ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 58
ಮಾತು ಬರದಾಗಿದೆ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
"ಎಲ್ಲರೂ ಭಗವಂತನನ್ನು ಕೇಳಿ, ಬೇಡಿ ಪಡೆಯುವುದಿದೆ. ಆದರೆ ನನಗೆ ಗುರುನಾಥರು ಏನೂ ಕೇಳದೇ ಎಲ್ಲವನ್ನೂ ನೀಡಿದ್ದಾರೆ. ಅಷ್ಟೇ ಅಲ್ಲ ನಾನೇನೂ ಮನದಲ್ಲಿ ಇಚ್ಛೆ ವ್ಯಕ್ತ ಮಾಡಿಕೊಳ್ಳುವುದರ ಮೊದಲೇ ನನಗೆಲ್ಲಾ ಕೊಡಿಸಿ ಬಿಡುತ್ತಿತ್ತು ಗುರುನಾಥರ ಸಹವಾಸ. ಸುಮಾರು ನಲವತ್ತು ವರ್ಷಗಳ ನಮ್ಮ ಒಡನಾಟದಲ್ಲಿ ನಾನದೆಷ್ಟು ಸುಖವಾಗಿರುವಂತೆ ಅವರು ನೋಡಿಕೊಂಡರೆಂದರೆ ಯಾವಾಗಲೂ ನನ್ನ ಹಿಂದೆ ಮುಂದೆ ಒಂದು ರೀತಿ ಜೊತೆಯಾಗಿಯೇ ಇರುತ್ತಿದ್ದುದು, ಅದ್ಯಾವ ಜನ್ಮದ ಅನುಬಂಧವೋ, ನಾನಾವ ಜನ್ಮದಲ್ಲಿ ಈ ಗುರುವಿಗೆ ಒಂದು ಹೂವನ್ನು ಅರ್ಪಿಸಿದ್ದೇನೋ, ಈ ಜನ್ಮದಲ್ಲಿ ನನಗೆ ಅದರ ಫಲ, ಬಂಧುವಾಗಿ, ಗುರುವಾಗಿ, ನಿರ್ದೇಶಕರಾಗಿ, ನನ್ನ ಜೀವನದ ಸರ್ವಸ್ವವಾಗಿ ಅವರು ಇದ್ದರು... ಈಗಲೂ ಇದ್ದಾರೆಂಬ ಭಾವನೆ ನನಗಿದೆ. ಯಾವ ಜನ್ಮದ ಋಣಾನುಬಂಧವೋ ಇದು, ನಾನರಿಯೆ' ಎನ್ನುತ್ತಾರೆ ಭಾವ ತುಂಬಿ, ಗದ್ಗದಿತರಾಗಿ ಬೆಂಗಳೂರಿನ ಸೂರ್ಯನಾರಾಯಣ್ ಅವರು.
ಪ್ರಿಯ ಗುರು ಬಾಂಧವ ಸತ್ಸಂಗಾಭಿಮಾನಿಗಳೇ..... ಇಂದು ತಮ್ಮ ಗುರುನಾಥರ ವಿಶಿಷ್ಟ ಸಂಬಂಧವನ್ನು ನಿತ್ಯ ಸತ್ಸಂಗಕ್ಕಾಗಿ ಧಾರೆಯೆರೆಯುತ್ತಿರುವ ಗುರುನಾಥರ ಆಪ್ತ ಸಂಬಂಧಿಗಳ ಕೆಲವು ವಿಶೇಷಾನುಭವಗಳು ಹೀಗಿವೆ.
"ಗುರುನಾಥರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದರೆ, ನನ್ನದೆಂಬುದು ಏನೂ ಇಲ್ಲದಿರುವಾಗ, ನನ್ನ ಜೀವನದ ಸರ್ವಸ್ವವೂ ಅವರೇ ಆಗಿರುವಾಗ, ನನ್ನದಾಗಿ ನಾನೇನು ಹೇಳಿಕೊಳ್ಳಲಿ? ಎಂದು ಪ್ರಶ್ನಿಸುವ ಅವರ ನುಡಿಗಳೀಗ ಮೌನವಾಗಿವೆ. ಒಂದು ಕಾಲದಲ್ಲಿ ಬ್ಯಾಂಕಿನಲ್ಲಿ ಒಳ್ಳೆಯ ವಾಚಾಳಿ ಸೂರಿ ಎಂದೇ ಹೆಸರಾದವರು ಗುರುನಾಥರ ಸಂಗಸೌಖ್ಯ ಅವರನ್ನು ಹೆಚ್ಚಿಗೆ ಮಾತನಾಡದಂತೆ ಗುರುನಾಥರ ಸಾನ್ನಿಧ್ಯದ ಸುಖಾನುಭವದಲ್ಲಿ ಅವರ ಅಪರಂಪಾರತೆಯನ್ನು ಕಂಡ ಅವರನ್ನು ಮೌನಿಯಾಗಿಸಿ ಬಿಟ್ಟಿದೆಯಂತೆ. ಎಲ್ಲ ಗುರುಗಳೂ ಉಪದೇಶಿಸುವುದು ಅದನ್ನೇ ಅಲ್ಲವೇ? ಮೊದಲು ಮಾತನ್ನು ಕಡಿಮೆ ಮಾಡು. ಏಕೆಂದರೆ, ಮಾತು ನಿಂತಾಗಲೇ ಸಾಧನೆ. ಸಾಧ್ಯನೆಯ ಸತ್ಪಲಗಳನ್ನು ಪಡೆಯುತ್ತಾ ಹೋದಂತೆ ಮಾತು ವ್ಯರ್ಥವೆನಿಸುತ್ತದೆ. ಮೌನಾನಂದ ಸುಖದ ಮುಂದೆ ಯಾವ ಮಾತೂ ಬೇಡದಂತಾಗಿ, ಗುರು ಪದಗಳ ಅನುಸರಣೆ, ನಿರಂತರ ಸ್ಮರಣೆಯೇ ನಮ್ಮ ಜೀವನದ ಗುರಿಯಾಗುವುದು ಸಹಜವೇ ಅಲ್ಲವೇ.
ಇಷ್ಟಾಗಿಯೂ ಗುರುನಾಥರೊಂದಿಗೆ ನೇರವಾಗಿ ಮಾತನಾಡುವ ಸಂದರ್ಭಗಳು ಸೂರ್ಯನಾರಾಯಣ್ ಅವರಿಗೆ ಬಂದದ್ದೇ ಕಡಿಮೆಯಂತೆ. ಅಣ್ಣ ತಂಗಿಯರ ಮಧ್ಯೆ ಮಾತಿನ ವಿನಿಮಯವಾಗುತ್ತಿತ್ತು. ಅದರ ಪೂರ್ಣ ಲಾಭವಾಗುತ್ತಿದ್ದುದು ಸೂರ್ಯನಾರಾಯಣರಿಗೆ. ಆದರೂ ಗುರುನಾಥರೊಂದಿಗಿನ ಸಂದರ್ಭಗಳಲ್ಲೆಲ್ಲಾ ಮೌನದಲ್ಲಿಯೇ ಗುರುನಾಥರಿಂದ ಅನೇಕ ಪಾಠಗಳು ದೊರೆಯುತ್ತಿತ್ತು. ಎಲ್ಲವನ್ನೂ ನೀಡಿ, ಪರಮಾತ್ಮನೇ ಜೊತೆಗಿರುವಾಗ ಯಾವುದಕ್ಕೂ ಕೊರತೆ ಇರಲಿಲ್ಲ. ಅಂತೆಯೇ ಅಷ್ಟು ವರ್ಷಗಳ ಬ್ಯಾಂಕಿನ ಕೆಲಸದಲ್ಲಿ 'ಕಾಯಕವೇ ಕೈಲಾಸ' ಎಂದು ನಂಬಿ ನಡೆವಂತೆ, ಒಂದಿಂಚೂ ಅತ್ತಿತ್ತ ಹರಿಯದಂತೆ ನನ್ನನ್ನು ರಕ್ಷಿಸಿದ್ದು ಗುರುನಾಥರೇ. ನಾನು ರಿಟೈರ್ಡ್ ಆದ ಮೇಲೆ ನನಗೆ ಬಂದ ಪೆನ್ಷನ್ ಹಣದಿಂದ ಸ್ವಂತ ಛಾವಣಿಯನ್ನು ಕಟ್ಟಿಕೊಂಡೆ. ಬಾಕಿಯವರು ಏನೇನೋ ಸಾಧಿಸದರೆಂಬತ್ತ ನನಗೆ ಮನವೇ ಹೋಗಲಿಲ್ಲ. ಕಾಮಧೇನುವಂತಹ ಗುರುನಾಥರ ಸಹವಾಸದ ಮುಂದೆ ಲೌಕಿಕ ಸೌಖ್ಯಗಳೆಲ್ಲಾ ಅಂತಹ ಮಹತ್ವವೆನಿಸಲೇ ಇಲ್ಲ' ಎನ್ನುತ್ತಾರೆ ಅವರು.
'ಬ್ಯಾಂಕಿನ ಉದ್ಯೋಗಿಯಾದ ನನಗೆ ನಾನು ಹೋದ ಕಡೆಗೆಲ್ಲಾ ನನ್ನ ಜೊತೆ ಬಂದು ಅವರು ನನಗೆಲ್ಲಾ ಭೌತಿಕವಾದ ಅನುಕೂಲತೆಗಳನ್ನೆಲ್ಲಾ ಮಾಡಿಕೊಡುತ್ತಿದ್ದುದು, ನನ್ನ ಅದೃಷ್ಟ. ನನ್ನ ಜೀವನದಲ್ಲಿ ಅವರು ನೀಡಿದ ಒಂದು ವಿಶೇಷ ವರದಾನ ಎಂದರೆ ಸಂತೃಪ್ತಿ. ಅದಕ್ಕಿಂತ ಬೇರೇನೂ ನನಗೆ ಬೇಕಿರಲಿಲ್ಲ' ಎಂದು ಸ್ಮರಿಸುತ್ತಾರೆ.
"ಒಮ್ಮೆ ನನಗೆ ಹಾಸನಕ್ಕೆ ವರ್ಗವಾಗಿತ್ತು. ಕೂಡಲೇ ನಾನು ಹಾಸನಕ್ಕೆ ಹೋದೆ. ಯಾರೋ ಒಬ್ಬರು ಬಾಡಿಗೆಗೆ ಇರುವ ಒಂದು ಮನೆ ತೋರಿಸಿದರು. ಕೈಯಲ್ಲಿ ಹಣವಿರಲಿಲ್ಲ. ಬಂದು ಅಡ್ವಾನ್ಸ್ ಕೊಡುತ್ತೇನೆ ಎಂದಾಗ ಒಪ್ಪಿದರು. ಮಾರನೆಯ ದಿನ ಬೆಂಗಳೂರಿಗೆ ಹೋಗಿ ಬಂದು ನಿಮಗೆ ಅಡ್ವಾನ್ಸ್ ಕೊಡುತ್ತೇನೆ ಎಂದೆ. ಅವರು ಒಪ್ಪಿದರು. ಒಂದು ರೀತಿ ಓರಲ್ ಅಗ್ರಿಮೆಂಟ್ ಆಗಿತ್ತು. ಮತ್ತೆ ನಾನು ಮಾರನೆಯ ದಿನ ಬೆಂಗಳೂರಿಗೆ ಬಂದಾಗ ಮನೆ ಓನರ್ ಫೋನು ಮಾಡಿ, ನಮ್ಮ ಸ್ನೇಹಿತರು ಈ ಮನೆಗೆ ಬರುತ್ತಿದ್ದಾರೆ. ನಿಮಗೆ ಮನೆ ಕೊಡುವುದು ಕಷ್ಟ ಎಂದು ಬಿಟ್ಟರು. ನಂತರ ಸ್ವಲ್ಪ ಸಮಯದಲ್ಲೇ ಬ್ಯಾಂಕಿನ ಹೆಡ್ ಆಫೀಸಿನಿಂದ ನನಗೆ ಹಾಸನದ ಬದಲು ಚಿಕ್ಕಮಗಳೂರಿನ ಬ್ಯಾಂಕಿನಲ್ಲಿ ಕೆಲಸ ಮಾಡಲು ಆದೇಶ ನೀಡಿದರು. ಎಷ್ಟು ವಿಚಿತ್ರ. ಎಲ್ಲ ವಿಚಿತ್ರಗಳ ಹಿಂದೆಯೂ ನಿಂತಿರುವುದು, ಆಡಿಸುತ್ತಿರುವುದು ಆ ಗುರು ಶಕ್ತಿಯೇ ಎಂಬುದು ನನ್ನ ಅನಿಸಿಕೆ. ಅಷ್ಟೇ ಅಲ್ಲ, ಆ ಬ್ಯಾಂಕ್, ಆ ಊರು ನನಗೆ ಒಂದು ರೀತಿ ಸವಾಲಾಗೇ ಇತ್ತು. ಎಲ್ಲ ಸಮಸ್ಯೆ ಸವಾಲುಗಳು ಬಂದಾಗಲೂ ಜೊತೆ ನಿಂತು ಕಷ್ಟವಾಗದಂತೆ ಪಾರಾಗಿಸುತ್ತಿದ್ದರು ಗುರುನಾಥರು. ಒಮ್ಮೆ ಬೆಳಿಗ್ಗೆ ಎದ್ದು ಪೆಂಡಿಂಗ್ ವರ್ಕ್ಸ್ ಪೂರೈಸಲು ಬ್ಯಾಂಕಿಗೆ ಭಾನುವಾರವೂ ಹೋಗಬೇಕೆಂದು ಹೋರಾಡುವಲ್ಲಿ ಸಖರಾಯಪಟ್ಟಣದಿಂದ ಫೋನು ಬಂದಿರುತ್ತಿತ್ತು. 'ಭಾನುವಾರವಲ್ಲವೇ ಒಂದಿಷ್ಟು ಬಿಡುವು ಮಾಡಿಕೊಂಡು ಊರಿಗೆ ಬಂದು ಹೋಗುತ್ತೀರಾ?. ಗುರುನಾಥರ ವಾಣಿಯಲ್ಲಿದ್ದ ಪ್ರೀತಿ ನನ್ನನ್ನು ಸಖರಾಯಪಟ್ಟಣಕ್ಕೆ ಎಳೆದು ತರುತ್ತಿದ್ದುದರ ಜೊತೆಗೆ, ಅಂದು ನಾನೊಬ್ಬನೇ ಬ್ಯಾಂಕಿಗೆ ಹೋಗದಿದ್ದರೆ ಸಂಭವಿಸಬಹುದಾದ ಅವಘಡಗಳಿಂದಲೂ ಪಾರು ಮಾಡಿರುತ್ತಿತ್ತು. ಹೀಗೆ ಒಂದೇ, ಎರಡೇ ಜೀವನದುದ್ದಕ್ಕೂ ಕಣ್ಣಿನ ರೆಪ್ಪೆಯಲ್ಲಿ ಇಟ್ಟುಕೊಂಡು ಕಾಯ್ದ ಆ ಕರುಣಾನಿಧಿಯ ಬಗ್ಗೆ ನಾನೇನು ಹೇಳಲಿ, ಎಷ್ಟು ಹೇಳಿದರೆ ತೀರುತ್ತದೆ. ಅದಕ್ಕೆ ಮೌನವೇ ಸರಿಯೇನೋ" ಎನಿಸುತ್ತದೆ ಎನ್ನುತ್ತಾರೆ ಸೂರ್ಯನಾರಾಯಣರು.
ಪ್ರಿಯ ಗುರು ಬಂಧುಗಳೇ ಎಂತಹ ಧಾರಾಳಿ ಗುರುನಾಥರು. ಯಾವ ಜನ್ಮದ ಸಂಬಂಧದ ಅನುಬಂಧವಿದು. ಇದು ಒಬ್ಬರಿಗಲ್ಲ ನೂರಾರು ಜನರಿಗೆ ಗುರುನಾಥರ ಇಂತಹ ಕೃಪೆ, ಕಣ್ಗಾವಲು ದೊರೆತಿದೆ. ಇಂತಹ ಅದ್ಭುತ ಗುರುಲೀಲೆಗಳ ಶ್ರವಣ ಮನನಗಳು ನಮ್ಮನ್ನು ಮತ್ತಷ್ಟು ಗುರುನಾಥರೆಡೆಗೆ ಸೆಳೆಯುವುದರಲ್ಲಿ ಸಂಶಯವಿಲ್ಲ. ಹಾಗಾಗಿ ನಿತ್ಯ ಸತ್ಸಂಗ ಸಾಗುತ್ತಿರಲಿ. ಗುರುಕಥಾಮೃತಧಾರೆಯು ಸುರಿಯುತ್ತಿರಲಿ. ಮತ್ತೆ ನಾಳೆಯೂ ಸೇರೋಣವೇ?
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
No comments:
Post a Comment