ಒಟ್ಟು ನೋಟಗಳು

Friday, July 21, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 51
ಗುರುಭಕ್ತ ಬಂಧುಗಳು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ರಕ್ತ ಸಂಬಂಧಕ್ಕಿಂತ ದೊಡ್ಡದಾದ ಸಂಬಂಧ ಗುರುಬಂಧುಗಳ ಸಂಬಂಧ ಎಂದರೆ ತಪ್ಪಾಗಲಾರದೇನೋ. ಅಂದು ಭಾನುವಾರ. ಕೂಡಲಿಗೆ ಮಾಘ ಸ್ನಾನಕ್ಕಾಗಿ ನದಿಗೆ ಹೋದಾಗ ಬೆಂಗಳೂರಿನಿಂದ ಒಂದಷ್ಟು ಜನ ಸ್ನಾನಕ್ಕೆಂದು ಬಂದಿದ್ದರು. ಅಲ್ಲಿಂದ ಮುಂದೆ ಶ್ರೀಮಠದ ಗುರುಗಳ ದರ್ಶನಕ್ಕಾಗಿ ಅವರೂ ಬಂದಿದ್ದರು. ಆದರೆ ಮಠದ ಶ್ರೀಗಳು ಬೆಳಗಿನ 9:30 ರವರಿಗೆ ಹೊರ ಬರುವುದಿಲ್ಲವೆಂದು ತಿಳಿದಾಗ ನಿರಾಶೆಯಾಯಿತು. ಆದರೂ ಒಳಹೋಗಿ ಗುರುನಾಥರ ಎರಡು ಪುಸ್ತಕಗಳನ್ನು ಅವರಿಗೆ ತಲುಪಿಸಬೇಕಾಗಿತ್ತು. ಗುರುನಾಥರ ದಯೆಯಿಂದ ಶ್ರೀಮಠದ ಯತಿಗಳು ನನಗೆ ದರ್ಶನವಿತ್ತು, ಪುಸ್ತಕವನ್ನು ಬಹಳ ಆದರದಿಂದ ತೆಗೆದುಕೊಂಡುದಲ್ಲದೇ ಬೆಂಗಳೂರಿನಿಂದ ಬಂದ ಹದಿನಾರು ಜನ ಶಿಷ್ಯರಿಗೂ ಫಲ ಮಂತ್ರಾಕ್ಷತೆ ನೀಡಲು ಹೊರಬಂದರು. ನಂತರ ಅವರೆಲ್ಲಾ ಗುರುನಾಥರ ಶಿಷ್ಯರು, ಗುರುನಾಥರೊಂದಿಗೆ ಶ್ರೀಮಠಕ್ಕೆ ಅವರು ಬಂದಿದ್ದರೆಂಬ ಮಾತು ಬಂದಿತು. ಗುರುನಾಥರ ಪುಸ್ತಕಗಳ ವಿಚಾರ ಕೇಳಿದ ಅವರು ತಮಗೂ ಆ ಪುಸ್ತಕಗಳು ಬೇಕೆಂದಾಗ ಶಿವಮೊಗ್ಗದ ನನ್ನ ಮನೆ ವಿಳಾಸ ತಿಳಿಸಿ ಬಂದು ಹೋಗಿ ಎಂದು ಕರೆದಿದ್ದೆ. ಮಧ್ಯಾನ್ಹದ ಹನ್ನೆರಡಾದರೂ ಅವರು ಬರದಿದ್ದಾಗ ಪಾಪ ಅವರಿಗೇನು ಅವಸರವಿತ್ತೋ ಎಂದು ಸುಮ್ಮನಾದೆ. ಆದರೆ ಹತ್ತು ನಿಮಿಷದಲ್ಲಿ ಆ ಹದಿನಾರು ಜನ ಶಿಷ್ಯರೂ ಬಂದರು. ಸುಮಾರು ಎರಡು ಗಂಟೆಗಳ ಸತ್ಸಂಗವೇ ನಡೆಯಿತು. ಅದರಲ್ಲಿ ಬಂದ ಒಬ್ಬ ಹೆಣ್ಣು ಮಗಳು ತಮ್ಮ ಗುರುನಾಥರ ಬಗ್ಗೆ ಹೀಗೆ ಮನ ಬಿಚ್ಚಿ ಮಾತನಾಡಿದರು. ಮಾನ್ಯ ಸತ್ಸಂಗ ಪ್ರೇಮಿ ಗುರು ಬಾಂಧವರೇ, ಅದೇ ಇಂದಿನ ಸತ್ಸಂಗದ ವಿಷಯ 'ಗುರು ಬಾಂಧವ್ಯ'. 

"ನಮ್ಮ ಮೇಡಂ ಗುರುನಾಥರನ್ನು ಆರಾಧಿಸುವವರು. ನಮಗೆ ಸಂಗೀತ ಸ್ತೋತ್ರಗಳನ್ನು ಹೇಳಿಕೊಡುವಾಗ ಅನೇಕ ಸಾರಿ ಗುರುನಾಥರ ವಿಚಾರಗಳನ್ನು ತಿಳಿಸುತ್ತಿದ್ದರು. ಗುರುನಾಥರ ವಿಚಾರಗಳನ್ನು ಕೇಳುವುದೇ ಒಂದು ಆನಂದದ ವಿಷಯವಾಗಿರುತ್ತಿತ್ತು. ನಮಗೆಲ್ಲಾ ಆ ಸದ್ಗುರುಗಳನ್ನು ಕಾಣುವ ಭಾಗ್ಯ ಯಾವತ್ತೂ ದೊರೆಯುತ್ತದೆಯೋ ಎಂಬ ತವಕ ನಿರಂತರ ನನ್ನ ಮನಸ್ಸಿನಲ್ಲಿ ಇರುತ್ತಿತ್ತು. ಒಬ್ಬೊಬ್ಬರದು ಒಂದೊಂದು ರೀತಿಯ ಆಸೆ ಅಭಿಲಾಷೆಗಳಿರುತ್ತವೆ. ನಾನು ಅಲ್ಪ ತೃಪ್ತೆ. ಹಾಗಾಗಿ ನನ್ನದು ಎರಡೇ ಬೇಡಿಕೆಗಳಿದ್ದುದು. ಒಂದು ಗುರುನಾಥರ ದರ್ಶನ ಮನದಣಿಯೇ ಆಗಬೇಕು. ಮತ್ತೊಂದು ಅವರ ಹಸ್ತ ಸ್ಪರ್ಶ ಮಾಡಿ ಕಣ್ಣುಗಳಿಗೆ ಒತ್ತುಕೊಳ್ಳಬೇಕು. ಒಮ್ಮೆ ಬೆಂಗಳೂರಿನ ಒಂದು ಜಾಗದಲ್ಲಿ ನಾವೆಲ್ಲ ಸೇರಿ ಸಂಕೀರ್ತನೆಯಲ್ಲಿ ತೊಡಗಿದ್ದೆವು. ಅದ್ಯಾರೋ ಗುರುನಾಥರು ಬಂದಿದ್ದಾರೆ ಎಂಬ ವಿಚಾರವನ್ನು ತಿಳಿಸಿದರು. ನಾವೆಲ್ಲಾ ಹೋದೆವು. ಅಲ್ಲಿ ಅವರ ಮೊಟ್ಟ ಮೊದಲ ದರ್ಶನವಾಯಿತು. ಆ ಹೊಳೆಯುವ ಕಂಗಳನ್ನು ನಾನು ಎಂದೂ ಮರೆಯಲಾರೆ. ಗುರುನಾಥರ ದರ್ಶನ ಮನಕ್ಕೆ ಮುದ ನೀಡಿತ್ತು. ಆ ಮಹಾನುಭಾವರನ್ನು ಕಂಡು ಬಹು ದೊಡ್ಡ ನಿಧಿ ಸಿಕ್ಕಷ್ಟು ಸಂತಸ ನನಗಾಗಿತ್ತು. ಗುರುನಾಥರ ಬಗ್ಗೆ ಮತ್ತೂ ಭಕ್ತಿ ಅಧಿಕವಾಗುತ್ತಲೇ ಇತ್ತು. ಒಮ್ಮೆ ಅವರ ಊರಿಗೂ ಹೋಗುವ ಸೌಭಾಗ್ಯವೂ ಸಿಕ್ಕಿತು. ಗುರುನಾಥರನ್ನು ಕಾಣುವ ಜನ ಅಂದು ಆಗಲೇ ಬಂದು ಕುಳಿತಿದ್ದರು. ನಾವು ಒಳಗಡೆ ಹೋಗಿದ್ದೆವು. ಅಷ್ಟು ಹೊತ್ತಿಗೆ ಎಲ್ಲಿಂದಲೋ ಗುರುನಾಥರು ಒಳ ಬಂದರು. ಅವರಿಗೆ ನಮಿಸಿ ನಂತರ ಅವರ ಎರಡೂ ಕೈಗಳನ್ನು ಹಿಡಿದುಕೊಂಡು ಭಕ್ತಿಯಿಂದ ನನ್ನ ಕಣ್ಣಿಗೆ ಒತ್ತಿಕೊಂಡೆ. ಗುರುನಾಥರ ಆ ಹಸ್ತ ಸ್ಪರ್ಶ ನನಗೆ ರೋಮಾಂಚನಕಾರಿಯಾಗಿತ್ತು. ನನಗಿನ್ನೇನೂ ಬೇಡವೆಂಬ ತೃಪ್ತ ಭಾವವನ್ನು ನನ್ನಲ್ಲಿ ಮೂಡಿಸಿತು. ಯಾವಾಗಲೂ ಗುರುನಾಥರ ಆ ದೇದೀಪ್ಯ ಮುಖ, ಅವರ ಹಸ್ತ ಸ್ಪರ್ಶದ ದಿವ್ಯಾನುಭವ ನನಗವರು ನನ್ನ ಬಳಿಯೇ ಇದ್ದಾರೆ, ಅವರಿಗಾಗಿ ಎಲ್ಲೂ ಹುಡುಕಾಡಬೇಕಾಗಿಲ್ಲ ಎಂಬ ತೃಪ್ತಿ ನೀಡಿತು. ಅನೇಕ ಸಾರಿ ಗುರುನಾಥರ ದರ್ಶನವಾಯಿತು. ಆ ಮೇಲೆ ಅವರು ಇಹಲೀಲಾ ಜೀವನವನ್ನು ಸಮಾಪ್ತ ಮಾಡಿದ ವಿಚಾರವೂ ತಿಳಿಯಿತು. ಆದರೆ, ನನ್ನ ಗುರುನಾಥರು ನಮ್ಮ ಬಳಿಯೇ ಇದ್ದಾರೆಂಬ ಭಾವನೆ ನನಗಿದೆ. ನಿತ್ಯ ಅವರ ಭಾವಚಿತ್ರವನ್ನು ಬಳಿ ಇಟ್ಟುಕೊಂಡಿದ್ದೇನೆ. ಮನಸಾ ಅವರನ್ನು ಧ್ಯಾನಿಸಿ, ಸ್ಮರಿಸಿ ಯಾವುದೇ ಕೆಲಸಕ್ಕೆ ತೊಡಗಿದರೂ ಅವರ ರಕ್ಷಣೆ ನನಗೆ ಸಿಕ್ಕಿದೆ. ಒಮ್ಮೆ ಒಂದು ದೂರದೂರಿನ ತೀರ್ಥಯಾತ್ರೆಗೆ ನಾವೆಲ್ಲಾ ಹೊರಟಿದ್ದೆವು. ಎಲ್ಲ ಪರಿವಾರ ಆ ವಾಹನದಲ್ಲಿತ್ತು. ಇಬ್ಬರು ಮಕ್ಕಳು ನನ್ನ ಆಚೆ ಈಚೆ ತೊಡೆಯ ಮೇಲೆ ಇಟ್ಟು ಮಲಗಿದ್ದವು. ಪ್ರಯಾಣ ಮಧ್ಯದಲ್ಲಿ ವಾಹನ ಕೆಟ್ಟು ಹೋಯಿತು. ಎಲ್ಲರೂ ಇಳಿದಿದ್ದರು. ಗಾಡಿ ನಿಂತುಕೊಂಡ ಜಾಗ ತುಂಬಾ ಅಪಾಯಕಾರವಾಗಿತ್ತಂತೆ. ಮುಂದಿನಿಂದ ಹಿಂದಿನಿಂದ ಬರುವ ವಾಹನದಲ್ಲಿ ಇದ್ದವರೆಲ್ಲಾ ಆಕ್ಸಿಡೆಂಟ್ ಆಗುವಂತಹ ಜಾಗ. ಕೊನೆಗೆ ವಾಹನದಲ್ಲಿ ಇದ್ದವರನ್ನೆಲ್ಲಾ ಬೇರೆ ವಾಹನ ತಂದು ಪ್ರಯಾಣ ಮುಂದುವರೆಸಲಿರುವಾಗ ನನ್ನನ್ನು ಎಬ್ಬಿಸಿದರು ಹಾಗೂ ಎಲ್ಲ ಪರಿಸ್ಥಿತಿಗಳ ಅರಿವಾಗಿದ್ದು ನನಗೆ ಆಗಲೇ. ಪ್ರವಾಸ ಹೊರಡುವ ಮುನ್ನ ಗುರುನಾಥರಿಗೆ ನಮಿಸಿ, ಬೇಡಿಕೊಂಡು ಹೊರಟಿದ್ದೆ. ಆ ಗುರುನಾಥರ ಕೃಪೆ ನಮ್ಮನ್ನೆಲ್ಲಾ ರಕ್ಷಿಸುತ್ತಿದೆ. ನಮ್ಮೆಲ್ಲ ಕೆಲಸಗಳನ್ನು ಅವರೇ ನಿಭಾಯಿಸುತ್ತಿದ್ದಾರೆ ಎಂಬುದು ನನ್ನ ನಂಬಿಕೆ. ಇಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇವೆ" ಎಂದು ವಿವರಿಸುತ್ತಾರೆ, ಬೆಂಗಳೂರಿನ ವತ್ಸಲ ಎಂಬ ಗುರುಭಕ್ತೆ. 

ಸದ್ಭಕ್ತ ಸತ್ಸಂಗಾಭಿಮಾನಿಗಳೇ, ದೇಶದ ಉದ್ದಗಲಕ್ಕೆ ಎಲ್ಲೆಲ್ಲೋ ಹರಡಿರುವ, ಕಂಡು ಕೇಳರಿಯದ, ತಿಳಿಯದ, ಆದರೆ ಗುರುನಾಥರ ಭಕ್ತರಾದವರು ಹೀಗೆ ಎಲ್ಲೆಲ್ಲಿಂದಲೋ ಬಂದು ನನ್ನೊಂದಿಗೆ ಗುರುನಾಥರ ವಿಚಾರಗಳ, ಭಾವಗಳ ವಿನಿಮಯ ಮಾಡಿಕೊಳ್ಳುವುದೂ ಹಾಗೂ ಅದು ಈ ಬರಹಗಳ ಮೂಲಕ ಅನೇಕ ಗುರುನಾಥರ ಶಿಷ್ಯರ ಹೃದಯ ತಲುಪುವುದೂ ಗುರುನಾಥರ ಒಂದು ಲೀಲೆಯೇ. ಈ ಗುರುಭಕ್ತ ಬಾಂಧವ್ಯ ಮತ್ತೂ ವಿಸ್ತಾರವಾಗಲಿ, ಮತ್ತಷ್ಟು ಗುರುನಾಥರ ಮಹಿಮೆಯನ್ನು ನಮ ನಿಮಗೆಲ್ಲಾ ಉಣಿಸಲಿ. ನಾಳೆಯೂ ಬನ್ನಿ, ಗುರು ಗುಣಗಾನ ಮಾಡಲು. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment