ಒಟ್ಟು ನೋಟಗಳು

Sunday, July 2, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 32
ಭಕ್ತ ಪರಿಪಾಲಕ ಗುರುನಾಥರು 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


"ಗುರುನಾಥರ ದರ್ಶನ ನನಗೆ ಆದದ್ದು ಸಹಜವಾಗಿಯೇ. ನಾನು ನನ್ನ ಅಕ್ಕನ ಮನೆಗೆ ಸಖರಾಯಪಟ್ಟಣಕ್ಕೆ ಆಗಾಗ ಹೋಗುತ್ತಿದ್ದೆ. ನಮ್ಮಕ್ಕನ ಮನೆಗೆ ಅವರು ಯಾವಾಗಲಾದರೂ ಬಂದು ಕಾಫಿ ಕುಡಿದು, ಹಣ್ಣು ಹಂಪಲು ತಿಂದು ಹೋಗುತ್ತಿದ್ದುದು ಆ ಮನೆಯ ಯಾವ ಜನ್ಮದ ಪುಣ್ಯದ ಫಲವೋ, ಅಂತಹ ಮನೆಗೆ ನಮ್ಮಕ್ಕ ಸೇರಿದ್ದುದು ನಮ್ಮ ಅದೃಷ್ಟವೆನ್ನಬಹುದು. ಆಗಾಗ್ಗೆ ಗುರುನಾಥರ ಬಗ್ಗೆ ತುಂಬಾ ಭಾವುಕಳಾಗಿ ನಮ್ಮಕ್ಕ ಅನೇಕ ವಿಷಯಗಳನ್ನು ಹೇಳುತ್ತಿದ್ದರು. ಅವರನ್ನು ಕಾಣುವ ಹಂಬಲ ಭಾವೋದ್ರೇಕವಾಗಿ ಪರಿಣಮಿಸಿಬಿಡುತ್ತಿತ್ತು. ಗುರುನಾಥರು ನಮ್ಮೆದುರಿಗೆ ಬಂದಾಗ ಇದು ನನ್ನಕ್ಕನಿಗೂ ಹಾಗೇ ಆಗುತ್ತಿತ್ತು. ಗುರುನಾಥರು ನಮ್ಮನ್ನು ನೋಡಿ ನಗುತ್ತಿದ್ದರು. "ಏ ಭಾವೋದ್ರೇಕದವರೇ" ಎಂದೇ ನಮ್ಮನ್ನು ಗುರುನಾಥರು ಕರೆಯುತ್ತಿದ್ದರು. ಗುರುನಾಥರು ಏನು ಹೆಸರಿನಿಂದ ಕರೆಯುತ್ತಿದ್ದಾರೆಂಬುದಕ್ಕಿಂತ ನಮ್ಮ ಬಳಿ ಅವರಿದ್ದಾರಲ್ಲಿ ನಮ್ಮನ್ನು ಮಾತನಾಡಿಸುತ್ತಿದ್ದಾರಲ್ಲ ಎಂಬುದೇ ನಮಗೊಂದು ಸಂತಸವಾಗುತ್ತಿತ್ತು. ಅವರಲ್ಲಿ ಏನು ಬೇಡಬೇಕು, ಏನು ಕೇಳಬೇಕೆಂಬ ಯಾವ ಭಾವನೆಯೂ ನಮ್ಮಲ್ಲಿ ಉದ್ಭವಿಸದೇ ಏನೋ ಒಂದು ಆನಂದ ಸಂತಸ ಆ ವಾತಾವರಣದಲ್ಲಿ ನಮಗೆ ಅನುಭವವಾಗುತ್ತಿತ್ತು" ಎಂದು ತಮ್ಮ ಅನುಭವವನ್ನು ತೋಡಿಕೊಂಡವರು ಕೋಣಂದೂರಿನ ಗುರುಭಕ್ತ ದಂಪತಿಗಳಾದ ಶ್ರೀಮತಿ.ಗಾಯಿತ್ರಿ ಹಾಗೂ ಅನಂತಕೃಷ್ಣ ಅವರು ನಮ್ಮ ನಿತ್ಯ ಸತ್ಸಂಗಕ್ಕಾಗಿ. 

"ನಾನು ಮೊದಲೇ ಗುರುನಾಥರ ಬಗ್ಗೆ ಸಾಕಷ್ಟು ಕೇಳಿದ್ದೆ. ಮೊದಲು ದರ್ಶನ ಪಡೆದಾಗ ನಾನು ನನ್ನ ಮಗಳ ಜೊತೆಗೆ ಹೋಗಿದ್ದೆ. ನನ್ನ ಕಣ್ಣಿಂದ ಒಂದೇ ಸಮನೆ ಆನಂದಬಾಷ್ಪಗಳು ಉದುರುತ್ತಿತ್ತು. ಮಾತನಾಡಲೂ ಆಗಲಿಲ್ಲ. ಗುರುನಾಥರ ಸರಳ ಸಜ್ಜನಿಕೆಗೆ ಗುರುನಾಥರ ರೀತಿಗೆ ಮರುಳಾಗದವರಾರು? ಕೆಲವು ಅನುಭವಗಳನ್ನು ಹೇಳಲಾಗುತ್ತಿಲ್ಲ... ಅದನ್ನು ಅನುಭವಿಸಿದ ನನಗಷ್ಟೇ ಸೀಮಿತವಾದ ಅನುಭವಗಳೇನೋ ಎನಿಸುತ್ತದೆ. ಆಗಾಗ ನಮ್ಮ ಮನೆಯಲ್ಲಿ ಗಂಡು ಮಗುವಿಗಾಗಿ ನಮ್ಮತ್ತೆ ಮಾವ ಇವರುಗಳೆಲ್ಲಾ ಆಸೆ ಪಡುತ್ತಿದ್ದರು. ಗುರುನಾಥರ ಕೃಪೆಯಾಯಿತು. ನಮ್ಮೆಲ್ಲರ ಆಸೆ ನೆರವೇರಿದಂತೆ ಗಂಡು ಮಗುವೂ ಜನಿಸಿತು. ಈ ಹಿನ್ನೆಲೆಯಲ್ಲಿ ನಡೆದ ಒಂದು ಘಟನೆ ಎಂದರೆ, ನಮ್ಮ ತಾಯಿ ಸಖರಾಯಪಟ್ಟಣಕ್ಕೆ ಹೋಗಿದ್ದರು. ನಾನಾಗ ಗರ್ಭಿಣಿ. ಇಲ್ಲಿ ಊರಿನಲ್ಲಿದ್ದ ನಾನು ಅಕಸ್ಮಾತ್ ಬಿದ್ದುಬಿಟ್ಟೆ. ಗರ್ಭಿಣಿಗೆ ಏನಾಗಿಬಿಡುವುದೋ ಎಂದು ಎಲ್ಲರೂ ಮನೆಯಲ್ಲಿ ಗಾಬರಿಯಾದರು. ಈ ವಿಚಾರವನ್ನು ನಮ್ಮ ತಾಯಿಗೂ ಫೋನು ಮಾಡಿ ತಿಳಿಸಿದರು. ಅವರು ಗುರುನಾಥರಿಗೆ ಈ ವಿಚಾರವನ್ನು ತಿಳಿಸಿ, ತೀವ್ರ ಕಳವಳಗೊಂಡರಂತೆ. ಆಗ ಗುರುನಾಥರು ಏನೂ ಆಗುವುದಿಲ್ಲ. ಭಯ ಪಡಬೇಡಿ" ಎಂದರಂತೆ. ಅವರ ದಿವ್ಯ ಅನುಗ್ರಹದಿಂದ ನನಗಾಗಲೀ, ನನ್ನ ಮಗುವಿಗಾಗಲೀ ಯಾವುದೇ ತೊಂದರೆಯಾಗಲಿಲ್ಲ. ಗುರುನಾಥರ ಪ್ರೀತಿಯ ಅನುಗ್ರಹ ಹೀಗೆ ನಮ್ಮನ್ನು ಎಡಬಿಡದೇ ಕಾಪಾಡುತ್ತಾ ಬಂದಿದೆ. ಅತ್ಯಂತ ಕರುಣಾಳುಗಳಾದ ಅವರು ತಮ್ಮನ್ನು ನಂಬಿದ ಭಕ್ತರನ್ನು ಸಲಹುವ ರೀತಿಯೇ ಒಂದು ಲೀಲೆ" ಎನ್ನುತ್ತಾರೆ ಗಾಯಿತ್ರಿ ದಂಪತಿಗಳು. 

ಮುಂದೆ ಗುರುನಾಥರು ಈ ಭಕ್ತರ ಮನೆಗೆ ಕೋಣಂದೂರಿಗೆ ಬಂದರಂತೆ. ಸ್ವತಃ ತಾವೇ ಹಾಲು ಅನ್ನವನ್ನು ತಮ್ಮ ಭಕ್ತರಿಗೆ ತಿನ್ನಿಸಿದಂತೆ ಸಿಹಿಯನ್ನು ತಿನ್ನಿಸಿ, ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸಿದ ಗುರುನಾಥರನ್ನು ಅವರು ಎಂದೆಂದೂ ಸ್ಮರಿಸುತ್ತಾರೆ. 

ಮುಂದೆ ಗಂಡು ಮಗುವಿಗೆ ಹೆಸರಿಡಬೇಕಲ್ಲ. ಇದು ತಂದೆ ತಾಯಿಗಳ ಇಷ್ಟ. ಆದರೆ ಇಲ್ಲಿಯೂ ತಮ್ಮ ಜೀವನದಲ್ಲಿ ಪರಿಪೂರ್ಣವಾಗಿ ಗುರುನಾಥರಿಗೆ ಸ್ಥಾನ ನೀಡಿದ್ದ ಈ ದಂಪತಿಗಳು ಗುರುನಾಥರನ್ನೇ ಕೇಳಿ ಏನು ಹೆಸರಿಡಬೇಕೆಂದು ನಿರ್ಧರಿಸಿದರಂತೆ. ಗುರುನಾಥರು ಊರಿನಲ್ಲಿ ಇರುವುದನ್ನು ಖಾತ್ರಿ ಮಾಡಿಕೊಂಡು ಅನಂತಕೃಷ್ಣ ಅವರು, ಮಗುವಿನ ಹೆಸರಿನ ಬಗ್ಗೆ ವಿಚಾರಿಸಲು ಸಖರಾಯಪಟ್ಟಣಕ್ಕೆ ಹೋದರಂತೆ. ಗುರುನಾಥರಲ್ಲಿ ಇರಲಿಲ್ಲ. ಚಿಕ್ಕಮಗಳೂರಿನಲ್ಲಿ ಇದ್ದಾರೆಂದು ತಿಳಿದು ಅಲ್ಲಿಗೇ ಹೋದರು ಅನಂತಕೃಷ್ಣ. ಚಿಕ್ಕಮಗಳೂರು ತಲುಪಿದಾಗಲೂ ಗುರುನಾಥರು ಅಲ್ಲಿ ಸಿಗಲೇ ಇಲ್ಲ. ಅಲ್ಲಿ ತಿಳಿದ ವಿಚಾರವೆಂದರೆ ಶೃಂಗೇರಿಗೆ ಹೋಗಿದ್ದಾರೆಂಬುದು. ಮತ್ತೆ ಅನಂತಕೃಷ್ಣ ಶೃಂಗೇರಿಗೆ ಹೋದರು. ತುಂಗಾ ನದಿ ತುಂಬಿ ಹರಿಯುತ್ತಿತ್ತು. ಗುರುನಾಥರೇನೋ ಸಿಕ್ಕರು. "ಜಗದ್ಗುರುಗಳ ದರ್ಶನ ಮಾಡಿ ಬಾ" ಎಂದು ಆಚೆ ಕಡೆ ಕಳಿಸಿದರಂತೆ. ಜಗದ್ಗುರು ದರ್ಶನವಾದ ಮೇಲೆ ಮಗುವಿಗೆ ಚಂದ್ರಶೇಖರ ಅಥವಾ ಸೋಮಶೇಖರ ಎಂದು ಹೆಸರನ್ನಿಡಿ ಎಂದು ಆಶೀರ್ವದಿಸಿದರಂತೆ. 

ಇದೇನು ಗುರು ಪರೀಕ್ಷೆಯೋ? ಶಿಷ್ಯರ ಧೃಡತೆಯ ಪ್ರತೀಕವೋ? ಅಥವಾ ಶಿಷ್ಯರ ಮೇಲಿನ ಪ್ರೀತಿಯಿಂದ ಈ ರೀತಿ ತೀರ್ಥಕ್ಷೇತ್ರ ದರ್ಶನವನ್ನು ಗುರುನಾಥರು ತಮ್ಮ ಭಕ್ತರಿಗೆ ಮಾಡಿಸಿದರೋ.... ಅದೆಲ್ಲಾ ಅವರೇ ಬಲ್ಲರು. 

ಒಂದಂತೂ ನಿಜ. ಗುರುವಿನಲ್ಲಿ ಏಕನಿಷ್ಠ ಭಾವವೊಂದಿದ್ದರೆ ಸಾಕು. ಭಕ್ತರನ್ನು ದಡ ಸೇರಿಸುವ ಜವಾಬ್ದಾರಿ ಹೊತ್ತ ಗುರುನಾಥರು ಎಲ್ಲವನ್ನೂ ನಮಗೆ ಅರಿಯದಂತೆ ನಮ್ಮಿಂದ ಮಾಡಿಸಿರುತ್ತಾರೆ. ಮಗುವಿಗೆ ಗುರುನಾಥರು ತಿಳಿಸಿದ ಹೆಸರನ್ನಿಟ್ಟಿದ್ದಾರೆ ಆ ಗುರು ಭಕ್ತರು. ಅತ್ಯಂತ ಆನಂದಮಯ ಜೀವನ ಅವರದಾಗಿದೆ. 

ಸನ್ಮಾನ್ಯ ಸತ್ಸಂಗ ಅಭಿಮಾನಿ ಗುರುಭಕ್ತರೆ, ನಮ್ಮ ಪೂರ್ವಾಪರವು ನಮಗೆ ಅರಿಯದಿದ್ದರೂ ಸದ್ಗುರಿವಿಗೆ ಎಲ್ಲಾ ತಿಳಿದಿರುತ್ತದೆ. ಹಾಗಾಗಿ, ಎಲ್ಲವನ್ನೂ ಅವರೇ ನಿರ್ಣಯಿಸಿ ಕಾರ್ಯ ರೂಪಿಸುತ್ತಾರೆ. ಎಲ್ಲ ಗುರುನಾಥರಿಗೆ ಅರ್ಪಿಸಿ ನಿಶ್ಚಲ ಮನಸ್ಸಿನಿಂದ ಇರುವುದು ಎಂತಹ ಆನಂದ ಅಲ್ಲವೇ, ನಿರಂತರ ಆತನ ಚಿಂತನೆಯಲ್ಲಿ ಇರಲು.,... ಬನ್ನಿ ನಿತ್ಯವೂ ಸತ್ಸಂಗದಲ್ಲಿ ಇರೋಣ. ನಾಳಿನ ಸತ್ಸಂಗಕ್ಕೂ ತಪ್ಪದೇ ಬರುವಿರಲ್ಲಾ..,.. ವಂದನೆಗಳು. ನಾಳೆ ಮತ್ತೆ ಭೇಟಿಯಾಗೋಣ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment