ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 60
ನಿನಗೆ ಡ್ಯೂಯಲ್ ರೋಲಿದೆ ಅದನ್ನು ಮಿಕ್ಸ್ ಮಾಡುವಂಗಿಲ್ಲ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
'ನಮ್ಮೊಂದಿಗಿನ ಮೂವತ್ತನಾಲ್ಕು ವರ್ಷಗಳ ಒಡನಾಟದಲ್ಲಿ ಮೊದಲ ಹತ್ತು ವರ್ಷಗಳು ನಮ್ಮೊಂದಿಗೆ ಅವರು ಎಷ್ಟು ಸಲೀಸಾಗಿ ಒಂದಾಗಿದ್ದರೆಂದರೆ ಭಾವನ ವರ ಜೊತೆಗೆ ಭಾವನಾಸ ಬಂಧವದಾಗಿತ್ತು ಮುತ್ತು ಅವರು ಸಾಧನೆಯ ತುತ್ತ ತುದಿಗೇರಿ, ಪ್ರಖ್ಯಾತರಾಗಿ ಅವಧೂತರಾಗಲೂ ನನ್ನೊಂದಿಗೆ ಅದೇ ಪ್ರೀತಿ ಸೌಜನ್ಯಗಳ ವ್ಯವಹಾರ ಅವರದಾಗಿತ್ತು. ಎಲ್ಲರೂ ಅವರನ್ನು ಗುರುವೆಂದು ನಮಸ್ಕರಿಸಿದಾಗ... ನನಗೆ ಇದೇನು.... ನಾನು ಇಷ್ಟು ಸರಳವಾಗಿ ಅವರೊಂದಿಗೆ ಇದ್ದೀನಲ್ಲಾ ಎಂಬ ಚಿಂತೆ ನನಗೆ ಬರುತ್ತಿತ್ತು. ಭಾವಮೈದುನರ ಸಂಬಂಧದ ನಡುವೆಯೂ ನನ್ನ ಮನದಲ್ಲಿ ಅವರ ಬಗ್ಗೆ ಒಂದು ಪೂಜ್ಯ ಭಾವನೆ ನನಗೆ ಅರಿಯದೇ ನನ್ನೊಳಗೇ ನಿರ್ಮಾಣಗೊಂಡಿತ್ತು. ಬಹುಶಃ ಅವರು ನಮ್ಮ ಜೀವನದ ಸರ್ವಸ್ವವಾಗಿ, ಎಲ್ಲ ರಂಗಗಳಲ್ಲೂ ನಮ್ಮ ಜೀವನದಲ್ಲಿ ಮಿಳಿತವಾಗಿಬಿಟ್ಟಿದ್ದರು. ಒಮ್ಮೊಮ್ಮೆ ನಾನು ಯಾವ ರೀತಿ ವರ್ತಿಸಬೇಕೆಂದು ನನ್ನ ಮನದಲ್ಲಿ ಪ್ರಶ್ನೆ ಮೂಡಿದಾಗ "ನಿಮಗೆ ಎರಡು ರೋಲುಗಳನ್ನು ನಿರ್ವಹಿಸಬೇಕಾಗುತ್ತದೆ. ಒಂದು ಭಾವನಾಗಿ ಮತ್ತೊಂದು ಬೇಕಾದರೆ ಗುರುವಿನ ಶಿಷ್ಯನಾಗಿ, ಆದರೆ ಒಂದಕ್ಕೊಂದನ್ನು ಮಿಕ್ಸ್ ಮಾಡುವ ಹಂಗಿಲ್ಲ, ಎಂದು ನೇರವಾಗಿ ನುಡಿದಿದ್ದರು. ಒಮ್ಮೆ ಎಲ್ಲೆಲ್ಲಿಗೋ ಬೈಕ್ ನಲ್ಲೇ ಹೊರಟ ನಾನು ಹಾಸನ ತಲುಪಿ, ಚಿಕ್ಕಮಂಗಳೂರಿಗೆ ಬಂದು ಸಖರಾಯಪಟ್ಟಣಕ್ಕೂ ಬಂದೆ. ಸಹಜವಾಗಿ ನಾವು ಸಖರಾಯಪಟ್ಟಣಕ್ಕೆ ಬಂದರೆ ಅವರ ಪ್ರೀತಿ ಆದರಕ್ಕೆ ಕೊನೆಯೇ ಇಲ್ಲ. ಹಾಗಾಗಿ ಅಂದು ನನ್ನ ಜೊತೆಗೇ ಇದ್ದು, ಬೈಕಿನಲ್ಲಿ ನಾನು ಹೊರಟಾಗ ಜೊತೆಗೇ ಬಂದರು. ಬಸ್ ಸ್ಟ್ಯಾಂಡ್ ನ ಬಳಿ ಇಳಿಯುವರೇನೋ ಎಂದು ಬೈಕ್ ನಿಧಾನ ಮಾಡಿದೆ, ಇಳಿಯಲಿಲ್ಲ. ಮುಂದೆ ಮೇಲಿನ ಬಸ್ ಸ್ಟಾಂಡ್ ನ ಬಳಿ ಹೋದೆ. ಅಲ್ಲೂ ಇಳಿಯಲಿಲ್ಲ. ಆಮೇಲೆ ಊರು ಮುಂದಿನ ಜಾಗದ ಬಳಿ ಬೈಕ್ ನಿಲ್ಲಿಸಿ - 'ನಿಮ್ಮ ಮನೆಗೆ ನಿಮ್ಮ ತಂಗಿ ಬಂದಿದ್ದಾರೆ. ಅಜ್ಜಿ ಇದ್ದಾರೆ, ಯಾರು ಯಾರೋ ಇದ್ದಾರೆ... ನೀವು ನನ್ನ ಜೊತೆ ಬರುವುದಕ್ಕಿಂತ ಅಲ್ಲಿರುವುದು ಹೆಚ್ಚು ಸರಿಯೇನೋ' ಎಂದಾಗ, ಯಾವ ಭಾವವಿಲ್ಲದೇ ಬೈಕಿನಿಂದ ಇಳಿದು ಹೊರಟರು. ಮುಂದೆ ತಮಾಷೆಯಾಗಿ ಮನೆಯಲ್ಲಿ 'ನಮ್ಮ ಭಾವ ನೋಡಯ್ಯಾ... ನನ್ನ ಜೊತೆಗೆ ಕರೆದುಕೊಂಡು ಹೋಗಲೇ ಇಲ್ಲ.... ಬಿಟ್ಟು ಹೋದರು' ಎಂದು ತಮಾಷೆ ಮಾಡಿದರಂತೆ. ಹಿಂಗೆ ನಮ್ಮ ಅವರ ಮಧ್ಯದಲ್ಲಿ ಯಾವುದೇ ಪ್ರಿಜುಡೀಸ್ ಸಹ ಇರಲಿಲ್ಲ. ನನ್ನನ್ನು ಹೇಗೆ ಅವರು ಕಾಪಾಡುತ್ತಿದ್ದರೆಂದರೆ... ಸದಾ ಅವರ ಶ್ರೀರಕ್ಷೆ ನನ್ನ ಮೇಲೆ ಇರುತ್ತಿತ್ತು. ಪ್ರತಿ ದಿನ ಬೆಳಗೆದ್ದರೆ... ಅಂದಿನ ಕೆಲಸ ಕಾರ್ಯಗಳ ಇನ್ಸ್ಟ್ರಕ್ಷನ್ಸ್ ನನಗೆ ಬಂದಿರುತ್ತಿತ್ತು. ಇದು ಅವರು ನೇರವಾಗಿಯೋ ಅಪ್ರತ್ಯಕ್ಷವಾಗಿಯೋ ನೀಡಿರುತ್ತಿದ್ದರು. ಅವರು ತೋರಿಸಿದ ದಾರಿಯಲ್ಲಿ ನಾನು ನಡೆದದ್ದೇ ಜಾಸ್ತಿ. ಎಷ್ಟೋ ಸಾರಿ ನಾನು ಅವರಿಗೆ ಇಷ್ಟವಿಲ್ಲದೇ ಎಲ್ಲಿಗಾದರೂ ಹೋಗಬಯಸಿದರೆ ಎಷ್ಟು ಪ್ರಯತ್ನ ಮಾಡಿದರೂ ಹೋಗಲಾಗುತ್ತಿರಲಿಲ್ಲ. ಅದವರ ಇಚ್ಛೆಗೆ ಬಂತೆಂದರೆ ಎಲ್ಲ ಸುಸೂತ್ರವಾಗಿ ನಡೆಯುತ್ತಿತ್ತು. ಏನೂ ಕೇಳದೇ ಎಲ್ಲ ನೀಡಿದ ಆ ಚೈತನ್ಯದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಡೀ ಆಕಾಶವನ್ನೇ ನನಗೆ ಕೊಟ್ಟು ಬಿಟ್ಟಿದ್ದಾರೆ' ನನಗೀಗ ಏನೂ ಮಾತನಾಡಲು ಆಗುತ್ತಿಲ್ಲ. ನನ್ನದಾಗಿ ನನ್ನದೇನೂ ಉಳಿದಿಲ್ಲ ಎನ್ನುತ್ತಾರೆ ಸೂರ್ಯನಾರಾಯಣರಾಯರು ಭಾವುಕರಾಗಿ.
ನೀವೇ ಬಂದು ನನ್ನನ್ನು ಉಳಿಸಿದ್ದು
ಒಂದು ಮನೆ, ಮನೆ ಎಂದ ಮೇಲೆ ಹಲವು ವಯೋಮಾನದವರು ಇರುವುದು ಸಹಜವೇ. ಆ ಮನೆಯಲ್ಲೂ ಅತ್ಯಂತ ವಯೋವೃದ್ಧರಾದ ಅಜ್ಜಿಯೊಬ್ಬರಿದ್ದರು. ಗುರುನಾಥರ ಭಕ್ತರವರಾಗಿದ್ದರು - ಸಂಬಂಧವೂ ಇದ್ದಿತು. ಈ ಬಾರಿಯಂತೂ ಅಜ್ಜಿಯ ಸ್ಥಿತಿ ಚಿಂತಾಜನಕವಾಗಿಬಿಟ್ಟಿತ್ತು. ಇನ್ನೇನೋ... ಮುಗಿದೇ ಹೋಯಿತೇನೋ ಎಂಬಂತಹ ಸ್ಥಿತಿ ಬಂದಿತಂತೆ. ಅಪಾರವಾದ ಬಂಧು ಬಳಗದವರೂ, ಹತ್ತಿರದಲ್ಲಿ, ದೂರದಲ್ಲಿ ಎಲ್ಲ ಕಡೆ ಇರುವವರಿಗೂ ಫೋನು ಮಾಡಿದರು. ಮನೆ ತುಂಬಾ ಜನ- ಬಾಂಧವರು. ಬಂದವರಿಗೆಲ್ಲಾ ಅನ್ನ ಸಂತರ್ಪಣೆ ನಡೆಯತೊಡಗಿತು. ಫೋನು ಮಾಡಿದವರು 'ಯಾರು ಬೇಕಾದರೂ ಈಗಲೇ ಬಂದು ಬಿಡಿ. ಎಷ್ಟು ದಿನ ಬೇಕಾದರೂ ಇರಿ... ಮತ್ತೆ. ಪದೇ ಪದೇ ತಿಳಿಸುವುದೂ ಕಷ್ಟ. ಆಮೇಲೆ ನಮ್ಮನ್ನು ದೂರಬೇಡಿ' ಎಲ್ಲಾ ಬಾಂಧವರೂ ಬಂದರು. ಗುರುನಾಥರೂ ಬಂದರು. ಅಜ್ಜಿಯ ಬಳಿ ಕುಳಿತು, ತಲೆ ನೇವರಿಸಿದ್ದು ಅಲ್ಲಿದ್ದವರಿಗೆ ಕಂಡಿತು. ಆದರೆ, ಒಳಗೆ ಹೃದಯದ ಸಂಭಾಷಣೆ ಅದೇನು ನಡೆಯಿತೋ?' - ವಾಪಸ್ಸು ಹೊರಡುವಾಗ ತಂಗಿ ಭಾವನಾವರನ್ನು ಕರೆದು ಗುರುನಾಥರೆಂದರಂತೆ. 'ಏನೂ ಯೋಚಿಸಬೇಡ... ಏನೂ ಆಗುವುದಿಲ್ಲ... ಭಾವ... ಧೈರ್ಯವಾಗಿರಿ.. ಏನೂ ಆಗಲ್ಲ... ನೋಡಮ್ಮಾ ನೀನು ಧೈರ್ಯವಾಗಿರು. ನಿನ್ನ ಕೈಲಾಗುತ್ತದೆ... ಬಂದವರಿಗೆಲ್ಲಾ ಮಾಡಿ ಹಾಕು' ಎಂದರಂತೆ....
ಇಪ್ಪತ್ತು ಇಪ್ಪತ್ತೈದು ದಿನಗಳವರೆಗೆ ಹೀಗೆ ಅನ್ನದಾನ - ಮನೆ ತುಂಬಾ ಜನಗಳು. ಆಗಾಗ್ಗೆ ಮುಗಿದು ಹೋಯಿತು ಎಂದು ಅಜ್ಜಿಯನ್ನು ಕೆಳಗಿಟ್ಟು ಗಂಗಾಜಲ ಬಾಯಿಗೆ ಹಾಕುವುದು, ಮತ್ತೆ ಹಾಸಿಗೆಯಲ್ಲಿ ಮಲಗಿಸುವುದು ನಡೆದಿತ್ತು.... ಮುಂದೆ ಅಜ್ಜಿ ಗುಣಮುಖವಾಯಿತು. ನಾಲ್ಕು ವರ್ಷಗಳವರೆಗೆ ಇದ್ದರು. ಬಂದವರೊಂದಿಗೆಲ್ಲಾ ಅಜ್ಜಿ ಹೇಳಿಕೊಂಡಿದ್ದೆಂದರೆ 'ಗುರುನಾಥರೇ ನನ್ನನ್ನು ಬದುಕಿಸಿದ್ದು' ನೀವು ಬಂದು ನನ್ನನ್ನು ಉಳಿಸಿದಿರಿ' ಇಲ್ಲದಿದ್ದರೆ ನಾನೆಲ್ಲಿ ಉಳಿಯುತ್ತಿದ್ದೆ' ಎಂದು ಅದೆಷ್ಟು ಸಾರಿ ಗುರುನಾಥರನ್ನು ಅವರು ಸ್ಮರಿಸಿದರೋ.
ಮತ್ತೊಮ್ಮೆ ಗುರು ಮನೆಯಲ್ಲಿ ಒಂದು ಹಬ್ಬದ ಸಡಗರ. ಎಷ್ಟು ಜನ ಭಕ್ತಾದಿಗಳು ಬರುವರೆಂಬುದೂ ಎಂದೂ ಊಹಿಸಲಾಗದೇ, ಆದರೂ ಒಂದು ಲೆಕ್ಕದಲ್ಲಿ ಹೋಳಿಗೆಯ ಸಿದ್ಧತೆಯಾಗಿರುತ್ತಿತು. ಬಂದವರಿಗೆಲ್ಲಾ ಹೋಳಿಗೆಯ ಸಮಾರಾಧನೆಯು, ಊಟಕ್ಕೆ ಕುಳಿತಾಗ ಆಗುವುದಲ್ಲದೇ, ಹೊರಡುವಾಗಲೂ ಪ್ರಸಾದ ರೂಪವಾಗಿ ಮನೆಗೂ ಕಳಿಸಲಾಗುತ್ತಿತ್ತು. ಹೋಳಿಗೆ ಪ್ರಸಾದ ಮಾಡಿದವರಿಗೆ ಎಲ್ಲಿ ಕಡಿಮೆಯಾವುದೋ ಎಂಬ ಚಿಂತೆ ಉಂಟಾಗುತ್ತಿತ್ತು. ಆದರೆ... ಎಂದೂ ಹೋಳಿಗೆ ಕಡಿಮೆಯಾಗುವುದೇ ಇಲ್ಲ. ಮಾಡುವವರು ಲೆಕ್ಕಾಚಾರ ತಪ್ಪಿದರೇನೋ ಎಂದು ಚಿಂತಿಸಿದರೆ, ಸರಿಯಾಗಿ ಲೆಕ್ಕವಿಟ್ಟಿದ್ದಾರೆ. ಕೊಡುವುದು, ಬಡಿಸುವುದಕ್ಕೂ ಏನೂ ಕಮ್ಮಿ ಇಲ್ಲ.. ಆದರೆ ಮತ್ತಷ್ಟು, ಮತ್ತಷ್ಟು ಹೋಳಿಗೆಯು ಕೊಟ್ಟಷ್ಟು ಹೆಚ್ಚಾಗುತ್ತಲೇ ಸಾಗಿರುತ್ತಿತ್ತು. ಸಾಕಾಗದೇನೋ ಎಂದು ಅನುಮಾನ ಪಟ್ಟವರ ಅನುಮಾನ, ನಿರಾಧಾರವಾಗಿಬಿಡುತ್ತಿತ್ತು. ಹೀಗೆ ಅನ್ನಪೂರ್ಣೆಯೇ ಗುರುನಾಥರಿದ್ದಲ್ಲಿ ಆವಾಸವಾಗಿದ್ದು, ಎಲ್ಲವನ್ನೂ, ಅಭಿವೃದ್ಧಿಗೊಳಿಸುತ್ತಿದ್ದುದನ್ನು ಕಂಡವರಿಗೇನೂ ಕಡಿಮೆ ಇಲ್ಲ. ಅದನ್ನು ಸತ್ಸಂಗಕ್ಕಾಗಿ ಹಂಚಿಕೊಂಡಾಗ - ಗುರುನಾಥರ ಕೈನಿಂದ ಹೋಳಿಗೆ ಪಡೆದು ತಿಂದಷ್ಟೇ ಸಿಹಿಯ ಅನುಭವ - ಭಾವುಕರದು.
ಗುರುನಾಥರ ಶಿಷ್ಯರು ಸ್ನಾನ ಮಾಡಿಸಿ, ಗುರುನಾಥರಿಗೆ ಹೊಸ ಪಂಚೆಯನ್ನು ಉಡಿಸಿ ಕಳಿಸುತ್ತಿದ್ದರಂತೆ. ಮನೆಯಿಂದ ಹೊರಗೆ ಹೊರಟರೆಂದರೆ, ಅದೆಷ್ಟು ಜನ ಎದುರಿಗೆ ಬಂದ ಭಕ್ತರು ಕಾಲಿಗೆ ಬಿದ್ದರೆಂದರೆ - 'ಗುರುನಾಥರ ಕೈ ತಮ್ಮ ಸೊಂಟಕ್ಕೆ ಸುತ್ತಿದ್ದ ಪಂಚೆಯ ಗಂಟಿನತ್ತ ಸಾಗುತ್ತಿತ್ತು. ಕಿತ್ತಲೆ ಹಣ್ಣೋ, ದ್ರಾಕ್ಷಿಯೋ ಏನಾದರೂ ಒಂದು ಕೈಗೆ ಬರುತ್ತಿತ್ತು. ಬಂದವರಿಗೆ ಪ್ರಸಾದ ನೀಡಿ, ಹರಸಿ ಕಲಿಸುತ್ತಿದ್ದುದನ್ನು ಅವರ ಆಪ್ತ ಶಿಷ್ಯರುಗಳು ಬೆರಗುಗಣ್ಣುಗಳಿಂದ ನೋಡುತ್ತಿದ್ದರಂತೆ. ಒಬ್ಬ ಅಂತರಂಗದ ಭಕ್ತರು ಇದೇ ರೀತಿ ದ್ರಾಕ್ಷಿಯನ್ನು ತೆಗೆದುಕೊಂಡಿರುವುದನ್ನು ನೋಡಿದರು. ಒಂದೆರಡು ಸಾರಿಯಾದರೆ, ಪಂಚೆಯ ಗಂಟಿನಲ್ಲಿ ಇಟ್ಟುಕೊಂಡಿರಬಹುದು ಎಂದು ಸುಮ್ಮನಾಗಬಹುದು. ಐದಾರು ಸಾರಿ ಹೀಗೆ ತೆಗೆದು ಕೊಡುತ್ತಿದ್ದರೆ.... ಅದೇನು ಸೊಂಟಕ್ಕೆ ಸುತ್ತಿದ ಪಂಚೆಯ ಗಂಟೋ... ಕೈ ಚೀಲವೋ... ಕೇಳಿಯೇಬಿಟ್ಟರಂತೆ ಗುರುನಾಥರನ್ನು.. 'ಏ ಸುಮ್ಮನಿರೋ, ನನಗೆ ಅಸಿಡಿಟಿ ಅಂತ ಒಂದೆರಡನ್ನು ಪಂಚೆಯ ಗಂಟಿನಲ್ಲಿ ಇಟ್ಟಿರುತ್ತೇನೆ. ಯಾರಿಗಾದರೂ ಬೇಕಾದರೆ ತೆಗೆದುಕೊಡುತ್ತೇನೆ' ಎಂದು ಯಾಮಾರಿಸುವ ಉತ್ತರ ನೀಡಿದಾಗ, ಆ ಭಕ್ತ 'ಅಲ್ಲ ಗುರುನಾಥರೇ, ಈಗ ತಾನೇ ಪಂಚೆ ಬೇರೆ ಮಡಿ ಖಾಲಿ ಪಂಚೆ ಉಟ್ಟುಕೊಂಡಿರಲ್ಲಾ.... ' ಎಂದು ಅಳುಕುತ್ತಲೇ ಕೇಳಿದಾಗ 'ಅದನ್ನೂ ನೀನು ನೋಡಿಬಿಟ್ಟೆಯಾ.. ಸುಮ್ಮನಿರು ಅದನ್ನೆಲ್ಲಾ ಕೇಳಬಾರದು' ಎಂದು ಪ್ರೀತಿಯಿಂದ ಹುಸಿಮುನಿಸು ತೋರಿಸಿದರಂತೆ ಗುರುನಾಥರು.
ಒಂದೇ ಎರಡೇ ಇಂತಹ ಚಮತ್ಕಾರಗಳು. ಇದೆಲ್ಲಾ ಪವಾಡಗಳಲ್ಲ. ಸಹಜವಾಗಿ ನಡೆಯುವ ಘಟನೆಗಳೆಂಬಂತೆ, ತಾವೇನೂ ಮಾಡೇ ಇಲ್ಲ, ಏನೂ ನಡೆದೇ ಇಲ್ಲವೆನ್ನುವಂತೆ... ಬಹು ಸರಳವಾಗಿ ಇದ್ದುಬಿಡುತ್ತಿದ್ದರಂತೆ, ಗುರುನಾಥರು.
ಇಂತಹ ಅನೇಕ ಗುರು ಲೀಲೆಗಳು ನಿತ್ಯ ಸತ್ಸಂಗಕ್ಕೆ ಗುರುಬಂಧುಗಳು, ಗುರುಸಂಬಂಧಿಗಳು ನೀಡುತ್ತಲೇ ಸಾಗಿದ್ದಾರೆ. ಅದನ್ನೆಲ್ಲಾ ಸತ್ಸಂಗಾಭಿಮಾನಿಗಳೊಂದಿಗೆ ಹಂಚಿಕೊಳ್ಳುವುದೇ ಒಂದು ಸಮಾರಾಧನೆ. ಪ್ರಿಯ ಗುರುಬಂಧುಗಳೇ, ನಾಳೆಯೂ ಬರುವಿರಲ್ಲಾ... ಧನ್ಯವಾದಗಳು. ಗುರುನಾಥರ ಸಹೋದರಿಯರಿಗೆ, ಬಂಧುಗಳಿಗೂ ಮತ್ತೊಂದು ನಮನ ಸಲ್ಲಬೇಕಲ್ಲವೇ?
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment