ಒಟ್ಟು ನೋಟಗಳು

Monday, July 3, 2017

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 53


ಗುರುಚರಿತ್ರಾಧ್ಯಾಯ ಸಾರವ । ನರುಹಿದನು ಪ್ರೇಮದಲಿ ಸಿದ್ಧನು । ತಿರುಗಿ 
ಪಠಣದ ವಿಧಿಯ, ಫಲವನು ವಿಸ್ತರಿಸಿದನವಾ   || 53 ||

ಹೀಗೆ ಸಿದ್ಧಯೋಗಿಯಿಂದ ಗುರು ಚರಿತ್ರವನ್ನು ಕೇಳಿ ಭಾವಪರವಶನಾಗಿ ಸಮಾಧಿ ಸ್ಥಿತಿಯಲ್ಲಿರುವ ನಾಮಧಾರಕನನ್ನು ಸಿದ್ಧಮುನಿಯು ಎಚ್ಚರಿಸಿದಾಗ ಮತ್ತೆ ಎನಗೀ ಸುಚರಿತ್ರೆ ಕೇಳಬೇಕೆನಿಸಿದೆ ಎನ್ನುವ ನಾಮಧಾರಕನಿಗಾಗಿ ಸಿದ್ಧಮುನಿಯು ಸಾರ ರೂಪದಲ್ಲಿ ಹೇಳುವುದೇ ಐವತ್ತಮೂರನೇಯ ಅಧ್ಯಾಯ. ಸಪ್ತಾಹದ ವಿಧಿಯನ್ನು ಅನುಸರಿಸಬೇಕಾದ ನಿಯಮ ಹಾಗೂ ಅದರ ಫಲಗಳೂ ಇದರಲ್ಲಿದೆ. 

ಭೂ ತಳದಿ ಶ್ರೀ ಗುರು ಚರಿತ್ರದ । ಪ್ರೀತಿಪೂರ್ವಕ ಪಠಣ ಮಾತ್ರದಿ ।
ಭೀತಿ ರೋಗಾದಿಗಳು ನಾಷಿಪವೇನ ಹೇಳುವೆನು ।
ಭೂತಪ್ರೇತಾದಿಗಳ ಬಾಧೆಯು । ಖಾತ್ರಿಯಿಂ ಸಂಹಾರವಪ್ಪುದು ।
ಪಾತಕಂಗಳು ಸುಟ್ಟು ಹೋಗುವವೀ ಪಠಣದಿಂದಾ ।

ಎನ್ನುವ ವಾಕ್ಯಗಳು ಫಲದ ಬಗ್ಗೆ ತಿಳಿಸಿದರೆ... ಸಪ್ತಾಹದ ರೀತಿ ಎಂದರೆ, 

ಮೊದಲ ದಿನ ೯ನೇ ಅಧ್ಯಾಯ, ಎರಡನೇ ದಿನ ೨೧ ಅಧ್ಯಾಯ, ಮೂರನೇ ದಿನ ಇಪ್ಪತೊಂಬತ್ತನೆಯ ಅಧ್ಯಾಯ, ನಾಲ್ಕನೆಯ ದಿನ ಮೂವತ್ತೈದು, ಐದನೆಯ ದಿನ ಮೂವತ್ತೆಂಟು, ಆರನೆಯ ದಿನ ನಲವತ್ತಮೂರು ಹಾಗೂ ಏಳನೆಯ ದಿನ ಸಾರಾಧ್ಯಾಯ ಸೇರಿ ಎಲ್ಲ ಓದಿ ಮುಗಿಸಬೇಕು. ಒಂದೇ ಸ್ಥಳದಿ ನಿತ್ಯ ಪಾರಾಯಣ ಮಾಡುವುದು, ಒಂದು ಹೊತ್ತು ಭೋಜನ, ಹಾಸಿಗೆಯ ಮೇಲೆ ಮಲಗದೆ ಇರುವುದು ಸಪ್ತಾಹದ ನಿಯಮಗಳು. ಪ್ರತಿನಿತ್ಯ ಗುರುಗಣೇಶ, ಮನೆ ದೇವರನ್ನು ನೆನೆದು ಪೂಜೆ ಪ್ರಾರಂಭಿಸಿ ಕೊನೆಯಲ್ಲಿ ನೈವೇದ್ಯ, ಆರತಿ, ಭಜನೆಗಳನ್ನು ಮಾಡಬೇಕು. ಸಪ್ತಾಹದ ಅಂತ್ಯದಲ್ಲಿ ಸಾಧ್ಯವಾದಷ್ಟು ಅನ್ನದಾನ ಮಾಡುವುದು, ಸಪ್ತಾಹದ ನಿಯಮ. 

ಮಂಗಳಂ ಶ್ರೀ ದತ್ತರಾಜಗೆ । ಮಂಗಳಂ ಶ್ರೀ ಭಕ್ತವರದಗೆ ।
ಮಂಗಳಂ ಶ್ರೀಪಾದ ಶ್ರೀ ವಲ್ಲಭಗೆ ಯತಿವರಗೆ ।
ಮಂಗಳಂ ನರಹರಿಸರಸ್ವತಿ । ಮಂಗಳಂ ನಿನಗರ್ಪಿಸುವ ಶುಭ ।
ಮಂಗಳಂ ಶ್ರೀ ರಾಘವೇಂದ್ರಗೆ ವಿಷ್ಣುದಾಸನಿಗೆ ।
ಎಂಬ ಮಂಗಲಶ್ಲೋಕದಿಂದ ಮುಕ್ತಾಯವಾಗಿದೆ. 

।।ಹರಿ ಓಂ ತತ್ಸತ್ ಶ್ರೀ ಗುರುದತ್ತಾತ್ರೇಯಾರ್ಪಣಮಸ್ತು । ಶುಭಂ ಭವತು ।।

No comments:

Post a Comment