ಒಟ್ಟು ನೋಟಗಳು

Wednesday, July 19, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 49
ಅಡಿಗೆ ತಂದಿಟ್ಟವರಾರು ? 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ಗುರುನಾಥರ ಮನೆಗೆ ಬಂದು ಹೋಗುವವರ ಲೆಕ್ಕ ಹೇಗೆ ಇರುವುದಿಲ್ಲವೋ, ಹಾಗೆಯೇ ಅಲ್ಲಿ ನಡೆಯುವ ಚಮತ್ಕಾರಗಳಿಗೂ ಲೆಕ್ಕವಿರದು. ಎಂದಿನಂತೆ ಗುರುಸ್ಥಾನಕ್ಕೆ ಹೋಗಿ ಬರುತ್ತಿದ್ದ ಒಬ್ಬ ಭಕ್ತರು ಅಂದೂ ಗುರುನಾಥರನ್ನು ಕಾಣಲು ಹೋದರು. ಗುರುವಿನ ಬಳಿ ಹೋಗುವುದೂ ನಮ್ಮ ಕೈಯಲ್ಲಿಲ್ಲ, ಬರುವುದೂ ನಮ್ಮ ಕೈಯಲ್ಲಿಲ್ಲ. ಇದು ಎಲ್ಲ ಗುರುನಾಥರ ಭಕ್ತರ ಅನುಭವ. ಅಂದು ಸ್ವಲ್ಪ ಹೊತ್ತು ಅಲ್ಲಿ ಕುಳಿತಿದ್ದ ಆ ಗುರುನಾಥರ ಭಕ್ತರು ಹೊರಡಲು ಅನುಮತಿ ಕೋರಿದಾಗ, 'ಇರಯ್ಯಾ ಸ್ವಲ್ಪ ಹೋಗುವಿಯಂತೆ' ಎಂದು ಕೂರಿಸುತ್ತಲೇ ಇದ್ದರಂತೆ. ನಂತರ ಮಧ್ಯಾನ್ಹವಾಗುತ್ತಾ ಬಂದಾಗ, ಅದ್ಯಾರೋ ಹದಿನೈದಿಪ್ಪತ್ತು ಜನ ಬರುತ್ತಾರೆ ಎಂಬ ಸುದ್ಧಿ ತಿಳಿಸಿದಾಗ ಗುರುನಾಥರು, ಈ ಊರಿಗೆ ಹೊರಡಲು ಅನುವಾಗಿದ್ದ ವ್ಯಕ್ತಿಗೆ, ಅಡುಗೆ ಮನೆಗೆ ಹೋಗಿ ಒಂದಿಪ್ಪತ್ತು ಜನಗಳಿಗೆ ಅನ್ನ, ಹುಳಿ, ಚಟ್ನಿ ಮಾಡಿಬಿಡಿ, ನೀವೂ ಪ್ರಸಾದ ತೆಗೆದುಕೊಂಡು ಹೋದರಾಯಿತು ಎಂದರಂತೆ'. 

ಆ ವ್ಯಕ್ತಿ ಅಡುಗೆ ಮನೆಗೆ ಹೋಗಿ ನೋಡಿದರೆ ಅಕ್ಕಿ ಬೇಳೆಗಳು ಅಷ್ಟು ಜನರಿಗೆ ಸಾಯುವಂತಿರಲಿಲ್ಲ. ತರಕಾರಿಗಳು ಅದೊಂಚೂರು ಇದೊಂಚೂರು ಯಾವೂ ಸಾಕಾಗುವಂತಿರಲಿಲ್ಲ. ಇದೇನಪ್ಪಾ ಎಂದು ಹೌಹಾರಿದ ಇವರು ಮುಂದೇನು ಮಾಡಬೇಕೆಂದು ಚಿಂತಿಸತೊಡಗಿದರು. ಗುರುನಾಥರಿಗೆ ಇದನ್ನು ಹೇಳುವುದು, ಅದು ಸರಿಯಲ್ಲ... ಹೇಳದಿದ್ದರೆ ಕೆಲಸ ಸಾಗುವಂತಿಲ್ಲ... ಒಳ್ಳೆಯ ಕಷ್ಟದಲ್ಲಿ ಸಿಲುಕಿಕೊಂಡು, ಗುರುನಾಥರೇ ನೀವೇ ದಾರಿ ತೋರಿ ಎಂದಂದುಕೊಂಡರು ಮನದಲ್ಲಿ. 

ಆದರೂ ಕುಳಿತಿರುವ ಭಕ್ತರ ಮುಂದೆ ಒಂದೆರಡು ಬಾರಿ ಇವರು ಬಂದಾಗ ಗುರುನಾಥರು 'ಮೊದಲು ನೀವು ಸ್ನಾನ ಮಾಡಿ ಊರ ಮುಂದಿನ ಆಂಜನೇಯನಿಗೆ ಹಣ್ಣುಕಾಯಿ ಮಾಡಿಕೊಂಡು ಮಂಗಳಾರತಿ  ಎತ್ತಿ ಬಂದು ಅಡುಗೆ ಪರರಂಭಿಸಿ ಎಂದಾಗ ಈ ಭಕ್ತರು ಅಂತೆಯೇ ಊರ ಮುಂದಿನ ಆಂಜನೇಯನ ಬಳಿ ಬಂದು ಪೂಜೆ ಪೂರೈಸಿ, ಆರತಿ ಎತ್ತಿ ಹೊರಡಬೇಕೆಂದಾಗ ಒಬ್ಬರಾದ ಮೇಲೆ ಒಬ್ಬರಂತೆ ಪೂಜೆ ಮಾಡಿಸಲು ಜನರು ಬಂದರಂತೆ. ಮನದಲ್ಲೇ ಚಡಪಡಿಸುತ್ತಿದ್ದರೂ ಬಂದವರಿಗೆ ಅರ್ಚನೆ ಮಾಡಿಕೊಡುವುದು ಅನಿವಾರ್ಯವಾಗಿತ್ತು. ಅಲ್ಲಿ ಇಷ್ಟೊತ್ತಿಗಾಗಲೇ ಅಡುಗೆ ಶುರು ಮಾಡಬೇಕಿತ್ತು. ಗುರುನಾಥರೇ, ಎಂತಹ ಸಂದಿಗ್ಧದಲ್ಲಿ ಸಿಲುಕಿಕೊಂಡೆ. ನೀವೇ ದಾರಿ ತೋರಿ, ಆಂಜನೇಯ ಸಮರ್ಥನಾದ ನೀನೆ ಗತಿ, ಎಂದು ಪೂಜೆ ಪೂರೈಸಿ ಗುರುಗಳ ಮನೆಗೆ ಬರುವಲ್ಲಿ ಬರಬೇಕಾದ ಭಕ್ತಾದಿಗಳೆಲ್ಲಾ ಬಂದು ಸೇರಿದ್ದರು. ಪ್ರಸಾದ ವಿನಿಯೋಗವಾಗಲಿ ಎಂದು ಗುರುನಾಥರೆಂದಾಗ ಒಳಗೆ ಹೋಗಿ ನೋಡಿದ ಈ ಭಕ್ತರಿಗೆ ಆಶ್ಚರ್ಯ ಕಾದಿತ್ತು. ಒಲೆಯ ಮೇಲೆ ಒಂದು ತಪ್ಪಲೆಯಲ್ಲಿ ಬಿಸಿ ಬಿಸಿ ಹಬೆಯಾಡುವ ಅನ್ನ, ಇನ್ನೊಂದರಲ್ಲಿ ಹುಳಿ, ಮತ್ತೊಂದು ಪಾತ್ರೆಯಲ್ಲಿ ಚಟ್ನಿ ಸಿದ್ಧವಾಗಿತ್ತಂತೆ. 

ಯೋಚಿಸಲು ಸಮಯವಿರಲಿಲ್ಲ. ಬಂದ ಭಕ್ತರಿಗೆಲ್ಲಾ ಊಟಕ್ಕೆ ಏಳಿಸಿ ಬಡಿಸಲಾಯಿತು. ಬಡಿಸುತ್ತಿರುವ ಈ ವ್ಯಕ್ತಿ ಬಡಿಸುವ ಕಾರ್ಯದಲ್ಲಿ ನಿರತರಾಗಿದ್ದರೂ ಮನಸ್ಸಿನ ತುಂಬಾ 'ಅಡುಗೆ ಈ ರೀತಿ ತಯಾರಿಸಿ ಇಲ್ಲಿ ತಂದಿಟ್ಟವರಾರು' ಎಂದು ಯೋಚಿಸುತ್ತಿದ್ದರು. ಊಟ ಮಾಡಿ, ಬಂದವರೆಲ್ಲಾ ಗುರುವಿನ ಆಶೀರ್ವಾದ ಪಡೆದು ಹೋದರು. 

ಭಕ್ತರ ಮನಸ್ಸಿನ ಎಲ್ಲ ಪ್ರಶ್ನೆ ಸಂಶಯಗಳೂ ಗುರುನಾಥರಿಗೆ ಕ್ಷಣಾರ್ಧದಲ್ಲಿ ಅರಿವಾಗಿ ಬಿಡುತ್ತದೆ. ಸಮಯ ನೋಡಿ ಸೂಚ್ಯವಾಗಿ ಯಾರಿಗೆ, ಯಾವಾಗ, ಹೇಗೆ ತಿಳಿಸಬೇಕು, ಹಾಗೆ ಗುರುನಾಥರು ತಿಳಿಸುವುದು ಅವರ ವಿಶೇಷ. 

'ಸಾಮಾನುಗಳು ಇಲ್ಲವೆಂದು ಚಿಂತಿಸುತ್ತಿದ್ದೆ ಏನಯ್ಯಾ.... ಇಲ್ಲಿ ಈ ಗುರು ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ.... ಎಲ್ಲಾ ಅವನು ತಂದು ಎಳೆಯುತ್ತಾನೆ. ಸುಮ್ಮನೆ ನಾವು ಯಾಕೆ ಚಿಂತೆ ಮಾಡಬೇಕು?' ಎಂದಾಗ ಆ ಭಕ್ತರಿಗೆ ಭಗವಂತನೇ ಆದ ಗುರುನಾಥರ ಮತ್ತೊಂದು ಮುಖದ ಪರಿಚಯವಾಗಿ ಮೂಕರಾದರು. ವಿಸ್ಮಯವನ್ನು ತೋರಿಸಲೆಂದೇ ಇರಬೇಕು - ಈ ನಾಟಕ ಎಂದು ಮನದಲ್ಲೇ ಚಿಂತಿಸಿ, ಹರ್ಷಿತರಾದರಂತೆ. 

ಗುರು ಬಾಂಧವ ನಿತ್ಯ ಸತ್ಸಂಗಾಭಿಮಾನಿಗಳೇ, ಹೊಳೆಯ ನೀರು ನಿರಂತರ ಹರಿಯುತ್ತಲೇ ಇರುತ್ತದೆ. ಎಲ್ಲರ ದಾಹ ತಣಿಸುತ್ತಲೇ ಇರುತ್ತದೆ. ಇದು ನನ್ನ ನೀರು, ನೀನು ಮುಟ್ಟಬೇಡ, ನಿನಗೆ ಇದರ ಹಕ್ಕಿಲ್ಲ, ಎಂದು ಎಂದಾದರೂ ಅದು ಚಿಂತಿಸಿದೆಯಾ? . ಹಾಗಾಗಿಯೇ, ಅದು ನಿರಂತರ ಹರಿಯುತ್ತಿರುತ್ತದೆ. ಗುರುನಾಥರ ಮನೆಯಲ್ಲೂ ನಿತ್ಯ, ನಿರಂತರ ಅನ್ನದಾನದ ಗಂಗಾ ಪ್ರವಾಹ ನಡೆದೇ ಇರುತ್ತಿತ್ತು. ಅಲ್ಲಿ ಕೊರತೆಗೆಲ್ಲಿ ಜಾಗ? ನೋಡುವ ನಮ್ಮ ದೃಷ್ಟಿಗೆ ವಸ್ತುಗಳ ಕೊರತೆ ಕಂಡರೂ, ಬೇಕಾದಾಗ ಮತ್ತೆ ಎಲ್ಲವೂ ಸಮೃದ್ಧವಾಗುವುದು ಗುರುಲೀಲೆ. ಅದು ಸತ್ಯ ಸಹಜ ಪ್ರಕ್ರಿಯೆ. ಜಗದ್ಗುರುಗಳು ಬಂದಾಗ ಕಂಡ ಜನಪ್ರವಾಹ, ಅವರಿಗೆ ನಡೆದ ಸತ್ಕಾರದ ಮಹಾಪೂರ, ಇದನ್ನೆಲ್ಲಾ ನೋಡಿಯೂ ನಾವು ಅರಿಯದಿದ್ದರೆ ಹೇಗೆ? ಸಮರ್ಥ ಸದ್ಗುರುವೆನ್ನುವುದು ಇದ್ದಕ್ಕೆ ಅಲ್ಲವೇ... ? ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ... ಬರಲೇ.... ಬನ್ನಿ ಮತ್ತಷ್ಟು ಗುರುಗುಣ ಕಥಾನಕವನ್ನು ಆಲಿಸೋಣ... ನಾಳೆ. 
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment