ಒಟ್ಟು ನೋಟಗಳು

Sunday, July 23, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 53
ಇವತ್ತು ರಾಜ ನಾಳೆ ರಂಕ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ಗುರುಕೃಪಾ ಛತ್ರದಡಿ ಬಂದವರಿಗೆ ಸಂಕಟದ ಜಡಿಮಳೆಯಿಂದ ಗುರುನಾಥರು ಅದು ಹೇಗೆ ಪಾರು ಮಾಡುತ್ತಾರೆ, ಸಂಕಟಗಳನ್ನು ಎದುರಿಸುವ ನೈತಿಕ ಸ್ಥೈರ್ಯ ತುಂಬುತ್ತಾರೆ... ಇದೋ ನೋಡಿ. 

"ಮತ್ತೆ ಗುರುನಾಥರ ಬಳಿ ಬಂದು ಎಲ್ಲ ನಿವೇದಿಸಿಕೊಂಡ ನಮಗೆ, ಗುರುನಾಥರು, 'ಇದೇನು ಹೊಸದಲ್ಲಪ್ಪ... ಈ ಪ್ರಪಂಚದಲ್ಲಿ ಇವತ್ತು ರಾಜನಾಗಿ ಮೆರೆದವನು ಭಿಕ್ಷುಕ ನಾಗಿದ್ದಾನೆ. ಭಿಕ್ಷುಕನಾದವನು ಲಕ್ಷಾಧಿಪತಿಯಾಗಿದ್ದಾನೆ. ಇದಕ್ಕೆಲ್ಲಾ ಹೆದರಬಾರದು. ನಿಮ್ಮ ಆಸ್ತಿಯ ಸರ್ವೇ ನಂಬರ್ ಇದೆಯಲ್ಲಾ ಅದರಲ್ಲಿ ಒಂದು ಸರ್ವೇ ನಂಬರ್ ಮೂವತ್ತೇಳು ಲಕ್ಷಕ್ಕೆ ಹೋಗುತ್ತದೆ. ಮತ್ತೊಂದು ಸರ್ವೇ ನಂಬರ್ ಹದಿಮೂರು ಲಕ್ಷಕ್ಕೆ ಮಾರಾಟವಾಗುತ್ತದೆ. ಒಂದು ಐವತ್ತು ಲಕ್ಷವಂತೂ ಖಂಡಿತ ಬರುತ್ತದೆ. ನಿಮ್ಮ ಸಾಲದ ಹೊರೆ ತೀರುತ್ತದೆ' . ಅಲ್ಲಿ ಮನೆಯಲ್ಲಿ ಕುಳಿತೇ ಸರ್ವೇ ನಂಬರ್ ಗಳು, ಅದು ಬಿಕರಿಯಾಗುವ ಮೌಲ್ಯಗಳನೆಲ್ಲಾ ಕರಾರುವಾಕ್ಕಾಗಿ ತಿಳಿಸಿ ನಮಗೆ ನೈತಿಕ ಸ್ಥೈರ್ಯವನ್ನು ಗುರುನಾಥರು ನೀಡಿದ್ದನ್ನು ನಾವು ಮರೆಯುವಂತಿಲ್ಲ. ಕೆಲವೊಂದು ವಸ್ತುಗಳನ್ನು ನಮಗೆ ಮಂತ್ರಿಸಿಕೊಟ್ಟು ಇದನ್ನು ನಿಮ್ಮ ಮನೆಯಲ್ಲಿ ಜೋಪಾನವಾಗಿಡಿ, ಎಲ್ಲ ಒಳ್ಳೆಯದಾಗುತ್ತದೆ" ಎಂದು ನಮ್ಮನ್ನು ಹರಸಿದರು. 

"ಕೆಳಗೆ ಬಿದ್ದಾಗ ಆಳಿಗೊಂದು ಕಲ್ಲೆಂದು" ನಮ್ಮನ್ನು ನೋಡಿ ನಗುವವರು ಇರುವಾಗ ಸದ್ಗುರುನಾಥರಂತಹವರ ಒಂದೊಂದು ಮಾತುಗಳೂ ನಮಗೆ ಜೀವನ ಮುನ್ನಡೆಸಲು ಊರುಗೋಲಾಗಿತ್ತು. ನಮ್ಮ ಮಾನಸಿಕ ಸ್ಥೈರ್ಯ ಹೆಚ್ಚಿಸುವಂತಹ ಮಾತಾಗಿದ್ದು, ನಮ್ಮ ತಂದೆಯವರಿಗೆ ಸ್ಟ್ರೋಕ್ ಆಗಿದ್ದರೂ ಅವರನ್ನು ಗುರುನಾಥರ ಬಳಿ ಕರೆದೊಯುತ್ತಿದ್ದೆ. ಗುರುನಾಥರಿಗೆ ನಮ್ಮ ತಂದೆಯ ಮೇಲೆ ಅದೇನು ಕರುಣೆ ಬಂದಿತೋ, ಒಂದು ದಿನ ದೇವರ ಮನೆಯ ಒಳಗೆ ಕರೆದುಕೊಂಡು ಹೋಗಿ ಒಂದು ಮಂತ್ರವನ್ನು ಅವರಿಗೆ ಉಪದೇಶಿಸಿದರು. ಬಹುಶಃ ಅವರ ದುಃಖಗಳಿಂದ, ಅವರನ್ನು ಪಾರು ಮಾಡುವ, ಈ ಪ್ರಪಂಚದ ತಾಪತ್ರಯ ಸಮುದ್ರವನ್ನು ದಾಟಿಸುವ ದೋಣಿಯಾಗಿತ್ತು. ಆ ಮಂತ್ರ ನಮ್ಮ ತಂದೆ ತಮ್ಮ ಡೈರಿಯಲ್ಲಿ ಶ್ರೀ ಗುರು ವೆಂಕಟಾಚಾಲ ಎಂದು ಬರೆದು ಮುಂದೆ ಇಡೀ ಹಾಳೆಯ ತುಂಬಾ ಗುರುನಾಥರು ಉಪದೇಶಿಸಿದ ಮಂತ್ರವನ್ನು ಬರೆಯುತ್ತಿದ್ದರು. ಅನೇಕ ಪುಸ್ತಕಗಳಲ್ಲಿ ಅವರು ಅದನ್ನು ಬರೆಯುತ್ತಿದ್ದರು. ವ್ಯಾಪಾರದಲ್ಲಿ ಆದ ನಷ್ಟ ನಮ್ಮ ತಂದೆಗೆ ಸಹಿಸಲಾಗದ ಮಾನಸಿಕ, ದೈಹಿಕ ತೊಂದರೆಗಳನ್ನು ನೀಡಿ, ಒಂದು ರೀತಿಯ ಮಂಕು ಕವಿದಂತಿದ್ದಾಗ ಗುರುನಾಥರು ಉಪದೇಶಿಸಿದ ಮಂತ್ರ ಅವರಿಗೆ ಒಂದು ನೆಮ್ಮದಿ ತಂದಿತ್ತೇನೋ, ಒಂದೆಡೆ ನಮ್ಮ ಕುಟುಂಬವನ್ನು ಚಿತ್ರ ವಿಚಿತ್ರವಾಗಿ ಕಾಡುವ ವಿಧಿ - ಇನ್ನೊಂದೆಡೆ ಈ ವಿಧಿಯ ಆಘಾತದ ಪರಿಣಾಮವನ್ನು ಕಡಿಮೆ ಮಾಡಿ ನಮ್ಮನ್ನು ಕಾಪಾಡುತ್ತ ಶ್ರೀರಕ್ಷೆಯಾಗಿ ನಿಂತ ಗುರುಗಳು, ಒಂದು ಸಾರಿ ನಮ್ಮ ತಾಯಿ ಅವರ ಸಂಬಂಧಿಕರು ಒತ್ತಾಯ ಮಾಡಿದರೆಂದು ಬೀರೂರಿಗೆ ಯಾವುದೋ ದೇವಸ್ಥಾನದ ಕಾರ್ಯಕ್ಕೆಂದು ಆಗಮಿಸಿದ ಶೃಂಗೇರಿ ಜಗದ್ಗುರುಗಳನ್ನು ನೋಡಿ ಫಲ ಮಂತ್ರಾಕ್ಷತೆ ಪಡೆಯಲು ಹೋದರು. ತುಂಬಾ ಜನ ಸಮೂಹವಿದ್ದಿತು. ನೂಕು ನುಗ್ಗಲಿನ ಸಾಲು, ಸರತಿ ಸಾಲಿನಲ್ಲಿ ಸಾಗಿದ ನಮ್ಮ ತಾಯಿಗೆ ಜಗದ್ಗುರುಗಳು ಫಲ ಮಂತ್ರಾಕ್ಷತೆಯನ್ನು ಸೆರಗಿಗೆ ಹಾಕುವಾಗ, ಹಿಂದಿನಿಂದ ಯಾರೋ ತಳ್ಳಿ ಜಗದ್ಗುರುಗಳು ನೀಡಿದ ಫಲಮಂತ್ರಾಕ್ಷತೆಯೆಲ್ಲಾ ನೆಲದ ಮೇಲೆ ಬಿತ್ತಂತೆ. ಅದನ್ನು ಆಯ್ದುಕೊಳ್ಳುತ್ತಿರುವಾಗ ಆಶ್ಚರ್ಯಕರ ರೀತಿಯಲ್ಲಿ ಅಲ್ಲಿಯೇ ಸನಿಹದಲ್ಲಿ ಭಕ್ತರೊಂದಿಗೆ ನಿಂತಿದ್ದ ಗುರುನಾಥರು ಇದನ್ನು ನೋಡಿ, ತಮ್ಮ ಶಿಷ್ಯರ ಕೈಯಲ್ಲಿ ಹೇಳಿ ಕಳುಹಿಸಿ ಕರೆಸಿದರಂತೆ. ನಂತರ ಬೇಜಾರಾಗಬೇಡಮ್ಮ.... ಸಧ್ಯದಲ್ಲೇ ನಿನಗೆ ಸಹಿಸಲಾಗದ ದುಃಖ ಬರುತ್ತದೆ. ನೀನು ಒಂದು ತಿಂಗಳು ಬಿಟ್ಟು ಬಂದು ನನ್ನನ್ನು ನೋಡು ಎಂದು ಆಶೀರ್ವದಿಸಿ ಕಳಿಸಿದ್ದರು. ಆದರೆ ನಮ್ಮ ತಾಯಿ ಇದುವರೆಗೆ ಕಂಡ ದುಃಖಗಳಿಂದ ರೋಸಿಹೋಗಿದ್ದರು. ಇನ್ನೇನಾದೀತು? ಕೋಟ್ಯಾಂತರಗಳ ಆಸ್ತಿ ಹೋಯಿತು. ಯಜಮಾನರು ಖಾಯಿಲೆ ಬಿದ್ದರು. ಇದ್ದ ಒಬ್ಬ ಮಗ ಬೆಂಗಳೂರಿಗೆ ಹೋದ... ಇದಕ್ಕಿಂತ ಘೋರವಾದ ಕಷ್ಟ ಇನ್ನೇನು ಬರಲು ಸಾಧ್ಯ? ಎಂದು ಸುಮ್ಮನಿದ್ದುಬಿಟ್ಟರು. ಗುರುನಾಥರು ಹೇಳಿದ ಎರಡು ತಿಂಗಳಿಗೆ ಸರಿಯಾಗಿ ನಮ್ಮ ತಂದೆಗೆ ಹೃದಯಾಘಾತವಾಯಿತು. ನಂಜಪ್ಪ ಆಸ್ಪತ್ರೆಗೆ ಒಯ್ಯುತ್ತಿದ್ದೆವು. ಆ ಕ್ಷಣದಲ್ಲಿ ಗುರುನಾಥರು ಉಪದೇಶಿಸಿದ 'ನಾರಾಯಣ ಅಖಿಲ ಗುರು ಭಗವನ್ನಮಸ್ತೇ' ಎಂಬ ಮಂತ್ರವನ್ನು ಅವರು ಸ್ಮರಿಸುತ್ತಿದ್ದರೇನೋ, 'ನಾರಾಯಣ ನಾರಾಯಣ' ಎಂಬುವುದು ಕೇಳಿಸುತ್ತಿತ್ತು. ತಂದೆಯ ಪ್ರಾಣಪಕ್ಷಿ ಹಾರಿ ಹೋಗಿ ನಾರಾಯಣನಲ್ಲಿ ಸೇರಿಕೊಂಡಿತ್ತು. ಆಸ್ಪತ್ರೆ ಎಂಬ ನರಕದಲ್ಲಿ ಬೀಳದಂತೆ ಗುರುನಾಥರು ರಕ್ಷಿಸಿದ್ದರು. ರಾತ್ರಿಯ ಒಂಬತ್ತೂವರೆಗೆ ಶವವನ್ನು ಎತ್ತುವ ಸಿದ್ಧತೆ ಮಾಡುತ್ತಿದ್ದಾಗ ಅದೆಲ್ಲಿಂದ ಒಂದು ನಾಯಿ ಬಂದಿತೋ ಅದು ಪ್ರದಕ್ಷಿಣೆ ಬಂದು, ಒಂದು ಕ್ಷಣ ಎತ್ತಲೋ ಹೋಯಿತು... ' ತಂದೆಯ ಅಗಲಿಕೆಯ ದುಃಖದಿಂದ ಕಾಪಾಡಿದ ಗುರುನಾಥರ ಸ್ಮರಣೆ ಬಂದಿತು". ದೀಪಕ್ ಅವರು ಒಂದು ಕ್ಷಣ ಮೌನಿ. ಗುರುಬಾಂಧವರೇ, ಗುರುನಾಥರನ್ನು ನಂಬಿದ ಭಕ್ತರ ಸರ್ವ ನೋವುಗಳನ್ನು ಅವರು ಸ್ವೀಕರಿಸಿ ಹೇಗೆ ಇಹಪರಗಳ ಮಾರ್ಗವನ್ನು ಗುರುನಾಥರು ಸುಖಮಯ ಮಾಡುತ್ತಾರೆ ಎಂಬುದಕ್ಕೆ ಇನ್ನೇನು ಬೇಕು. ಸ್ವಲ್ಪ ವಿರಾಮವಿರಲಿ, ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment