ಒಟ್ಟು ನೋಟಗಳು

Tuesday, July 11, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 41
ದೇವರು ಬೇಕೆಂದರೆ ಆಗಾಗ ಬರುತ್ತಿರು... ಬೈಸಿಕೊಳ್ಳುತ್ತಿರು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


"ಗುರುನಾಥರು ನಿನಗೇನು ಬೇಕು ಕೇಳಿಕೋ ಎಂದಾಗ ನನ್ನ ಐಹಿಕ ಜೀವನದ ಕೆಲಸದ ಬಗ್ಗೆ ಕೇಳಿದೆ". ಈಗಾಗಲೇ ಒಂದು ಕೆಲಸ ಮಾಡುತ್ತಿದ್ದೀಯಲ್ಲಾ ಎಂದು ಹೇಳುತ್ತಾ ಸೂಚ್ಯವಾಗಿ ಅತಿ ಆಸೆ ಮಾಡಬೇಡ. ಪಾಲಿಗೆ ಬಂದದನ್ನು ಪಂಚಾಮೃತದಂತೆ ಸ್ವೀಕರಿಸು ಎಂಬ ಭಾವನೆಯಿಂದ ಹೇಳಿದರೇನೋ. ನಾನು ಮತ್ತೆ ಭಗವಂತನನ್ನು ಕಾಣಬೇಕು, ದೇವರನ್ನು ನೋಡಲೇಬೇಕು ಎಂಬ ಬಯಕೆಯನ್ನು ಬಾಲಿಶವಾಗಿ ಅವರ ಮುಂದೆ ತೋಡಿಕೊಂಡೆ. ನನ್ನನ್ನು ನೋಡಿ ಗುರುನಾಥರು ನಕ್ಕುಬಿಟ್ಟರು. ಆ ನಗುವಿನಲ್ಲಿ ನನ್ನ ಬಾಲಿಶತೆಯ ಅಣಕವಿತ್ತೋ, ಸಜೀವ ದೇವನಾಗಿ ನಿನ್ನ ಮುಂದೆ ಕುಳಿತ ನನ್ನನ್ನೇ ಕಾಣಲಾಗದ ನೀನು ಆ ಅದೃಶ್ಯವಾಗಿ ಎಲ್ಲೆಡೆ ಇರುವ ಅವನನ್ನು ಕಾಣುವ ಸಾಧನೆ ಮಾಡಬಲ್ಲೆಯಾ? ಎಂಬ ಸವಾಲಿತ್ತೋ ನಾನಾಗ ಅರಿಯಲಿಲ್ಲ. ಆದರೂ ಅತ್ಯಂತ ಸರಳವಾಗಿ ಹಾಗಾದರೆ ಆಗಾಗ ಬರುತ್ತಿರಬೇಕು.... ನನ್ನ ಹತ್ತಿರ ಬೈಸಿಕೊಳ್ಳುತ್ತಿರಬೇಕು' ಎಂದರು. ಗುರುನಾಥರ ಈ ಸರಳವಾದ ಮಾತುಗಳು ನನಗೆ ಅವರಲ್ಲಿ ಮತ್ತಷ್ಟು ಆತ್ಮೀಯತೆಯನ್ನು ಭಕ್ತಿಯನ್ನೂ ಹೆಚ್ಚಿಸಿತು. ಆನಂತರ ಗುರುನಾಥರಿಗೆ ಕರುಣೆ ಬಂದಿತೇನೋ, ನನ್ನ ಭೋಳೇತನವನ್ನು ನೋಡಿ 'ಬಾ ಕಾಲು ಒತ್ತು' ಎಂದು ಅವರ ಪಾದಸೇವೆ ಮಾಡುವ ಅವಕಾಶ ನೀಡಿದರು. ದೇವರೇ ಸಿಕ್ಕಷ್ಟು ಆನಂದ, ಆ ಕ್ಷಣಕ್ಕೆ ನನಗಾಗಿತ್ತು. ಮುಂದೆ ಕೆಲವು ಸಾರಿ ಈ ನಡೆದಾಡುವ ದೇವರನ್ನು ಕಾಣಬೇಕೆಂದು ಅವರ ಊರಿಗೆ ಹೋದರೆ ಸಿಕ್ಕಂತಾಗಿ ಸಿಗದೇ ಹೋದರು. ಇದೆಲ್ಲಾ ಅವರು ನನ್ನ ದೃಢತೆಯನ್ನು ಪರೀಕ್ಷಿಸುವ ಲೀಲೆ ಏನೋ ಅನಿಸುತ್ತಿತ್ತು. ಇನ್ನೊಮ್ಮೆ ಗುರುನಾಥರನ್ನು ಕಾಣಬೇಕು. ಅವರ ಬಳಿ ಇದ್ದು ಸೇವೆ ಮಾಡಬೇಕು ಎಂಬ ಪ್ರಬಲವಾದ ಆಸೆಯುಂಟಾಯಿತು. ಆದರೆ ಈ ಸಾರಿಯೂ ಗುರುನಾಥರು ಸಿಗುವರೋ, ಇಲ್ಲವೋ ಎಂಬ ಚಿಂತೆ ಕಾಡುತ್ತಿತ್ತು. ದಾವಣಗೆರೆಯಿಂದ ಕಡೂರಿಗೆ ಟಿಕೇಟು ಪಡೆದು ರೈಲಿನಲ್ಲಿ ಕುಳಿತು ಆಯಿತು. ಇದ್ದಕ್ಕಿದ್ದಂತೆ ಒಬ್ಬ ಕಾಷಾಯವಸ್ತ್ರಧಾರಿಯು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಹೋಗುತ್ತಿದ್ದವರು ನಾನು ಕುಳಿತಿದ್ದ ಜಾಗದ ಬಳಿ ಬರುತ್ತಿದ್ದಂತೆ ನನ್ನನ್ನು ನೋಡದೆಯೇ 'ಹೊರಟಿರುವ ಕಾರ್ಯದಲ್ಲಿ ಯಶಸ್ವಿಯಾಗುವಿರಿ' ಎಂದು ಹೇಳುತ್ತಾ ಮುಂದೆ ಹೋದರು. ಬಹುಶಃ ನನ್ನ ಮನದ ಅನುಮಾನ ಕೇಳಿಸಿ ಗುರುನಾಥರೇ ಅವರಿಂದ ಹೀಗೆ ಆಡಿಸಿರಬೇಕೇನೋ ಎಂದು ನನಗನಿಸಿತು. ಅದು ನನ್ನನ್ನು ಕುರಿತಾಗಿಯೇ ಆಡಿದ ಮಾತು ಎಂದೂ ನನಗನಿಸಿತು. ಗುರುನಾಥರ ಮನೆಯನ್ನು ತಲುಪಿದೆ. ನನ್ನ ಪರಮಾತ್ಮನ ದರ್ಶನವಾಯಿತು. ನಮಸ್ಕರಿಸಿ ಒಂದು ತುದಿಯಲ್ಲಿ ಕುಳಿತೆ. ಅನೇಕ ಜನ ಭಕ್ತರಿದ್ದರು. ನಾನೇನೋ ಹೇಳಬೇಕು ಎಂಬುವುದರಲ್ಲಿ ಗುರುನಾಥರೇ 'ಈಗೇನು ಮಾತನಾಡಬೇಡ. ಇವತ್ತು ಇರುತ್ತೀಯಲ್ಲಾ, ಆಮೇಲೆ ಮಾತನಾಡೋಣ. ಈಗ ಸುಮ್ಮನೆ ಅಲ್ಲಿ ಕುಳಿತುಕೋ' ಎಂದರು. ನನ್ನ ಮನದ ವಿಚಾರ ಅದು ಹೇಗೆ ಗುರುನಾಥರಿಗೆ ತಿಳಿಯಿತೋ, ಸುಮಾರು ಹೊತ್ತು ಸುಮ್ಮನೆ ಗುರುನಾಥರನ್ನು ನೋಡುತ್ತಾ ಧ್ಯಾನಿಸುತ್ತಾ ಕುಳಿತಿದ್ದೆ. ಅನೇಕ ಜನ ಭಕ್ತರು ಬಂದರು, ಹೋದರು. ಆಮೇಲೆ ಕೆಲ ಭಕ್ತರು ಗುರುನಾಥರಿಗೆ ನೆಗಡಿ ಶೀತಜ್ವರ ಬಂದಂತಿದೆ. ವಿಶ್ರಾಂತಿ ಬೇಕು' ಎಂದು, ಬಂದವರೆಲ್ಲಾ ಹೊರಟು ಹೋದರು. ಬೆಂಗಳೂರಿನ ಒಬ್ಬ ಶಿಷ್ಯರು ಮಾತ್ರಾ ಉಳಿದುಕೊಂಡಿದ್ದರು. ಅಂತೂ ಕೊನೆಗೆ ಗುರುಗಳು ವಿಶ್ರಾಂತಿ ಪಡೆಯುತ್ತಾ 'ಒಬ್ಬಳೇ ಕುಳಿತು ಅಲ್ಲಿ ಏನು ಮಾಡುತ್ತಿದ್ದೀಯಾ, ಇಲ್ಲಿ ಬಾ' ಎಂದರು. ಗುರುನಾಥರ ಈ ವಾಣಿ ಕೇಳಿ ನನ್ನ ಕಣ್ಣುಗಳಿಂದ ಗಳಗಳನೆ ಆನಂದಬಾಷ್ಪ ಉದುರಿದವು. ಗದ್ಗದಿತಳಾದೆ... ನನಗೆ ಗುರುಗಳ ಸಾನ್ನಿಧ್ಯ ಸಿಕ್ಕಿದ್ದು ಅಮಿತಾನಂದವಾಗಿತ್ತು. ಬಳಿ ಹೋದೆ. ಗುರುನಾಥರು ಕೈಕಾಲು ನೋಯುತ್ತಿದೆ ಸ್ವಲ್ಪ ಒಟ್ಟುತ್ತೀಯಾ? ಎಂದರು. ಹಾಗೆಯೇ ಸ್ವಲ್ಪ ಹೊತ್ತು ಕೈಕಾಲು ಒತ್ತುತ್ತಿದ್ದೆ. ನನ್ನ ಕುಶಲೋಪರಿ ವಿಚಾರಿಸಿ, ನಾನು ಕೆಲಸಕ್ಕೆ ಹೋಗುತ್ತಿರುವುದನ್ನು ತಿಳಿಸಿದೆ. ಹತ್ತು ಗಂಟೆಯಾಗುತ್ತಾ ಬಂದಿತು. ಒಳಗೆ ಹೋಗಿ ಊಟ ಮಾಡು, ನಾಳೆ ಬೆಳಿಗ್ಗೆ ಬೇಗ ಎದ್ದು ಹೊರಡಬೇಕು. ಊಟ ಮಾಡಿ ಮಲಗಿಕೋ ಎಂದರು. ಗುರುನಾಥರ ಮನೆಯ ಪ್ರಸಾದ ಸ್ವೀಕರಿಸಿ, ಧನ್ಯವಾದ ಮನಕ್ಕೆ. ಅದ್ಯಾವಾಗ ನಿದ್ರೆ ಬಂದಿತೋ ತಿಳಿಯಲೇ ಇಲ್ಲ. 'ಶಿಷ್ಯರು ಎಂದರೆ ಹೇಗಿರಬೇಕು. ಗುರುಗಳ ವಾಕ್ಯದಲ್ಲಿ ಶ್ರದ್ಧೆ ಹೇಗಿರಬೇಕು. ಗುರು ಕಾರ್ಯವನ್ನು ಹೇಗೆ ಶ್ರದ್ಧೆಯಿಂದ ಮಾಡಬೇಕು ಎಂಬ ವಾಕ್ಯಗಳು ಗುರುನಾಥರ ನುಡಿಗಳು ನನಗೆ ಸ್ವಪ್ನದಲ್ಲಿ ಎಂಬಂತೆ ಕೇಳುತ್ತಿತ್ತು. ಗುರುನಾಥರ ಈ ಉಪದೇಶ ನನಗಾಗಿಯೇ ಇರಬೇಕೆಂದು ಭಾವಿಸಿ ನಿದ್ದೆಯಿಂದ ಎದ್ದೆ. ನಿಜವಾಗಿಯೂ ಗುರುನಾಥರು ತಮ್ಮ ಕೆಲ ಶಿಷ್ಯರೊಂದಿಗೆ ನಿಂತುಕೊಂಡು ಈ ಎಲ್ಲಾ ವಿಚಾರಗಳನ್ನು ಆಡುತ್ತಿದ್ದರು. ಗುರುನಾಥರಿಗೆ ಯಾವ ಶೀತಬಾಧೆಯಾಗಲಿ, ಜ್ವರವಾಗಲೀ ಕಂಡುಬರಲಿಲ್ಲ. ಕಪಟ ನಾಟಕ ಸೂತ್ರಧಾರಿಯಾದ ಗುರುನಾಥರು ದೇವರ ಸೇವೆಯ ಸಾನಿಧ್ಯವನ್ನು ನನಗೀರೀತಿ ಒದಗಿಸಿದ್ದರು. ನಾನು ಎದ್ದೇಳಲು ನೋಡಿದಾಗ 'ನೀನು ಸುಮ್ಮನೆ ಮಲಗು. ಬೆಳಿಗ್ಗೆ ಬೇಗ ಊರಿಗೆ ಹೂಗಬೇಕು ಎಂದರು. 

ಪ್ರಿಯ ನಿತ್ಯ ಸತ್ಸಂಗಾಭಿಮಾನಿಗಳೇ, ಆರ್ತರಾಗಿ ಬರುವವರ ಬಗ್ಗೆ ಗುರುನಾಥರು ಎಂತಹ ಕರುಣಾಸಾಗರರಾಗಿ ಕಂಡು ಬರುತ್ತಾರೆಂಬುದು ಇಂದಿನ ಸತ್ಸಂಗ ನಿರೂಪಿಸಿದೆ. ಅಂತಹ ಸಾನಿಧ್ಯ ಅನೇಕರಿಗೆ ಒದಗಿದೆ.... ನಮಗೆ ಕಂಡು ಬಂದಿರುವುದು ಎಲ್ಲೋ ಒಂದೆರಡು... ನಿತ್ಯ ಸತ್ಸಂಗಾಭಿಯಾನ ಮುಂದುವರೆಸೋಣ..... ಇನ್ನೂ ಏನೇನು ದಯಪಾಲಿಸುತ್ತಾರೋ... ಪಡೆಯೋಣ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

1 comment:

  1. ಗುರು ಬಂಧುಗಳಿಗೆ ಇದೊಂದು ಮಹತ್ವದ ಸತ್ಸಂಗ.
    ಇದನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಿಮಗೆ ಧನ್ಯಾದಗಳು 🙏

    ReplyDelete