮ ಮನೆಗೆ ಭಿಕ್ಷೆಗೆ ಬರಬೇಕೆಂದು" ಗುರುಗಳಿಗೆ ಸಾಯಂದೇವನು ವಿನಂತಿಸಿದಾಗ - ಗುರುಗಳು ತಮ್ಮ ಶಿಷ್ಯರೊಡಗೂಡಿ ಬರುತ್ತಾರೆ. ಊರವರೆಲ್ಲಾ ಅಚ್ಚರಿಯಿಂದ ನೋಡುತ್ತಿರುವಂತೆಯೇ ಗುರುಕೃಪೆಯಿಂದ ಉದರಶೂಲೆಯ ಬ್ರಾಹ್ಮಣನು ಗುಣಮುಖನಾಗುವ ವಿಶೇಷ ಪ್ರಸಂಗವು ಹದಿಮೂರನೆಯ ಅಧ್ಯಾಯದ ಸಾರವಾಗಿದೆ.
ಮುಂದುವರಿಯುವುದು.....
No comments:
Post a Comment