ಒಟ್ಟು ನೋಟಗಳು

Monday, July 10, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 40
ಇನ್ನೊಬ್ಬರ ವಿಚಾರ ನಿನಗೆ ಬೇಡ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಅದೊಂದು ಸಾಮಾನ್ಯ ಮನೆಯಾದರೂ ಅಲ್ಲಿ ಕಾಣುವುದೆಲ್ಲಾ ವಿಶಿಷ್ಟವಾದುದೇ. ಮನೆಯ ಒಳಹೊರಗೆ ನಾಲ್ಕಾರು ನಾಯಿಗಳು, ಎಲ್ಲೆಂದರಲ್ಲಿ ಅವು ಓಡಾಡುತ್ತಿದ್ದರೂ ಆ ಓಡಾಟದ ಹಿಂದೆ ಒಂದು ಅರ್ಥ ಇರುತ್ತಿತ್ತು. ಅನೇಕ ದನಕರುಗಳು ಅಲ್ಲಿದ್ದವು. ಆದರೆ ಅವುಗಳ ಹಾಲು ಕರೆಯುತ್ತಿರಲಿಲ್ಲ. ಅದೊಂದು ನಂದಗೋಕುಲದಂತಿತ್ತು. ಆ ಮನೆಯ ಒಬ್ಬ ಯಜಮಾನರು ಅನೇಕ ಸಾರಿ ಬಹು ಹೊತ್ತನ್ನು ಕೊಟ್ಟಿಗೆಯಲ್ಲಿ ಕಳೆಯುತ್ತಿದ್ದರು. ಮನುಷ್ಯನ ಒಡನಾಟಕ್ಕಿಂತ ಪ್ರಾಣಿಗಳ ಒಡನಾಟ ಅವರಿಗೆ ಬಹು ಪ್ರಿಯವಾಗಿರುತ್ತಿತ್ತು. ಎಷ್ಟೋ ಸಾರಿ ಬರುವ ಭಕ್ತಾದಿಗಳಿಗೆ ಹೋಟೆಲಿನಿಂದ ಮಸಾಲೆದೋಸೆ, ಚಿತ್ರಾನ್ನ, ಇಡ್ಲಿಗಳ ಪೊಟ್ಟಣಗಳು ಕ್ಷಣಾರ್ಧದಲ್ಲಿ ಬರುತ್ತಿತ್ತು. ಹೋಟೆಲಿನಿಂದ ಬಂದರೂ ಈ ಮನೆಯ ಒಳಗೆ ಬರುತ್ತಿದ್ದಂತೆ ಅವು ಗುರು ಪ್ರಸಾದವಾಗಿರುತ್ತಿತ್ತು. ಎಲ್ಲರೂ ಭಕ್ತಿಭಾವದಿಂದ ಪ್ರಸಾದವನ್ನು ಸ್ವೀಕರಿಸುತ್ತಿದ್ದರು. ಈ ಎಲ್ಲವೂ ಸಾಮಾನ್ಯವಾಗಿ ಕಂಡು ಬರುವ ದೃಶ್ಯದ ಮನೆ - ಮತ್ಯಾವುದೂ ಅಲ್ಲ. ಅದು ನಮ್ಮ ಗುರುನಾಥರಾದ ವೆಂಕಟಾಚಲಯ್ಯನವರ ಮನೆಯ ಸಾಮಾನ್ಯ ದೃಶ್ಯ. ಇದನ್ನೆಲ್ಲಾ ಆಗಾಗ್ಗೆ ಅವರ ಬಳಿ ಹೋದಾಗ ಶ್ರೀಮತಿ ಜ್ಯೋತಿ ಸುರೇಶ್ ಅವರು ಗಮನಿಸಿದ್ದು ಗುರುನಾಥರ ಸರಳತೆ, ಪ್ರಾಣಿ ಪ್ರೀತಿ, ವಿಲಕ್ಷಣವಾದ ಪ್ರಕೃತಿಯೊಡಗಿನ ಸರಳ ಸಂಬಂಧಗಳನ್ನು. ಪ್ರಿಯ ಓದುಗ ನಿತ್ಯ ಸತ್ಸಂಗಾಭಿಮಾನಿಗಳೇ, ಇಂದಿನ ಸತ್ಸಂಗದಲ್ಲಿ ಜ್ಯೋತಿಯವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ -  ಗುರುನಾಥರನ್ನು ಸ್ಮರಿಸುತ್ತಾ... 

"ಮೊಟ್ಟ ಮೊದಲು ನಾನು ತಂದೆಯವರೊಡನೆ ಗುರುನಾಥರ ಮನೆಗೆ ಹೋದೆ. ಗುರುಗಳು, ಗುರುಭಕ್ತಿಗಳ ಗಂಧಗಾಳಿ ನನಗೆ ತಿಳಿದಿರಲಿಲ್ಲ. ಗುರುನಾಥರ ಮನೆಗೆ ಹೋದಾಗ ಅಲ್ಲಿನ ವಿಶಿಷ್ಟ ವಾತಾವರಣ, ಅತ್ಯಂತ ನಿರಾಡಂಬರ ಸರಳ ನಡವಳಿಕೆಗಳು, ಆ ಮನೆಯ ಸಾನ್ನಿಧ್ಯದಲ್ಲಿ ನನಗಾದ ಆನಂದದ ಅನುಭವ, ಗುರುಗಳನ್ನು ಕಂಡಾಗ ಅವರ ತೇಜೋಮಯ ರೂಪ, ಅವರಿಗೆ ವಂದಿಸುವಂತೆ ಪ್ರೇರೇಪಿಸಿತ್ತು. ನಮ್ಮ ತಂದೆಯವರ ಕ್ಷೇಮ ಸಮಾಚಾರಗಳನ್ನು ವಿಚಾರಿಸಿದ ಗುರುಗಳು ನನಗೆ ಐವತ್ತು ರೂಪಾಯಿಗಳನ್ನು ಕೊಟ್ಟರು. ಏಕೆ ಕೊಟ್ಟರೋ ತಿಳಿಯಲಿಲ್ಲ. ಗುರುಪ್ರಸಾದವೆಂದು ಸ್ವೀಕರಿಸಿದೆ. ಗುರುವಿನ ಎಲ್ಲಾ ನಡೆಯಲ್ಲೂ ಏನೋ ಒಂದು ಮರ್ಮವಿರುತ್ತದೆ. ಮುಂದೆ ಮದುವೆಯಾದ ಮೇಲೆ ಅದೇ ಐವತ್ತು ರೂಪಾಯಿ ನನ್ನ ಪ್ರಾಣ ಉಳಿಸಿತು ". 'ಅದೊಂದು ಸಾಮಾನ್ಯ ಕಾಗದದ ತುಂಡಾಗಿರಲಿಲ್ಲ. ಗುರುನಾಥರು ನನಗೆ ನೀಡಿದ ರಕ್ಷಾಕವಚವಾಗಿತ್ತು. ಹಾಗಾಗಿ, ಅದು ನನ್ನ ಜೀವ ಉಳಿಸಿತು'. ಒಂದು ಕ್ಷಣ ಜ್ಯೋತಿಯವರು ತಮ್ಮ ಮಾತುಗಳನ್ನು ನಿಲ್ಲಿಸಿ, ಗುರುನಾಥರನ್ನು ಸ್ಮರಿಸುತ್ತಾ ಆ ಘಟನೆಯನ್ನು ನೆನೆಯುತ್ತಾ ಮೌನಿಯಾಗಿಬಿಟ್ಟರು. ಭಾವುಕ ಸ್ಥಿತಿಗಳೇ ಹೀಗೆ. ಅದರಲ್ಲೂ ಸದ್ಗುರುಗಳಾದ ವೆಂಕಟಾಚಲ ಅವಧೂತರ ಚರಿತೆ, ಕಲ್ಲು ಹೃದಯಿಗಳನ್ನೂ ಕರಗಿಸಿಬಿಡುವಂತಹುದು. ಇನ್ನು ಭಾವುಕರ ಪಾಡೇನು? 

"ಇನ್ನೊಮ್ಮೆ ನಾನು ಗುರುನಾಥರ ದರ್ಶನ ಮಾಡಲು ಹೋದೆ. ಆಗ ಕಡೂರಿನ ಉಡುಪಿ ಕೆಫೆಯವರ ಮನೆಗೆ ಹೋಗಿದ್ದೆ. ಅವರಿಂದ ಗುರುನಾಥರ ಅನೇಕ ವಿಚಾರಗಳು ನನಗೆ ತಿಳಿಯಿತು. ಗುರುನಾಥರು ಇಬ್ಬರು ಮಕ್ಕಳುಗಳ ಮದುವೆ ಒಟ್ಟಿಗೆಯಾಗುತ್ತದೆ. ಇಷ್ಟೇ ಖರ್ಚಾಗುತ್ತದೆ ಎಂದು ನುಡಿದ ಭವಿಷ್ಯಗಳೆಲ್ಲಾ ಸತ್ಯವಾಗಿದ್ದವಂತೆ. ಎಲ್ಲ ಬಲ್ಲ ಗುರುನಾಥರಿಗೆ ಇಂತಹವೆಲ್ಲಾ ಬಹು ದೊಡ್ಡದೇನಲ್ಲ. ನಮ್ಮ ತಂದೆಯವರು ಗುರುನಾಥರ ಜೊತೆಗಿದ್ದು ಅವರ ಅನೇಕ ಲೀಲಾ ನಾಟಕಗಳನ್ನು ನೋಡಿದ್ದರು. ಮುಂದೆ ಗುರುನಾಥರ ಬಳಿ ಹೋದಾಗ, ಅದೇ ಮುಗುಳ್ನಗೆಯ ಸ್ವಾಗತ. ಅವರಿಗೆ ನಮಸ್ಕರಿಸಿದೆವು. ಅದೇ ಪರಿಚಿತ ಸರಳ ವಾತಾವರಣ, ಬಂದವರ ಬಾಧೆಗಳನ್ನು ನಿವಾರಿಸುವುದರ ಜೊತೆಗೆ ಮೊದಲು ಹಸಿವನ್ನು ನೀಗಿಸುವ ಮಹಾನ್ ಅನ್ನದಾನಿ ಅವರಾಗಿದ್ದು ಅದೆಷ್ಟು ಜನ ಬಂದರೂ ಅನ್ನಪೂರ್ಣೆಯ ಕೃಪಾಕಟಾಕ್ಷ ಎಲ್ಲರಿಗಾಗುತ್ತಿತ್ತು. 

"ನಮಗೂ ಊಟ ಮಾಡಿ" ಎಂದರು. ಊಟ ಮಾಡಿ ಬಂದಿದ್ದೇವೆ ಎಂದು ನಾವೆಂದಾಗ 'ಪ್ರಸಾದವನ್ನು ಬೇಡವೆನ್ನಬಾರದಪ್ಪ' ಎಂದರು. ಗುರುನಾಥರು ಎಷ್ಟು ಸರಳವಾಗಿ ಊಟಕ್ಕೂ ಪ್ರಸಾದಕ್ಕೂ ಇರುವ ಅಂತರವನ್ನು ತಿಳಿಸುತ್ತಿದ್ದರು. ಆದರೆ ಆ ಕಡೆ ಮನ ಹೋಗಬೇಕಲ್ಲವೇ ನಮಗೆ? ಬಂದವರಿಗೆ ಅವರವರ ಚಿಂತೆಯೇ ಪ್ರಧಾನವಾಗಿ ಇರುತ್ತಿತ್ತೇನೋ.... ಗುರುನಾಥರ ಒಂದೊಂದು ಮಾತಿನಲ್ಲೂ ವಿಶೇಷ ಅರ್ಥಗಳೇ ಇದ್ದಿರುತ್ತಿತ್ತೆಂಬುದು, ಈಗ ದೂರ ನಿಂತು ಚಿಂತಿಸಿದಾಗ ಕಂಡು ಬರುತ್ತಿದೆ". 

"ಬಲವಂತವಾಗಿ ಪ್ರೀತಿಯಿಂದ ಪ್ರಸಾದವನ್ನು ಬಡಿಸಿಸಿದರು. ಹೀಗೆ ಬಂದವರಿಗೆಲ್ಲಾ ಸಮಾರಾಧನೆ ನಡೆಯುತ್ತಿತ್ತು. ಎಷ್ಟು ಜನ ಬರುತ್ತಾರೆಂಬುದು ಅದು ಹೇಗೆ ಮೊದಲೇ ಹೊಳೆದಿರುತ್ತಿತ್ತೋ. ಊಟವಾದ ನಂತರ ಗುರುನಾಥರು ಅಲ್ಲಿ ಕುಳಿತಿದ್ದರು. ನಾವು ಅವರ ಬಳಿ ಕುಳಿತೆವು. ಕಾಲು ಒತ್ತಲು ಹೋದಾಗ ಗುರುನಾಥರು 'ಬೇಡ ನಿಮ್ಮ ಸೇವೆಯ ಋಣ ನನಗೆ ಬೇಡ. ನೀವು ಬಂದ ವಿಷಯ ಏನು ಹೇಳಿ' ಎಂದರು. ಆಗ ನಾನು ನನ್ನ ತಂಗಿಯ ಬಗ್ಗೆ ಏನೋ ಪ್ರಸ್ತಾಪಿಸಲು ಹೋದಾಗ - ಗುರುನಾಥರು ಖಡಾಖಂಡಿತವಾಗಿ 'ಇಲ್ಲಿ ನಿನಗೆ ಬೇರೆಯವರ ವಿಚಾರ ಬೇಡ... ನಿನಗೇನು ಬೇಕು ನಿನ್ನ ಬಗ್ಗೆ ಮಾತ್ರ ಕೇಳಿಕೊ' ಎಂದುಬಿಟ್ಟರು". 

ಪ್ರಿಯ ನಿತ್ಯ ಸತ್ಸಂಗಾಭಿಮಾನಿಗಳೇ, ಗುರುನಾಥರ ಬಳಿ ನಾವು ಹೋಗಲು, ಅಲ್ಲಿ ನಮಗೊಂದು ಸ್ಥಾನ ದೊರಕಲು ನಮ್ಮ ಕರ್ಮಾ ಕಳೆದಿರಬೇಕು. ಅಲ್ಲಿಗೆ ಹೋಗಲಾರದಂತಹವರ ಬಗ್ಗೆ, ಕರ್ಮಾ ಸವೆಯಾದವರ ಬಗ್ಗೆ ಮಾತನಾಡಲು ಎಂದೂ ಅವಕಾಶವಿರುತ್ತಿರಲಿಲ್ಲ. ಹಾಗಾದರೆ ಜ್ಯೋತಿಯವರು ಮತ್ತೇನು ಕೇಳಿದರು. ಗುರುನಾಥರು ಅದೆಷ್ಟು ಬೈದರು. ಈ ಬೈಸಿಕೊಳ್ಳುವುದರಲ್ಲೂ ಇರುವ ಆನಂದ, ಮರ್ಮ ಅದೆಂತಹ ಮಹತ್ತರವಾದದ್ದು ಎಂಬ ಗುರುಲೀಲೆಯನ್ನು ಅರಿಯಲು ನಾಳೆಯೂ ನಮ್ಮೊಂದಿಗೆ ಇರಿ... ನಿತ್ಯ ಸತ್ಸಂಗದಲ್ಲಿ ಭಾಗಿಯಾಗುವಿರಲ್ಲ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment