ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 56
ಗುರುನಾಥರ ಜಗನ್ನಾಟಕ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
"ಗುರುನಾಥರು ಎಲ್ಲರೊಂದಿಗೆ ಇದ್ದೂ, ಸಂಸಾರದ ಭವಸಾಗರದಿಂದ ಎದ್ದು ಬಂದ ಅಮೃತಬಿಂದು ಎಂಬುದು ಒಬ್ಬ ಭಕ್ತರ ಅನಿಸಿಕೆ. ನಮ್ಮ ನಿಮ್ಮಂತೆಯೇ ಸಾಮಾನ್ಯರಂತೆ ಕಂಡು ಬಂದರೂ, ಅವರೊಡನಿದ್ದಷ್ಟು ಸಮಯ, ಅಯೋಮಯವಾದ ಆನಂದವನ್ನೋ, ತೃಪ್ತಿಯನ್ನೋ ನೀಡುತ್ತಿತ್ತು. ಒಂದೆಡೆ ಈ ಪರಮಾನಂದ ಮತ್ತೊಂದೆಡೆ ಸಂಸಾರ ಬಂಧನ. ಗುರುವಿನಿಂದ ದೂರವಿದ್ದಾಗ, ಈ ಸಂಸಾರ ಬಂಧನದಲ್ಲಿ ಮತ್ತೆ ತೊಡಗಿದಾಗ, ಗುರುನಾಥರ ಸ್ಮರಣೆ ಇದ್ದರೂ ಯಾವುದೋ ಅವ್ಯಕ್ತ ಸುಳಿಯಲ್ಲಿ ಸಿಲುಕಿ, ನಾವು ನಾವೇ ಆಗಿಬಿಡುತ್ತಿದ್ದು, ಇದೂ ಒಂದು ಗುರುಲೀಲೆಯೋ, ನಾಟಕವೋ ? ಅರಿಯುವುದು ಅಸಾಧ್ಯ. ಗುರು ಮನೆಯಲ್ಲಿ ಅವರ ಸಂಗ ಸಾನ್ನಿಧ್ಯದಲ್ಲಿ ಏನೆಲ್ಲಾ ಶ್ರಮಪಟ್ಟರೂ ಶ್ರಮದ ಅರಿವೇ ಆಗದ, ಇದೆಲ್ಲಾ ನನ್ನಿಂದ ಗುರುನಾಥರು ಮಾಡಿಸಿದ್ದಾರೆ. ನಾನೇ ಪುಣ್ಯವಂತ ಎಂಬ ಭಾವ ಆ ಕ್ಷಣಕ್ಕೆ ಬರುತ್ತಿತ್ತು. ನಂತರ ಎಲ್ಲೋ ಒಒಂದೆಡೆ ನನಗೆ ಮಾತ್ರ ಈ ಸಂಭ್ರಮ ದೊರಕಿದೆ, ಇದು ನನ್ನ ಭಾಘ್ಯ ಎಂಬುವ ಕಂಡೂ ಕಾಣದಂತಹ ಅಹಮ್ಮು ತಲೆ ಎತ್ತಿದಾಗ ಗುರುನಾಥರ ಒಂದು ಸಣ್ಣ ನಾಟಕ ನಮ್ಮ ತಲೆಯ ಮೇಲೆ ಮೊಟಕಿ, ನೀನೇನೂ ಅಲ್ಲ ನೀನಷ್ಟೇ ಅಲ್ಲ, ನನ್ನಿಂದಾಗಿ ಎನ್ನುವ ಬುದ್ಧಿ ಹೇಳಿದ ಪ್ರಸಂಗಗಳೂ ಬಂದಿದ್ದವಂತೆ.
"ನಾನೇನೂ ಅಲ್ಲ ಎನ್ನುವ ಮನವಿದ್ದರೂ, ಈ ನಾನು ಹೀಗೇಕೆ ಪುಟಿದು ಏಳುತ್ತಿತ್ತೋ... ಇದನ್ನು ಅರಿಯಲಾಗದಾಗಿತ್ತು. ಗುರು ಪ್ರಭಾ ವಲಯದಿಂದ ದೂರವಿದ್ದಾಗ ಈ ನಶ್ವರ ಲೋಕದ ಸುಖಗಳೇ ಮಹತ್ತೆಂದು ಮುಳುಗಿ ಹೋಗುವ ನಮ್ಮನ್ನು ನಾವು ತಿದ್ದಿಕೊಳ್ಳುವುದು ಹೇಗೆಂದು ಅನೇಕ ಸಾರಿ ಚಿಂತಿಸಿದ್ದಿದೆ. ಆದರೂ ಆ ಚಿಂತೆಗೆ ಉತ್ತರ ಸಿಗುತ್ತಿರಲಿಲ್ಲ. ಇಲ್ಲೆಲ್ಲಾ ಗುರುನಾಥರು ಆಡಿದ ಮಾತುಗಳನ್ನು ನೆನೆದರೆ, ಸುಲಭವಾದ ಉತ್ತರ ಕಂಡು ಬರುತ್ತದೆ. ಉತ್ತರ ಸುಲಭವೆನಿಸಿದರೂ ಅದನ್ನು ಆಚರಣೆಗೆ ತರುವುದು ಮಾತ್ರ ಬಹು ಕಷ್ಟ ಸಾಧ್ಯವಾದದ್ದು. 'ಭಗವಂತನಿದ್ದಾನೆ ಎಂಬ ಧೃಡ ಭಾವ ಬರಲು ಅದೆಷ್ಟು ಜನ್ಮಗಳು ಬೇಕೋ? ಆ ರೀತಿ ಭಾವ ಬಂದಾಗ ನರ ರೂಪದಲ್ಲಿ ಅವತರಿಸಿದ ಗುರುವನ್ನು ಕಾಣುವ, ಅವನನ್ನು ಅರಿಯುವ, ಅವನನ್ನೇ ಧೃಡವಾಗಿ ನಂಬಿ ಸೇವಿಸುವಲ್ಲಿ ಜನ್ಮ ಜನ್ಮಾಂತರಗಳು ಸವೆದಿರುತ್ತವೆ. ನಾವು ಒಂದು ಹೆಜ್ಜೆ ಅವನೆಡೆಗೆ ನಡೆದರೆ, ಹತ್ತು ಹೆಜ್ಜೆ ಆ ಗುರುವು ನಮ್ಮೆಡೆ ಬಂದು ಮಾತೃ ಪ್ರೇಮದಿಂದ ಬಿಗಿದಪ್ಪಿದರೂ... ನಮ್ಮ ಮನದಲ್ಲೇನೋ ಅನುಮಾನ ಅಪನಂಬಿಕೆಗಳು, ಅಶ್ರದ್ಧೆಗಳು ತಲೆಯಾಡುವುದಿದೆ. ಬಹುಶಃ ಇದು ನಮ್ಮ ಪೂರ್ವಾರ್ಜಿತ ಕರ್ಮಾ ಕಳೆಯುವುದಕ್ಕೋ... ಅಥವಾ ಗುರುವಿನ ನಾಟಕವೇ ಒಂದು ಪರೀಕ್ಷೆಯಾಗಿ ನಮ್ಮ ಮೇಲೆ ಈ ಪರಿಣಾಮ ಬೀರುತ್ತದೋ ತಿಳಿಯದು'.
ಕಪಟ ನಾಟಕ ಸೂತ್ರಧಾರಿಯಾದ ಕೃಷ್ಣ ಪರಮಾತ್ಮನನ್ನು ಆತನಿದ್ದಾಗ ಅರಿತವರು ಅದೆಷ್ಟು ಮಂದಿ? ಯಾವ ಭಾಗವತರಿಗೂ, ಪಂಡಿತರಿಗೂ ಅರ್ಥವಾಗದ ಆ ಪರಮಾತ್ಮ ಕೃಷ್ಣ ತಮ್ಮನ್ನಾಗಲಿ, ಗೋಕುಲವನ್ನು ಬಿಟ್ಟು ದ್ವಾರಕೆಗೆ ಹೋದಾಗ, ಗೋಕುಲದ ಗೋಪಿಕೆಯರಿಗೆ ಅರಿವಾಗಿತ್ತು. ಶುದ್ಧ ಮನಸ್ಸಿನಿಂದ ತಮ್ಮನ್ನುದ್ಧರಿಸಲು ನಮ್ಮ ಬಳಿ ಕೃಷ್ಣ ಬಂದೆ ಬರುತ್ತಾನೆ. ಅವನಿಗಾಗಿ ನೂರು ಸಾರಿವೆ ವರ್ಷಗಳಾದರೂ ನಾವು ಕಾಯಬಲ್ಲೆವು. ನಮಗ್ಯಾವ ಯೋಗ ವಿದ್ಯೆಯೂ ಬೇಕಿಲ್ಲ. ಉದ್ಧವ ಇದ್ದ ಒಂದೇ ಒಂದು ಮನಸ್ಸನ್ನು ಕೃಷ್ಣನ ಸಂಗಡ ಕಳಿಸಿರುವ ನಮಗೆ ಮನವಿಲ್ಲದೆ ಏನು ಯೋಗವಿದ್ಯೆ ಕಲಿಸುತ್ತೀಯಾ' ಎಂದು ನಯವಾಗಿ ಆದರೆ ಧೃಡ ಮನಸ್ಸಿನಿಂದ ಉದ್ಧವನಿಗೆ ಉತ್ತರ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಬಹುಶಃ ಇದು ಎಲ್ಲ ಗುರುನಾಥರ ಆರಾಧನೆಯಲ್ಲಿ ತೊಡಗಿದ ನಮಗೆಲ್ಲಾ ಅತ್ಯಂತ ಸರಳ ಉಪಾಯದ ಮಾರ್ಗವೇನೋ ಪರಿಪೂರ್ಣ ಅರ್ಪಣಾ ಭಾವದಿಂದ ನೀನಿದ್ದೀಯಾ ಗುರುನಾಥ. ನಿನ್ನ ನಾಟಕವನ್ನು ಅರಿಯದ ಮಂದ ಮತಿಗಳನ್ನು ನೀನೆ ಉದ್ಧರಿಸಬೇಕೆಂದು ಅಚಲವಾಗಿ ನಂಬುವುದೊಂದೇ ನಮಗೆ ಉಳಿದ ದಾರಿ ಏನೋ ಎಂಬುದು ಗುರುನಾಥರ ಸನಿಹದ ಭಕ್ತರೊಬ್ಬರ ಅನಿಸಿಕೆಯಾಗಿದೆ. ಅನೇಕ ನಿತ್ಯ ಸತ್ಸಂಗಾಭಿಮಾನಿಗಳಿಗೇ ಗುರುನಾಥರನ್ನು ಈ ಚರ್ಮಚಕ್ಷುಗಳಿಂದ ಕಾಣಲಾಗಲಿಲ್ಲವೆಂಬ ಕೊರಗು ಇರುವವರಿಗೆ ಮೇಲಿನ ನುಡಿಗಳು, ಮತ್ತೆ ಗುರುನಾಥರ ಸಾನ್ನಿಧ್ಯವನ್ನು ಅನುಭವಿಸಲು ಸುಲಭ ಮಾರ್ಗವಿದ್ದೀತು.
ಈ ಎಲ್ಲ ಮಾತುಗಳ ಹಿನ್ನೆಲೆಯಲ್ಲಿ ಗುರುನಾಥರು ತಮ್ಮ ಭಕ್ತ ಕೋಟಿಗೆ ಅನೇಕ ಸಾರಿ "ಎಲ್ಲವನ್ನೂ ನನ್ನ ಕಡೆ ಬಿಟ್ಟು ಬಿಡಿ. ನೀವು ನಿಶ್ಚಿಂತರಾಗಿರಿ. ಯಾವುದೋ ಜನ್ಮದ ಪುಣ್ಯದಿಂದ ನನ್ನ ಕಕ್ಷೆಯಲ್ಲಿ ನಿಮಗೊಂದು ಸ್ಥಾನ ಸಿಕ್ಕಿದೆ. ಅದನ್ನು ಸಾರ್ಥಕ ಪಡಿಸಿಕೊಳ್ಳಿ. ಕಳೆದುಕೊಳ್ಳಬೇಡಿ ಎನ್ನುತ್ತಿದ್ದರಂತೆ".
ಎಲ್ಲವನ್ನೂ ಗುರುನಾಥರಿಗೆ ಅರ್ಪಿಸಿ ನಿಶ್ಚಿಂತರಾಗಬೇಕೆಂದು ನಿರ್ಧರಿಸಿದರೂ ಮನಸ್ಸು ಅತ್ತಿತ್ತ ಹರಿವುದಿದೆ. ಏನಾದರೂ ಸಾಧನೆ, ಒಳ್ಳೆಯದು ನಡೆದರೆ, ಇದು ನನ್ನಿಂದ ಆಗಿದ್ದಲ್ಲವೇ.... ಎಂಬ ಭಾವವೇಳುತ್ತದೆ. 'ಷಡ್ಬಿರ್ ಮನುಷ್ಯ ಚಿಂತಾಣಾಮ್.. ಸಪ್ತಮಂ ದೈವ ಚಿಂತನಂ' ಎಂಬ ಮಾತು ಹೊಯ್ದಾಡುವ ಮನಕ್ಕೆ ಒಂದು ಸ್ಥಿರತೆ ನೀಡಿಯಾಯಿತು. ನಿನ್ನೆಲ್ಲಾ ಪ್ರಯತ್ನಗಳ ಮೇಲೆ ಆ ಗುರುನಾಥರ ಕರುಣೆ ಎಂಬ ಸೀಲು ಬಿದ್ದಾಗಲೇ ಅನವರತವಾದ ಆನಂದ ಸಿಗಲು ಸಾಧ್ಯ. ನಾವು ಬಾರಿಯ ಸೂತ್ರಧಾರನ ಕೈಗೊಂಬೆಗಳು. ಆಡಿಸುವವನೂ, ಅಳಿಸುವವನೂ, ನಗಿಸುವವನೂ, ತೇಲಿಸುವವನೂ ಮುಳುಗಿಸಿ ಏಳಿಸುವವನೂ ಅವನೇ, ಆ ಜಗನ್ನಿಯಾಮಕ ಸೂತ್ರಧಾರಿ ಸದ್ಗುರುನಾಥರೆಂಬುದು ಅರಿತರೆ ನಮ್ಮೆಲ್ಲಾ ಜವಾಬ್ದಾರಿ ಕಳೆದಂತೆಯೇ ಅಲ್ಲವೇ?
ಮಾನ್ಯ ನಿತ್ಯ ಸತ್ಸಂಗಾಭಿಮಾನಿ ಗುರುಭಕ್ತರೆ, ಪ್ರಶ್ನೆಯೊಂದಿಗೆ ಉತ್ತರವೂ, ಉತ್ತರದೊಂದಿಗೆ ಪ್ರಶ್ನೆಯೂ ಸೇರಿಕೊಂಡ ಇಂದಿನ ಭಕ್ತರೊಬ್ಬರ ಸತ್ಸಂಗ ಕಥನ ಅದು ಅವರೊಬ್ಬರದಲ್ಲ. ನಮ್ಮ ನಿಮ್ಮೆಲ್ಲರ ಮನದಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರವಾದೀತು... ಗುರುನಾಥರ ಕರುಣೆ ಇರುವುದರಿಂದಲೇ ಅಲ್ಲವೇ.... ನಮಗಿದೆಲ್ಲಾ ದೊರೆಯುತ್ತಿರುವುದು. ನಾಳೆಯೂ ನಮ್ಮೊಂದಿಗೆ ಇದ್ದು ಗುರುಕೃಪೆಗೆ ಪಾತ್ರರಾಗಿ... ದಯಮಾಡಿ ಬರುವಿರಲ್ಲಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment