ಒಟ್ಟು ನೋಟಗಳು

Saturday, May 6, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2  

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 
  ನಿತ್ಯ ಸತ್ಸಂಗ  - 
58

 ಗುರು ಇಲ್ಲಿಲ್ಲ ಶೃಂಗೇರಿಗೆ ಹೋಗಿಬನ್ನಿ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



"ಕುಶಾಲ್ ಎಂಬುವ ಗುರುನಾಥರ ಭಕ್ತರೊಬ್ಬರು ತಮ್ಮ ಸ್ನೇಹಿತರ ಕಷ್ಟಗಳನ್ನರಿತು, 'ನೀವು ಗುರುನಾಥರ ಬಳಿ ಹೋಗಿ, ನಿಮ್ಮ ಸಮಸ್ಯೆಗಳೆಲ್ಲಾ ಬಗೆಹರಿಯುತ್ತದೆ' ಎಂದು ಕಳಿಸಿದರು. ಮದುವೆಯಾಗಿ ಹತ್ತು ವರ್ಷಗಳಾಗಿದ್ದವು. ಮಕ್ಕಳಾಗಿರಲಿಲ್ಲ. ಕೆಲವು ಸಮಸ್ಯೆಗಳೂ ಇದ್ದವು. ನಮ್ಮ ಮಿತ್ರರ ಸಲಹೆಯಂತೆ ಸಖರಾಯಪಟ್ಟಣಕ್ಕೆ ಹೋದರೆ ಅಂದು ಗುರುನಾಥರನ್ನು ಕಾಣುವ ಅವಕಾಶ ಒದಗಿ ಬರಲಿಲ್ಲ. ಇನ್ನೂ ನಮ್ಮ ಕರ್ಮ ಸವೆಯಬೇಕೇನೋ - ಗುರುದರ್ಶನ ಕೃಪೆಯಾಗಲು ಎಂದು ಮನದಲ್ಲಿ ಚಿಂತಿಸಿ ವಾಪಾಸಾದೆವು. ಎರಡನೆಯ ಬಾರಿ ಗುರುನಾಥರಿರುವುದನ್ನು ಖಾತ್ರಿ ಮಾಡಿಕೊಂಡ ನಮ್ಮ ಮಿತ್ರರು 'ಈಗ ನೀವು ಒಮ್ಮೆ ಹೋಗಿ ಬನ್ನಿ - ಗುರುನಾಥರು ಈಗ ಊರಿಗೆ ಬಂದಿದ್ದಾರೆ, ನಾನೂ ಅವರೊಂದಿಗೆ ಶೃಂಗೇರಿಗೆ ಹೋಗಿಬಂದೆ' ಎಂದು ಫೋನಾಯಿಸಿದರು". 

"ಕೂಡಲೇ ನಾನು ಗುರುನಾಥರ ಮನೆಗೆ ಹೋದೆ. ಇನ್ನೂ ಮನೆಯ ಮೆಟ್ಟಿಲು ಹತ್ತುತ್ತಿದ್ದಂತೆ 'ಓಹೋ ಬನ್ನಿ ನಿಮಗೆ ಕುಶಾಲ್ ಫೋನು ಮಾಡಿದನಲ್ಲ... ನೀವು ಪಿಇಎಸ್ ಕಾಲೇಜಿನಲ್ಲಿ ಓದುತ್ತಿದ್ದೀರಲ್ಲ...... ನೀವಿಷ್ಟು ಜನ ಅಣ್ಣತಮ್ಮಂದಿರಲ್ಲವಾ, ನಿಮ್ಮ ಸೈಟಿನಲ್ಲಿ ಒಂದು ಬಾವಿ ಇರಬೇಕಲ್ಲ' ಎಲ್ಲವನ್ನೂ ಕರಾರುವಾಕ್ಕಾಗಿ ಗುರುನಾಥರು ಹೇಳಿಬಿಟ್ಟರು. ಹೀಗೆ ಗುರುದರ್ಶನ ಸುಗಮವಾಗಿ ಆಯಿತು. ಗುರುನಾಥರು ಅದೆಷ್ಟೋ ಸಾರಿ ಸಿಟ್ಟು ಮಾಡಿಕೊಂಡು ಬಯ್ದಿದ್ದಿದೆ. ಹತ್ತಿರ ಬರಬೇಡ ಎಂದು ಕಠೋರವಾಗಿ ನುಡಿದದ್ದಿದೆ. ಗುರುನಾಥರ ಬಳಿ ಹೋಗಬೇಕೆಂಬ ತವಕ ಬಂದಾಗ, ಹೊರಟುಬಿಡುತ್ತಿದ್ದೆ. ಬಸ್ ನಲ್ಲಿ ಆ ಊರು ತಲುಪುವವರೆಗೆ ಅದೇನೋ ಭಯ, ಏನು ಹೇಳುತ್ತಾರೋ, ಏನೇನು ಬಯ್ಯುತ್ತಾರೋ ಎಂಬ ವಿಚಾರಗಳು ಬಂದರೂ, ಹೋಗಿ ಅವರನ್ನು ನೋಡಲೇಬೇಕೆಂಬ ಮನದಲ್ಲಿನ ಹಠ ಗುರುನಾಥರ ಮನೆಯತ್ತ ಚುಂಬಕದಂತೆ ಎಳೆದೊಯುತ್ತಿತ್ತು. ಒಮ್ಮೆ ಆ ಮನೆಯೊಳಗೆ ಕಾಲಿಟ್ಟರೆ, ಗುರುನಾಥರ ದರ್ಶನ ಮಾಡಿದರೆ - ಎಲ್ಲ ಭಯಗಳೂ ಮಾಯವಾಗಿ ಅದೇನು ಧೈರ್ಯ ಬರುತ್ತಿತ್ತೋ, ಎಲ್ಲವನ್ನೂ ಸಹಿಸಬಲ್ಲೆ. ಗುರುನಾಥರು ಏನು ಹೇಳಿದರೂ ಅದು ನಮ್ಮ ಹಿತಕ್ಕೇ, ಎನ್ನುವ ಭಾವ ಗಟ್ಟಿಯಾಗಿಸಿಬಿಡುತ್ತಿತ್ತು. ಅವರು ಅನೇಕ ಸಾರಿ ಎಫ್ ಸಿ ಪಿ ನವರೇ ನಮ್ಮ ಬಳಿ ಇದೆಲ್ಲಾ ನಡೆಯಲಿಲ್ಲ, ಬಹಳ ಕಷ್ಟ ಎಂದರೂ ನಾನು ಅವರ ಬಳಿ ಹೋಗಿ ವಿನಮ್ರನಾಗಿ ಕುಳಿತು, ಗುರುಸಾನ್ನಿಧ್ಯದ ಆನಂದದ ಅನುಭವ ಪಡೀತಿದ್ದೆ" ಎಂದು ಬಾಲು ಅವರು ತಮ್ಮ ಅನುಭವವನ್ನು ಸ್ಮರಿಸಿಕೊಂಡರು. 

ಒಲ್ಲದ ಗಂಡನಿಗೆ..... 

ಈ ಭಕ್ತರ ಮತ್ತೂ ಅನೇಕ ಅನುಭವಗಳು, ಗುರುಲೀಲೆಗಳು ಹೀಗಿವೆ ನೋಡಿ: 'ಒಮ್ಮೆ ಉಡುಪಿಯಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಈ ಹಿಂದೆ ನಾನವರನ್ನು ನೋಡಲು ಹೋದಾಗ 'ಎಲ್ಲ ಒಳ್ಳೆಯದಾಗುತ್ತದೆ, ಇನ್ನು ಇಪ್ಪತ್ತೊಂದು ದಿನ ಬಿಟ್ಟು ಮತ್ತೆ ಬನ್ನಿ' ಎಂದಿದ್ದರು. ಅದರಂತೆ ನಾನು ಮತ್ತು ನಮ್ಮ ಮಾವನವರು ಇಬ್ಬರೂ ಹೋದೆವು. ಮೆಟ್ಟಿಲು ಹತ್ತುವುದಕ್ಕೇ ಬಿಡಲಿಲ್ಲ. 'ಗುರು ಇಲ್ಲಿಲ್ಲ... ನಡೀರಿ... ನಡೀರಿ.... ಶೃಂಗೇರಿಗೆ ಹೋಗಿ ಹೋಗಿ' ಎಂದು ಗುರುನಾಥರು ಅವಸರಿಸಿದರು. ನಮ್ಮ ಮಾವನವರು ಅವಾಕ್ಕಾಗಿ ಇದೇನು ಹೀಗೆ ಎಂದು ನೋಡುತ್ತಿದ್ದಾಗ, ನಾನಂದೆ. 'ಅದು ಹಾಗೆಯೇ, ಗುರುನಾಥರು ಹೇಳಿದರೆಂದ ಮೇಲೆ ಮುಗಿದೇಹೋಯಿತು. ಬನ್ನಿ ನಾನೆಲ್ಲಾ ನಿಮಗೆ ಆಮೇಲೆ ತಿಳಿಸುತ್ತೇನೆ' ಎಂದು ಸಮಾಧಾನಿಸಿ ಶೃಂಗೇರಿಗೆ ಹೋಗಿ ಗುರುದರ್ಶನ, ಸೇವೆಗಳನ್ನು ಗುರುನಾಥರು ಹೇಳಿದಂತೆ ಮಾಡಿ ಬಂದೆವು. ಈ ಮಧ್ಯೆ ನೀವು 'ಎರಡು ವರ್ಷ ಚಿಕ್ಕಮಗಳೂರಿನಲ್ಲಿ ಇರ್ತೀರಿ' ಎಂದು ಗುರುನಾಥರು ನುಡಿದಿದ್ದರು. ನನ್ನ ಆಲೋಚನೆಯೇ ಬೇರೆ ಇತ್ತು. ಮತ್ತೆ ನಾನು ಉಡುಪಿಗೆ ಹೋಗಿದ್ದು, ರಿಲೀವ್ ಆಗಿ ಚಿಕ್ಕಮಗಳೂರಿಗೆ ಬಂದು ಡ್ಯೂಟಿಗೆ ಜಾಯಿನ್ನಾಗಿದ್ದು, ಎಲ್ಲವೂ ಗುರುನಾಥರಾಡಿದ ಭವಿಷ್ಯವಾಣಿಯಂತೆ, ಅವರ ಕೃಪೆಯಿಂದಾಗಿ ಎಂದೇ ನನ್ನ ನಂಬಿಕೆ. ಎಲ್ಲೆಲ್ಲಿ ಯಾರ್ಯಾರ ರೂಪದಲ್ಲಿ ನಿಂತು ಗುರುನಾಥರು ತಮ್ಮ ಶಿಷ್ಯರ ಕಾರ್ಯಗಳನ್ನು - ಅದೆಷ್ಟು ಸುಲಭವಾಗಿ, ಹೂವಿನ ಸರವೆತ್ತಿದಂತೆ ಮಾಡಿಸುತ್ತಿದ್ದರೆಂಬ ಅರಿವು ನನಗಾಯಿತು". 

"ಮುಂದೆ ನಮಗೆ - ನಾನೂ ನನ್ನ ಹೆಂಡತಿಯೂ ಅವರ ಬಳಿ ಹೋಗಿ ಬೇಡಿಕೊಂಡಾಗ, ಕರುಣಾಪೂರ್ಣರಾದ ಗುರುನಾಥರು ಅದೇನನ್ನೋ ತರಿಸಿ ನಮ್ಮ ಮನೆಯವರಿಗೆ ನೀಡಿದರು. 'ನಿಮಗೆ ಮಗುವಾಗುತ್ತದೆ - ಚಿಂತೆ ಬೇಡ, ಅದು ಹೆಣ್ಣು ಮಗುವೇ ಆಗುತ್ತದೆ, ಅದು ಹುಟ್ಟಿದಾಗ ಇಷ್ಟೇ ಕೆಜಿ ತೂಕವಿರುತ್ತದೆ. ನಿಮ್ಮ ಮನೆಯವರಿಗೆ ಸ್ವಲ್ಪ ಕಾಲು ನೋವಿನ ತೊಂದರೆ ಬರುತ್ತದೆ. ನೀವೇನೂ ಗಾಭರಿಯಾಗುವುದು ಬೇಡ. ಎಲ್ಲಾ ಸರಿಯಾಗುತ್ತದೆ' ಎಂದಿದ್ದರು. ಗುರುನಾಥರು ಹೇಳಿದಂತೆಯೇ ಹೆಣ್ಣು ಮಗು, ಅದರ ತೂಕ, ಎಲ್ಲವೂ ಕರಾರುವಾಕ್ಕಾಗಿ ಆಯಿತು. ಇಂದೂ ನಮ್ಮ ಇಡೀ ಕುಟುಂಬ, ಆ ಕರುಣಾಶಾಲಿ ಗುರುನಾಥರ ಪ್ರಸಾದದಿಂದ, ಕರುಣೆಯಿಂದ ಅತ್ಯಂತ ನೆಮ್ಮದಿಯಿಂದ ಇದ್ದೇವೆ. ಅವರೆಷ್ಟು ಸರಿ ಬೈದರೂ ಅದಕ್ಕೆ ನೂರರಷ್ಟು ಕರುಣೆ ತೋರಿದ್ದಾರೆ. ಮೊದಲ ಸಾರಿ ಗುರುನಾಥರ ರೀತಿನೀತಿಯನ್ನು ಅರಿಯದ ನಾವು ಅವರು ನೀಡಿದ ಉಪಾಹಾರವನ್ನೂ, ನಾವು ಉಪಾಹಾರ ಮಾಡಿ ಬಂದಿದ್ದರಿಂದ, ನಮ್ಮದಾಗಿದೆ ಬೇಡವೆಂದಿದ್ದೆವು. ಗುರುನಾಥರು ತಮಾಷೆ ಮಾಡುತ್ತಾ 'ಒಲ್ಲದ ಗಂಡನಿಗೆ ಮೊಸರನ್ನದಲ್ಲಿ ಕಲ್ಲು' ಎಂದಿದ್ದರು. ಆಮೇಲೆ ನಮ್ಮ ಮಿತ್ರರು ತಿಳಿಸಿದ ಮೇಲೆ, ಗುರುನಾಥರ ಮನೆಯಲ್ಲಿ ಯಾವಾಗ, ಏನು ಎಷ್ಟು ಕೊಟ್ಟರೂ ಗುರುಪ್ರಸಾದವೆಂದು ಸ್ವೀಕರಿಸುವುದನ್ನು ಕಲಿತೆವು. ಗುರುವಾಣಿಯಂತೆ ನಡೆಯಲೂ ಕಲಿತೆವು' ಎನ್ನುತ್ತಾರೆ ಕೆ.ಎಫ್.ಸಿ.ಐ ನ ಉದ್ಯೋಗಿ, ಗುರುಬಾಂಧವರಾದ ಬಾಲಸುಬ್ರಮಣ್ಯ ಅವರು. 

ಪ್ರಿಯ ಗುರುಬಾಂಧವ, ಓದುಗ ಮಿತ್ರರೇ, ಯಾರ್ಯಾರಿಗೆ, ಯಾವ ಯಾವ ರೀತಿ ಗುರುಕಾರುಣ್ಯ ದೊರೆತಿರುತ್ತದೆಯೋ, ಆ ಮಹನೀಯರು ಉದಾರವಾಗಿ ಈ ನಿತ್ಯ ಸತ್ಸಂಗಕ್ಕೆ ಅದೇನೇನು ನೀಡುತ್ತಾ ಬರುತ್ತಾರೋ ಬಲ್ಲವರಾರು? ಅದನ್ನೆಲ್ಲಾ ಮುಂದಿನ ಸತ್ಸಂಗದಲ್ಲಿ ಸವಿಯೋಣ. ನಿರಂತರ ನಮ್ಮೊಂದಿಗೆ ಇರುವಿರಲ್ಲಾ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment