ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 50
ನಿಮ್ಮ ಮನೆಗೆ ಬರುತ್ತೀನಿ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರ ಬಳಿ ಒಬ್ಬ ಭಕ್ತರು ಬಂದರು. ಸಂಸಾರ ಸಮೇತ ಬಂದ ಅವರು ಗುರುನಾಥರ ಬಳಿ ಆಗಾಗ್ಗೆ ಬರುತ್ತಿದ್ದರು. ಗುರುನಾಥರಿಗೆ ಅದೇಕೆ ಆ ದಿನ ಸಿಟ್ಟು ಬಂದಿತ್ತೋ, ಗುರುನಾಥರು ಸಿಟ್ಟು ಮಾಡುವ ಹಿನ್ನೆಲೆಯಲ್ಲಿಯೂ ಬಲವಾದ ಕಾರಣ ಒಂದು ಇದ್ದೇ ಇರುತ್ತದೆ. ಜೊತೆಗೆ ಅವರು ಸಿಟ್ಟುಗೊಂಡರೂ, ಬಂದ ಭಕ್ತರು ಹೇಗೆ ಪ್ರತಿ ಪ್ರತಿಕ್ರಿಯಿಸುವರೆಂಬ ಪರೀಕ್ಷೆಯೂ ನಡೆಯುತ್ತಿರುತ್ತದೆ. ಆ ಸಿಟ್ಟು ಕೆಲ ಕ್ಷಣಗಳಲ್ಲೇ ಮಂಜಿನ ಹನಿಯಂತೆ ಕರಗಿ ಹೋಗಿ ಮೃದುತನದ ಪರಾಕಾಷ್ಠತೆಯ ಅನುಭವವಾಗುವುದೂ ಇದೆ. ಆದರೆ ತಾಳ್ಮೆಯೆಂಬ ತಪ ಭಕ್ತರಲ್ಲಿ ಅನಿವಾರ್ಯ.
ಬಂದ ವ್ಯಕ್ತಿ ಒಂದು ದೊಡ್ಡ ಬಾಳೆಯ ಹಣ್ಣಿನ ಗೊನೆಯನ್ನು ತಂದು ಕೊಡಲು ಹೋದಾಗ, ಗುರುನಾಥರು ಒಪ್ಪಿಸಿಕೊಳ್ಳಲಿಲ್ಲ. ಅದೇನೋ ಹೇಳಿಬಿಟ್ಟರಂತೆ. ಆಗ ಜೊತೆಗೆ ಬಂದವರ ಹೆಂಡತಿ ಇಡೀ ಗೊನೆಯನ್ನು ಹೊರ ತಂದು ಅಲ್ಲಿ ನಿಂತಿದ್ದ ಗೋಮಾತೆಯರುಗಳಿಗೆ ತಿನ್ನಿಸಿ, ಮನದಲ್ಲೇ ಗುರುನಾಥರು ಬೇಡವೆಂದರೆ ಈ ಗೋಮಾತೆ ಸ್ವೀಕರಿಸಿದಳಲ್ಲಾ, ಕೋಟ್ಯಾನುಕೋಟಿ ದೇವರುಗಳಿರುವ ಈ ಗೋಮಾತೆಯಲ್ಲಿ ಗುರುನಾಥರೂ ಇದ್ದಾರೆ ಎಂದು ಸಮಾಧಾನ ಮಾಡಿಕೊಂಡುಬಿಟ್ಟರು. ಗುರುಗಳಿಗೆ ನಮಸ್ಕಾರ ಮಾಡಲು ಬಂದಾಗ ಅವರು ಬೇಡವೆಂದರೂ ಬಲವಂತವಾಗಿ ಪಾದಗಳಿಗೆ ನಮಸ್ಕಾರ ಮಾಡಿಬಿಟ್ಟರಂತೆ. ಗುರುನಾಥರ ಸಿಟ್ಟು ಅದ್ಯಾವಾಗಲೋ ಓಡಿಹೋಗಿತ್ತು. ನಮಸ್ಕಾರವನ್ನು ಸ್ವೀಕರಿಸಿದ್ದರು. ಗೋಮಾತೆಗೆ ಬಾಳೆಹಣ್ಣುಗಳು ಸಲ್ಲಬೇಕೆಂಬ ಇಚ್ಛೆ ಗುರುನಾಥರದ್ದಿತ್ತೇನೋ ಅದೂ ನಡೆಯಿತು. ಭಕ್ತರ ಹಿತಕ್ಕಾಗಿ ಗುರುನಾಥರು ಅದೆಂತಹ ನಾಟಕವಾಡಿ, ಭಕ್ತರ ಕೈಲಿ ಸತ್ಕಾರವೆಸಗುತ್ತಿದ್ದರೋ.
ಇಷ್ಟೆಲ್ಲಾ ಆದರೂ ಆ ಗುರುಭಕ್ತೆ ಎಂತಹ ವಿಚಿತ್ರವಾದ ನಿರುದ್ವೇಗಿಗಳಾಗಿದ್ದರೆಂದರೆ ಗುರುನಾಥರು ಕೋಪಿಸಿದರೂ ಚೆನ್ನ, ಬೈದರೂ ಬೈಯಲಿ, ಸಿಟ್ಟು ಮಾಡಿದರೂ ಮಾಡಲಿ, ಎಲ್ಲ ನಮ್ಮ ಒಳ್ಳೆಯದಕ್ಕೆ. ನಾನಾ ಕರ್ತವ್ಯ ನಾನು ಮಾಡುತ್ತೇನೆ ಎಂದು ಇದ್ದುಬಿಟ್ಟರಂತೆ. ಹೀಗೆ ಅನೇಕ ಬಾರಿ ಗುರುನಾಥರ ದರ್ಶನಕ್ಕೆ ಬಂದಾಗ, ಒಮ್ಮೆ ತಮ್ಮ ಪತಿ ದೇವರಿಗೆ 'ನೀವು ಹೋಗಿ ಗುರುನಾಥರಿದ್ದಾರಾ ನೋಡಿ ಬನ್ನಿ... ನನಗೆ ಮೈಯಲ್ಲಿ ಸ್ವಲ್ಪ ಆಲಸ್ಯವಿದೆ. ಗುರುಗಳು ಇದ್ದರೆ ತಿಳಿಸಿ ಬರುತ್ತೇನೆ' ಎಂದು ಕಾರಿನಲ್ಲೇ ಇದ್ದು ಬಿಟ್ಟರಂತೆ. ಸ್ವಲ್ಪ ಸಮಯ ಕಳೆಯಿತು. ಒಳಗೇನಾಯಿತೋ ತಿಳಿಯದು. ಗುರು ಮನೆಯಿಂದ ಶಿಷ್ಯರಿಬ್ಬರು ಬಂದರು ಕಾರಿನ ಬಳಿಗೆ ಅರಿಶಿನ ಕುಂಕುಮ ವಸ್ತ್ರ, ಹೂವು ಹಣ್ಣೆಲ್ಲವನ್ನೂ ತಂದು 'ಗುರುನಾಥರು ಕಳಿಸಿದರು' ಎಂದು ತಿಳಿಸಿ ನೀಡಿ ಹೋದರು. ಆಗ ಈ ಭಕ್ತೆಗೆ ನಾನೆಂತಹ ತಪ್ಪು ಮಾಡಿದೆನೆಂದು ಅರಿವಾಯಿತು. ಗುರುನಾಥರು ದರ್ಶನ ನೀಡಿ 'ನೀವೆಲ್ಲಾ ಡೈರಕ್ಟಾಗಿ ಬಂದವರು. ದೇವರೂಬ್ಬರೇ ನಿಮಗೆ ಕಾಣುವುದು' ಎಂದು ಸೂಚ್ಯವಾಗಿ ನುಡಿದರಂತೆ. ಕಾರಿನಲ್ಲಿ ಕುಳಿತಿದ್ದರೂ, ಹೊರಬಂದು ದರ್ಶನ ನೀಡಿದ ಗುರುನಾಥರ ಕರುಣೆ ಹೇಗಿದೆ ನೋಡಿ.
ಮತ್ತೊಮ್ಮೆ ಈ ತಾಯಿ ಗುರುನಾಥರ ಬಳಿ ಹೋಗಿ ನಮಸ್ಕರಿಸಿದಾಗ 'ಸುಮ್ಮನೆ ನಮಸ್ಕಾರ ಮಾಡಿದರೆ ಆಗುತ್ತಾ, ಇಲ್ಲಿ ಬರಬೇಕು, ಇರಬೇಕು, ಸೇವೆ ಮಾಡಬೇಕು. ಬರ್ತೀಯಾ?' ಎಂದಾಗ ಸುಮ್ಮನಾಗಿಬಿಟ್ಟಿದ್ದರು. ಈಗವರು ಅದನ್ನು ನೆನೆಸಿಕೊಂಡು ಕೊರಗುತ್ತಾ "ನಮ್ಮ ಸಂಸಾರದ ಹೊಣೆ, ಹೊರೆ, ಗಂಡ ಮಕ್ಕಳುಗಳ ಬಂಧನದಲ್ಲಿ ಇರುವವಳು ನಾನು. ಅದನ್ನೆಲ್ಲಾ ಬಿಟ್ಟು ಸೇವೆ ಮಾಡಲು ಸಾಧ್ಯವೇ, ಎಂದು ಗುರುನಾಥರು ಕರೆದರೂ ಉತ್ತರ ನೀಡಲಿಲ್ಲ". ನನ್ನ ಅದೃಷ್ಟ ಅಷ್ಟೇ ಇದ್ದುದು. ಅದ್ಯಾವ ಭಾಗ್ಯ ನನಗೆ ಬರುವುದಿತ್ತೋ'. ಆದರೆ, ನಾನು ಪಡೆದು ಬಂದದ್ದು ಇಷ್ಟೇ. ನಾವು ಸಂಸಾರದ ಬಂಧನದಲ್ಲಿ ಇರುವವರು, ಪರೀಕ್ಷೆಗಳು ಬಹು ಕಠಿಣವಲ್ಲವೇ" ಎನ್ನುತ್ತಾರೆ.
ಇನ್ನೊಮ್ಮೆ ಗುರುನಾಥರು 'ನಿಮ್ಮ ಮನೆಗೆ ಇಂತಹ ದಿವಸ ಬರುವೆ' ಎಂದಿದ್ದರು. ಗುರುನಾಥರೆಂದರೆ ಅವರ ಪರಿವಾರ ಇರುತ್ತದೆಂದು ದೊಡ್ಡ ಅಡಿಗೆ ಮಾಡಿಸಿ ಕಾಯ್ದು ಕಾಯ್ದು ಕೊನೆಗೆ ಸನಿಹದ ರಾಮ ಮಂದಿರದ ಭಕ್ತರಿಗೆಲ್ಲಾ ವಿನಿಯೋಗಿಸಿದರು. ಹಾಗಾದರೆ, ಗುರುನಾಥರು ಸುಳ್ಳು ಹೇಳಿದರೆ? ಖಂಡಿತ ಇರಲಾರದು. ರಾಮ ಭಕ್ತರ ರೂಪದಲ್ಲಿ ಇವರ ಊಟವನ್ನು ಗುರುನಾಥರು ಸೇವಿಸಿ ತೃಪ್ತರಾಗಿದ್ದಾರೆ. ಏಕೆಂದರೆ, ಮುಂದೊಂದು ದಿನ, ಬೆಳಗಿನ ಸಮಯ ಮನೆಯ ಒಳಗೆ ಈ ಭಕ್ತೆ ದೇವರ ಪೂಜೆಯಲ್ಲಿ ನಿರತರಾಗಿದ್ದಾರೆ. ಮನೆ ಕೆಲಸದವಳು ಬಾಗಿಲು ಸಾರಿಸಿ, ರಂಗವಲ್ಲಿ ಇಟ್ಟು ಹೂವು ಕೊಯ್ಯುತ್ತಿದ್ದಾಳೆ. ಒಬ್ಬ ದೇದೀಪ್ಯಮಾನದ ಬಂಗಾರದಂತೆ ಹೊಳೆವ ತೇಜಸ್ವಿ ವಯೋವೃದ್ಧರು ಮನೆಯ ಬಾಗಿಲಲ್ಲಿ ನಿಂತಾಗ ಕೆಲಸದಾಳು 'ಅಯ್ಯಾ ಒಳಗೆ ಹೋಗಿರಿ.... ' ಎಂದಳು. ಅಮ್ಮ ಅವರು ಪೂಜೆಯಲ್ಲಿ ಮಗ್ನರಾದವರಿಗೆ, ಮನೆಯ ಇತರರಿಗೆ, ಆ ತೇಜಸ್ವಿ ಪುರುಷ ಕಾಣಲೇ ಇಲ್ಲ. ದೇವರೊಬ್ಬರೇ ನಿಮಗೆ ಕಾಣುವುದು ಎಂಬ ಮಾತು ಅಂದು ಸತ್ಯವಾಗಿತ್ತು.
ನಂತರ ಕೆಲಸದಾಕೆಯಿಂದ ಗುರುನಾಥರು ಬಂದಿದ್ದು, ಒಳಗೆ ಬಂದದನ್ನು ಕೇಳಿದ ಮನೆಯೊಡತಿ, ಕೆಲಸದಾಕೆಗೆ ದರ್ಶನ ಲಾಭವಾಯಿತು. ನಮ್ಮ ಮನೆಗೆ ಅವರು ಬಂದಿದ್ದಷ್ಟೇ ನಮ್ಮ ಪುಣ್ಯ. ದೇವರ ಪೂಜೆಯೇ ನನಗೆ ಹೆಚ್ಚಾಯಿತಲ್ಲ ಎಂದು ಪೇಚಾಡಿಕೊಂಡರು. ಆದರೂ ನಿರಂತರ ಗುರುನಾಥರ ಕೃಪಾದೃಷ್ಟಿ ನಮ್ಮ ಸಂಸಾರದ ಮೇಲಿರುವುದೇ ನನ್ನ ಅದೃಷ್ಟ. ಅಂತಹವರನ್ನು ಕಂಡಿದ್ದೇ ನನ್ನ ಭಾಗ್ಯ ಎನ್ನುತ್ತಾರೆ. ಸಂತೃಪ್ತಿಯಿಂದ ಗುರು ಬಾಂಧವರೇ ಗುರುನಾಥರ ಲೀಲೆಯೇ ಹೀಗೆ, ಇಲ್ಲಿದ್ದಾರೆಂದರೆ ಇಲ್ಲಿಲ್ಲ ಎಲ್ಲಿಲ್ಲ? ಎಂದರೆ ಎಲ್ಲೆಲ್ಲೂ... ಗುರುವು ಮನೆ ಬಾಗಿಲಿಗೆ ತನ್ನ ಮಾತಿಗೆ ಅನುಗುಣವಾಗಿ ಬಂದರೂ ಆ ಸದ್ಗುರುವನ್ನು ಕಾಣುವ, ಸೇವೆ ಮಾಡಿ ಸಂಭ್ರಮಿಸುವುದಕ್ಕೂ ಪಡೆದುಕೊಂಡು ಬಂದಿರಬೇಕಲ್ಲಾ. ಕೊನೆಗೆ ಮನೆಗೆ ಅವರ ಪಾದ ಧೂಳಿ ಬಿದ್ದಿದೆಯಲ್ಲಾ ಎಂದು ಸಮಾಧಾನ ಪಡಬೇಕು. ನಾಳೆ ಪುನಃ ಬನ್ನಿ.... ಮತ್ತೇನು ಅಗಾಧಗಳು ಕಂಡು ಬರುತ್ತದೆಯೋ ಸವಿಯೋಣ... ಪುನೀತರಾಗೋಣ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment