ಒಟ್ಟು ನೋಟಗಳು

Sunday, July 9, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 39
ಪ್ರೀತಿಯಿಂದ ಹೊರಸಿ, ಹರಸಿದ ಗುರುನಾಥರು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಪ್ರಿಯ ಸತ್ಸಂಗ ಪ್ರೇಮಿಗಳೇ... ಗುರುವಿನ ಪ್ರೀತಿ ನೋಡಿ, ಬಯ್ಯುವುದರಲ್ಲೂ ಒಂದು ಆತ್ಮೀಯತೆ ಇರುತ್ತದೆ. ಹತ್ತಿರಕ್ಕೆ ಸೆಳೆದುಕೊಳ್ಳುವ ಒಂದು ಚುಂಬಕ ಗುಣವಿರುತ್ತದೆ. ಭದ್ರಾವತಿಯ ಆ ವ್ಯಕ್ತಿ ಗುರುನಾಥರ ಬಗ್ಗೆ ಇದ್ದಕ್ಕಿದಂತೆ ಜಾಗೃತರಾದರು. ಅವರ ಪದ ಸೇವೆಯಿಂದ ಇದುವರೆಗೆ ದೂರನಾಗಿ ನನ್ನ ಜೀವನವನ್ನು ವ್ಯರ್ಥ ಮಾಡಿಕೊಂಡೆನಲ್ಲ ಎಂದು ಚಿಂತಿಸತೊಡಗಿದರಂತೆ. ಮುಂದೇನಾಯಿತು ಎಂಬುದನ್ನು ಅವರೇ ತಿಳಿಸುತ್ತಾರೆ. 

"ನನ್ನ ಮನೆಯವರೆಲ್ಲಾ ಗುರುನಾಥರ ಚರಣ ಸೇವಕರಾಗಿದ್ದರು. ಒಮ್ಮೆ ನಮ್ಮ ತಂದೆ ಗುರುನಾಥರ ಬಳಿ ಬಂದು ನನ್ನ ಮಗ ಸುಮ್ಮನೆ  ಬಿಸಿನೆಸ್ ಅದೂ ಇದೂ ಅಂತ ತಿರುಗುತ್ತಾನೆ. ಒಂದು ಮದುವೆ ಎಲ್ಲ ಏನೂ ಇಲ್ಲ ಗುರುನಾಥರೇ ನೀವೇ ಅವನಿಗೆ ಬುದ್ಧಿ ಹೇಳಬೇಕೆಂದು ಕೇಳಿದಾಗ, ಕೂಡಲೇ ಗುರುನಾಥರು 'ಮದುವೆ ಮಾಡ್ತೀಯೋ ಅವನಿಗೆ... ರಾಮನವಮಿ ಹಿಂದೆ ಮುಂದೆ ಮಾಡ್ತೀ ಏನೋ.... ಹೋಗು ಹದಿನೇಳನೇ ತಾರೀಖು ಮದುವೆ ಮಾಡು' ಎಂದು ಬಿಟ್ಟರು. ಗುರುನಾಥರಿಗೆ ಎದುರಾಡುವ ಶಕ್ತಿ ಯಾರಿಗಿದೆ? ಹೆಣ್ಣು ನೋಡಿಲ್ಲ... ಏನೂ ಸಿದ್ಧತೆಯಾಗಿಲ್ಲ. ಗುರುನಾಥರು ಮುಹೂರ್ತ ಫಿಕ್ಸ್ ಮಾಡಿಬಿಟ್ಟಿದ್ದರು. ಅವತ್ತೂ ಹದಿನೇಳಕ್ಕೇ ಮದುವೆ.... ಲಗ್ನಪತ್ರಿಕೆ ಕೊಟ್ಟು ನಮಸ್ಕರಿಸಿ ಬರಲು ಹೋಗಿದ್ದೆ. ಆಗಲೂ ಅವರು ಬೈದರು ಬುದ್ಧಿ ಹೇಳಿದರು. ಈ ಕಗ್ಗಲ್ಲನ್ನು ಕಡೆದು ತಿದ್ದಲು ಆಗಾಗ್ಗೆ ಗುರುನಾಥರ ಬೈಗುಳಗಳ ಆಶೀರ್ವಾದ ನನಗೆ ಸಿಗುತ್ತಲೇ ಇತ್ತು. ಆದರೆ ಅದರ ಅರಿವು, ಗುರುನಾಥರ ಮಾತನ್ನು ಅರ್ಥಮಾಡಿಕೊಳ್ಳಲಾರದಂತಹ ಹುಂಬನಾಗಿದ್ದೆ. 'ನೀನು ಲಗ್ನಪತ್ರಿಕೆ ಕೊಟ್ಟು ನನಗೆ ನಮಸ್ಕಾರ ಮಾಡಬೇಕಾದರೆ ನೀನು ನಾನಾಗಬೇಕು' ಎಂದರು. ನೀನಾನಾಗುವುದೆಂದರೆ ಏನು ಎಂದು ನನಗಂತೂ ತಿಳಿಯಲೇ ಇಲ್ಲ. ಗುರುನಾಥರ ಬಳಿ ಮನೆಯವರೆಲ್ಲಾ ಆಗಾಗ್ಗೆ ಹೋಗುತ್ತಲೇ ಇದ್ದೆವು. ಅಂದು ನಮ್ಮತ್ತಿಗೆ, ನನ್ನ ಹೆಂಡತಿ ನಾವುಗಳೆಲ್ಲಾ ಹೋಗಿದ್ದಾಗ ಗುರುನಾಥರು ಪ್ರೀತಿಯಿಂದ ನಮ್ಮನ್ನೆಲ್ಲಾ ಮಾತನಾಡಿಸಿದರು. ಅವರು ಮೊಸರನ್ನ ತಿನ್ನುತ್ತಿದ್ದರು. ನಮ್ಮ ಮನೆಯವಳಿಗೆ ನಮ್ಮತ್ತಿಗೆಗೆ ಗುರುನಾಥರೇ ಸ್ವತಃ ಮೊಸರನ್ನವನ್ನು ತಿನ್ನಿಸಿದರು. ನಿನಗೆ ಹೆಣ್ಣು ಮಗುವಾಗುತ್ತದೆ. ನಿಮ್ಮ ಅತ್ತಿಗೆಗೆ ಗಂಡು ಮಗುವಾಗುತ್ತದೆ ಹೋಗು ಎಂದು ಆಶೀರ್ವದಿಸಿದರು. ಇವತ್ತು ಅಂತೆಯೇ ಆಗಿದೆ. ಗುರುನಾಥರ ಕರುಣೆಯಿಂದ ಅವರು ಹೇಳಿದಂತೆಯೇ ಎಲ್ಲಾ ಸುಖವಾಗಿದ್ದೇವೆ. ಗುರುನಾಥರು ಇದ್ದಾಗಲೂ ಚೈತನ್ಯ ಸ್ವರೂಪರಾಗಿರುವಾಗಲೂ ಅವರ ಕರುಣೆ ನನಗೊದಗಿದೆ. ಇದರ ಜೊತೆಗೆ ಮತ್ತೊಬ್ಬ ಗುರುವಿನ ಸಂಪರ್ಕಕ್ಕೆ ಬಂದೆ. ಆಗ ಅವರು ಪದೇ ಪದೇ ಪ್ರಶ್ನೆಯೊಂದನ್ನು ಮಾಡುತ್ತಿದ್ದರು. 'ನೀನು ಗುರುನಾಥರ ಜೊತೆಗೆ ಇಷ್ಟು ದಿನ ಇದ್ದೆ. ಅವರಿಂದ ಏನನ್ನು ತಂದೆ? ನನಗೆ ಕೂಡಲೇ ಏನೂ ಉತ್ತರ ಕೊಡಲಾಗದಿದ್ದರೂ ಗುರುನಾಥರ ಮಾತೊಂದು ನನಗೆ ಪದೇ ಪದೇ ನೆನಪಾಗುತ್ತಿತ್ತು. ಅವರು 'ನೀನು ನಾನಾಗು ಇಲ್ಲಿಂದ ನೀನು ಏನಾದರೂ ತೆಗೆದುಕೊಂಡು ಹೋಗು ಎನ್ನುತ್ತಿದ್ದರು. ಈಗ ಮತ್ತೊಬ್ಬ ಗುರುಗಳು ಗುರುನಾಥರ ಬಳಿ ಇಷ್ಟು ದಿನ ಹೋಗಿ ಏನು ತಂದೆ? ಎಂದು ಮತ್ತೆ ಪ್ರಶ್ನಿಸಿ 'ಇವತ್ತು ನೀನದನ್ನು ಇಲ್ಲಿಂದ ತೆಗೆದುಕೊಂಡು ಹೋಗುತ್ತೀಯಾ' ಎಂದಿದ್ದರು. ಅಂದು ನಾನವರನ್ನು ಭೇಟಿ ಮಾಡಲು ಹೋದಾಗ ಡೆಂಗ್ಯೂ ಜ್ವರಗಳಲ್ಲದೇ ವಿವಿಧ ನೋವುಗಳಿಂದ ಏಳಲಾಗದ ಸ್ಥಿತಿಯಲ್ಲಿದ್ದ ನನಗಾಗ ಅನ್ನಿಸಿದ್ದು ಬಹುಶಃ ಗುರುನಾಥರು ಈ ಗುರುಗಳ ಮೂಲಕ ನನ್ನ ಆರೋಗ್ಯ ಸುಧಾರಿಸುತ್ತಿದ್ದಾರೆ. ಒಳ್ಳೆಯದೇ ಆಯಿತು. ಅಂತೂ ಗುರುನಾಥರ ಕೃಪೆಯಾಯಿತಲ್ಲ ಎಂದು ನನ್ನ ಊರಿಗೆ ಮರಳಿಗೆ. ಆದರೆ ತೀವ್ರವಾದ ಜ್ವರ ಕಾಡುತ್ತಿತ್ತು. ಅಂದು ರಾತ್ರಿ ಮಲಗಿದ್ದೆ. ಬೆಳಗಿನ ಜಾವ ನಿದ್ದೆ ಬಂದಿರಲಿಲ್ಲ. ಕಣ್ಣೆದುರಿಗೆ ಬಹುದೊಡ್ಡ ಗಾತ್ರದ ದತ್ತನ ಮೂರ್ತಿ ಕಂಡು ಬಂದಿತು. 'ನಿಮ್ಮಪ್ಪ ನಿಮ್ಮಮ್ಮ ನಿಮ್ಮಕ್ಕ ಹೇಳಿಯಾಯಿತು... ಇದುವರೆಗೂ ನಿನಗೆ ಒಂದು ಗುರುಸಪ್ತಾಹ ಮಾಡುವುದಕ್ಕಾಗಲಿಲ್ಲವೇ? ಯಾವಾಗ ಮಾಡ್ತೀ? ಎಂದು ದತ್ತ  ಮೂರ್ತಿ ಕೇಳಿದಂತಾಯಿತು. ನಾನು ಆಯಿತು, ಗುರುಸಪ್ತಾಹ ಮಾಡ್ತೀನಿ ಎಂದಾಗ ' ಈಗಲೇ ಸಪ್ತಾಹ ಮಾಡಿ ಮೂರನೆಯ ತಾರೀಖಿಗೆ ಗಾಣಗಾಪುರಕ್ಕೆ ಬಂದು ನನ್ನ ಕಾಣಬೇಕು' ಎಂದಂತಾಯಿತು. ಜ್ವರದ ತಾಪ ಅದ್ಯಾವಾಗಲೋ ಮಾಯವಾಗಿ ಹಾಗೆಯೇ ನಿದ್ದೆ ಬಂದು ಬಿಟ್ಟಿತು. ಬೆಳಗೆದ್ದು ನಮ್ಮ ತಂದೆಯವರ ಬಳಿ ಇದನ್ನು ತಿಳಿಸಿದೆ. ಅವರು 'ನೋಡಪ್ಪಾ ನಾವೆಲ್ಲಾ ಹೇಳಿದೆವು. ಗುರುಗಳೂ ಹೇಳಿಯಾಯಿತು.. ಆದರೂ ಸಪ್ತಾಹದ ಬಗ್ಗೆ ನೀನು ಮನಸ್ಸು ಮಾಡಲಿಲ್ಲ. ಅವರು ಹೇಗೆ ನಡೆಸುತ್ತಾರೋ ನಡಿ' ಎಂದಂದು ಸುಮ್ಮನಾಗಿಬಿಟ್ಟರು. ಹಾಗೇನೇ ಕ್ಯಾಲೆಂಡರ್ ನೋಡಿದೆ. ಮೂರನೇ ತಾರೀಖು ಗುರುವಾರ ಬಂದಿದೆ. ಇರುವುದು ಎಂಟೇ ದಿವಸ...... ಸಪ್ತಾಹ ಮುಗಿಸಿ ನಾನು ಗಾಣಗಾಪುರಕ್ಕೆ 'ಮೂರನೇ' ತಾರೀಖಿಗೆ ಹೋಗುವುದೆಂತು? ಆರೋಗ್ಯ ನೋಡಿದರೆ ಹೀಗೆ ಹದಗೆಟ್ಟಿದೆ. ಗುರುನಾಥರ ಮೇಲೆ ಭಾರ ಹಾಕಿ ಸಪ್ತಾಹ ಮಾಡಬೇಕು ಎಂದು ಭಾವಿಸಿ, ನಮ್ಮ ತಂದೆಯವರಿಗೂ ಹೇಳಿಬಿಟ್ಟೆ. ನಮ್ಮ ತಂದೆಯವರು ಈ ಸ್ಥಿತಿಯಲ್ಲಿ ನಿನಗೆ ಕೂರಲು ಆಗ್ತಿಲ್ಲ. ಹೆಂಗೆ ಮಾಡ್ತೀಯಾ ನಿನಗೆ ಬಿಟ್ಟಿದ್ದು ಎಂದರು. ಗುರುಗಳು ಹೇಳಿದ ಮೇಲೆ ಮಾಡಿಸಿಕೊಳ್ಳುವ ಜವಾಬ್ದಾರಿಯೂ ಅವರದೇ ಎಂದು ಗುಲ್ಬರ್ಗದಲ್ಲಿದ್ದ ಅಕ್ಕನ ಮನೆಗೆ ಹೋಗಿ... ಸಪ್ತಾಹವನ್ನೂ ಮಾಡಿ ಗಾಣಗಾಪುರದಲ್ಲಿ ಎಲ್ಲಾ ಸೇವೆ ಸಲ್ಲಿಸಿದೆ. ಎಲ್ಲವೂ ಅಲ್ಲಿಂದ ಕನಸಿನಲ್ಲಿ ನಡೆದಂತೆ ಗುರುನಾಥರು ತೊಂದರೆಯಾಗದಂತೆ ನಡೆಸಿಕೊಟ್ಟರು. ಅಲ್ಲಿಂದ ವಾಪಸ್ಸು ಬಂದೆ. ಡೆಂಗ್ಯೂ ಕೀಲು ನೋವು ಎಲ್ಲಾ ಅಂದಿನಿಂದಲೇ ಕಮ್ಮಿಯಾಯಿತು. ಅಲ್ಲಿಂದ ನನ್ನನ್ನು ಬೆಂಗಳೂರಿನ ಗುರುಪಾದುಕಾ ಭವನಕ್ಕೆ ಬಂದು ಸೇರುವಂತೆ ಗುರುನಾಥರೇ ಕಳಿಸಿದರೇನೋ, ಐದು ವರ್ಷಗಳಿಂದ ನನ್ನನ್ನು ತಮ್ಮ ಬಳಿಯಲ್ಲಿಯೇ ಹೀಗೆ ಇಟ್ಟು ಗುರುನಾಥರು ಆಶ್ರಯ ನೀಡಿದ್ದಾರೆ. ಗುರುನಾಥರು ಏನು ಒಯ್ಯುತ್ತಿ ಎಂದರೂ ನಾನೇನೂ ತರಲಾಗಲಿಲ್ಲ. ಈಗ ಅವರೇ ಎಲ್ಲವನ್ನೂ ಪ್ರೀತಿಯಿಂದ ಹೊರೆಸಿ, ಸಲಹುತ್ತಿದ್ದಾರೆ" ಎನ್ನುತ್ತಾರೆ ಆ ಭಕ್ತರು ಭಾವುಕರಾಗಿ. 

ಮಾನ್ಯ ನಿತ್ಯ ಸತ್ಸಂಗ ಪ್ರೇಮಿ ಗುರುನಾಥ ಭಕ್ತರೇ, ಗುರುಕರುಣೆ ಎಂದರೆ ಇದೆ ಅಲ್ಲವೇ. ಅಂತಹ ಕರುಣೆ ಪಡೆಯುವ ಅವಕಾಶ ನಮ್ಮೆಲ್ಲರಿಗೂ ಒಂದು ದಿನ ಒದಗಿ ಬಂದಿತೆಂದು ಆಶಿಸೋಣ. ನಾಳೆಯೂ ನಿತ್ಯ ಸತ್ಸಂಗಕ್ಕೆ ತಪ್ಪದೇ ಬರುವಿರಲ್ಲಾ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment