ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 57
ನನಗೇನು ಕೊಡುತ್ತೀಯಾ?
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ದೇವಿಯ ಉಪಾಸನೆ ಮಾಡುವ ಬೆಂಗಳೂರಿನ ಒಬ್ಬ ತಾಯಿ, ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳಿಗೆ ಒಳಗಾದರು. ಎಲ್ಲ ದೇವಾನುದೇವತೆಗಳ ಸೇವೆ ಮಾಡಿದರೂ ಕಷ್ಟ ಬಗೆ ಹರಿಯಲಿಲ್ಲ. ಕೊನೆಗೆ ಅದ್ಯಾರೋ ರಾಜಾಜಿನಗರದ ಒಂದು ಮನೆಗೆ ಗುರುನಾಥರು ಬಂದಿರುವ ವಿಚಾರ ತಿಳಿಸಿದರು. ಹಲವು ಪ್ರಯತ್ನಗಳನ್ನು ಮಾಡಿದ ಇವರು ಅಲ್ಲಿಗೂ ಹೋದರು. ಗುರುನಾಥರನ್ನು ಕಂಡ ಕೂಡಲೇ ಅವರ ಮನಸ್ಸಿನಲ್ಲಿ ನನ್ನ ದುಃಖವನ್ನು ಬಗೆ ಹರಿಸುವ ದಾತಾರರು ಇವರೇ... ಇಷ್ಟು ದಿನ ಬೇಕಾಯಿತಲ್ಲ, ಇವರ ದರ್ಶನವಾಗಲು, ಎಂದು ಮನದಲ್ಲೇ ನೆನೆದರು. ನಿಶ್ಚಯಿಸಿದರು. ಗುರುನಾಥರ ಪಾದಗಳಿಗೆ ಎರಗಿ, ಮನದಲ್ಲೇ ಬೇಡಿಕೊಂಡರು. ಪಕ್ಕದಲ್ಲಿ ಒಂದು ನಾಯಿ ಬಂದಿತು. ಈಕೆ, ಆ ನಾಯಿಯ ಬೆನ್ನು ಸವರುತ್ತಾ ಕುಳಿತಿದ್ದರು. ಆ ನಾಯಿ ಸಾಮಾನ್ಯ ನಾಯಿಯಾಗಿರಲಿಲ್ಲ. ಇವರ ಪಾಲಿಗೆ ಗುರುಕೃಪಾ ಛತ್ರದಡಿ ಇವರನ್ನು ಕರೆದೊಯ್ಯುವ ದತ್ತ ಸ್ವರೂಪಿಯಾಗಿತ್ತು. ಸ್ವಲ್ಪ ಸಮಯದಲ್ಲೇ ಗುರುನಾಥರು ಈ ತಾಯಿಯ ಕಡೆ ನೋಡುತ್ತಾ ಮನೆಯವರಿಗೆ ಇವರಿಗೆ ಊಟ ಬಡಿಸಿ ಎಂದು ಹೇಳಿದರು. "ಅದು ಸಾಮಾನ್ಯವಾದ ಊಟವಾಗಿರದೆ ಗುರು ಪ್ರಸಾದವಾಗಿತ್ತು. ನನ್ನ ಭವದ ತಾಪತ್ರಯಗಳನ್ನು ಹರಿಸುವ ದಿವ್ಯ ಔಷಧಿಯಾಗಿತ್ತು" ಎನ್ನುತ್ತಾರೆ ಆ ಭಕ್ತೆ.
"ಹೊಟ್ಟೆಯ ಹಸಿವಿಗೆ ಗುರುನಾಥರು ಊಟ ಹಾಕಿಸಿ ಕರುಣಿಸಿದರು. ಆದರೆ ಅದೆಷ್ಟು ಹೊತ್ತು ಕಾದರೂ ನನ್ನ ಕಡೆ ಮತ್ತೆ ತಿರುಗಿ ನೋಡಲಿಲ್ಲ. ಕಾದು ಕಾದು ಹೊತ್ತು ಸರಿಯುತ್ತಿತ್ತು. ಅದೇಕೆ ಅಷ್ಟು ಹೊತ್ತು ನನ್ನನ್ನು ಈ ರೀತಿ ಕಾಯಿಸಿದರೋ, ಬಹುಶಃ ನನ್ನಲ್ಲಿನ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರೋ, ಅಥವಾ ತಮ್ಮ ಸಾನ್ನಿಧ್ಯದಲ್ಲಿ ಕುಳ್ಳಿರಿಸಿಕೊಂಡು ನನ್ನ ಪಾಪಗಳನ್ನೆಲ್ಲಾ ದಹಿಸುತ್ತಿದ್ದರೋ, ಅಲ್ಲಿ ಕುಳಿತಿದ್ದ ಅಷ್ಟು ಹೊತ್ತೂ ಗುರುನಾಥರನ್ನು ನೋಡುತ್ತಿದ್ದೆ. ಅನನ್ಯವಾಗಿ ಬೇಡುತ್ತಿದ್ದೆ. ಅವರ ಮೊದಲ ದರ್ಶನದಲ್ಲೇ ನನಗೆ ಅವರ ಬಗ್ಗೆ ಅತೀವ ಭಕ್ತಿ ಶ್ರದ್ಧೆಗಳು ಮನದಲ್ಲಿ ಮೂಡಿದವು. ನನ್ನ ತೊಂದರೆಯ ಭಾರವೆಲ್ಲಾ ಕಳೆದ ಅನುಭವವಾಗುತ್ತಿತ್ತು. ಇಷ್ಟೆಲ್ಲಾ ನಡೆಯುತ್ತಿರುವುದರ ಜೊತೆಗೆ ನನ್ನ ಮನದ ದುಗುಡಗಳನ್ನು ಅವರಲ್ಲಿ ತೋಡಿಕೊಳ್ಳಬೇಕೆಂದರೆ, ಅಸಾಧ್ಯವಾಗಿತ್ತು. ನನ್ನ ಪ್ರಯತ್ನಗಳೆಲ್ಲಾ ವ್ಯರ್ಥ.
ಬಾಯಿಂದ ಮಾತುಗಳು ಹೊರಡದೇ ಒಮ್ಮೆಲೇ ಅಳತೊಡಗಿದೆ. ಆ ಅಳು ಇಂತಹ ಗುರುನಾಥರು ದೊರೆತ ಸಂತಸಕ್ಕೋ, ನನ್ನ ಅಪಾರ ನೋವಿನ ಜೀವನಕ್ಕೋ ತಿಳಿಯಲಾಗುತ್ತಿರಲಿಲ್ಲ. ಅಂತೂ ಗುರುನಾಥರ ದೃಷ್ಟಿ ನನ್ನ ಕಡೆಗೆ ಮತ್ತೆ ಹರಿಯಿತು. ಅವರ ನುಡಿಗಳು ನೇರವಾಗಿತ್ತು. 'ಯಾಕೆ, ಯಾಕೆ ಬಂದೆ ಇಲ್ಲಿಗೆ... ಏನಾಗಬೇಕಿತ್ತು' ಎಂದು ಕೇಳಿದರು. ದುಃಖದ ಕಟ್ಟೆ ಒಡೆದು ಬಂದಿತು... ಮತ್ತೆ ಅವರೇ ಅಷ್ಟೆಲ್ಲಾ ತಪ್ಪು ಮಾಡಿದ್ದಕ್ಕೆ ಒಂದಷ್ಟಾದರೂ ಅನುಭವಿಸಿ ಸವೆಸೋದು ಬೇಡವಾ? ಎಂದರು. ನಮ್ಮ ಸಂಬಂಧಿಗಳ ಹೆಸರು ಒಂದನ್ನು ಹೇಳಿ... 'ಅವರಿಗೆ ಹೀಗೆಲ್ಲಾ ಅಂದಿದ್ದೀರಲ್ಲಾ ಅದರ ಫಲ ಇದು.. ಎಲ್ಲಾ ಅನುಭವಿಸಿಯೇ ತೀರಬೇಕಲ್ಲ' ಎಂದರು. ನಾನೇನು ಕೇಳದೆಯೇ ನಮ್ಮ ಜೀವನದಲ್ಲಿ ನಡೆದ ಅನೇಕ ಘಟನೆಗಳನ್ನು ಬಿಚ್ಚಿಡುತ್ತಿದ್ದರು ಆ ಮಹಾತ್ಮರು. ಮುಂದೆ ನನ್ನ ಮಗನ ಬಗ್ಗೆ ಕೇಳಿದಾಗ 'ಯಾಕೆ ಅಷ್ಟೊಂದು ಚಿಂತೆ ಮಾಡುತ್ತೀಯಾ... ಎಲ್ಲಾ ಸರಿಯಾಗುತ್ತದೆ. ತಿರುಗಲಿ ಬಿಟ್ಟು ಬಿಡು. ಅಲೆದು ಅಲೆದು ಕಡೆಗೆ ಒಂದು ನೆಲೆಗೆ ಬರುತ್ತಾನೆ' ಎಂದರು. ಜೊತೆಗೆ ಇದ್ದಕ್ಕಿದ್ದಂತೆ 'ನಿನ್ನ ಮಗನನ್ನು ಸರಿ ಮಾಡುತ್ತೀನಿ.. ನನಗೇನು ಕೊಡುತ್ತೀಯಾ?' ಎಂದು ಪ್ರಶ್ನಿಸಿದರು. ಎಲ್ಲ ಹೊಂದಿರುವ ಆ ಮಹಾಪುರುಷನಿಗೆ ನಾನೇನು ಕೊಡಲು ಸಾಧ್ಯ? ನಮ್ಮ ದುಃಖ ದುಮ್ಮಾನಗಳ ಹೊರೆ ಹೊತ್ತು ನಮ್ಮನ್ನು ಉದ್ಧರಿಸಲು, ನಮಗೆ ಸಿಕ್ಕ ಆ ದಾತಾರನ ಎದುರು ನಾನೇನು ಧನಿಕಳೆ... ಆದರೂ 'ನೀವು ಏನು ಕೇಳಿದರೂ ನಿಮಗೆ ಕೊಡುತ್ತೇನೆ' ಎಂದೆ. 'ಏನು ಕೇಳಿದರೂ ಕೊಡುತ್ತೀಯಾ? ಹಾಗಾದರೆ ಆ ದೇವಿಯಲ್ಲಿ ಹೋಗಿ ಬೇಡಿಕೋ ಎಲ್ಲ ಸರಿಯಾಗುತ್ತೆ ಎಂದು ಅಭಯ ವಚನವನ್ನಿತ್ತರು' ಎಂದು ಆ ತಾಯಿ ಮತ್ತೆ ಕಣ್ಣು ತುಂಬಿ ನಿಂತರು.
ಪ್ರಿಯ ಗುರುಬಾಂಧವರೇ, ನಮ್ಮ ನಿತ್ಯ ಸತ್ಸಂಗಕ್ಕೆ ಮಂತ್ರಾಲಯದ ಗುರುರಾಯರ ಬಳಿ ಹೋದಾಗ ಅಲ್ಲಿ ಸಿಕ್ಕ ಗುರುನಾಥರ ಭಕ್ತೆಯಾದ ಶ್ರೀಮತಿ ಲಲಿತಾ ಅವರು ಗುರುನಾಥರ ಲೀಲಾ ವಿನೋದ, ಕರುಣೆಗಳನ್ನು ಹೀಗೆ ಹಂಚಿಕೊಂಡರು. ಎಲ್ಲೆಲ್ಲೋ, ಎಲ್ಲೆಲ್ಲಿಂದಲೋ ಗುರು ಬಾಂಧವ್ಯವನ್ನವರು ಹೀಗೆ ಬೆಸೆದರು.
ಈಗವರ ಮಗ ಗುರುನಾಥರ ಭಕ್ತರೊಬ್ಬರ ಅನನ್ಯ ಭಕ್ತರಾಗಿದ್ದಾರೆ. ಈ ತಾಯಿ ಗುರುನಾಥರ ದರ್ಶನ ಪಡೆದು ಅವರ ಕೃಪೆಯಿಂದ ಇದೀಗ ಅವರನ್ನು ನಿತ್ಯ ನೆನೆಯುತ್ತಾ ಸಂತಸದ ಜೀವನ ಸಾಗಿಸುತ್ತಿದ್ದಾರೆ. ಅಪಾರವಾದ ಸಂಕಷ್ಟ ರಾಶಿಗೆ, ಗುರುನಾಥರ ಒಂದು ದರ್ಶನ ಮಾತ್ರವೇ ಪರಿಹಾರ ಒದಗಿಸಿದೆ. ತಮ್ಮ ಜೀವನವನ್ನು ಈ ರೀತಿ ಸರಿ ಮಾಡಿದ ಗುರುನಾಥರ ನಾಮ ಸ್ಮರಣೆಯೇ ಅವರ ಜೀವನದ ಊರು ಗೋಲಾಗಿದೆ. ಗುರುಕಾರುಣ್ಯದ ವಿಶೇಷವೇ ಹೀಗೆ ಅಲ್ಲವೇ ? ಒಂದು ದರ್ಶನ ಅದೆಷ್ಟು ಪರಿಣಾಮಕಾರಿ? ..... ಆದರೆ ಆ ದರ್ಶನವಾಗುವುದೇ ದುರ್ಲಭವಾಗುವುದಿದೆ. ಗುರುವಿಗೆ ಮನ ಬಂದರೆ... ಅವರೇ ನಮ್ಮನ್ನು ಕರೆಸಿ, ಅಲ್ಲ ದುಃಖಗಳನ್ನು ಹರಿಸಿ, ಹರಸಿ ಕಲಿಸುವ ಇಂದಿನ ಗುರುಚರಿತ್ರೆ ನಿಜವಾಗಿಯೂ ಒಂದು ಗುರುಲೀಲೆಯೇ.. ಮತ್ತೆ ನಾಳೆ ಬರುವಿರಲ್ಲಾ, ಗುರುನಾಥರ ಸತ್ಯಧನದೊಂದಿಗೆ ಇರುವಿರಲ್ಲವಾ? ಕಾಣದವರೆಲ್ಲಾ, ಅಪರಿಚಿತರನ್ನೆಲ್ಲಾ ಒಂದು ಮಾಡಿಸುವ ಈ ಗುರು ಬಾಂಧವ್ಯದ ಸವಿ ನನಗರಿವಾದುದು, ಈ ನಿತ್ಯ ಸತ್ಸಂಗದಿಂದಲೇ, ಈ ನಿತ್ಯ ಸತ್ಸಂಗದಲ್ಲಿ ಭಾಗಿಯಾಗಲೂ, ಆ ಗುರುನಾಥರ ಕರುಣೆ ಬೇಕೇ ಬೇಕು. ಈ ಕರುಣೆ ಇದೀಗ ಸಹಸ್ರಾರು ಭಾವುಕರನ್ನು ಒಂದು ಮಾಡಿದೆ. ನಾಳೆಯೂ ಈ ಸತ್ಸಂಗಕ್ಕೆ ಎಲ್ಲಾ ಬರುವಿರಲ್ಲಾ...
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment