ಒಟ್ಟು ನೋಟಗಳು

Friday, July 7, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 37
ಭಗವಂತನನ್ನು ಕೊಟ್ಟು ಸಂತೃಪ್ತಿ ಪಡಿಸ್ತೀಯಾ?



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ಗುರುಗಳು, ಅವಧೂತರು ಮುಂತಾದ ಯಾವುದರ ಗಂಧ ಗಾಳಿಯೂ ಇಲ್ಲದ ಒಬ್ಬ ವ್ಯಕ್ತಿ, ತಮ್ಮ ಪೂರ್ವಜರು ಶೃಂಗೇರಿಯ ಅರ್ಚಕರಾಗಿದ್ದರೆಂಬ ಒಂದೇ ಒಂದು ನಂಟಿನಿಂದ, ಶೃಂಗೇರಿ ಶಾರದೆಯನ್ನು ಜಗದ್ಗುರುಗಳನ್ನು ನೋಡಲು ಭದ್ರಾವತಿಯಿಂದ ಹೊರಟರು. ಅದು ಅವರ ಜನ್ಮದ ಸುದಿನವಿದ್ದಿತೇ? ಯತಿಗಳ ದರ್ಶನಕ್ಕೆಂದು ಪ್ಯಾಂಟು ಶರಟುಗಳನ್ನು ಕಾರಿನಲ್ಲಿ ಬಿಚ್ಚಿಟ್ಟು ಮಡಿಯುಟ್ಟು ಹೊರಟ ಇವರಿಗೆ ಎಷ್ಟೋ ಹೊತ್ತಿನ ಮೇಲೆ ತಾವು ದುಡ್ಡನ್ನೆಲ್ಲಾ ಪ್ಯಾಂಟಿನಲ್ಲೇ ಬಿಟ್ಟು ಬಂದಿದ್ದು ಅರಿವಾಗಿ, ಯತಿಗಳಿಗೇನು ಕೊಡದೇ, ಬರಿಕೈಲಿ ಹೋಗಿ ನೋಡುವುದೇನು ಚೆನ್ನ, ಎಂದು ಮನ ಮಿಡಿಯುತ್ತಿತ್ತು. ಬಹು ದೂರ ಬಂದಾಗಿದೆ. ವಾಪಸ್ಸು ಹೋಗಿ ತರುವಲ್ಲಿ ಗುರುದರ್ಶನ ಸಿಗದೇ ಹೋಗಬಹುದಲ್ಲಾ... ಏನು ಮಾಡುವುದೆಂಬ ತಾಕಲಾಟದಲ್ಲಿ ಗುರುಸ್ಥಾನ ತಲುಪಿದಾಗ ಗುರುವಿನ ಜೊತೆಗೆ ಮತ್ತೊಬ್ಬ ತಾತಜ್ಜನ ದರ್ಶನ ಇವರು ಬಯಸದೇ ಆಯಿತು. ಅದೇ ಸುದಿನ ಅವರು ಯಾರೆಂದು ಇವರಿಗೆ ತಿಳಿದಿಲ್ಲ. ತಾತಜ್ಜ ತನ್ನ ಜೊತೆ ಇದ್ದ ಒಂದಿಬ್ಬರು ಸಹ ಜೊತೆ ಎರಡು ಮೂರು ಭಜನೆಯನ್ನು ಮಾಡಿ ಜಗದ್ಗುರುಗಳಿಗೆ ನಮಿಸಿ ಇತ್ತ ಬಂದರು. ಮುಂದೆ ಅಲ್ಲಿ ನಿಂತ ಆ ವ್ಯಕ್ತಿಯ ಬಳಿ ಬಂದು 'ತೊಗೊಳ್ಳಿ ಹತ್ತು ರೂಪಾಯಿ ಅವರಿಗೆ ಹಾಕಿ ನಮಸ್ಕರಿಸಿ, ದಾರಿ ಉದ್ದಕ್ಕೂ ದುಡ್ಡು ತರಲಿಲ್ಲ. ಖಾಲಿ ಕೈಯಲ್ಲಿ ಹೇಗೆ ನಮಸ್ಕರಿಸುವುದು ಎಂತು ಚಿಂತಿಸುತ್ತಿದ್ದೀರಲ್ಲಾ?' ಎಂದು ಕೈಗೆ ದುಡ್ಡು ಕೊಡಲು ಬಂದಾಗ ಮನದಲ್ಲಿದ್ದ ಮದ ಇವರೇನು ನನಗೆ ದುಡ್ಡು ಕೊಡೋದು? ನಾನೇ ಬೇಕಾದರೆ ಕೊಡ್ತೀನಿ, ಎಂದುಕೊಂಡಿತು. ಆದರೆ ಆ ತಾತಯ್ಯ ಬಲವಂತವಾಗಿ ಇವರ ಕೈಗೆ ಹತ್ತು ರೂಪಾಯಿ ನೀಡಿದ್ದಲ್ಲದೇ ಸೊಂಟದಿಂದ ಒಂದು ಹತ್ತು ರೂಗಳ ನೋಟಿನ ಕಟ್ಟು ತೆಗೆದು ನಿನಗೊಬ್ಬನಿಗೆ ಕೊಡುತ್ತಿಲ್ಲಾ ಇಲ್ಲಿರುವ ಎಲ್ಲರಿಗೂ ಕೊಡ್ತೀನಿ... ನೀವು ತೊಗೊಳ್ಳಿ ಎಲ್ಲ ಗುರುಗಳಿಗೆ ಹಾಕಿ ನಮಸ್ಕರಿಸಿ ಎಂದು ಹಿಂದೆ ಮುಂದೆ ಕೇಳದೆ ದುಡ್ಡನ್ನು ಎಲ್ಲರ ಕೈಗಿಡುತ್ತಾ ಹೋಗುವುದೇ? 

ಈ ತಾತಯ್ಯ ಯಾರೀ ಮನುಷ್ಯರು? ಒಂದು ತುಂಡು ಬಟ್ಟೆ ಸುತ್ತಿದ್ದಾರೆ. ಮುಖದ ಮೇಲೆ ಗಡ್ಡ ಮೀಸೆಗಳು. ತಲೆ ತುಂಬಾ ಕೂದಲು ಯಾರಿವರು? ಎಲ್ಲರಿಗೆ ದುಡ್ಡು ಕೊಟ್ಟರು. ಇವರು ಮತ್ಯಾರೂ ಅಲ್ಲ... ಅವರೇ ಪರಮ ಕರುಣಾಳು, ಎಲ್ಲರ ಮನದಲ್ಲಿ ಏನಿದೆ? ಯಾರಿಗೇನು ಬೇಕೆಂದು ತಿಳಿದು ಸಹಕರಿಸುವ ಸದ್ಗುರುಗಳು ಸಖರಾಯಪಟ್ಟಣದ ಗುರುನಾಥರು. ಆದರೆ ಆಗ ಈ ವ್ಯಕ್ತಿಗೆ ಅವರ್ಯಾರೆಂದು ತಿಳಿಯಲೇ ಇಲ್ಲ. ಮುಂದಿನದನ್ನು ಸತೀಶ್ ಕುಮಾರ್ ಅವರ ಮಾತಿನಲ್ಲೇ ಕೇಳೋಣ... ಬನ್ನಿ ಗುರುಬಂಧುಗಳೇ.... 

"ಆಮೇಲೆ ಅದು ನನಗೆ ತಿಳಿದದ್ದು... ಅವರೇ ಗುರುನಾಥರೆಂದು ಮಹಾ ಮಹಿಮರು ಎಂದೂ ನಮ್ಮ ಅಕ್ಕ ನನಗೆ ತಿಳಿಸಿದರು. ಅದಾಗಿ ಎರಡು ವರ್ಷಗಳಾದರೂ ಅವರ ಬಳಿ ಹೋಗಲು ನಾನೇನೂ ಪ್ರಯತ್ನವೇ ಮಾಡಲಿಲ್ಲ. ಒಮ್ಮೆ ಸ್ನೇಹಿತರ ಮನೆಗೆ ಮದುವೆಗೆಂದು ಚಿಕ್ಕಮಗಳೂರಿಗೆ ಹೋಗಿದ್ದೆ. ಬರುತ್ತಾ 'ಸಖರಾಯಪಟ್ಟಣ' ಊರು ಕಂಡಾಗ, ಅದ್ಯಾರೋ ಗುರುಗಳು ಇದ್ದಾರೆ. ದೇವಸ್ಥಾನದ ಬಳಿಯೇ ಅವರ ಮನೆ ಇದೆ ಎಂದು ತಿಳಿಸಿದರು. ಒಂದು ಸಾರಿ ನೋಡಿ ಬರೋಣವೆಂದು ಮನವಾಯಿತು. ಹೋದೆ. ಅವರು ಊಟ ಮಾಡಿ, ಒಂದು ಹಸುವಿನ ಮೇಲೆ ತಲೆ ಇಟ್ಟುಕೊಂಡು ಮಲಗಿಬಿಟ್ಟಿದ್ದರು. ಆ ಗೋವು ಒಂದು ಚೂರೂ ಮಿಸುಕಾಡದೇ ಮಲಗಿತ್ತು. ನನಗೆ ಇದು ತಾತಯ್ಯ ಅಲ್ಲ. ಸಾಕ್ಷಾತ್ ಕೃಷ್ಣ ಪರಮಾತ್ಮನೇ ಎಂಬ ಭಾವ ತಂದಿತ್ತು. ಆ ದೃಶ್ಯ, ಗುರುನಾಥರ ದರ್ಶನವೇನು ಅಷ್ಟು ಸುಲಭವಾಗಿ ಅಂದು ನನಗಾಗಲಿಲ್ಲ. ಎರಡು ಎರಡೂವರೆ ಗಂಟೆಗಳೇ ಕಾದಿದ್ದೆವು. ಅಲ್ಲಿದ್ದವರು ನಮ್ಮನ್ನು ನೋಡಿ.... ಹೀಗೆ ಎಷ್ಟು ಹೊತ್ತು ಕಾಯುತ್ತೀರಿ.. ನಿಮಗೆ ಹೊತ್ತಾಗಬಹುದು. ಒಳಗೆ ಹೋಗಿ ಚಂದ್ರಶೇಖರ ಭಾರತಿಗಳ ಪಾದುಕೆ ಇದೆ. ದರ್ಶನ ಮಾಡಿಕೊಂಡು ನಮಸ್ಕರಿಸಿ ಹೋಗಬಹುದು' ಎಂದರು. ಮಂದಮತಿಗೆ ಗುರುವಿನ ನಾಟಕ ಅರ್ಥವಾಗಬೇಕಲ್ಲ. ನಮಸ್ಕರಿಸಿದವನೇ ಅಂದು ಗುರುಗಳು ಹತ್ತು ರೂಪಾಯಿ ಕೊಟ್ಟಿದ್ದು ನೆನೆದು ಅಧಿಕ ಪ್ರಸಂಗಿಯಾಗಿ ಐವತ್ತರ ಒಂದು ನೋಟು ಹಾಕಿ, ಬಂದುಬಿಟ್ಟೆ. ಗುರುನಾಥರು ಹತ್ತಿರ ಬಂದರೂ ಹತ್ತಿರವಾಗಲಿಲ್ಲ. ನಮ್ಮಣ್ಣ ಗುರುನಾಥರನ್ನು ಎಂತೋ ಸೇವೆ ಮಾಡಿ ಅವರ ಹತ್ತಿರವಾಗಿದ್ದ. ಮುಂದೊಂದು ದಿನ ಮತ್ತೆ ಗುರುನಾಥರ ಮನೆಗೆ ಹೋಗುವ ಪ್ರಸಂಗ ಬಂದಿತು. ಗುರುನಾಥರಿಗೆ ನಮಿಸಿ ನಿಂತಾಗ, ನನ್ನನ್ನು ತರಾಟೆಗೆ ತೆಗೆದುಕೊಂಡರು. ಏನಯ್ಯಾ ನನ್ನ ಸಾಲ ತೀರಿಸುತ್ತೀಯಾ? ನನಗೆ ಬಡ್ಡಿ ಕೊಡುತ್ತೀಯಾ? ಗುರುವಿಗೆ ಸಾಲ ವಾಪಸ್ಸು ಮಾಡುವಷ್ಟು ದೊಡ್ಡವನಾಗಿದ್ದೀಯಾ? ಅಷ್ಟೊಂದು ದುಡ್ಡಿದೆಯಾ? ಎಷ್ಟಿಟ್ಟೀದೀಯಾ ನೀನು? ಹಾಗಲ್ಲ ಅದು ನಾನು ಕೊಟ್ಟೆ ಅಂತ ನನಗೆ ಕೊಡುವುದಲ್ಲ. ಪರಮಾತ್ಮನಿಗೆ ಆಸೆಯೂ ಇಲ್ಲ. ನಿರಾಸೆಯೂ ಇಲ್ಲ. ನಾನು ಹತ್ತು ಕೊಟ್ಟೆ ಅಂತ ನನಗೆ ಐವತ್ತು ಕೊಡುತ್ತೀಯಾ ಎಂದು ಪ್ರಶ್ನೆಗಳ ಬಾಣವನ್ನು ಗುರುನಾಥರು ನನ್ನ ಮೇಲೆ ಎಸೆದು ನನ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು. ನಾನು ಬೆವೆತು ಹೋಗಿದ್ದೆ. ಆಗ ಒಂದು ಚೂರು ವಿವೇಕ ಉದಯಿಸಿತು. ನಾನು ಮಾಡಿದ ತಪ್ಪೇನೆಂದು ಅರಿವಾಗತೊಡಗಿತು. ಬಯಸದೇ ದರ್ಶನ ಕೊಟ್ಟು, ಕೇಳದೇ  ಹಣ ಕೊಟ್ಟು, ತಾನಾರೆಂದು ತೋರಿಸಿದರೂ ಅರಿಯದಿದ್ದಾಗ ಗುರು ದಂಡಂ ದಶಗುಣಂ ಭವೇತ್ ಗಿಂತ ಮೊದಲು ಪ್ರಶ್ನೆಗಳ ಸುರಿಮಳೆಗರೆದಾಗ, ಮೋಹದ ಮುಸುಕು ಹರಿದ ಈ ಭಕ್ತರ ಕಥೆಯೇ ಇಂದಿನ ಸತ್ಸಂಗದ ವಸ್ತು. ಮುಂದೇನಾಯಿತು? ಗುರುನಾಥರದೇನೇನು ಶಿಕ್ಷೆ-ಭಿಕ್ಷೆ ನೀಡಿದರು ಎಂಬುದನ್ನು ಅರಿಯಲು ನಿತ್ಯ ಸತ್ಸಂಗಾಭಿಮಾನಿಗಳೇ, ನಾಳೆಯೂ ನಮ್ಮೊಂದಿಗೆ ಇರಿ. ಭದ್ರಾವತಿಯ ಸತೀಶ್ ಕುಮಾರ್ ಅವರು ಮತ್ತೇನು ಪ್ರಸಂಗಗಳನ್ನು ಗುರುನಾಥಾಮೃತದಲ್ಲಿ ತರುತ್ತಾರೋ.... ನಾಳೆ ತಪ್ಪದೇ ಬರುವಿರಲ್ಲಾ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....


ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment