ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 46
ಅಪ್ಪ ಅಮ್ಮ ಇದ್ದಲ್ಲಿ ಮದುವೆ ಮಾಡು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಸರಳ ವಿವಾಹದ ಹರಿಕಾರರಾಗಿದ್ದ ಗುರುನಾಥರು ಎಂದೂ ಆಡಂಬರವನ್ನು ಇಷ್ಟಪಡುತ್ತಿರಲಿಲ್ಲ. ಅದು ವಿವಾಹವಿರಲಿ, ಪೂಜೆ ಪುನಸ್ಕಾರಗಳಿರಲಿ, ತೋರಿಕೆಗೆ ಗುರುನಾಥರಲ್ಲಿ ಬೆಲೆ ಇರುತ್ತಿರಲಿಲ್ಲ. ಅಷ್ಟೇ ಅಲ್ಲದೆ ಮದುವೆ ಎಂಬುದು ಒಂದು ಸಾಂಸಾರಿಕ ವಿಷಯ. ಒಂದು ಕುಟುಂಬದ ವಿಷಯ. ಹಾಗಾಗಿ ಗುರುನಾಥರು ವರ ಪಂಚಕರಿದ್ದರೆ ಸಾಕೆಂಬುದನ್ನು ಅನೇಕ ಬಾರಿ ಶೃತ ಪಡಿಸಿದ್ದರು. ಗುರುನಾಥರ ಮಾತನ್ನು ಕೇಳಿ ಮಾಡುವೆ ನಡೆಸಿದವರು ಅತ್ಯಂತ ಆನಂದವಾಗಿದ್ದಾರೆ. ಅಂತಹವರಲ್ಲಿ ಒಬ್ಬರು ಗುರುನಾಥರ ಕೃಪಾಕಟಾಕ್ಷವಾದ ರೀತಿಯನ್ನಿಲ್ಲಿ ನಮ್ಮ ನಿತ್ಯ ಸತ್ಸಂಗಕ್ಕೆ ಹಂಚಿಕೊಂಡಿದ್ದಾರೆ.
'ನಮ್ಮ ಷಡ್ಕನ ಮಗಳ ಮದುವೆಗೆ ಸಿದ್ಧತೆ ನಡೆಸಿದ್ದರು. ಗಂಡಿನ ಕಡೆಯವರು ಗುರುನಾಥರ ಕಟ್ಟಾ ಅಭಿಮಾನಿಗಳು. ಹಾಗಾಗಿ ಮದುವೆಯನ್ನು ಮನೆಯಲ್ಲಿ ಸರಳವಾಗಿ ಮಾಡಿ ಕೊಡಿ, ಊಟ ತಿಂಡಿಗೆ ಏನಾದರೂ ವ್ಯವಸ್ಥೆ ಮಾಡಿ' ಎಂದಿದ್ದರು. ಅದರಂತೆ ನಮ್ಮ ಷಡ್ಕನ ಮನೆಯಲ್ಲಿ ಮದುವೆ ಮಾಡಿ, ಹಾಸನದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆಯನ್ನು ಮಾಡುವುದೆಂದು ಎಲ್ಲದಕ್ಕೂ ಅಡ್ವಾನ್ಸ್ ನೀಡಿ, ಗುರುನಾಥರನ್ನೂ ಒಂದು ಮಾತು ಕೇಳಿ ಬರೋಣವೆಂದು ಹೋದಾಗ, ಇವರ ಯೋಜನೆಗಳೆಲ್ಲಾ ತಲೆಕೆಳಕಾಗುತ್ತಿತ್ತು. ನಮ್ಮ ಷಡ್ಕನ ತಂದೆ ತಾಯಿ ವಯಸ್ಸಾದವರು. ಅವರು ಓಡಾಡುವ ಸ್ಥಿತಿಯಲ್ಲಿ ಇರಲಿಲ್ಲ. ಭದ್ರಾವತಿಯಲ್ಲಿ ಅವರು ಇದ್ದರು. ತಂದೆ ತಾಯಿಗಳೇ ಸರ್ವಸ್ವವಲ್ಲವೇ? ಮೊಮ್ಮಗಳ ಮದುವೆಯನ್ನು ನೋಡುವ ಆಸೆ ಆ ಹಿರಿಯರಿಗೆ ಇಲ್ಲದಿರುತ್ತದೆಯೇ? ಗುರುನಾಥರ ಬಳಿ ಹೋದಾಗ ಅವರು ಮದುವೆಯನ್ನು 'ನಿಮ್ಮ ಹಿರಿಯರು ಇರುವ ಜಾಗದಲ್ಲೇ ಮಾಡಿ. ನಿಮ್ಮಪ್ಪ ಎಲ್ಲಿದ್ದಾರೋ ಅಲ್ಲಿ ಮಾಡಿ' ಎಂದು ಬಿಟ್ಟರು. ಆಗ ನಮ್ಮ ಷಡ್ಕನವರು 'ಅವರು ಭದ್ರಾವತಿಯಲ್ಲಿ ಇದ್ದಾರೆ. ಅಲ್ಲಿ ಹೋಗಿ ಮಾಡುವುದು ಸ್ವಲ್ಪ.... ' ಎಂದಾಗ ನಿಮ್ಮ ತಂದೆಯ ಜವಾಬ್ದಾರಿ ಬರೆ ನಿಮ್ಮಣ್ಣ ವಹಿಸಿಕೊಂಡರೆ ಸಾಕಾ.... ನಿಮಗೂ ಅವರ ಜವಾಬ್ದಾರಿ ಇರುವುದಿಲ್ಲವಾ. ಅಲ್ಲಿ ಮಾಡುವುದಾದರೆ ಮಾಡಿ. ಇಲ್ಲವಾದರೆ ನಿಮಗೆ ತಿಳಿದಂತೆ ಮಾಡಿ' ಎಂದು ಖಡಾಖಂಡಿತವಾಗಿ ನುಡಿದುಬಿಟ್ಟರು. ಗುರುನಾಥರ ಬಳಿಯಿಂದ ಬಂದ ನಮ್ಮ ಷಡ್ಕ ನನ್ನ ಬಳಿ ಈ ವಿಚಾರ ತಿಳಿಸಿದಾಗ ನನಗೆ ಆಶ್ಚರ್ಯವಾಯಿತು. ಎಲ್ಲಾ ಸಿದ್ಧ ಮಾಡಿಕೊಂಡಾಗಿದೆ. ಎಲ್ಲರಿಗೆ ತಿಳಿಸಿಯಾಗಿದೆ. ಈಗ ಭದ್ರಾವತಿಗೆ ಶಿಫ್ಟ್ ಮಾಡಿ ಮದುವೆ ಮಾಡುವುದೇನು ಅಷ್ಟು ಸುಲಭವಾ, ನನಗಂತೂ ಏನೂ ತಿಳೀತಿಲ್ಲಾ, ನಿಮ್ಮಿಷ್ಟ ಗುರುವಾಜ್ಞೆಯನ್ನು ಮೀರುವವರಾರು. ಗುರುವಿನ ಇಚ್ಛೆ ಇದ್ದಾಗ ಅಸಾಧ್ಯವಾದುದು ಏನಿರುತ್ತದೆ. ಮದುವೆಗೆ ಎರಡು ದಿನ ಮುಂಚೆ ಭದ್ರಾವತಿಗೆ ನಾನು ಹೋದಾಗ ಅಲ್ಲಿಯ ವಾತಾವರಣವನ್ನು ಕಂಡು ಆಶ್ಚರ್ಯವಾಯಿತು. ಪಕ್ಕದ ಖಾಲಿ ಇದ್ದ ಎರಡು ಮನೆಗಳನ್ನು ಸಂಪೂರ್ಣ ಇವರಿಗೆ ಬಿಟ್ಟುಕೊಟ್ಟಿದ್ದರು. ಛತ್ರಕ್ಕಿಂತ ಆರಾಮವಾಗಿ ಮದುವೆ ಮಾಡುವ ಎಲ್ಲಾ ಒಂದಾಗಿ ಬೆರೆತು ಇರುವ ಎಲ್ಲಾ ಸಾಧ್ಯತೆಗಳೂ ಅಲ್ಲಿ ಕಂಡುಬಂತು. ಛತ್ರದಲ್ಲಿ ನಡೆದಂತೆಯೇ ಮದುವೆ ನಡೆಯಿತು. ವಧು ವರರನ್ನು ಸ್ವಾಗತಿಸಲು ತರೀಕೆರೆಯಲ್ಲಿಯೇ ಗುರುನಾಥರು ಬಂದು ನಿಂತಿದ್ದರು. ಹಾಲನ್ನು ನೀಡಿ ಗುರುನಾಥರು ಮದು ಮಕ್ಕಳನ್ನು ಆಶೀರ್ವದಿಸಿ ಕಳಿಸಿದರು. ಅದ್ದೂರಿಯ ಮದುವೆ ಹಿರಿಯರ ಎದುರಿಗೆ ಆಯಿತು. ಆ ವೃದ್ಧರೂ ಸಂಪೂರ್ಣ ಮನಸ್ಸಿನಿಂದ ಮೊಮ್ಮಕ್ಕಳ ಮದುವೆಯನ್ನು ನೋಡಿ ಆನಂದಿಸಿ ಹರ್ಷಿಸಿದರು. ಗುರುನಾಥರ ಮಾತಿನ ನಿರ್ಧಾರದ ಪ್ರಭಾವವಿದು ಬಹುಶಃ ದೂರದೃಷ್ಟಿ ಇಲ್ಲದ ನಮ್ಮ ನಿರ್ಧಾರಕ್ಕೂ ದೂರದೃಷ್ಟಿಯ ಗುರುನಾಥರ ನಿರ್ಧಾರದಲ್ಲಿ ಎಷ್ಟು ವ್ಯತ್ಯಾಸವಿದೆ. ಏನೋ ತೊಂದರೆಯಾದರೆ ಎಂದು ಭ್ರಮೆಗೊಳಗಾಗುವ ನಾವು ಅವರ ಮಾತಿನಂತೆ ನಡೆದರೆ ಎಲ್ಲವೂ ಸುಸೂತ್ರವಾಗುತ್ತದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಹೀಗೆ ಗುರುನಾಥರು ನಿರಂತರ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಆಸೆಗಳನ್ನೆಲ್ಲಾ ಬಿಡಿಸಿ ಹರಸುವ, ನೆರವೇರಿಸುವ ಕಾಮಧೇನುವೇ ಆಗಿದ್ದರು. ಒಮ್ಮೆ ಒಂದು ಗುರುಪೂರ್ಣಿಮೆಯ ದಿನ, ನಾನು ನಮ್ಮ ಸ್ನೇಹಿತರು ಕುಂದಾಪುರದ ಬಳಿಯ ಅಮಾಸೆಬೇರು ಎಂಬಲ್ಲಿಗೆ ಹೊರಟಿದ್ದೆವು. ಗುರುಪೂರ್ಣಿಮೆ ಎಂದಾಗ ಗುರು ನೆನಪಾಗದೇ ಇರುತ್ತಾನೆಯೇ? ಗುರುನಾಥರ ಮಹಾನತೆಯ ವರ್ಣನೆ ನಮ್ಮ ಸ್ನೇಹಿತರ ಎದುರು ಮಾಡುತ್ತಿದ್ದೆ. ಆಗೆಲ್ಲಾ ಗುರುನಾಥರು ನನ್ನ ಮುಂದೆಯೇ ಇದ್ದಾರೇನೋ ಅನಿಸುತ್ತಿತ್ತು. ನಮ್ಮ ಕಾರು ಚಿಕ್ಕಮಗಳೂರು ದಾಟಿ ಜೋಡಿಕಲ್ ಬಳಿ ಬಂದಾಗ ಅಲ್ಲಿ ಅಚಾನಕ್ ಆಗಿ ಗುರುನಾಥರ ದರ್ಶನವಾಯಿತು. ಗುರುಪೂರ್ಣಿಮೆಗೆ ಗುರುವಿನ ಬಳಿ ಹೋಗಬೇಕಾಗಿದ್ದವರು ನಾವು. ಆದರೆ ಗುರುನಾಥರೇ ನನಗೆ ಮತ್ತು ಗುರುಚರಿತ್ರೆ ಕೇಳದ ನಮ್ಮ ಮಿತ್ರರಿಗೂ ದರ್ಶನವಿತ್ತು ಹರಸಿದ್ದರು. ನಮ್ಮ ಮುಖ ನೋಡಿ 'ದೂರದ ಪ್ರಯಾಣ ಹೋಗಿ ಬಾ ಒಳ್ಳೆಯದಾಗುತ್ತದೆ' ಎಂದಿದ್ದರು. ಇನ್ನೊಮ್ಮೆ ನನ್ನ ಮಗನ ವಿಚಾರದಲ್ಲಿ ಒಂದು ಸಮಸ್ಯೆ ಇತ್ತು. ಇದು ಸಹಜವೇ. ಆದರೆ ಎಲ್ಲವನ್ನೂ ಗುರುನಾಥರ ಬಳಿ ತೋಡಿಕೊಂಡರೆ ಅದೇನೋ ಮನಸ್ಸಿಗೆ ನೆಮ್ಮದಿ. ಗುರಿವಿನ ಬಳಿ ಮುಚ್ಚಿಡುವುದೇನಿದೆ. ಆಗ ಗುರುನಾಥರು ಒಂದು ಉಡುದಾರ ತೆಗೆದುಕೊಂಡು ಹೋಗಿ ತೆಂಗಿನ ಮರಕ್ಕೆ ಕಟ್ಟು. ಒಂದು ಬಿಸ್ಕೆಟ್ ಪ್ಯಾಕೇಟ್ ತೆಗೆದುಕೊಂಡು ಹೋಗಿ ಹಂಚು ಎಂದರು. ವಿಚಿತ್ರವಾಗಿ ಸಮಸ್ಯೆ ಬಗೆ ಹರಿಯಿತು. ಗುರುನಾಥರು ಅನೇಕ ಸಾರಿ ಅವರ ಬಳಿ ಹೋದಾಗ ಸಿಟ್ಟಾಗಿ ಬೈದಿದ್ದಿದೆ. ಆದರೆ ಮರು ಘಳಿಗೆಯಲ್ಲಿಯೇ ಮನದಲ್ಲೇ ತಪ್ಪನ್ನು ಒಪ್ಪಿಕೊಂಡಾಗ ಪ್ರೀತಿಯ ಧಾರೆ ಎರೆದು ಸಲಹಿದ್ದಾರೆ. ಗುರುನಾಥರು ಯಾವ ರೀತಿ ಆಶೀರ್ವಾದ ಮಾಡುತ್ತಾರೆ ಎನ್ನುವುದನ್ನು ಅರಿಯುವುದೇ ಕಷ್ಟ ಎನ್ನುತ್ತಾರೆ, ಹಾಸನದ ದತ್ತಾತ್ರಿಯವರು.
ಪ್ರಿಯ ಗುರು ಬಾಂಧವರೇ, ಗುರುವನ್ನು ಅರಿಯುವುದು ಸುಲಭವಲ್ಲ. ಆದರೆ ಹರ ಮುನಿದರೆ ಗುರು ಕಾಯ್ವನು. ಗುರು ಮುನಿದರೆ ಕಾಯುವರಿಲ್ಲ ಎಂಬ ಮಾತನ್ನು ನಿರಂತರ ನೆನಪಿಟ್ಟುಕೊಂಡು, ಗುರು ಸೇವೆಯಲ್ಲಿ ನಿರತರಾದರೆ ಹತ್ತು ತಾಯಂದಿರ ಪ್ರೀತಿ, ಸಂರಕ್ಷಣೆ, ಮಮತೆಯನ್ನು ಪಡೆವ ಭಾಗ್ಯವಂತರು ಗುರು ಸೇವಕರಾಗುತ್ತಾರೆ ಎಂಬುದು ನೂರಕ್ಕೆ ನೂರು ಸತ್ಯ. ಅಂತಹ ಮಮತಾಮಯಿ ಗುರುನಾಥರ ಶ್ರೀರಕ್ಷೆ ಎಲ್ಲರಿಗೂ ಒದಗಲಿ. ನಾಳೆಯೂ ಬರುವಿರಲ್ಲಾ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment