ಒಟ್ಟು ನೋಟಗಳು

Monday, July 3, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 33
ಊಟಕೆಲ್ಲಾ ರೆಡಿ ಮಾಡು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥



ಗುರುನಾಥರು ಮನೆಗೆ ಬರುತ್ತಾರೆಂಬ ಸಂಭ್ರಮ ಸಂತಸದಲ್ಲಿ ತನ್ನ ತಾಯಿಯವರಿಗೆ ಮನೆಗೆ ಫೋನು ಮಾಡಿ ಬರಲು ತಿಳಿಸಿದ ಭಕ್ತೆಯೊಬ್ಬರು ಹೇಗೆ ಪೇಚಿಗೆ ಸಿಕ್ಕಿಕೊಂಡರು. ಮುಂದೆ ಗುರುನಾಥರೊಡ್ಡಿದ ಪರೀಕ್ಷೆಗಳಲ್ಲಿ ಅವರು ಹೇಗೆ ಪಾರಾದರು ಎಂಬುದೇ ಇಂದಿನ ನಿತ್ಯ ಸತ್ಸಂಗದ ವಿಷಯ. ಬನ್ನಿ ಗುರುಬಾಂಧವರೇ ಗಾಯಿತ್ರಿಯವರ ಮಾತುಗಳಲ್ಲಿ ಅಂದಿನ ವಿಚಾರಗಳನ್ನು ಕೇಳೋಣ. 

"ಅಂದು ಗುರುನಾಥರು ಕೋಣಂದೂರಿನ ನಮ್ಮ ಮನೆಗೆ ಬಂದಿದ್ದರು. ಗುರುನಾಥರನ್ನು ಕಂಡ ಮನೆಯವರೆಲ್ಲಾ ಬಹು ಸಂತಸಪಟ್ಟರು. ಎಲ್ಲರೂ ನಮಸ್ಕರಿಸಿದ ನಂತರ ಕ್ಷೇಮ ಸಮಾಚಾರಗಳನ್ನು ವಿಚಾರಿಸಿದ ಗುರುನಾಥರು ಗರ್ಭಿಣಿಯಾಗಿದ್ದ ನನ್ನ ಯೋಗಕ್ಷೇಮವನ್ನು ವಿಶೇಷವಾಗಿ ವಿಚಾರಿಸಿ, ತಾವು ತಂದಿದ್ದ ಅವಲಕ್ಕಿ ಬೆಲ್ಲದ ಸಿಹಿಯನ್ನು ನೀಡಿದರು. ಅಂದು ಬಹಳ ವಿರಾಮವಾಗಿ ನಮ್ಮ ಮನೆಯಲ್ಲಿ ಇದ್ದರು. ನನಗೆ ಊಟಕ್ಕೆಲ್ಲಾ ರೆಡಿ ಮಾಡಲು ಹೇಳಿದರು. ನಾನು ಸಂತಸದ ಭರದಲ್ಲಿ ಗುರುನಾಥರು ನಮ್ಮ ಮನೆಗೆ ಬಂದಿರುವ ವಿಚಾರವನ್ನು ನಮ್ಮ ತಾಯಿಯವರಿಗೂ ತಿಳಿಸಿ ಬರಲು ಫೋನಾಯಿಸಿದ್ದೆ. ಅಲ್ಲದೆ ಗಣಪತಿ ಹೋಮವು ನಮ್ಮ ಮನೆಯಲ್ಲಿ ಇದ್ದುದರಿಂದ ತುಂಬಾ ಜನ ನಮ್ಮ ಮನೆಗೆ ಬರತೊಡಗಿದರು. ಸಾಮಾನ್ಯವಾಗಿ ಗುರುನಾಥರು ಜನ ಜಂಗುಳಿಯನ್ನಿಷ್ಟಪಡರು. ತಮ್ಮ ಭಕ್ತರಿಗಾಗಿ, ಯಾರ ಕುರಿತಾಗಿ ಬಂದಿರುತ್ತಾರೋ ಅವರಲ್ಲದೆ ಬೇರೆಯವರೆಲ್ಲಾ ಅಲ್ಲಿ ಸೇರುವ ಸೂಚನೆ ಕಂಡು ಬಿಟ್ಟರೆ ಅದು ಹೇಗೋ ಅಲ್ಲಿಂದ ಅವರು ಕಣ್ಮರೆಯಾಗಿ ಬಿಡುತ್ತಾರೆ. ಅಂದು ನಮ್ಮ ಮನೆಯಲ್ಲೂ ಹಾಗೆ ಆಯಿತು. ಗುರುನಾಥರಿಗಾಗಿ ಎಲ್ಲ ಅಡುಗೆ ಸಿದ್ಧ ಮಾಡಿಕೊಂಡೆ. ಅಡುಗೆ ಮಾಡಲು ಹೇಳಿದ, ಊಟ ಕೊಡೆಂದು ಕೇಳಿದ, ಗುರುನಾಥರೇ ಆ ಊಟ ಮಾಡದಿದ್ದರೆ ಅದೇನು ಚೆನ್ನ ಎನಿಸಿತು. ಎಲ್ಲೋ ನಾನು ಮಾಡಿದ ತಪ್ಪಿನ ಅರಿವಾಯಿತು. ಜೊತೆಗೆ ಗುರುನಾಥರಿಗೆ ಈ ಅಡುಗೆ ಮಾಡಿದುದನ್ನು ಅವರಿಗೆ ಅರ್ಪಿಸಲೇಬೇಕೆಂದು ಮನ ಹೇಳಿತು. ಎಂಟು ತಿಂಗಳ ಗರ್ಭಿಣಿ ನಾನು ಪಾಯಸ ಮುಂತಾದವುಗಳೆಲ್ಲಾ ತೆಗೆದುಕೊಂಡು ಶೃಂಗೇರಿಗೆ ಹೋದೆ. ಗುರುನಾಥರನ್ನು ಕಂಡು ಎಲ್ಲವನ್ನೂ ಅವರಿಗೆ ಅರ್ಪಿಸಿದೆ. ಆಗ ಗುರುನಾಥರು "ಏನಮ್ಮಾ, ಇಲ್ಲಿಗೂ ಬಂದ್ಯಾ.... ಎಲ್ಲಾ ಇಲ್ಲಿಗೂ ತೆಗೆದುಕೊಂಡು ಬಂದ್ಯಾ.... ನೋಡು ಅದಕ್ಕೆ ಹೇಳೋದೂ, ನನ್ನ ಜೊತೆ ಇರೋಕೆ ಹೇಳೋದು" ಎಂದು ಪ್ರೀತಿಯಿಂದ ಎಲ್ಲವನ್ನೂ ಸ್ವೀಕರಿಸಿದರು. ಆಗಲೇ ನನ್ನ ಮನಕ್ಕೆ ಸಮಾಧಾನವಾದದ್ದು. ಬಹುಶಃ ಗುರುನಾಥರಿಗೆ ಅದನ್ನು ಅರ್ಪಿಸಲಾಗದಿದ್ದರೆ.. ಗುರು ಭಿಕ್ಷೆ ನೀಡದ ನೋವು ನನ್ನನ್ನು ಎಂದೆಂದಿಗೂ ಕಾಡುತ್ತಿತ್ತೋ ಏನೋ. ಆದರೆ ಕೃಪಾಳು ಗುರುನಾಥರು ಅದಕ್ಕೆ ಅವಕಾಶ ನೀಡದೆ.. ನಮ್ಮನ್ನು ಹರಸಿದರು" ಎನ್ನುತ್ತಾರೆ ಗಾಯಿತ್ರಿಯವರು. 

ಗುರುನಾಥರು ತಮ್ಮ ಭಕ್ತರಿಗೆ ತೋರಿಸಿದ ಲೀಲೆಗಳಿಗೆ ಕೊನೆ ಮೊದಲಿಲ್ಲ. ಒಮ್ಮೆ ಒಬ್ಬ ಭಕ್ತರ ಮನೆಯಲ್ಲೊಂದು ವಿಶೇಷವಿತ್ತು. ರಾತ್ರಿಯ ಹನ್ನೊಂದು ಗಂಟೆ. ಮೂರು ಜನ ಬ್ರಾಹ್ಮಣರು ಊಟಕ್ಕಿದ್ದಾರೆ. ಮನೆಯಲ್ಲಿ ಇರುವುದು ಒಬ್ಬಿಬ್ಬರಿಗೆ ಸಾಕಾಗುವಷ್ಟು. ಕೂಡಲೇ ಆ ಭಕ್ತರಿಗೆ ನೆನಪಾದದ್ದು ಗುರುನಾಥರು. ಭಕ್ತಿಯಿಂದ 'ನೀನೆ ಕಾಪಾಡಪ್ಪಾ' ಎಂದು ಬೇಡಿದರಂತೆ. ಮೂರು ಜನ ಪುಷ್ಕಳವಾಗಿ ಊಟ ಮಾಡಿದ ಮೇಲೂ ಸಾಕಷ್ಟು ಅಡುಗೆ ಉಳಿದಿತ್ತಂತೆ. ಗುರುನಾಥರಿಗೆ ಅಸದಳವಾದದ್ದು ಏನಿದೆ ಹೇಳಿ. ಗುರು ಚರಿತ್ರೆಯಲ್ಲಿ ಭಾಸ್ಕರ ದ್ವಿಜನು ತಂಡ ಮೂರು ಜನರಿಗೆ ಆಗುವ ಪದಾರ್ಥದಲ್ಲಿ ಊರವರಿಗೆಲ್ಲಾ ಗುರುಗಳು ಉಣಿಸಲಿಲ್ಲವೇ? 

ಮತ್ತೊಮ್ಮೆ ಗುರುನಾಥರ ಜೊತೆ ಬೇರೊಂದು ಕಾರಿನಲ್ಲಿ ಹೊರಟ ಭಕ್ತರ ಕಾರಿನ ಫ್ಯಾನ್ ಬೆಲ್ಟ್ ಕಟ್ಟಾಯಿತಂತೆ. ಗಾಡಿ ಮುಂದೆ ಹೋಗುವುದಾದರೂ ಹೇಗೆ? ಆದರೂ ಗುರುನಾಥರು ತಲುಪಬೇಕಾಗಿದ್ದ ಗಂತವ್ಯದವರೆಗೆ ಇವರ ಕಾರೂ, ಸ್ವಲ್ಪ ತಡವಾಗಿ ತಲುಪಿತು. ಗುರುನಾಥರು 'ಏಕಿಷ್ಟು ತಡವಾಯಿತು?' ಎಂದು ತಿಳಿದೂ ತಿಳಿಯದಂತೆ ಕೇಳಿದರಂತೆ. ಮುಂದೆ ಇವರು ಕಾರು ರಿಪೇರಿಯನ್ನು ಮಾಡಿಸಿಕೊಂಡು, ಊರಿಗೆ ಹೊರಟಾಗ ಅವರನ್ನು ಕರೆದು ಈ ಬಾಳೆ ಹಣ್ಣನ್ನು ಮನೆ ತಲುಪುವವರೆಗೆ ನಿಮ್ಮ ಕಾರಿನಲ್ಲಿ ಇಟ್ಟುಕೊಂಡಿರಿ, ಒಳ್ಳೆಯದಾಗಿ ಹೋಗಿ ಬನ್ನಿ" ಎಂದಿದ್ದರಂತೆ. 

ಬಹುಶಃ ಮುಂದೆ ಮಾರ್ಗದಲ್ಲಿ ಯಾವುದೇ ವಿಘ್ನಗಳೂ ಎದುರಾಗದೆ, ತಮ್ಮ ಭಕ್ತರು ಮನೆ ತಲುಪಲೆಂದು ಸದಭಿಪ್ರಾಯ ಗುರುನಾಥರಿಗೆ ಇತ್ತೇನೋ. ಗುರುನಾಥರ ರೀತಿ, ಪ್ರೀತಿಯೇ ಹೀಗೆ. ತಮ್ಮ ಬಳಿಗೆ ಬಂದವರನ್ನು ವಾಪಸ್ಸು ಕಳಿಸುವಾಗ 'ಬಸ್ಸಿಗೆ ಹತ್ತಿಸಿ ಬನ್ನಿ' ಎಂದು ಶಿಷ್ಯರನ್ನು ಜೊತೆಗೆ ಕಳಿಸುವುದು. 'ನೀವು ಮನೆ ತಲುಪಿದ ಕೂಡಲೇ ಫೋನು ಮಾಡಿ' ಎಂದು ಭಕ್ತರ ಫೋನಿಗಾಗಿ ಕಾಯುತ್ತಿರುವುದು. ವಯಸ್ಸಾದವರು, ಅಶಕ್ತರು, ನಿರ್ಮಲ ಮನದ ಭಕ್ತರುಗಳನ್ನು ಯಾರಾದರೂ ನಿಗಾದಲ್ಲಿ ಕಾರಿನಲ್ಲಿ ಕಳಿಸಿಕೊಡುವ ಏರ್ಪಾಟು ಮಾಡುವುದು ಗುರುನಾಥರ ಒಂದು ವಿಶೇಷ ಕಾಳಜಿಯಾಗಿತ್ತೆಂಬುದು ಅವರ ನಿಕಟವರ್ತಿಗಳಿಗೆಲ್ಲಾ ತಿಳಿದ ವಿಷಯವೇ. 

ಅಷ್ಟು ದೊಡ್ಡ ಗೌರವಕ್ಕೆ ಪಾತ್ರರಾಗಿದ್ದರೂ, ಅಪಾರ ಜವಾಬ್ದಾರಿ ಅವರ ಮೇಲಿದ್ದರೂ ಪ್ರತಿಯೊಬ್ಬ ಭಕ್ತರ ಬಗ್ಗೆ ಗುರುನಾಥರ ಪ್ರೀತಿ ಮಮತೆ ಎಷ್ಟಿತ್ತೆಂದರೆ ಅನ್ಯತ್ರ ದುರ್ಲಭ. ಪ್ರಿಯ ಸತ್ಸಂಗಾಭಿಮಾನಿಗಳೇ, ಇಂತಹ ಅಪಾರ ಕರುಣಾಶಾಲಿಯಾ ಸಾನ್ನಿಧ್ಯ ಪಡೆದ ಭಕ್ತರೇ ಧನ್ಯರು.... ಮತ್ತೆ ನಾಳೆ ಬರುವಿರಲ್ಲಾ ಗುರು ಕಥಾ ಶ್ರವಣಕ್ಕಾಗಿ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment