ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 47
ಪಾದುಕಾ ಸೇವೆಯ ವೃತ್ತಿ - ಪ್ರವೃತ್ತಿ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುಮೂರ್ತಿಯವರು ಗುರುನಾಥರ ಕೃಪೆಗೆ ಪಾತ್ರರಾಗಿ ಅವರು ಇರುವವರಗೆ ಆಗಾಗ್ಗೆ ಅವರ ಸೇವೆಯಲ್ಲಿ ದರ್ಶನಭಾಗ್ಯ ಪಡೆಯುತ್ತಾ, ಅತ್ಯಂತ ಕಷ್ಟದ ದಿನಗಳಲ್ಲಿ ಅವರನ್ನು ಗುರುನಾಥರು ಕೈಹಿಡಿದು ಕಾಪಾಡಿದ ವಿಚಿತ್ರ ಆದರೂ ಸತ್ಯ ಘಟನೆಯೇ ಇಂದಿನ ಸದ್ಗುರುನಾಥ ಲೀಲಾಮೃತದ ಸತ್ಸಂಗದ ವಿಚಾರವಾಗಿದೆ. ಪ್ರಿಯ ಗುರು ಬಾಂಧವ ಸತ್ಸಂಗಾಭಿಮಾನಿಗಳೇ, ಗುರುಕೃಪೆಯ ಕಥೆಯನ್ನು ಆಲಿಸೋಣ.
ಒಮ್ಮೆ ಬೆಂಗಳೂರಿಗೆ ಹೋದ ನಾನು ಅಲ್ಲಿನ ಪಾದುಕಾಭವನಕ್ಕೆ ಹೋದೆ. ಅಲ್ಲಿರುವ ನೂರಾರು ಗುರುಗಳ ಪಾದುಕೆಗಳನ್ನು ದರ್ಶಿಸಿ, ಗುರುನಾಥರ ಪಾದುಕೆಗಳಿಗೆ ನಮಿಸಿ, ಹೊರ ಬಂದವನು, ಅಲ್ಲೇ ಇದ್ದ ಒಬ್ಬರ ಬಳಿ ಗುರುನಾಥರ ವಿಚಾರವಾಗಿ ಮಾತನಾಡುತ್ತಿದ್ದಾಗ, ದೂರದಲ್ಲಿದ್ದ ಒಬ್ಬ ವ್ಯಕ್ತಿ ನಮ್ಮ ಬಳಿ ಬಂದರು. ನಮ್ಮ ಮಾತುಗಳನ್ನು ಕೇಳುತ್ತಾ ತನ್ಮಯರಾಗಿ ನಿಂತಿದ್ದರು. ಅದು ನಮ್ಮ ಮಾತುಗಳಾಗಿರಲಿಲ್ಲ. ಗುರುನಾಥ ಲೀಲಾಮೃತವೇ ನಮ್ಮ ನಡುವಿನ ಮಾತಾಗಿತ್ತು. ಅದು ಮುಗಿದ ಮೇಲೆ ಅತ್ಯಂತ ಆನಂದದಿಂದ ಆ ಬಂದ ವ್ಯಕ್ತಿ ನನ್ನನ್ನು ಮಾತನಾಡಿಸುತ್ತಾ... "ಆ ಮಹನೀಯರ ವಿಚಾರವನ್ನು ಯಾರು ಮಾತನಾಡಿದರೂ ನನ್ನ ಕಿವಿ ಅತ್ತ ಹೋಗುತ್ತೆ. ಮನಸ್ಸು ಮುದಗೊಳ್ಳುತ್ತೆ. ಅವರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು. ಅಂತಹ ಕರುಣಾಶಾಲಿ, ಆಪತ್ಭಾಂಧವರು ನಮ್ಮ ಗುರುನಾಥರು. ಈಗಲೂ ನೋಡಿ ನನ್ನನ್ನು ಈ ಪಾದುಕಾ ಭವನದಲ್ಲಿ ಕೆಲಸ ನೀಡಿ ನಿರಂತರ ನನ್ನ ರಕ್ಷಣೆ ಮಾಡುತ್ತಿದ್ದಾರೆ. ನೀವಾಡುವ ಗುರುನಾಥರ ವಿಚಾರಗಳು ನನ್ನನ್ನು ಉಚಿತಾನುಚಿತಗಳ ಪರಿವೆ ಇಲ್ಲದೆ ನಿಮ್ಮ ಬಳಿಗೆ ಸೆಳೆದು ತಂದಿತು' ಎಂದು ಭಾವುಕರಾಗಿ ನುಡಿಯತೊಡಗಿದರು.
ಸಂಸಾರ ಎಂದ ಮೇಲೆ ತಾಪತ್ರಯಗಳು, ಸಂತಸದ ಕ್ಷಣಗಳು ಸಾಮಾನ್ಯವೇ. ಆದರೆ ಕೆಲವರಿಗೆ ತೊಂದರೆ, ಆಘಾತಗಳೇ ಅಧಿಕವಾಗಿ, ತಾವು ಇನ್ನೇನೂ ಮಾಡಲಾಗುವುದಿಲ್ಲವೆಂಬ ಅರಿವಾದಾಗ, ಭಗವಂತನತ್ತ ಮೊರೆ ಹೋಗುವುದಿದೆ. ನೊಂದವರ ನೋವನ್ನು ಅಳಿಸಲೆಂದೇ ಭೂಮಿಗೆ ಬಂಡ ಭಗವಂತನಾದ ಗುರುನಾಥರ ಬಳಿ ಈ ಗುರುಮೂರ್ತಿಯವರು ಕಷ್ಟದಿಂದ ಬಳಲಿ ಬಂದರು. ಸರಿಯಾದ ಜಾಗಕ್ಕೆ ಗುರುನಾಥರ ದೂರದ ಸಂಬಂಧ ಅಂದು ನಿಜವಾಗಿಯೂ ಹತ್ತಿರವಾಗಿತ್ತು. ಹೆಂಡತಿಗೆ ಕ್ಯಾನ್ಸರ್ ಖಾಯಿಲೆ, ಮನೆಯಲ್ಲಿ ಬಡತನ, ಬಡತನವಿದ್ದರೇನೇ ಅನೇಕ ಸಾರಿ ಭಗವಂತ ನೆನಪಾಗುವುದೇನೋ. ಗುರುಮೂರ್ತಿಯವರು ಅನೇಕ ಬಾರಿ ಗುರುನಾಥರನ್ನು ಕಾಣಬೇಕೆಂದು ಆಶಿಸಿದ್ದರು. ಇವರ ಸಂಬಂಧಿಗಳೂ ಗುರುನಾಥರನ್ನು ಕಾಣಪ್ಪಾ, ನಿನ್ನ ಬವಣೆಗಳೆಲ್ಲಾ ದೂರವಾಗುತ್ತೆ ಎಂದು ಹೇಳುತ್ತಲೇ ಇದ್ದರಂತೆ. ಆದರೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಗುರುವಿನ ಕರುಣೆ ಆಗ ತನ್ನತಾನೇ ಸಿಗುತ್ತದೆ. ಬೆಳಗಿನ ಜಾವವೇ ಗುರುನಾಥರ ಮನೆಯ ಮುಂದೆ ಗುರುಮೂರ್ತಿಯವರು ನಿಂತಿದ್ದಾರೆ.... ಮನೆಯ ಬಾಗಿಲು ತೆರೆಯಿತು. ಬಾಗಿಲು ತೆರೆದವರು ಮತ್ಯಾರೂ ಅಲ್ಲ, ಗುರುನಾಥರೇ ಅತ್ಯಂತ ಸಂತಸ ವಿನೋದದಿಂದ ಗುರುಗಳಾಡಿದ ಆ ಮೊದಲ ಭೇಟಿಯ ಗುರುಮೂರ್ತಿಯವರ ಎಲ್ಲ ಸಂಕಟಗಳನ್ನು ತಡೆಯುವ ಮುಲಾಮಾಗಿತ್ತು.
" ನಾನು ನಮಸ್ಕರಿಸಿ ಗುರುನಾಥರಿಗೆ ನನ್ನ ಪರಿಚಯ ಹೇಳಿಕೊಂಡೆ. ಆದರೆ ಕೂಡಲೇ ಅರ್ಥವಾಗದಂತೆ ನಟಿಸಿ ಯಾವ ಗುರುಮೂರ್ತಿಯಪ್ಪಾ ನೀನು, ನನಗೆ ನಾಲ್ಕು ಗುರುಮೂರ್ತಿಗಳ ಪರಿಚಯವಿದೆ.... ಅದರಲ್ಲಿ ನೀನು ಯಾವ ಗುರುಮೂರ್ತಿ ಎಂದು ನಗುತ್ತಾ ತಮಾಷೆಯಿಂದ ಕೇಳಿದರು. ಅನೇಕ ಗುರುತುಗಳನ್ನು ಹೇಳಿದರೂ ಆಗಲಿಲ್ಲ. ಕೊನೆಗೆ ನನ್ನ ಹೆಂಡತಿ ಜಯಶ್ರೀ ಹೆಸರು ಹೇಳಿದಾಗ 'ಓಹೋ, ಜಯಶ್ರೀ ಯಜಮಾನರಾ....' ಎಂದು ತುಂಬಾ ಪ್ರೀತಿಯ ಸಾಂತ್ವನದ ಮಳೆಗರೆದರು. ಮುಂದೆ ನಾನು ಅನೇಕ ಸಾರಿ ಹೋದಾಗಲೂ 'ಬನ್ನಿ ಜಯಶ್ರೀ ಯಜಮಾನರೇ' ಎಂದು ನನ್ನನ್ನು ಕರೆಯುತ್ತಿದ್ದರು. ಗುರುನಾಥರು ಮಾಡಿದ ಕೃಪೆ ಸಹಾಯ ಅದೆಷ್ಟೆಂದರೆ ನಾನು ಪಟ್ಟಿ ಮಾಡಲಾರೆ. ನನ್ನ ಜೀವನದ ಎಲ್ಲಾ ಭಾರವನ್ನು ಗುರುನಾಥರೇ ಹೊತ್ತಿದ್ದರೆಂದರೆ ತಪ್ಪೇನಿಲ್ಲ. ಜೀವನದ ಎಲ್ಲ ಸಂಘರ್ಷಗಳಲ್ಲಿ ನನ್ನ ಮನಸ್ಥಿತಿ ಡೋಲಾಯಮಾನವಾಗಿದ್ದಾಗ, ಗುರುನಾಥರ ದರ್ಶನ ನನಗೇನೋ ಅಭಯ ನೀಡುತ್ತಿತ್ತು. ಕ್ಯಾನ್ಸರ್ ನಿಂದ ನನ್ನ ಮಡದಿ ಇಹಲೀಲೆಯನ್ನು ತೊರೆದಳು. ಮುಂದೆ ನನ್ನ ಮಕ್ಕಳ ಬಗ್ಗೆಯೂ ಗುರುನಾಥರು ಆಶೀರ್ವಾದ ಮಾಡಿ 'ಏನೂ ಯೋಚನೆ ಮಾಡಬೇಡ. ಎಲ್ಲ ಒಳ್ಳೆಯದಾಗುತ್ತದೆ. ನಿನಗಿಷ್ಟ ಬಂದಾಗ ಇಲ್ಲಿಗೆ ಬಾ. ಎಷ್ಟು ದಿವಸ ಬೇಕಾದರೂ ಇರು. ಇಷ್ಟ ಬಂದಾಗ ನೀನು ಯಾರಿಗೂ ಹೇಳಬೇಕಾಗಿಲ್ಲ. ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ' ಎಂದು ಆಶೀರ್ವದಿಸಿದ್ದರು. ಇಂದು ಮಕ್ಕಳೆಲ್ಲಾ ಉನ್ನತ ಸ್ಥಿತಿಯಲ್ಲಿದ್ದಾರೆ. ತಬ್ಬಲಿಗಳ ಗತಿ ಏನು ಎಂದು ಚಿಂತಿಸಿದವನಿಗೆ ಅನಾಥರ ನಾಥರಾಗಿ ಗುರುನಾಥರು ರಕ್ಷಿಸಿದ್ದಾರೆ. ಅವರು ದೇಹಾತೀತರಾಗಿರುವ ಈ ದಿನಗಳಲ್ಲೂ ನಿರಂತರ ರಕ್ಷಣೆ ನೀಡುತ್ತಲೇ ಇದ್ದಾರೆ. ಬೆಳಗ್ಗೆ ಎದ್ದು ಒಮ್ಮೆ ಅವರ ಫೋಟೋ ನೋಡಿ ನಮಿಸಿದರೆ ದಿನವಿಡೀ ನಿಶ್ಚಿಂತೆ ಎಂದು ಹೃದಯ ತುಂಬಿ ಗುರುನಾಥರನ್ನು ಸ್ಮರಿಸುತ್ತಾರೆ.
'ಶೃಂಗೇರಿಗೆ ಹೋಗಿ ಬಾ' ಎಂದು ಅನೇಕ ಸಾರಿ ಕಳಿಸುತ್ತಿದ್ದರು. ಗುರುನಾಥರ ಬಳಿ ಹೋದಾಗಲೆಲ್ಲಾ 'ಇರಿ ಉಳೀರಿ, ಕುಳಿತುಕೊಳ್ಳಪ್ಪಾ ಹೋದರಾಯಿತು' ಎಂದು ಇರಿಸಿಕೊಳ್ಳುತ್ತಿದ್ದರು ತಮ್ಮ ಭಕ್ತರಿಗೆ. 'ಇವರನ್ನು ಅವರ ಮನೆಯ ತನಕ ಬಿಟ್ಟು ಹೋಗಿ' ಎಂದು ಆಪ್ಯಾಯಮಾನವಾಗಿ ಗುರುನಾಥರು ಆಡಿದ ಮಾತು ಕೇಳಿದವರಿಗೆ ಗುರುನಾಥರು ಎಲ್ಲೂ ಹೋಗಿಲ್ಲ. ನನ್ನ ಬಳಿಯೇ ಇದ್ದಾರೆ ಎಂದೆನಿಸುತ್ತದೆ. ಪಾದುಕಾಭವನದಲ್ಲಿ ವೃತ್ತಿಯನ್ನು ಕೊಡಿಸಿ ವೃತ್ತಿ ಪ್ರವೃತ್ತಿಗಳೆರಡೂ ಗುರುನಾಥರ ಸೇವೆಯೇ ಆಗಿರುವಂತೆ ಮಾಡಿದ ಗುರುಕಾರುಣ್ಯ ಅದೆಷ್ಟು ಜನುಮದ ಪುಣ್ಯವೋ" ಎನ್ನುತ್ತಾರೆ ಗುರುಮೂರ್ತಿಗಳು.
ಪ್ರಿಯ ಗುರುಬಾಂಧವ ಸತ್ಸಂಗಾಭಿಮಾನಿಗಳೇ... ನಾವು ಒಂದು ಹೆಜ್ಜೆ ಗುರುನಾಥರತ್ತ ನಡೆದರೆ ಅವರು ಹತ್ತು ಹೆಜ್ಜೆ ನಮ್ಮ ಬಳಿ ಬಂದು ರಕ್ಷಿಸುವ ರೀತಿ ಅನ್ಯತ್ರ ದುರ್ಲಭ. ಅಂತಹ ಗುರುನಾಥರ ನಿತ್ಯ ಸತ್ಸಂಗ ನಮಗೆ ನಿಮಗೆಲ್ಲಾ ದೊರೆಯಲೆಂದು ಬಿಡಬಹುದಲ್ಲಾ. ಮಿತ್ರರೇ, ನಾಳೆಯೂ ನಮ್ಮೊಂದಿಗೆ ಇರಿ... ಬರುವಿರಲ್ಲಾ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment