ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 42
ನಿನ್ನ ಪತಿಯನ್ನು ಕರೆದುಕೊಂಡು ಬಾ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರ ಬಳಿ ಬರುವ ಮಾತೆಯರು ಸುಮ್ಮ ಸುಮ್ಮನೆ ಬರುವಂತಿಲ್ಲ. ತಮ್ಮ ಪತಿದೇವರ ಅನುಮತಿ ಪಡೆದೇ ಬರಬೇಕಿತ್ತು. ಆದರೆ ಅದನ್ನು ಗುರುನಾಥರು ತಿಳಿಸುವ ರೀತಿ ಅತಿ ಮಾರ್ಮಿಕವಾಗಿರುತ್ತಿತ್ತು. ಚಿಕ್ಕಮಗಳೂರಿನ ಒಬ್ಬ ತಾಯಿ 'ಗುರುನಾಥರನ್ನು ಕಾಣಬೇಕು ಬರುತ್ತೇನೆ' ಎಂದು ಫೋನಾಯಿಸಿದಾಗ ನಿಮ್ಮ ಯಜಮಾನರ ಬಳಿ ಹದಿಮೂರು ರೂಗಳನ್ನು ಕೇಳಿ ತೆಗೆದುಕೊಂಡು ಬಾ ಎನ್ನುತ್ತಿದ್ದರಂತೆ ಗುರುನಾಥರು. ಆಗ ಚಾರ್ಜು ಅಷ್ಟಿತ್ತು. ಪತಿಗೆ ತಿಳಿಸಿಯೇ ಪತ್ನಿ ಎಲ್ಲ ಕಾರ್ಯಗಳನ್ನು ಮಾಡಬೇಕಲ್ಲವೇ? ಇಂದಿನ ಸತ್ಸಂಗದಲ್ಲೂ ದೇವರನ್ನು ಕಾಣಬೇಕು ಎಂಬ ಹಂಬಲ ವ್ಯಕ್ತಪಡಿಸಿದ ಭಕ್ತೆಗೆ ಗುರುನಾಥರು ಹೇಳಿದ ವಿಚಾರವೆಂದರೆ ನಿನ್ನ ಪತಿಯನ್ನು ಕರೆದುಕೊಂಡು ಬಾ ಎಂಬುದೇ ಆಗಿತ್ತು. ಅದರ ವಿವರ ನೋಡಿ ಹೀಗಿದೆ.
ನಾನು ಬೆಳಿಗ್ಗೆ ಎದ್ದು ಊರಿಗೆ ಹೋರಾಡಲು ಸಿದ್ಧಳಾದೆ. ತಂದೆಯ ಮಮಕಾರದ ಗುರುನಾಥರು ಹೋಟೆಲಿನಿಂದ ಆರು ಇಡ್ಲಿ ತರಿಸಿ ತಿನ್ನಿಸಿದರು. ಮತ್ತೆ ಮನೆಯಲ್ಲಿ ಮಾಡಿದ ಎರಡು ತಟ್ಟೆ ಇಡ್ಲಿ ನೀಡಿದಾಗ ಅದನ್ನೂ ತಿನ್ನಲು ಒತ್ತಾಯಿಸಿದರು. ಅತ್ಯಲ್ಪ ತಿನ್ನುತ್ತಿದ್ದ ನಾನು ಅಷ್ಟೆಲ್ಲಾ ಹೇಗೆ ತಿಂದೆನೋ ಗುರುನಾಥರೇ ಬಲ್ಲರು. ನಂತರ ನಾನು ಹೊರಡಲು ಅನುವಾದಾಗ ಮತ್ತೇನು ಹೇಳು ಎಂದು ಗುರುನಾಥರು ಕೇಳಿದರು. ಮತ್ತೆ ನನ್ನ ಅದೇ ಆಸೆ ದೇವರನ್ನು ನೋಡಬೇಕು ಎಂದೆ. ನನ್ನನ್ನು ದೇವರ ಕೋಣೆಗೆ ಹೋಗಿ ಬರಲು ತಿಳಿಸಿದರು. ಅಲ್ಲಿಂದ ಪಾದುಕೆಗಳಿಗೆ ದೇವರ ಚಿತ್ರ, ಗುರುಗಳ ಚಿತ್ರಗಳಿಗೆ ಕೈ ಮುಗಿದು ಗುರುನಾಥರ ಬಳಿ ಬಂದು ನಿಂತುಕೊಂಡೆ. ದೇವರನ್ನು ನೋಡಿದೆಯಾ ಎಂದು ಪ್ರಶ್ನಿಸಿದರು ಗುರುನಾಥರು. ಇಲ್ಲ ಎಂದೆ. "ಹಾಗಾದರೆ ನಿನ್ನ ಪತಿಯನ್ನು ಕರೆದುಕೊಂಡು ಬಾ. ದೇವರನ್ನು ತೋರಿಸುತ್ತೇನೆ" ಎಂದರು. ಅಲ್ಲದೆ ಈಗ ಬೇಗ ಹೊರಡು ನಿನ್ನ ರೈಲು ನಿನ್ನನ್ನು ಕಾಯುವುದಿಲ್ಲ.... ನಾವು ರೈಲನ್ನು ಕಾಯಬೇಕು ಎಂದು ನನ್ನ ಕರ್ತವ್ಯವನ್ನು ನೆನಪಿಸಿದರು. ನಾನು ಅಲ್ಲಿಂದ ಮನವಿಲ್ಲದ ಮನದಿಂದ ಹೊರಟು ಬಂದೆ. ಈಗನ್ನಿಸುತ್ತಿದೆ. ನಾವು ಎದುರಿಗಿಗುವುದನ್ನೇ ನೋಡಲಾಗದ ಅಂಧರಾಗಿದ್ದಾಗ ಗುರುವು ಹೇಗೆ ಸರಿ ದಾರಿ ತೋರಿಸುತ್ತಾನೆ. ಬೈದು, ಜರಿದು, ದಂಡಿಸಿ, ಪ್ರೀತಿ ಯಿಂದ ಬುದ್ಧಿವಾದ ತಿಳಿಸುತ್ತಾ ನಮ್ಮನ್ನು ಸರಿದಾರಿಗೆ ತರುತ್ತಾನೆ. ಗುರುವಿನ ತಾಳ್ಮೆ, ಪ್ರೀತಿಗೆ ಎಲ್ಲೆಯೇ ಇಲ್ಲ. ಗುರುನಾಥರ ಬಳಿ ಹೋಗುವುದೇ ಒಂದು ಆನಂದ. ಅದನ್ನು ಎಂದೆಂದೂ ಮನಸ್ಸು ಆಶಿಸುತ್ತಿತ್ತು. ಗುರುನಾಥರ ಕೃಪೆಯಿಂದ ಅದು ಕೈಗೂಡುತ್ತಲೂ ಇತ್ತು. ಇನ್ನೊಮ್ಮೆ ದಾವಣಗೆರೆಗೆ ಹೋಗಲು ಟಿಕೇಟು ಮಾಡಿಸಿದ್ದೆ. ಮನಸ್ಸು ಸಖರಾಯಪಟ್ಟಣದತ್ತ ವಾಲಿತ್ತು. ನಮ್ಮ ತಂದೆಯವರಿಗೆ ಫೋನು ಮಾಡಿ ಹೋಗಿ ಬರಲೇ ಎಂದು ಹೇಳಿದಾಗ ಹೇಗೂ ಬಿಡುವು ಇದೆ ಹೋಗಿ ಬಾ ಎಂದು ಅನುಮತಿ ನೀಡಿದ್ದರು. ಗುರುನಾಥರ ಮನೆ ಎಂದರೇ ಒಂದು ಹಬ್ಬದ ವಾತಾವರಣವಿದ್ದಂತೆ. ಮನಕ್ಕೆ ಮುದ, ನಾಲಿಗೆಗೆ ರುಚಿ ರುಚಿಯಾದ ಪ್ರಸಾದ, ನೋಡಲು ಅಗಾಧ ಘಟನೆಗಳು, ತಿಳಿಯಲು ಸಾಕಷ್ಟು ಸದ್ ವಿಚಾರಗಳು. ಈ ದಿನವೂ ಒಂದು ಸಂಭ್ರಮವಿದ್ದರೆ ಎಷ್ಟು ಚೆನ್ನ, ಎಂದು ನೆನೆಯುತ್ತಾ ದಾವಣಗೆರೆಯನ್ನು ತಪ್ಪಿಸಿ ಗುರುನಾಥರ ಮನೆಗೆ ಬಂದೆ. ನಿಜವಾಗಿಯೂ ಒಂದು ಸಂಭ್ರಮ ನಡೆಯುತ್ತಿತ್ತು. ಅಲ್ಲಿ ಕುಳಿತ ಇಬ್ಬರು, ನನಗೆ ತಲಕಾಡಿನ ಗುರುಗಳು ಬಂದಿದ್ದಾರೆ. ಒಳಗಡೆ ಪೂಜೆ ನಡೆಯುತ್ತಿದೆ ಎಂದರು. ಸ್ವಲ್ಪ ಸಮಯ ಕಳೆದ ನಂತರ ಹೊರಗೆ ಕುಳಿತ ನಮ್ಮನ್ನೆಲ್ಲಾ ಒಳಗಡೆ ಕರೆದರು. ವಿಶೇಷ ಭೋಜನ ನೀಡಿದರು. ಪಕ್ವಾನ್ನಗಳನ್ನು ಕೇಳಿ ಕೇಳಿ ಹೊಟ್ಟೆ ತುಂಬುವಂತೆ ಬಡಿಸಿದರು. ನಂತರ ತಲಕಾಡಿನ ಗುರುಗಳನ್ನು ಕೂರಿಸಿ ಕಲಶ ಹೊತ್ತು ಎಲ್ಲರೂ ಪ್ರದಕ್ಷಿಣೆ ಬರಲು ತಿಳಿಸಿದರು. ಅದೆಷ್ಟು ಜನರಿಗೆ ಈ ಸೌಭಾಗ್ಯ ಸಿಕ್ಕಿತೋ ಅದರಲ್ಲಿ ನಾನೂ ಒಬ್ಬಳೆಂಬುದೇ ಸಂತಸ. ನಮ್ಮ ಗುರುನಾಥರ ಬಳಿ ಬಂದಾಗಲೆಲ್ಲಾ 'ಪೆಹಲೆ ಪೇಟೋಬಾ ಬಾದ್ ಮೇ ವಿಠೋಬಾ' ಎಂಬ ಮಾತಿಲ್ಲಿ ಸತ್ಯವಾಗಿರುತ್ತಿತ್ತು. ಹೊಟ್ಟೆ ದೇವರನ್ನು ಸಂತೈಸಿ, ಬಟ್ಟೆ ದೇವರನ್ನು ಕಾಣಿಸುತ್ತಿದ್ದುದು ಗುರುನಾಥರ ಒಂದು ವಿಶೇಷವಾಗಿರುತ್ತಿತ್ತು. ನಾನೆಣಿಸಿ ಬಂದುದ್ದಕ್ಕಿಂತ ಸಂಭ್ರಮ, ಪೂಜೆ-ಪುನಸ್ಕಾರಗಳು, ಹಬ್ಬದೂಟಗಳು ನನಗೆ ಗುರುಕರುಣೆಯಿಂದ ಒದಗಿತ್ತು. ಮುಂದೆ ಗುರುನಾಥರ ಮಹಾನಿರ್ವಾಣವಾದಾಗ ಅಳದವರಿಲ್ಲ. ಅದರಲ್ಲಿ ನಾನೂ ಒಬ್ಬಳು. ಸಶರೀರವಾಗಿದ್ದಾಗ ಹೇಗೆ ಸಂತೈಸುತ್ತಿದ್ದರೋ ಅದೇ ರೀತಿ ಗುರುನಾಥರು ಅಶರೀರರಾಗಿಯೂ ಸ್ಪಷ್ಟ ದೃಷ್ಟಾಂತಗಳ ಮೂಲಕ ಸಾಂತ್ವನ ನೀಡುತ್ತಾ ಬಂದಿದ್ದಾರೆ. ಯಾವುದೋ ಒಂದು ಹೊಸ ಮನೆಯನ್ನು ಸ್ವಪ್ನದಲ್ಲಿ ತೋರಿಸಿ, ಅದೇನೇನೋ ಕೆಲಸಗಳನ್ನು ನನಗೆ ವಹಿಸಿ ಒಂದು ಸ್ವಪ್ನದಲ್ಲಿ ಸೂಚಿಸಿದರು. ಮೊಂದೊಂದು ದಿನ ಆ ಮನೆಯನ್ನು ಈ ಕಣ್ಣುಗಳಿಂದಲೇ ನೋಡುವ ಪ್ರಸಂಗ ಒದಗಿಸಿದರು. ಗುರುನಾಥರ ಕೃಪೆಯಿಂದ ಅಲ್ಲೊಬ್ಬ ಮಹಾತ್ಮರ ದರ್ಶನವಾಯಿತು. ನಾನವರನ್ನು ಗುರುನಾಥರ ರೂಪದಲ್ಲೇ ಕಂಡುಕೊಂಡೆ. ಭಕ್ತ ಪ್ರಿಯರಾದ ಗುರುನಾಥರು ಭಕ್ತರ ಕಣ್ಣೊರೆಸಲು ಮಾಡುವ, ತೋರುವ ಲೀಲೆಗಳು ಅಗಾಧ. ಭಕ್ತ ಗುರುನಾಥರ ಸಂಬಂಧ ನಿರಂತರ, ಅವಿನಾಶಿ, ನಿತ್ಯಸತ್ಯ ಅಲ್ಲವೇ.... '
ಪ್ರಿಯ ಗುರುಬಾಂಧವರೇ, ಗುರುನಾಥರ ನಿರಂತರತೆ, ನಿತ್ಯ ಸತ್ಯತೆಗೆ ನಿತ್ಯ ಲೀಲಾವಿನೋದಕ್ಕೆ ಇಂದಿನ ಸತ್ಸಂಗ ಒಂದು ಉಧಾಹರಣೆಯಷ್ಟೇ. ಆಗಾಗ ನಂಬಿಕೆಯನ್ನು ಅಲ್ಲಾಡಿಸಲು ಪ್ರಯತ್ನಿಸುವ ಚಂಚಲತೆಗೆ, ಚಂಚಲ ಮನಕ್ಕೆ ನಿತ್ಯ ಸತ್ಸಂಗ ಒಂದು ದಾರಿ ತೋರೀತು. ಗುರುನಾಥರ ಕೃಪೆ ಪಡೆಯಲು ನಾಳೆಯೂ ನಮ್ಮೊಂದಿಗೆ ಇರುವಿರಲ್ಲ.... ಬರಲೇ ಧನ್ಯವಾದಗಳು ಜ್ಯೋತಿ ಸುರೇಶರವರಿಗೆ... ಎಲ್ಲ ಭಕ್ತಗಣಕ್ಕೆ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment