ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 31
ಗುರುದರ್ಶನವಷ್ಟು ಸುಲಭವೇ ?
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಒಬ್ಬ ಭಕ್ತರು ಗುರುನಾಥರ ಬಗ್ಗೆ ಕೇಳಿ ತಿಳಿದಿದ್ದರಾದರೂ ಅವರನ್ನು ಕಾಣಲು ಪಟ್ಟ ಪ್ರಯತ್ನಗಳೆಲ್ಲಾ ವ್ಯರ್ಥವಾಗಿತ್ತು. ಬಹಳ ಹಿಂದೆ ಅವರ ಊರಿಗೆ ಪದೇ ಪದೇ ಗುರುನಾಥರು ಬರುತ್ತಿದ್ದರು. ಈ ವ್ಯಕ್ತಿಯ ಮನೆಯ ಮುಂದೆ ಜಗಲಿಯಲ್ಲಿ ಸಹ ಕುಳಿತಿದ್ದರಂತೆ. ಆದರೂ ಗುರುನಾಥರನ್ನು ಕಾಣುವ ಸೌಭಾಗ್ಯ ಒದಗಲಿಲ್ಲವೆಂದು ಪರಿತಪಿಸುವ ಇವರನ್ನುತ್ತಾರೆ : "ಪ್ರಖರವಾದ ಸೂರ್ಯನೇ ನಮ್ಮ ಮುಂದಿದ್ದರೂ ಕಣ್ಣು ಮುಚ್ಚಿ ಕುಳಿತವರಿಗೆ ಸೂರ್ಯನ ಬೆಳಕಿನ ಅರಿವು ಹೇಗಾಗುತ್ತದೆ. ನಮ್ಮ ಕರ್ಮ ಕಳೆಯದುದರಿಂದ ಮನೆ ಬಾಗಿಲಿಗೆ ಬಂದರೂ ಗುರುನಾಥರನ್ನು ಗುರುತಿಸಲು, ನೋಡಲು, ಅವರ ಆಶೀರ್ವಾದ ಪಡೆಯಲು ಆಗಲಿಲ್ಲ" ಎಂದು ನೊಂದುಕೊಳ್ಳುವ ಇವರು, ಕೊನೆಗೆ ಗುರುನಾಥರು ಮುಕ್ತರಾದ ವಿಚಾರ ತಿಳಿದಾಗ ಮತ್ತಷ್ಟು ಖಿನ್ನರಾದರು. ಆದರೆ ಮನಸ್ಸಿನಲ್ಲಿ ಗುರುನಾಥರ ಬಗ್ಗೆ ಅಪಾರ ಪ್ರೀತಿ, ಗೌರವ ಭಕ್ತಿಗಳು ದಿನದಿಂದ ದಿನಕ್ಕೆ ಬೆಳೆಯತೊಡಗಿತು.
ಒಂದು ದಿನ ಮತ್ಯಾರೋ ಗುರುಗಳನ್ನು ನೋಡಿಬರಲು ಹೊರಟ ಇವರಿಗೆ ಆ ಗುರುಗಳು ಊರಿನಲ್ಲಿ ಇಲ್ಲವೆಂಬುದು, ಬಹುದೂರ ಬಂದ ಮೇಲೆ ತಿಳಿಯಿತಂತೆ. ಏನು ಮಾಡುವುದು, ಗುರುದರ್ಶನ ಇಂದು ಮಾಡಲೇಬೇಕೆಂಬುದು ಇವರ ಗಟ್ಟಿ ವಿಚಾರವಾಗಿತ್ತು. ಅದೇ ಸಮಯದಲ್ಲಿ ಸಖರಾಯಪಟ್ಟಣಕ್ಕೆ ಹೋಗಿ ಗುರುನಾಥರ ವೇದಿಕೆಯ ದರ್ಶನ ಮಾಡಿ, ನಮಿಸಿ, ಧ್ಯಾನ ಮಾಡಿಕೊಂಡು ಬರುವುದೆಂದು ನಿರ್ಧರಿಸಿದರು. ಸಖರಾಯಪಟ್ಟಣವನ್ನೇನೋ ತಲುಪಿದರು. ಊರಿಗೆ ಹೊಸಬರಾದ ಇವರಿಗೆ ವೇದಿಕೆಯ ದಾರಿ ತಿಳಿದಿರಲಿಲ್ಲ. ಯಾರನ್ನೋ ಕೇಳಿದಾಗ "ನೇರವಾಗಿ ಹೋಗಿ ಅಲ್ಲೊಂದು ಚಾನಲ್ ಸಿಗುತ್ತದೆ. ಅಲ್ಲಿ ಬಲಕ್ಕೆ ಹೋಗಿ" ಎಂದರಂತೆ. ಕಾರು ಓಡಿತು.... ಓಡಿತು..... ಊರು ದಾಟಿ ಬಹುದೂರ ಸಾಗಿ ಸಿಕ್ಕ ಒಂದು ನಾಲೆಯ ಬಲಕ್ಕೆ ತಿರುಗಿ, ಅಲ್ಲೇನೂ ಕಾಣದೇ ಅಲ್ಲಿ ಸಿಕ್ಕ ಒಬ್ಬರನ್ನು ಕೇಳಿದಾಗ "ನೀವು ಬಹಳ ಮುಂದೆ ಬಂದಿದ್ದೀರಿ. ವಾಪಸ್ಸು ಹೋಗಿ ಊರಿನೊಳಗೆ ನೀವು ಎಡಗಡೆ ಚಾನಲ್ ಬಳಿ ತಿರುಗಿ ಹೋಗಿ" ಎಂದರಂತೆ.
ಮತ್ತೆ ದಾರಿ ತಪ್ಪಿ ಬಹು ದೂರ ಬಂದು ಅಲ್ಲಿ ಕೇಳಿದಾಗ ಮತ್ತೊಂದು ಸೂಚನೆಯನ್ನು ಕೊಟ್ಟು, ಸರಿಯಾದ ವಿವರವನ್ನು ಅದ್ಯಾರೋ ನೀಡಿದರು. ಅಂತೂ ಕತ್ತಲಾಗಿಬಿಟ್ಟಿತ್ತು. ಕೊನೆಗೂ ಸರಿದಾರಿ ಸಿಕ್ಕಿತಂತೆ. ವೇದಿಕೆಯನ್ನು ದರ್ಶಿಸಿ, ವೇದಿಕೆಗೆ ವಂದಿಸಿ, ಆ ಕತ್ತಲಲ್ಲೇ ಗುರುನಾಥರ ಸ್ಮರಣೆ ಮಾಡುತ್ತಾ, ಭಜನೆ ಮಾಡಿ... ಸ್ವಲ್ಪ ಹೊತ್ತು ಧ್ಯಾನ ಮಾಡುತ್ತಾ ಕುಳಿತಾಗ ಜಗ್ಗನೆ ದೀಪಗಳು ಹೊತ್ತಿಕೊಂಡವಂತೆ. ಗುರುನಾಥರ ವೇದಿಕೆಯ ಒಳ ಹೋಗಲು ಬಂದವರು ಬಾಗಿಲು ತೆರೆದರಂತೆ. ಮತ್ತಷ್ಟು ಹೊತ್ತು ಅಲ್ಲಿ ಕುಳಿತು ನಂತರ ಅಲ್ಲಿಂದ ಬರಲಾರದೇ ಹೊರಟು ಬಂದರಂತೆ ಆ ನೀರವ ಪರಿಸರ, ಗುರುನಾಥರ ವೇದಿಕೆಯ ಸಾನ್ನಿಧ್ಯ ಅವರ ಮನಕ್ಕೆ ಒಂದು ಸಾಂತ್ವನ ನೀಡಿತ್ತಂತೆ. ಗುರುನಾಥರನ್ನು ಕಾಣಲಾಗಲಿಲ್ಲವಲ್ಲ ಎಂಬ ನೋವಿಗೊಂದು ಈ ದರ್ಶನ ಮುಲಾಮಾಯಿತಂತೆ. ಅವರೆನ್ನುತ್ತಾರೆ: "ವೇದಿಕೆಯ ಬಳಿ ಬರಲೇ ನಾವಿಷ್ಟು ಬಾರಿ ತಿಳಿಯದೇ ಹಿಂದೆ ಮುಂದೆ ಓಡಾಡಬೇಕಾಯಿತು. ಆದರೆ ನೋಡಲೇಬೇಕೆಂಬ ಹಠ, ಪ್ರೀತಿ ಇದ್ದುದ್ದರಿಂದ ಆ ಕತ್ತಲಲ್ಲೂ ನಮ್ಮನ್ನು ಸರಿದಾರಿ ತೋರಿಸಿ, ವೇದಿಕೆಯ ಬಳಿ, ಒಳಗೆ ನಮ್ಮನ್ನು ಗುರುನಾಥರು ಕರೆದುಕೊಂಡರು. ಸದ್ಯ ನಮಗಿದೇ ಸಿಕ್ಕ ಬಹು ದೊಡ್ಡ ಭಾಗ್ಯ" ಎಂದು ಸಂತಸ ಪಟ್ಟ ಅವರು ಗುರುನಾಥರು ಜೀವಿತರಾಗಿದ್ದ ಕಾಲದಲ್ಲಿ ನಾವು ಅವರನ್ನು ಕಾಣಲು ಸರಿಯಾದ ಪ್ರಯತ್ನವನ್ನೇ ಮಾಡಲಿಲ್ಲವೇನೋ ಎಂದು ಪೇಚಾಡುತ್ತಾರೆ. ಗುರುದರ್ಶನ ಅಷ್ಟು ಸುಲಭವೇ? ಗುರು ನರನಾಗಿ ಬಂದಾಗ ಅರಿಯುವುದು ಬಲು ದುಸ್ತರ.
ಮತ್ತೊಮ್ಮೆ ಈ ಭಕ್ತರು ಒಂದು ಗಣಹೋಮಕ್ಕೆ ಹೊರಟಿದ್ದರು. ಗಣ ಹೋಮಕ್ಕೆ ಸೇರಿದವರೆಲ್ಲಾ ಗುರುನಾಥರ ಭಕ್ತರೇ ಎಲ್ಲಿಂದಲೋ ಕಬ್ಬು ಬರುತ್ತದೆಂದು ನಂಬಿದ್ದ ಅವರಿಗೆ ಕಬ್ಬು ಸಿಕ್ಕಿರಲಿಲ್ಲ. ಬೆಳವಾಡಿಗೆ ಈ ಹೋಮಕ್ಕೆಂದೇ ಹೊರಟ ಇವರಿಗೆ ಕಬ್ಬು ತರಲು ಫೋನು ಬಂತು. ಆಗಲೇ ಬೀರೂರಿನ ಬಳಿ ಬಂದ ಇವರು, ಬೀರೂರು, ಕಡೂರು, ಸಖರಾಯಪಟ್ಟಣಗಳಲ್ಲೆಲ್ಲಾ ಕಬ್ಬಿಗಾಗಿ ಹುಡುಕಾಡಿದರು. ಎಲ್ಲೂ ಕಬ್ಬು ಸಿಕ್ಕಿರಲಿಲ್ಲ. ಸಖರಾಯಪಟ್ಟಣದಲ್ಲೂ ಎಲ್ಲೂ ಕಬ್ಬು ಕಾಣಲಿಲ್ಲ. ಕಬ್ಬು ಬೆಳೆವ ಕೆಲವರಿಗೆ ಫೋನು ಮಾಡಿದರೂ ಏನೂ ಉಪಯೋಗವಾಗಲಿಲ್ಲ. ಕೊನೆಗೆ ಗುರುನಾಥರಿಗೆ ಕೈಮುಗಿದು ನಮ್ಮ ಪ್ರಯತ್ನ ಮುಗಿದಿದೆ. ಗುರುವೇ ನಿನ್ನ ಇಚ್ಛೆಯಂತೆ ಆಗಲಿ ಎಂದು ಮನಸ್ಸಿನಲ್ಲೇ ಬೇಡಿದರಂತೆ.
ಅಲ್ಲಿ ಆಗಲೇ ಹೋಮ ಪ್ರಾರಂಭವಾಗಿತ್ತಂತೆ. ಚಿಕ್ಕಮಗಳೂರಿಗೆ ಹೋಗಿ ತರುವಷ್ಟು ಸಮಯವೂ ಇರಲಿಲ್ಲ. ಕಾರು ಓಡುತ್ತಿತ್ತು. ಸಖರಾಯಪಟ್ಟಣದಿಂದ ಸ್ವಲ್ಪ ದೂರದಲ್ಲಿ ಒಂದು ಕಬ್ಬಿನ ಗದ್ದೆಯಲ್ಲಿ ನಾಲ್ಕು ಕಬ್ಬಿಣ ಜಲ್ಲೆಗಳು ನಿಂತಿದ್ದವು. ಅದೇಕೆ ಕಡಿದಿರಲಿಲ್ಲವೋ. ಅಲ್ಲಿದ್ದ ವ್ಯಕ್ತಿಯನ್ನು ಕೇಳಿದಾಗ "ಹೋಮಕ್ಕಾ ಸ್ವಾಮಿ, ತೆಗೆದುಕೊಂಡು ಹೋಗಿ ಸ್ವಾಮಿ. ದೇವರ ಕಾರ್ಯಕ್ಕೆ ಇದು ಬಂದಿತಲ್ಲ" ಎಂದು ತುಂಬಾ ಪ್ರೀತಿ, ಭಕ್ತಿಯಿಂದ ಹಣ ಪಡೆಯದೇ ಕೊಟ್ಟು ಬಿಟ್ಟನಂತೆ.
ಮುಂದೆ ಬೆಳವಾಡಿಯಲ್ಲಿ ಗುರುನಾಥರ ಊರಿನ ಈ ಪ್ರೆಶ್ ಕಬ್ಬು ಸಿಕ್ಕ ವಿಚಾರ ತಿಳಿಸಿದಾಗ ಅವರಿಗಾದ ಸಂಭ್ರಮ ಅಷ್ಟಿಷ್ಟಲ್ಲ. ಎಲ್ಲಿಯದೋ ಕಡಿದಿಟ್ಟ ಹಳೆಯ ಕಬ್ಬು ಸಲ್ಲದೆಂದು ಗುರುನಾಥರೇ ತಮ್ಮ ಊರಿನ ಈ ಅತ್ಯುತ್ತಮ ಕಬ್ಬನ್ನು ಗಣ ಹೋಮಕ್ಕೆ ಕಳಿಸಿದ್ದಾರೆಂದು ಅತ್ಯಂತ ಸಂತಸ ಭಕ್ತಿಗಳಿಂದ ಗುರುನಾಥರನ್ನು ಕೊಂಡಾಡುತ್ತಾ ಹೋಮ ಮಾಡಿದರಂತೆ. ಗುರುನಾಥರು ಏನು ನೀಡಿದರೂ ಅದು ಉತ್ತಮವಾದದ್ದು, ಭಾರಿಯಾಗಿರುವುದು ಅವರ ನೀಡಿಕೆಯ ವಿಶೇಷ.
ಪ್ರಿಯ ಗುರುವಿನ ಬಾಂಧವ ಸತ್ಸಂಗಾಭಿಮಾನಿಗಳೇ, ನೋಡಿ ಹೇಗಿದೆ ಗುರು ಶಕ್ತಿ, ಗುರು ಭಕ್ತಿ, ನಂಬಿಕೆ ಅಲ್ಲವೇ? ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ ಗುರು ಕಥಾನಕವನ್ನು ಆಸ್ವಾದಿಸಲು.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment