ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 52
ನರಸಿಂಹ ಸಾಲಿಗ್ರಾಮ ತಂದ ಗುರುನಾಥರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರ ಬಳಿ ಒಮ್ಮೆ ಒಬ್ಬ ಭಕ್ತರು 'ತಮಗೆ ಅತೀವ ತೊಂದರೆಯಾಗುತ್ತಿದೆ. ಏನು ಮಾಡಿದರೂ ಕೈ ಹಿಡಿಯುತ್ತಿಲ್ಲ. ದಯಮಾಡಿ ಪರಿಹಾರ ಕೊಡಿಸಿಕೊಡಿ' ಎಂದು ಅನನ್ಯವಾಗಿ ಬೇಡಿ ಬಂದರಂತೆ. ಗುರುನಾಥರು ನಿಮ್ಮದಲ್ಲದನ್ನು ಬೇರೆಯವರಿಗೆ ಸೇರಿದ್ದನ್ನು ನೀವು ಇಟ್ಟುಕೊಂಡಿದ್ದೀರಿ.... ಅದನ್ನವರಿಗೆ ತಲುಪಿಸಿಬಿಡಿ, ಎಲ್ಲಾ ಸರಿಯಾಗುತ್ತದೆ' ಎಂದಾಗ, ಈ ಬಾಂಧವರು, ತುಂಬಾ ಯೋಚಿಸಿ, ಕೊನೆಗೆ ತಮಗೆ ತೋಟ ಮನೆಯ ಜೊತೆಗೆ ಒಂದು ನರಸಿಂಹ ಸಾಲಿಗ್ರಾಮವೂ ಬಂದಿರುವುದನ್ನು ತಿಳಿಸಿದಾಗ, ಗುರುನಾಥರು ಅದನ್ನು ಯಾರಿಂದ ತಂದಿರೋ ಅವರನ್ನು ಹುಡುಕಿ, ಅವರನ್ನು ಕರೆಸಿ, ಒಂದು ಹಬ್ಬವನ್ನು ಆಚರಿಸಿದಂತೆ ಅಡುಗೆ ಔತಣ ಮಾಡಿ ಅವರಿಗೆ ಆ ಸಾಲಿಗ್ರಾಮವನ್ನು ತಲುಪಿಸಿ ಎಂದರಂತೆ. ಅದರಂತೆ, ಸಂಬಂಧಿಸಿದವರನ್ನು ಹುಡುಕಿ ಸಾಲಿಗ್ರಾಮವನ್ನು ಅವರು ತಲುಪಿಸಿಬಿಟ್ಟರು.
ಪ್ರಿಯ ಸತ್ಸಂಗಾಭಿಮಾನಿ ಭಕ್ತರೇ, ಈ ಮೇಲಿನ ಘಟನೆಗೆ ಮುಂದೆ ಸಂಬಂಧಿಸುವ, ಶಿವಮೊಗ್ಗದ ವ್ಯಕ್ತಿಯೊಬ್ಬರು ಗುರುನಾಥರ ದರ್ಶನ ಪಡೆದದ್ದು, ಏನೋ ಆಗಬೇಕಾದುದು ಗುರುನಾಥರ ಕೃಪೆಯಿಂದ ಸ್ವಲ್ಪದರಲ್ಲೇ ಸುಸ್ಥಿತಿ ಕಂಡುದನ್ನು, ಗುರುನಾಥರ ಕಾರುಣ್ಯವನ್ನು ನಮ್ಮ ಸತ್ಸಂಗಕ್ಕಾಗಿ, ಅಶೋಕ್ ಹಂಚಿಕೊಂಡಿದ್ದಾರೆ. ಬನ್ನಿ ಆಲಿಸೋಣ.
'ನಾನು ಶಿವಮೊಗ್ಗದಲ್ಲಿದ್ದವನು. ನಮಗೆ ಬೇಕಾದಷ್ಟು ಆಸ್ತಿಪಾಸ್ತಿ ಇತ್ತು. ನೇರಲಕೊಡುಗೆಯವರು ನಾವು ಅಲ್ಲಿ ಜಮೀನು, ಮನೆ, ನಮ್ಮ ಪೂರ್ವಜರು ಪೂಜಿಸುತ್ತಿದ್ದ ನರಸಿಂಹ ಸಾಲಿಗ್ರಾಮವೂ ಇತ್ತು. ಕಾರಣಾಂತರದಿಂದ ಅದು ನಮ್ಮ ಕೈತಪ್ಪಿ ಹೋಗಿದ್ದು, ಮತ್ತೆ ನಮಗದು ದೊರೆಯಿತು. ಆದರೆ ತಾಯಿ ಆತಂಕಗೊಂಡರು. 'ಈಗ ಇದನ್ನೇಕೆ ತಂದೆ? ನರಸಿಂಹ ಸಾಲಿಗ್ರಾಮಕ್ಕೆ ಮಡಿ-ಮೈಲಿಗೆ ತುಂಬಾ ಜಾಸ್ತಿ ಎಂದಾಗ ನಾನು ನಮಗಿದನ್ನು ತಲುಪಿಸಲು ತಿಳಿಸಿದವರನ್ನು ಕೇಳಿ ಬರುತ್ತೇನೆ, ಎಂದು ಒಂದು ದಿನ ಸಖರಾಯಪಟ್ಟಣಕ್ಕೆ ಬಂದೆ. ಗುರುನಾಥರ ದಿವ್ಯ ದರ್ಶನ, ಈ ನರಸಿಂಹ ಸಾಲಿಗ್ರಾಮದ ಮುಖಾಂತರ ನನಗೆ ಮೊದಲಿಗಾಯಿತು. ಬಹುಶಃ ನಮ್ಮ ಪೂರ್ವಜರು ಆ ಸಾಲಿಗ್ರಾಮಕ್ಕೆ ಸಲ್ಲಿಸಿದ್ದ ಪೂಜೆಗೆ ನರಸಿಂಹನು ನಮಗೆ ಈ ಸದ್ಗುರುನಾಥರನ್ನು ತೋರಿಸಿರಬೇಕೆಂಬುದೇ ನನ್ನ ಅನಿಸಿಕೆ. ಗುರುನಾಥರ ಮನೆಯಲ್ಲಿ ಅನೇಕ ಜನ ಭಕ್ತರಿದ್ದರು. ಬಂದವರಿಗೆಲ್ಲಾ ಊಟ, ತಿಂಡಿಯ, ಪ್ರಸಾದದ ವಿನಿಯೋಗವಾಗುತ್ತಿತ್ತು. ನಾನು ಗುರುನಾಥರಿಗೆ ನಮಸ್ಕರಿಸಿ, ಕುಳಿತುಕೊಂಡಾಗ ಎಲ್ಲ ಭಕ್ತರನ್ನೂ ವಿಚಾರಿಸಿಕೊಂಡು, ನಂತರ ನೀವು ಯಾರು... ಏಕೆ ಬಂದಿದ್ದೀರಿ, ಏನಾಗಬೇಕಾಗಿದೆ ಎಂದು ಪ್ರೀತಿಯಿಂದ ವಿಚಾರಿಸಿದಾಗ, ನಾನು ಬಂದ ಕಾರಣವನ್ನು ತಿಳಿಸಿ ತಾವು ಸಾಲಿಗ್ರಾಮವನ್ನು ನಮಗೆ ತಲುಪಿಸಿದ್ದೀರಿ. ಈಗಾದರ ಪೂಜೆ, ಪುನಸ್ಕಾರಗಳು ಹೇಗೆ ಮಾಡಬೇಕು, ಎಂಬುದೊಂದೂ ನಮಗೆ ತಿಳಿದಿಲ್ಲ ಸ್ವಾಮಿ. ದಯಮಾಡಿ ನಮಗೆ ಮಾರ್ಗದರ್ಶನ ಮಾಡಿ, ಎಂದು ಕೇಳಿಕೊಂಡೆ. ಗುರುನಾಥರು ತುಂಬು ಪ್ರಸನ್ನಚಿತ್ತರಾಗಿ, ನೋಡಪ್ಪ, ತುಂಬಾ ಪ್ರೀತಿಯಿಂದ ಸರಳವಾಗಿ ನೀರಿನ ಅಭಿಷೇಕ ಮಾಡಿ, ಎರಡು ತುಳಸೀದಳಗಳನ್ನೇರಿಸು... ಅಷ್ಟೇ ಸಾಕು. ಪೂಜೆಯಲ್ಲಿ ಭಕ್ತಿ ಮುಖ್ಯವೇ ಹೊರತು ಮತ್ತೇನಲ್ಲಪ್ಪ', ಎಂದಾಗ ನನಗೊಂದು ನಿರಾಳವಾಯಿತು. ನಮ್ಮ ಪೂರ್ವಜರು ಪೂಜಿಸುತ್ತಿದ್ದ ಸಾಲಿಗ್ರಾಮವನ್ನು ಮತ್ತೆ ನಮಗೆ ಈ ರೀತಿ ವಿಚಿತ್ರವಾಗಿ ವಾಪಸ್ಸು ಮಾಡಿಸಿದ ಗುರುನಾಥರನ್ನು ಮನದಲ್ಲೇ ನಮಿಸಿದೆ. ಮುಂದಾಗಬಹುದಾದ ಯಾವುದೋ ಅವಘಡದ ಪರಿಣಾಮವನ್ನು ಕಡಿಮೆ ಮಾಡಲೆಂದೇ ಗುರುನಾಥರ ಬಳಿ ಹೋಗಿ ಬರತೊಡಗಿದ್ದ, ನಾವು ಸಾಕಷ್ಟು ಶ್ರೀಮಂತರು, ಜಮೀನು, ತೋಟ, ಟಿಂಬರ್ ಬಿಸಿನೆಸ್ ಗಳೆಂದು ಆ ಕಾಲದಲ್ಲಿ ಕೋಟಿಗಳ ಆಸ್ತಿ. ಬರುವುದು, ಹೋಗುವುದೂ ಎಲ್ಲಕ್ಕೂ ಒಂದು ಕಾಲವಿರುತ್ತದೆ. ಮಲೆಯಾಳಿಗಳ ಪಾರ್ಟ್ ನರ್ ಶಿಪ್ ನಲ್ಲಿ ನಮ್ಮ ತಂದೆ ತುಂಬಾ ಕಳೆದುಕೊಂಡು ಬಿಟ್ಟರು. ಲಕ್ಷಾಂತರಗಳ ಸಾಲದ ಹೊರೆ ತಲೆಮೇಲೆ ಬಂತು. ಇದೇ ತುಮುಲ ಹಾಗೂ ಒತ್ತಡಗಳಲ್ಲಿ ನಮ್ಮ ತಂದೆಗೆ ಪ್ಯಾರಾಲಿಟಿಕ್ ಸ್ಟ್ರೋಕ್ ಆಯಿತು. ಕಷ್ಟಗಳು ಒಂದರ ಮೇಲೆ ಒಂದರಂತೆ ಬಂದು ನಮ್ಮ ಮನುಷ್ಯ ಪ್ರಯತ್ನಗಳೆಲ್ಲಾ ಕೈಕೊಟ್ಟವು. ನಮಗೆ ಉಳಿದದ್ದು ಕೈ ಹಿಡಿದು ಕಾಪಾಡುವ ಗುರುನಾಥರೊಬ್ಬರೇ. ಮತ್ತೆ ನಾವು ಗುರುನಾಥರ ಬಳಿ ಹೋದೆವು.
ಪ್ರಿಯ ಗುರುಬಾಂಧವ ನಿತ್ಯ ಸತ್ಸಂಗಾಭಿಮಾನಿಗಳೇ, ಗುರುನಾಥರು ಏನು ಮಾಡಿದರು. ನಮ್ಮ ಕರ್ಮಗಳನ್ನು ನಾವೇ ಅನುಭವಿಸಬೇಕು ನಿಜ. ಆದರೆ, ಸಮರ್ಥ ಸದ್ಗುರುವಿನ ಆಶ್ರಯದಿಂದ ಏನಾಯಿತು ಎಂಬುದನ್ನು ತಿಳಿಯಲು ನಾಳೆ ನಮ್ಮೊಂದಿಗಿರಿ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment