ಗುರುನಾಥ ಗಾನಾಮೃತ
ಭವರೋಗವೈದ್ಯನೇ ಶ್ರೀಪಾದರಾಜನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್
ಭವರೋಗವೈದ್ಯನೇ ಶ್ರೀಪಾದರಾಜನೇ
ಭವದ ತಾಪವ ಪರಿಹರಿಸಯ್ಯಾ ಗುರುವೇ
ನಿನ್ನ ಕಾಣುವ ಮಾರ್ಗವ ತೋರಿಸಯ್ಯಾ ।।
ನಿನ್ನ ನುಡಿಯೇ ನನಗೆ ಪ್ರಥಮ
ನಿನ್ನ ಮಾತೇ ನನಗೆ ಅಂತಿಮ
ಕರುಣೆಯಿಟ್ಟು ಸಲಹಯ್ಯಾ ನನ್ನ ಗುರುವೇ
ಬಂಧನವ ಬಿಡಿಸಯ್ಯಾ ।।೧।।
ನೀನು ನನಗೆ ವಿಶ್ವಮಾನ್ಯ
ನೀನು ಇರದೆ ಜಗವೆ ಶೂನ್ಯ
ದರುಶನವ ನೀಡಯ್ಯಾ ನನ್ನ ಗುರುವೇ
ಮೋಹವೆಲ್ಲ ಅಳಿಸಯ್ಯಾ ।।೨।।
ಭೋಗವೆಲ್ಲ ಜಗದಿ ಕ್ಷಣಿಕ
ನಾಮವೊಂದೇ ನಮಗೆ ರಕ್ಷಕ
ದೇಹಭಾವ ಅಳಿಸಯ್ಯಾ ನನ್ನ ಗುರುವೇ
ಸಚ್ಚಿತ್ಸುಖವ ನೀಡಯ್ಯಾ ।।೩।।
ನಾನು ನನ್ನದೆಂಬ ಕಲ್ಪನೆ
ತೊಡೆದುಹಾಕೋ ಈ ಭಾವನೆ
ನಾನೇ ನೀನೆಂಬುದ ತೋರಿಸಯ್ಯಾ ನನ್ನ ಗುರುವೇ
ನನ್ನೊಳಗೆ ಸದಾ ನೆಲೆಸಯ್ಯಾ ।। ೪ ।।
ಕರ್ಮವೆಲ್ಲವು ನಿನ್ನುಪಾಸನೆ
ಫಲವೆಲ್ಲವು ನಿನಗೇ ಅರ್ಪಣೆ
ಮುಕ್ತಿಮಾರ್ಗವ ತೋರಿಸಯ್ಯಾ ನನ್ನ ಗುರುವೇ
ಮೂಢನನು ಅನುಗ್ರಹಿಸಯ್ಯಾ ।। ೫ ।।
No comments:
Post a Comment