ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 59
ಗುರುವಿದ್ದಾಗ ಚಿಂತೆ ಏಕೆ?
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರನ್ನು ಅಣ್ಣನಾಗಿ ಪಡೆದ ತಂಗಿಯ ಮಹಾನುಭಾವ ಇಂದಿನ ಸತ್ಸಂಗಕ್ಕೆ ಸಿಕ್ಕಿರುವುದು ಇಂದಿನ ವಿಶೇಷವಾಗಿದೆ. ಅವರೆನ್ನುತ್ತಾರೆ: "ನಮ್ಮ ಅಣ್ಣ ನಮಗಾಗಿ ಎದುರು ಕುಳಿತು ಹೀಗೆ ಮಾಡು, ಇದು ಸರಿ, ಇದು ತಪ್ಪೆಂದು ತಿಳಿಸದಿದ್ದರೂ, ನಮ್ಮನ್ನು ಪರಿಪೂರ್ಣವಾಗಿ ಬೆಳೆಸಿದುದನ್ನು ಮರೆಯುವಂತಿಲ್ಲ. ಅದೆಷ್ಟೋ ವಿಚಾರಗಳು ನಮ್ಮ ಮನದಲ್ಲಿ ಮೂಡಿ ಕಾರ್ಯ ರೂಪವಾಗುವ ಹಿನ್ನೆಲೆಯಲ್ಲಿ ಇದು ಹೇಗೆ ನಮಗೆ ತಿಳಿಯಿತೆಂದು ಯೋಚಿಸಿದರೆ ಒಂದಿಂಚೂ ತಪ್ಪು ಹೆಜ್ಜೆ ಇಡದಂತೆ, ಸರಿ ದಾರಿಯಲ್ಲಿ ನಾವು ಸಾಗುವಂತೆ ಮಾನಸಿಕವಾಗಿ ಬೋಧೆಯನ್ನವರು ನೀಡುತ್ತಿದ್ದುದೇ ಕಾರಣ. ಅವರ ಕರ್ತೃತ್ವ ಶಕ್ತಿ ಹೇಗಿತ್ತೆಂದರೆ ಎಲ್ಲವೂ ಕರಾರುವಾಕ್ಕಾಗಿಯೇ ನಡೆಯುವಂತೆ ಪ್ರೇರೇಪಿಸುತ್ತಿದ್ದರು. ನಮ್ಮಲ್ಲಿ ನಡೆಯುವ ಅನ್ನದಾನವೆಂದರೆ ಅದೊಂದು ನಿತ್ಯ ಸಂತರ್ಪಣೆಗಳೇ ಆಗಿರುತ್ತಿತ್ತು. ಇದು ನಮ್ಮ ಮನೆ ಮಾತ್ರವಲ್ಲ. ನಮ್ಮ ಊರಿನ ಎಲ್ಲ ಮನೆಗಳಲ್ಲೂ ಹಾಗೇ ಸಾಗುತ್ತಿತ್ತು. ಅವರು ಮಾಡುತ್ತಿದ್ದ ದಾನ ಧರ್ಮ, ಅಣ್ಣ ಸಂತರ್ಪಣೆಗಳು, ತಮಗೆ ಉಳಿಸಿಕೊಳ್ಳದೇ ದಾನ ಮಾಡುವ ರೀತಿ ನಮಗೆ ಎಂದೂ ತಪ್ಪೆಂದು ಅನಿಸುತ್ತಲೇ ಇರಲಿಲ್ಲ. ಅನೇಕ ಜನರು ಇದೇಕೆ ಹೀಗೆ ಇದ್ದದ್ದೆಲ್ಲಾ ದಾನ ಮಾಡುತ್ತಾರೆ, ನಾಳಿನದ್ದು ಯಾಕೆ ಚಿಂತಿಸುತ್ತಿಲ್ಲ... ನೀವು ಏನಂತೀರಿ ಎಂದು ಟೀಕಿಸಿದ್ದಾರೆ ನನ್ನೆದುರಿಗೆ. ಆದರೆ ನನ್ನಣ್ಣ ನನಗೆ ದೇವರಾಗಿ ತಂದೆಯಾಗಿ ನನ್ನ ಎಲ್ಲಾ ಸರ್ವಸ್ವವೇ ಅವರಾಗಿರುವುದರಿಂದ ಗುರುನಾಥರು ಮಾಡಿದ ಎಲ್ಲಾ ಕೆಲಸಗಳೂ ನನಗೆ ಸಮ್ಮತ ಶಿರೋಗ್ರಾಹ್ಯವೇ ಆಗಿತ್ತು. ನಾವೇನು ಮಾಡಬೇಕು ಯಾವುದು ಮಾಡಿದರೆ ತಪ್ಪಾಗುತ್ತದೆ ಎಂಬುದೆಲ್ಲಾ ಅವರೇ ನಮಗೆ ಅದು ಹೇಗೋ ತಿಳಿಸಿ ಮಾಡಿಸುತ್ತಿದ್ದರು" ಎಂದು ಭಾವ ಶುದ್ಧಿಯ ನೈಜ ನುಡಿಗಳನ್ನಾಡುತ್ತಾರೆ ಗುರುನಾಥರ ಒಡಹುಟ್ಟಿದ ತಂಗಿಯೊಬ್ಬರು.
ಒಮ್ಮೆ ಅವರ ಯಜಮಾನರು ಹಾಸಿಗೆ ಹಿಡಿದರಂತೆ. ಅತಿ ಘೋರವಾದ ಪರಿಸ್ಥಿತಿ. ವೈದ್ಯರುಗಳೆಲ್ಲಾ ಕೈಚೆಲ್ಲಿ ಕುಳಿತರಂತೆ. ಅರ್ಧ ಶರೀರ ಇನ್ ಫೆಕ್ಷನ್ ಆಗಿದೆ. ನಾವೇನೂ ಹೇಳುವಂತಿಲ್ಲ. ಅವರ ಪುಣ್ಯದಿಂದ ಮಾತ್ರಾ ಅವರು ಉಳಿಯಬಲ್ಲರು ಎಂದು ತಿಳಿದಾಗ ಆ ಭಕ್ತೆ, ತಂಗಿ ಎಲ್ಲರಿಗೆ ಫೋನು ಮಾಡಿ ಗುರುನಾಥರಿಗೂ ವಿಷಯ ತಿಳಿಸಿದರಂತೆ. ತಡ ರಾತ್ರಿಯಾಗಿತ್ತು. ಗುರುನಾಥರು ಒಂದೆಡೆ ಊರಿನಲ್ಲಿ ಕುಳಿತುಬಿಟ್ಟರಂತೆ. ಅದ್ಯಾವ ದೈವದ ಮೊರೆ ಹೋದರೋ ತಮ್ಮದೇನನ್ನು ಬದಲಾಗಿ ನೀಡಿದರೋ ತಂಗಿಯ ಮಾಂಗಲ್ಯ ಭಾಗ್ಯವನ್ನು ಉಳಿಸಿಕೊಟ್ಟರು. ಇಂದೂ ಆ ದಂಪತಿಗಳು ನಿರಂತರ ಗುರುನಾಥರ ಸ್ಮರಣೆಯಲ್ಲಿ ಪ್ರತಿ ಕ್ಷಣಗಳನ್ನು ಕಳೆಯುತ್ತಿದ್ದಾರೆ ಸಂತಸದಿಂದ.
ನಂಬಿದವರ ಉದ್ಧಾರ ಶತಸಿದ್ಧ ಮಾಡಲು ಸಾಧ್ಯನಾದ ಗುರುವಿಗೆ ಆಗದ್ದೇನಿದೆ ಅಲ್ಲವೇ? ಮಾನ್ಯ ಸತ್ಸಂಗಾಭಿಮಾನಿ ಗುರು ಭಕ್ತರೇ, ನಾಳೆಯೂ ನಮ್ಮೊಂದಿಗೆ ಇರಿ. ಮತ್ತಷ್ಟು ಗುರುನಾಥಾಮೃತ ಹರಿಯಲಿದೆ. ಇದು ಒಂದೆರಡು ಪುಟಗಳಲ್ಲಿ, ಪುಸ್ತಕಗಳಲ್ಲಿ ಮುಗಿಯುವುದಲ್ಲ. ಗುರು ಕರುಣಾಸಾಗರ, ಹಾಗೆಯೇ ಸತ್ಸಂಗ ನಿರಂತರ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment