ಶ್ರೀ ಗುರುಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 51
ಧರೆಯೊಳಗೆ ಕಲಿರಾಜನಾಳಿಕೆ । ಯಿರುವುದೆನುತಲಿ ನೋಡಿ ಗುಪಿತದೋ ।
ಳಿರುವೆನೆಂದನು ಗುರುವು ಕೇಳೈಯಂತ್ಯ ಪ್ರಕರಣದಿ || 51 ||
ಮುಂದೆ ಗುರುವಿಗೆ ತಾನು ಗುಪ್ತದಲ್ಲಿರಬೇಕು. ಕಾಳಿ ಪ್ರಭಾವ ಅಧಿಕವಾಗಿದೆ ಎಂದು ತನ್ನ ಶಿಷ್ಯರನ್ನೆಲ್ಲಾ ಕರೆದು "ನಾನು ಮಲ್ಲಿಕಾರ್ಜುನ ಗಿರಿಗೆ ಹೋಗುತ್ತಿದ್ದೇನೆ" ಎಂದಾಗ ಊರವರೆಲ್ಲಾ ಅಳತೊಡಗುತ್ತಾರೆ. ಗುರುವಿಗೆ ಹೋಗದಿರೆಂದು ಬೇಡುತ್ತಾರೆ. ಕರುಣಾಸಾಗರರಾದ ಗುರುವು ಚಿಂತೆ ಬೇಡ. ನಿತ್ಯ ಸಂಗಮಕ್ಕೆ ಸ್ನಾನಕ್ಕೆ ಬರುವೆ. ಮಧ್ಯಾನ್ಹದಿ ಗಾಣಗಾಪುರಕ್ಕೆ ಭಿಕ್ಷೆಗೆ ಬರುವೆ. ನಿರಂತರ ನನ್ನ ವಾಸ ಗಾಣಗಾಪುರ ಮಠದಲ್ಲಿ ಗುಪ್ತದಲ್ಲಿ. ನೋಡುವ ಸಾಮಾನ್ಯರಿಗೆ ಇದು ಶ್ರೀ ಗಿರಿಗೆ ಪ್ರವಾಸ. ಚಿಂತೆ ಮಾಡಬೇಡಿ. ನಾನು ಭಕ್ತ ಪರಾಧೀನ. ನಿಮ್ಮ ಭಕ್ತಿಗೆ ನಾನಿಮ್ಮ ಬಳಿಯೇ ಇರುತ್ತೇನೆ ಎಂದು ಎಲ್ಲರನ್ನೂ ಹರಸಿ ಕಳಿಸುತ್ತಾರೆ. ಶ್ರೀ ಗುರು ನರಸಿಂಹ ಸರಸ್ವತಿಗಳಿಗೆ ಅಪಾರ ಭಕ್ತ ವೃಂದವಿದ್ದಿತು. ಕೃಷ್ಣ ಬಾಲ ಉಪೇಂದ್ರ ಮಾಧವ ಯತಿಗಳು, ಇವರು ಗುರು ನಿರೂಪದಂತೆ ತೀರ್ಥಯಾತ್ರೆಗೆ ನಡೆದಿದ್ದರು. ಬಹಳ ಶಿಷ್ಯರು ಊರೊಳಿದ್ದರು. ನಂದಿ, ನರಹರಿ, ಸಾಕರೆ ಹಾಗೂ ನಾನು ಸಿದ್ಧಮುನಿ, ನಾವು ನಾಲ್ವರು ಪುಷ್ಪಾಸನದಲ್ಲಿ ಗುರುಗಳನ್ನು ಕೂರಿಸಿ ಶ್ರೀ ಗಿರಿಗೆ ಕಳಿಸಿದ್ದೆವು. ಅಷ್ಟರಲ್ಲಿ ನದಿ ತೀರದಲ್ಲಿದ್ದ ನಮ್ಮ ಬಳಿ ಬಂದ ನಾವಿಕನೊರ್ವನು - ಗುರುಗಳು ಪ್ರಸಾದ ಕಳಿಸುತ್ತಾರಂತೆ ಎಂದು ಹೇಳಿ ನದಿಯಲ್ಲಿ ತೇಲಿ ಬಂದ ಪುಷ್ಪಮಾಲೆಯನ್ನು ನಮಗೆ ತೆಗೆದುಕೊಟ್ಟರು. ನೋಡು ಇದೇ ಆ ಪುಷ್ಪ ಎಂದು ಸಿದ್ಧ ಮುನಿಯು ನಾಮಧಾರಕನಿಗೆ ತೋರಿಸುವುದೇ ಐವತ್ತೊಂದನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment